ಸರ್ಕಾರಿ ಗೌರವಗಳೊಂದಿಗೆ ನಟ ಶಿವರಾಂ ಅಂತ್ಯಕ್ರಿಯೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಅನಾರೋಗ್ಯದಿಂದ ನಿಧನರಾದ ಹಿರಿಯ ಕಲಾವಿದ ಶಿವರಾಂ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿವರಾಂ ಅವರ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಲಾಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಕಲಾರಂಗಕ್ಕೆ ಅವರ ಅಗಲಿಕೆ ತುಂಬಲಾರದ ನಷ್ಟ. ಅವರು ಮಾಡಿದ ಎಲ್ಲ ಪಾತ್ರಗಳನ್ನು ನೈಜವಾಗಿ ಅಭಿನಯಿಸಿ, ಜೀವ ತುಂಬಿದ್ದರು. ಅವರು ನಟಿಸಿದ ಚಿತ್ರಗಳು ಅತ್ಯಂತ ಯಶಸ್ವಿಯಾಗಿವೆ. ಮುಖ್ಯ ನಟರ ಸರಿಸಮಾನವಾಗಿ ನಟನೆ ಮಾಡುತ್ತಿದ್ದರು ಎಂದರು.

ಉಪಾಸನೆಯಂತಹ ಚಿತ್ರಗಳ ನಿರ್ಮಾಪಕರಾಗಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದರು. ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಸೇರಿದಂತೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಅವರ ಚಿತ್ರ ಗಳಲ್ಲಿ ನಟಿಸಿದ್ದರು.

ಅವರ ಬದುಕು ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಆಧ್ಯಾತ್ಮಿಕ ಚಿಂತನೆ ಹಾಗೂ ದೈವಭಕ್ತಿ ಅವರಲ್ಲಿತ್ತು. ಸದಾ ಹಸನ್ಮುಖಿಯಾಗಿ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಸಹೃದಯಿ. ಇತ್ತೀಚಿನ ದಿನಗಳಲ್ಲಿ ಅವರನ್ನು ಕಂಡರೆ ಗುರುಗಳನ್ನು ಕಂಡಂತೆ ಭಾಸವಾಗುತ್ತಿತ್ತು. ಹೆಚ್ಚಿನ ಕಾಲ ನಮ್ಮೊಂದಿಗೆ ಇದ್ದು, ಅವರು ನಮಗೆ ಮಾರ್ಗದರ್ಶನ ಮಾಡಬೇಕಿತ್ತು. ಚಿತ್ರೋದ್ಯಮದಲ್ಲಿ ಅಪಾರ ಗೌರವ ಗಳಿಸಿ, ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಚಿತ್ರರಂಗ ಬಡವಾಗಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

× Chat with us