ಮೈಸೂರು: ಸಿಡಿ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಆ ವಿಷಯದಲ್ಲಿ ಎಲ್ ಬೋರ್ಡ್ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಶಾಸಕ ರಮೇಶ ಜಾರಕಿಹೊಳಿ ಅವರು ಡಿ.ಕೆ.ಶಿವಕುಮಾರ್ ಕುರಿತಾದ ಸಿಡಿ ಬಿಡುಗಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ಧಗಂಗಾ ಶ್ರೀ, ಚುಂಚನಗಿರಿ ಶ್ರೀಗಳು ಸಂಸ್ಕಾರ ಕಲಿಸಿದ್ದಾರೆ. ಬಡವರಿಗೆ ಇಲ್ಲದಿದ್ದರೆ ಏನಾದರೂ ಸಹಾಯ ಮಾಡಬಹುದು, ಕೈಲಾದ್ದನ್ನು ಕೊಡಬಹುದು. ಸಿಡಿ ವಿಚಾರದಲ್ಲಿ ನಾನು ಎಲ್ ಬೋರ್ಡ್ ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಅಭಿವೃದ್ಧಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವ್ಯಕ್ತಿಯೊಬ್ಬರು ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಬೆಟ್ಟ ಶತಮಾನಗಳಿಂದ ಇದೆ. ಗುಡಿ ಗೋಪುರ ಅಭಿವೃದ್ಧಿ ಮಾಡಬೇಕೆಂಬುದು ನಮ್ಮ ಬಯಕೆಯಾಗಿದೆ. ಜತೆಗೆ ಕಾನೂನಿನ ಬುದ್ಧಿವಂತಿಕೆಯನ್ನೂ ಬಳಸಬೇಕಾಗುತ್ತದೆ ಎಂದು ಹೇಳಿದರು.
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಬದ್ಧರಾಗಿದ್ದೇವೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಎಷ್ಟು ವರ್ಷಗಳಿಂದ ರಥೋತ್ಸವ ನಿಂತಿತ್ತು. ನಾವು ಬಂದ ನಂತರ ಮಾಡಿಲ್ಲವೇ? ಅದೇ ರೀತಿ ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಹನೂರು ಕ್ಷೇತ್ರದಲ್ಲಿ ತಮ್ಮ ಪುತ್ರ ಸ್ಪರ್ಧಿಸುವರೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,224 ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆಯಾಗಲ್ಲ. ನನಗೆ 72 ವರ್ಷಗಳಾಗಿದೆ. 75 ವರ್ಷಗಳಾದರೆ ಚುನಾವಣೆಗೆ ನಿಲ್ಲುವಂತಿಲ್ಲ. ಯಾರು ಎಲ್ಲಿ ಸ್ಪರ್ಧೆ ಮಾಡುವರೆಂದು ಹೈಕಮಾಡ್ ನಿರ್ಧರಿಸುತ್ತದೆ ಎಂದರು.
ಬಿಜೆಪಿಯಲ್ಲಿ ಬುದ್ಧಿವಂತರಿದ್ದಾರೆ. ಚಲಾವಣೆಯಲ್ಲಿರುವ ನಾಣ್ಯವನ್ನು ಕಳೆದುಕೊಳ್ಳುವುದಿಲ್ಲ. 2 ತಿಂಗಳಲ್ಲಿ ಚುನಾವಣೆ ಬರಲಿದೆ. ನೋಡುತ್ತಿರಿ ಬಿಜೆಪಿ ರೇಟ್ ಯಾವ ರೀತಿ ಮೇಲಕ್ಕೇರುತ್ತದೆ ಎಂದು ತಿಳಿಸಿದರು. 1 ವರ್ಷ 8 ತಿಂಗಳಿಂದ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಉತ್ತಮ ಕೆಲಸಗಳಾಗಿವೆ ಎಂದು ಹೇಳಿದರು.
ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ ಸಚಿವರನ್ನು ವಸತಿ, ಕರ್ನಾಟಕ ಗೃಹಮಂಡಳಿ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಬರಮಾಡಿಕೊಂಡರು. ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮೈಸೂರು ನಗರ ಬಿಜೆಪಿ ವಕ್ತಾರರಾದ ಎಂ.ವಿ.ಮೋಹನ್, ಕೇಬಲ್ ಮಹೇಶ್, ಮಂಗಲ ಶಿವಕುಮಾರ್, ಸುರೇಶ್, ಪ್ರಗತಿಪರ ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ, ಎಸ್.ಎಂ.ಶಿವಪ್ರಕಾಶ್, ಪಾಳ್ಯ ಕೃಷ್ಣ ಇನ್ನಿತರರು ಹಾಜರಿದ್ದರು. ಮೈಸೂರು ನಗರದ ಎರಡು ಕಡೆಗಳಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾಗಿದ್ದರು.