ಮೈಸೂರಿನಲ್ಲೂ ಚುನಾವಣೆ ನಕಲಿ ಸಮೀಕ್ಷೆ
ಬೆಂಗಳೂರಲ್ಲಿ ನಡೆದಂತಹ ನಕಲಿ ಚುನಾವಣಾ ಸಮೀಕ್ಷೆಗಳು ಮೈಸೂರಿನಲ್ಲೂ ಸಹ ನಡೆಯುತ್ತಿದ್ದು ನನ್ನಲ್ಲೂ ಮಾಹಿತಿ ಪಡೆದುಕೊಳ್ಳಲು ಬಂದಿದ್ದರು. ನೆನ್ನೆ ಮುಂಜಾನೆ ಹೋಟೆಲ್ ಬಳಿ ಟೀ ಸೇವಿಸುತ್ತಿದ್ದಾಗ ನನ್ನನ್ನು ಬೇಟಿ ಮಾಡಿದ ಅನಧಿಕೃತ ವ್ಯಕ್ತಿ ನಾವು ಚುನಾವಣಾ ಕೆಲಸದಲ್ಲಿ ಬಂದಿದ್ದು ಸಮೀಕ್ಷೆ ಮಾಡುತ್ತಿದ್ದೆವೆ ಎಂದು ತನ್ನ ಕತ್ತಿನಲ್ಲಿ ನೇತಾಡುತ್ತಿದ್ದ ಐಡಿಯನ್ನು ದೂರದಿಂದಲೇ ತೋರಿಸಿ ನಿಮ್ಮ ಹೆಸರೇನು? ನೀವು ಇಲ್ಲಿಯ ಮತದಾರರಾ? ಯಾವ ಪಕ್ಷ ಮುಂದಿನ ಚುನಾವಣೆಯಲ್ಲಿ ಬರಬಹುದು? ನಿವು ಯಾರಿಗೆ ಒಟು ಹಾಕುತ್ತೀರಾ? ಇಲ್ಲಿನ ಎಂಪಿ, ಎಂಎಲ್ಎಗಳು ಕೆಲಸ ಮಾಡುತ್ತಿದ್ದಾರಾ? ಯಾರು ಕೆಲಸ ಮಾಡುತ್ತಿದ್ದಾರೆ ಎಂದು ನಿಮಗೆ ಅನಿಸುತ್ತದೆ? ಮುಂದೆಯಾರುಬರಬಹುದು? ಯಾರಿಗೆ ಮತ ಹಾಕುತ್ತೀರಾ? ಈ ಪರಿಯ ಮಾಹಿತಿಯನ್ನು ಮೈಸೂರಿನ ತುಂಬ ಅಡ್ಡಾಡಿಸಂಗ್ರಹಿಸುತ್ತಿದ್ದಾರೆ. ಸಂಗ್ರಹಿಸಿದ ಮಾಹಿತಿಯನ್ನು ಆಕ್ಷಣವೆ ತಮ್ಮ ಮೊಬೈಲ್ನಲ್ಲಿ ಅಫ್ಲೋಡ್ ಮಾಡಿಕೊಂಡು ಕಳುಹಿಸುತ್ತಿದ್ದಾರೆ.
ಮತದಾರರ ಪಟ್ಟಿಯಿಂದ ಎಲ್ಲಿ ನನ್ನ ಹೆಸರು ಬಿಟ್ಟು ಹೋಗುವುದೋ ಎಂಬ ಆತಂಕ ಮನೆ ಮಾಡಿದ್ದು ಸಮೀಕ್ಷೆ ದುರುದ್ದೇಶ ಪೂರಕವಾಗಿದ್ದು ಕೂಡಲೆ ಕ್ರಮಕೈಗೊಂಡು ಈ ಪರಿಯ ನಕಲಿ ಸಮೀಕ್ಷೆದಾರರನ್ನು ಬಂಧಿಸಿ ಮತದಾರರ ಆತಂಕವನ್ನು ದೂರಮಾಡಬೇಕೆಂದು ಮಹಾನಗರಪಾಲಿಕೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ.
-ಸಿದ್ದಸ್ವಾಮಿ, ಅಶೊಕಪುರಂ, ಮೈಸೂರು.
ಮೂಲ ಸೌಕರ್ಯ ಒದಗಿಸಲಿ
ರಾಜ್ಯ ಸರ್ಕಾರ ವಿವೇಕ ಯೋಜನೆ ಅಡಿಯಲ್ಲಿ ಕೇಸರಿ ಬಣ್ಣ ವನ್ನು ಶಾಲೆಯ ಗೋಡೆಗಳಿಗೆ ಬಳಿಸುವ ಬದಲು, ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲಿ. ಗೋಡೆಗಳು ಬಿರುಕಬಿಟ್ಟಿವೆ, ಮಾಳಿಗೆ ಸೋರುತ್ತಿದೆ. ಮೇಲ್ಛಾವಣಿ ಕುಸಿದು ಬೀಳುವ ಆತಂಕ ಇದೆ. ಶೌಚಾಲಯಗಳಲ್ಲಿ ನೀರಿಲ್ಲದೆ ಉಪಯೋಗಕ್ಕೆ ಬಾರದಂತಾಗಿವೆ. ಬಹಳ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಹೀಗಾಗಿ ಸಕಾಲದಲ್ಲಿ ಪಠ್ಯಕ್ರಮ ಪೂರ್ಣಗೊಳ್ಳುತ್ತಿಲ್ಲ. ಸರ್ಕಾರ ಮತ್ತು ಶಿಕ್ಷಣ ಸಚಿವರು ಮೊದಲು ಶಾಲೆಗಳಿಗೆ ಬೇಕಾದಂತಹ ಮೂಲಭೂತ ಸೌಕರ್ಯ ಒದಗಿಸಿ ಆನಂತರ ಮುಂದಿನ ಶಿಕ್ಷಣದ ಯೋಜನೆಯ ಬಗ್ಗೆ ಯೋಚಿಸುವುದು ಸೂಕ್ತವೆನಿಸುತ್ತದೆ.
-ನಾಗೇಶ್ , ಮಾನಸಗಂಗೋತ್ರಿ, ಮೈಸೂರು.
ತ್ವರಿತ ಹೇಳಿಕೆ ಸರಿಯೇ?
ಮಂಗಳೂರಿನಲ್ಲಿ ನಡೆದ ಸ್ಪೋಟ ಕುರಿತಂತೆ ತನಿಖೆ ಆರಂಭವಾಗುವ ಮುನ್ನವೇ ಮುಖ್ಯಮಂತ್ರಿಗಳು ಇದು ವ್ಯವಸ್ಥಿತ ಜಾಲ ಎಂದು ಹೇಳಿಕೆ ನೀಡಿದ್ದಾರೆ. ಪೋಲೀಸ್ ಮಹಾನಿರ್ದೇಶಕರು ಇದು ಉಗ್ರಹ ಕೃತ್ಯ ಎಂದು ಟ್ವೀಟ್ ಮಾಡಿದ್ದಾರೆ. ಘಟನೆ ನಡೆದು ಆಮೂಲಾಗ್ರವಾಗಿ ತನಿಖೆ ನಡೆಯುವ ಮುನ್ನವೇ ಉನ್ನತ ಸ್ಥಾನದಲ್ಲಿ ಇರುವವರು ಈ ರೀತಿಯ ಹೇಳಿಕೆ ನೀಡುವುದರಿಂದ ತನಿಖೆಯ ಹಾದಿ ತಪ್ಪಿಸಿದಂತೆ ಆಗುವುದಿಲ್ಲವೇ? ಈ ರೀತಿಯ ಹೇಳಿಕೆ ನೀಡುವುದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ನೆರವಾಗುವುದಿಲ್ಲವೇ? ಇಂತಹ ಘಟನೆಗಳ ಕುರಿತಂತೆ ತನಿಖಾಧಿಕಾರಿಗಳ ಹೊರತಾಗಿ ಯಾರೂ ಹೇಳಿಕೆ ನೀಡದೇ ಇರುವುದು ಉಚಿತವಲ್ಲವೇ?
-ಸಂತೋಷ್ ಕುಮಾರ್, ಬನ್ನಿಮಂಟಪ, ಮೈಸೂರು.
ಅಮಾನವೀಯ ಕೃತ್ಯ.
ಹೆಗ್ಗೊಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ನೀರು ಕುಡಿದರೆಂಬ ಕಾರಣಕ್ಕೆ ತೊಂಬೆಯ ನೀರು ಖಾಲಿ ಮಾಡಿ ಶುದ್ಧೀಕರಿಸಿದ ಘಟನೆ ಅತ್ಯಂತ ಅಮಾನವೀಯವಾದದ್ದು. ಇಂತಹ ಕೃತ್ಯ ಎಸಗಿದರವ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶುದ್ಧೀಕರಮವಾಗಬೇಕಿರುವುದು ತೊಂಬೆಯದಲ್ಲ, ಇಂತಹ ನೀಚ ಜನರ ಮನಸ್ಥಿತಿಯನ್ನು ಶುದ್ಧೀಕರಿಸಬೇಕಿದೆ. ಜಿಲ್ಲಾಡಳಿತ ಬರೀ ಪ್ರಕರಣ ದಾಖಲು, ವಿಚಾರಣೆಗೆ ಸೀಮಿತಗೊಳಿಸದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇಂತಹ ಕೃತ್ಯಗಳು ನಡೆದಾಗ ಸರ್ಕಾರ, ಜಿಲ್ಲಾಡಳಿತ ಅಷ್ಟೇ ಅಲ್ಲ ಎಲ್ಲಾ ನಾಗರಿಕರು ನಾಚಿಕೆ ಪಡಬೇಕು. -ಸಿದ್ದೇಗೌಡ, ಕೆಜಿ ಕೊಪ್ಪಲು, ಮೈಸೂರು.