ಸಿದ್ದಾಪುರ: ಸಮೀಪದ ಮಾರ್ಗೊಲ್ಲಿ ಕಾಫಿ ತೋಟದಲ್ಲಿ ಹುಲಿ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೇ ಹುಲಿ ಮತ್ತೊಂದು ಹಸುವನ್ನು ಬಲಿ ಪಡೆದಿದೆ.
ಘಟ್ಟತಳ ವಿವೇಕ್ ಎಂಬವರ ತೋಟದಲ್ಲಿ ಜಯಚಂದ್ರ ಎಂಬವರ ಹಸುವನ್ನು ಹುಲಿ ಕೊಂದು ಹಾಕಿದೆ. ಹುಲಿ ಕಾರ್ಯಚರಣೆ ನಡೆಸುತ್ತಿದ್ದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರದೇಶದಲ್ಲಿ ನಿರಂತರ ಹುಲಿದಾಳಿ ನಡೆಯುತ್ತಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಮತ್ತೊಂದೆಡೆ ಕಾರ್ಯಾಚರಣೆ ವಿಫಲವಾಗಿದ್ದು, 2ನೇ ದಿನವೂ ಹುಲಿ ಪತ್ತೆಯಾಗಿಲ್ಲ.
ಮಾರ್ಗೋಲ್ಲಿ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ದುಬಾರೆ ಸಾಕಾನೆ ಶಿಬಿರದ 4 ಆನೆಗಳ ಸಹಕಾರದಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳದಲ್ಲಿ 10 ಕ್ಯಾಮೆರಾ ಹಾಗೂ 2 ಬೋನ್ ಅಳವಡಿಸಲಾಗಿದೆ.
50ಕ್ಕೂ ಹೆಚ್ಚು ಸಿಬ್ಬಂದಿಗಳ ತಂಡದಿಂದ ಹುಲಿಯ ಚಲನವಲನ ಹೆಜ್ಜೆಗುರುತು ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಹಸುವಿನ ಮೃತದೇಹದ ಸಮೀಪವೇ ಕ್ಯಾಮರಾ ಹಾಗೂ ಬೋನ್ ಅಳವಡಿಸಲಾಗಿದೆ.