ಬೆಂಗಳೂರು: ಹಾಸನ ಜಿಲ್ಲೆ ಅರಸೀಕೆರೆ ಸಮೀಪದ ಬಾಣಾವರ ಬಳಿ ಕಳೆದ ರಾತ್ರಿ ಹಾಲಿನ ಟ್ಯಾಂಕರ್, ಟಿಟಿ ವಾಹನ, ಕೆಎಸ್ ಆರ್ ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳೂ ಸೇರಿ 9 ಜನರು ದಾರುಣವಾಗಿ ಸಾವನ್ನಪ್ಪಿರುವುದು ತೀವ್ರ ದಿಗ್ಭ್ರಮೆ, ಅತೀವ ದುಃಖ ಉಂಟು ಮಾಡಿದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,
ಮೃತರೆಲ್ಲರೂ ಧರ್ಮಸ್ಥಳ ಸೇರಿ ಕೆಲ ಪುಣ್ಯಕ್ಷೇತ್ರಗಳಿಗೆ ತೆರಳಿ ದೈವದರ್ಶನ ಪಡೆದು ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದರು. ಇನ್ನು ಕೆಲ ಕಾಲವಷ್ಟೇ ಕ್ರಮಿಸಿದ್ದಿದ್ದರೆ ಮನೆ ಸೇರಿಕೊಳ್ಳುತ್ತಿದ್ದರು. ಆದರೆ, ಅವರೆಲ್ಲರೂ ಅಪಘಾತದಲ್ಲಿ ಸಾವಿಗೆ ತುತ್ತಾಗಿದ್ದಾರೆ. ಜಿಲ್ಲಾಧಿಕಾರಿಗಳು ಆಸ್ಪತ್ರೆಯಲ್ಲಿರುವ ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿಸಲು ಕ್ರಮ ವಹಿಸಿ, ತಕ್ಷಣ ಸಂಬಂಧಿಕರಿಗೆ ಹಸ್ತಾಂತರ ಮಾಡಬೇಕು. ಗಾಯಾಳುಗಳಿಗೆ ಉಚಿತ, ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಮೃತರಿಗೆ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಗಳಿಗೆ ಕರುಣಿಸಲಿ ಹಾಗೂ ಗಾಯಾಳುಗಳೆಲ್ಲರೂ ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.