ಬೆಂಗಳೂರು: ವಿಧಾನಸಭೆಯಲ್ಲಿ ಹಲವು ವಿಧೇಯಕಗಳ ಮಂಡನೆ ಮಾಡಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಪ್ರೌಢ ಶಿಕ್ಷಣ ಮಂಡಳಿ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ. ಉನ್ನತ, ತಾಂತ್ರಿಕ, ವೃತ್ತಿ ಶಿಕ್ಷಣಆದಲ್ಲಿ ಕನ್ನಡ ಒಂದು ಭಾಷೆಯಾಗಿ ಪರಿಚಯಿಸಲಾಗಿದೆ. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿಗೆ ಅವಕಾಶ ನೀಡಲಾಗುವುದು. ಅಧೀನ ನ್ಯಾಯಾಲಯ, ನ್ಯಾಯಾಧಿಕರ ಮತ್ತು ಇತರೆ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷೆಗೆ, ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಕೈಗಾರಿಕಾ ಸಂಸ್ಥೆಗಳಿಗೆ ತೆರಿಗೆ ರಿಯಾಯಿತಿ, ಕನ್ನಡ ಅನುಷ್ಠಾನದ ಮೇಲ್ವಿಚಾರಣೆಗೆ ಸಮಿತಿ ಸ್ಥಾಪನೆಗೆ ಅವಕಾಶ ಕೊಡುವ ವಿಧೇಯಕವಾಗಿದೆ.
ಕನ್ನಡ ಭಾಷೆ ಕಾಯ್ದೆ ಅನುಷ್ಠಾನ ಮಾಡದಿದ್ದರೆ ಮೇಲ್ವಿಚಾರಣೆಗೆ ಅಧಿಕಾರ ನೀಡಲಾಗುವುದು. ಉಲ್ಲಂಘನೆಗಾಗಿ ದಂಡ ವಿಧಿಸಲು ಅವಕಾಶವಿದೆ. ಮೊದಲನೇ ಸಲ ತಪ್ಪು ಮಾಡಿದ್ರೆ 5 ಸಾವಿರ ರೂ, ಎರಡನೇ ಸಲ ತಪ್ಪು ಮಾಡಿದ್ರೆ 10 ಸಾವಿರ ರೂ. ಮೂರನೇ ಸಲ ತಪ್ಪು ಮಾಡಿದ್ರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಕನ್ನಡದಲ್ಲೂ ಉದ್ಯೋಗ ಪೋರ್ಟಲ್ ತೆರೆಯಲು, ಕನ್ನಡ ಭಾಷೆ ಬರದವರಿಗೆ ಕನ್ನಡ ಕಲಿಕಾ ಘಟಕ ಸ್ಥಾಪಸಿ ಕನ್ನಡ ಭಾಷೆ ಪರಿಚಯಿಸಲು ಅವಕಾಶ ನೀಡಲಾಗಿದೆ.
ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರ ನೇತೃತ್ವದಲ್ಲಿ ಕರ್ನಾಟಕ ಕಾನೂನು ಆಯೋಗವು ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯ ಕರಡು ಪ್ರತಿಯನ್ನು ಸಿದ್ಧಪಡಿಸಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಈ ಹಿಂದೆ ಸಲ್ಲಿಸಲಾಗಿದೆ. ಆಳವಾಗಿ ಅಧ್ಯಯನ ನಡೆಸಿ, ಚರ್ಚಿಸಿ ಈ ವಿಧೇಯಕ ಕರಡನ್ನು ಸಿದ್ಧಪಡಿಸಿದ್ದು, ಸರಕಾರಕ್ಕೆ ಜಾರಿ ಮಾಡುವ ಅನಿವಾರ್ಯತೆ ಇದೆ. ಕನ್ನಡ ಭಾಷೆ ಅಭಿವೃದ್ಧಿಗಾಗಿ ಕಾನೂನು ಆಯೋಗ ಹಮ್ಮಿಕೊಂಡಿರುವ ಈ ಕಾರ್ಯ ಶ್ರೇಷ್ಠ ಹಾಗೂ ಸಮಯೋಚಿತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಕೂಡ ಹೇಳಿದ್ದಾರೆ. ನಾಡಿನಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವುದರ ಜೊತೆಗೆ ಅನ್ಯ ಭಾಷೆಗಳ ದಬ್ಬಾಳಿಕೆ ತಪ್ಪಿಸಲು ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕದಿಂದ ರಾಜ್ಯದಲ್ಲಿ ಕನ್ನಡವನ್ನು ಬಲಪಡಿಸಲು ಅನುಕೂಲವಾಗಲಿದೆ.
ಇನ್ನೂ ವಿಧಾನಸಭೆಯಲ್ಲಿ ಪ್ರೌಢ ಶಿಕ್ಷಣ ಮಂಡಳಿ ತಿದ್ದುಪಡಿ ವಿಧೇಯಕ ಮಂಡನೆ ಮಾಡಿದ್ದು, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಪರೀಕ್ಷಾ ಮಂಡಳಿ ವಿಲೀನಕ್ಕೆ ಅವಕಾಶ ಕೊಡುವ ವಿಧೇಯಕವಾಗಿದೆ. ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ ಮಂಡನೆ. ಒಂದೇ ವಿಷಯದ ಶಿಕ್ಷಕರು ಪರಸ್ಪರ ವರ್ಗಾವಣೆಗೆ ಅವಕಾಶ ಕೊಡುವ ವಿಧೇಯಕವಾಗಿದೆ.