ʼಪುನೀತ ನಮನ’ ದಲ್ಲಿ ಭಾವುಕರಾದ ಗಣ್ಯರು

ಬೆಂಗಳೂರು: ಅಮರರಾದ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ, ಸ್ನೇಹ ಜೀವಿ, ಸಮಾಜಮುಖಿ ಚಿಂತನೆಯ ಪುನೀತ್ ರಾಜ್‌ಕುಮಾರ್ ಅವರಿಗೆ ಚಿತ್ರೋದ್ಯಮದ ಗೌರವ ಸಲ್ಲಿಸಲು ಆಯೋಜಿಸಿದ್ದ ‘ಪುನೀತ ನಮನ’ ಕಾರ್ಯಕ್ರಮ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅಲ್ಲಿ ಪುನೀತ್ ರಾಜ್‌ಕುಮಾರ್ ಅವರ ವ್ಯಕ್ತಿತ್ವ, ಅವರ ಸಮಾಜಮುಖಿ ಕಾರ್ಯಗಳು ಅನಾವರಣಗೊಂಡಿತು.

ಕಾರ್ಯಕ್ರಮದುದ್ದಕ್ಕೂ ನೆರದಿದ್ದವರ ಕಣ್ಣಾಲಿಗಳು ಕಂಬನಿಗರೆದವು. ಅದರಲ್ಲೂ ರಾಜ್ ಕುಟುಂಬದವರ ವೇದನೆ, ಮಡುಗಟ್ಟಿದ್ದ ಶೋಕ ಎಲ್ಲವೂ ಕಟ್ಟೆಯೊಡಯಿತು. ಕಾರ್ಯಕ್ರಮದುದ್ದಕ್ಕೂ ಪತ್ನಿ ಅಶ್ವಿನಿ ಕಣ್ಣೀರು ಸುರಿಸುತ್ತಲೇ ಇದ್ದರು. ಪುನೀತ್ ಅವರ ಅಕಾಲಿಕ ಸಾವು ಸಾಕಷ್ಟು ಜನರಿಗೆ ನೋವು ತಂದಿದೆ. ಅದರಲ್ಲೂ ಕನ್ನಡ ಚಿತ್ರರಂಗವಂತೂ ಶೂನ್ಯ ಆವರಿಸಿದ ರೀತಿ ಆಗಿದೆ ಎಂದು ನೆರೆದಿದ್ದವರು ಹೇಳಿದ್ದು, ಅತಿಶಯೋಕ್ತಿಯಲ್ಲ.
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ‘ಪುನೀತ ನಮನ’ ಕಾರ್ಯಕ್ರಮ ನಡೆಯಿತು. ಅದೊಂದು ಅಭೂತಪೂರ್ವ ಕಾರ್ಯಕ್ರಮವಾಗಿತ್ತು. ಅಲ್ಲಿ ಬರೀ ಭಾವನೆಗಳದ್ದೇ ಮೆರವಣಿಗೆ. ಕಾರ್ಯಕ್ರಮಕ್ಕೆ ಒಂದು ಗಂಟೆ ಮೊದಲೇ ಆಗಮಿಸಿದ್ದ ನಟರು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಮೌನಕ್ಕೆ ಶರಣಾಗಿದ್ದರು. ಕುಶಲೋಪರಿ ನಡೆದರೂ ಅಲ್ಲಿ ಭಾವನೆಗಳೇ ಮಾತನಾಡಿದವು.

ಪುನೀತ್ ಕುರಿತು ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿಗೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದರು. ಈ ಗೀತೆಯ ಮೂಲಕ ಪುನೀತ ನಮನ ಕಾರ್ಯಕ್ರಮ ಆರಂಭ ಆಯಿತು. ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ಗುರುಕಿರಣ್, ರಾಜೇಶ್ ಕೃಷ್ಣನ್, ಸಾಧು ಕೋಕಿಲ, ಮಂಜುಳಾ ಗುರುರಾಜ್, ಹೇಮಂತ್, ಅನುರಾಧಾ ಭಟ್, ಸುನಿತಾ, ಇಂದು ನಾಗರಾಜ್, ಚೈತ್ರಾ, ಶಮಿತಾ ಮಲ್ನಾಡ್ ಅವರಿಂದ ಗೀತ ನಮನ ನಡೆಯಿತು.

10 ನಿಮಿಷಗಳ ಕಾಲ ಅಪ್ಪು ಜರ್ನಿಯ ಬಗ್ಗೆ ಎವಿ ಮಾಡಲಾಗಿತ್ತು. ಅಪ್ಪು ಬಗ್ಗೆ ಸ್ಟಾರ್ ನಟರು ತಮ್ಮ ಒಂದೆರಡು ನಿಮಿಷಗಳ ಕಾಲ ಒಡನಾಟವನ್ನು ಹಂಚಿಕೊಂಡರು. ಚಿತ್ರ ಪ್ರದರ್ಶನ ಹೊರತುಪಡಿಸಿ, ಚಿತ್ರೋದ್ಯಮದ ಮತ್ತೆಲ್ಲಾ ಕೆಲಸಗಳಿಗೆ ರಜೆ ಘೋಷಿಸಲಾಗಿತ್ತು.

ಬಿಗಿ ಭದ್ರತೆ: ಅರಮನೆ ಮೈದಾನದಲ್ಲಿ ಭದ್ರತೆಗಾಗಿ ಇಬ್ಬರು ಡಿಸಿಪಿಗಳು, ನಾಲ್ವರು ಎಸಿಪಿಗಳು, ೨೫ ಪಿಐ, ೪೦ ಸಬ್ ಇನ್ಸ್‌ಪೆಕ್ಟರ್, ೫ ಏSಖP ತುಕಡಿ ಸೇರಿ, ೫೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

× Chat with us