ಬೆಂಗಳೂರು : ಕುಮಾರಸ್ವಾಮಿ ಅವರು ವೈಯಕ್ತಿಕ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಬಿಜೆಪಿ ಜೊತೆ ಮೈತ್ರಿಯಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಜೆಡಿಎಸ್ ವಿರುದ್ಧ ಟೀಕೆ ಮಾಡಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಹಾಗೂ ಪಕ್ಷ ಬಿಟ್ಟು ಹೋಗುವವರೆಲ್ಲ ಹೋಗಲಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ವೈಯಕ್ತಿಕ ಅಸ್ತಿತ್ವ ಉಳಿಸಿಕೊಳ್ಳೋಕೆ ಮೈತ್ರಿ ಮಾಡಿಕೊಂಡಿದ್ದಾರೆ. ಹೋಗೋರು ಹೋಗಲಿ ಅಂತ ಹೇಳಿದ್ರೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಚಾಟಿ ಬೀಸಿದ್ದಾರೆ.
ಕುಮಾರಸ್ವಾಮಿ ಅವರಿಗೆ ಜನರು ಬೇಡ ಅಂತ. ಸಂವಿಧಾನ ಪರ ಇರೋ ಜನ, ಜಾತ್ಯತೀತ ತತ್ವ ನಂಬೋ ಜನ ಅವರಿಗೆ ಬೇಡ ಅಂತ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕೆ ಜೆಡಿಎಸ್ನಿಂದ ಅನೇಕ ಜನ ಬಿಟ್ಟು ಬರ್ತಿದ್ದಾರೆ. ಜೆಡಿಎಸ್ ಜಾತ್ಯತೀತ ಪಕ್ಷ. ಈಗ ಜನತಾನೂ ಇಲ್ಲ, ಜನರೂ ಇಲ್ಲ, ಅವರ ಜೊತೆ ದಳನೂ ಇಲ್ಲ. ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಜಾತ್ಯತೀತ ತತ್ವನೂ ಇಲ್ಲ. ಅದಕ್ಕೆ ಜನ ಬಿಟ್ಟು ಬರ್ತಿದ್ದಾರೆ.ಅಲ್ಪಸಂಖ್ಯಾತ ಮಾತ್ರವಲ್ಲ. ಹಲವಾರು ನಾಯಕರು ಜೆಡಿಎಸ್ ನಿಂದ ಹೊರಗೆ ಬರ್ತಿದ್ದಾರೆ ಎಂದು ಕುಟುಕಿದ್ದಾರೆ.
ಜಾತ್ಯತೀತ ತತ್ವವನ್ನ ನಂಬಿ ಅನೇಕರು ಪಕ್ಷ ಸೇರ್ಪಡೆ ಆಗಿದ್ದರು. ಕುಟುಂಬ ಅಥವಾ ವ್ಯಕ್ತಿ ನಂಬಿ ಪಕ್ಷ ಸೇರಿರಲಿಲ್ಲ. ಪಕ್ಷದ ತತ್ವ ನೋಡಿ ಪಕ್ಷ ಸೇರ್ಪಡೆ ಆಗಿರುತ್ತಾರೆ. ಅವರು ಹೊರಗೆ ಬರ್ತಿದ್ದಾರೆ ಎಂದಿದ್ದಾರೆ.
ಜೆಡಿಎಸ್ನಿಂದ ಕಾಂಗ್ರೆಸ್ಗೆ ಬರೋರಿಗೆ ಸ್ವಾಗತ ಮಾಡ್ತೀರಾ ಎಂಬ ವಿಷಯ ಕುರಿತು ಮಾತನಾಡಿ, ಯಾರೇ ಪಕ್ಷದಿಂದ ನಮ್ಮ ಪಕ್ಷದ ಸಿದ್ಧಾಂತ, ಸಂವಿಧಾನ ಒಪ್ಪಿ ಬರೋದಾದರೆ ಬರಬಹುದು. ಅವರನ್ನ ಸ್ವಾಗತ ಮಾಡ್ತೀವಿ ಎಂದು ತಿಳಿಸಿದ್ದಾರೆ.