ಗೋರಖ್ಪುರ: ಉತ್ತರಪ್ರದೇಶದ ಗೋರಖ್ಪುರದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 15 ವರ್ಷದ ತನ್ನ ಮೊಮ್ಮಗಳ ಮೇಲೆ 60 ವರ್ಷದ ಅಜ್ಜನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಅತ್ಯಾಚಾರ ನಡೆಸಿರುವ ವಿಚಾರವನ್ನು ಯಾರಿಗೂ ಹೇಳದಂತೆ ಬಾಯಿ ಮುಚ್ಚಿಸಲು ಆಕೆಗೆ 10 ರೂ. ನೋಟನ್ನು ನೀಡಿದ್ದಾನೆಂದು ವರದಿಯಾಗಿದೆ.
ಮೊಮ್ಮಗಳನ್ನು ಅತ್ಯಾಚಾರ ಮಾಡಿದ ಆರೋಪದ ಮೇರೆಗೆ 60 ವರ್ಷದ ವ್ಯಕ್ತಿಯನ್ನು ಗೋರಖ್ಪುರ ಪೊಲೀಸರು ಬಂಧಿಸಿದ್ದಾರೆ. ಸಂಜೆ ಸೊಸೆ ಮತ್ತು ಮೊಮ್ಮಗಳು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಜ್ಜ ಮನೆಗೆ ಹೋಗುವಂತೆ ಸೊಸೆಗೆ ಹೇಳಿ ಬಳಿಕ ಕಟ್ಟಿಗೆ ಕಡಿಯಲು ಕೊಡಲಿ ತರುವಂತೆ ತನ್ನ ಮೊಮ್ಮಗಳಿಗೆ ತಿಳಿಸಿದ್ದಾನೆ. ಮೊಮ್ಮಗಳು ಮನೆಗೆ ಹೋಗಿ ಕೊಡಲಿ ತಂದಾಗ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಯಾರಿಗೂ ಹೇಳಬಾರದು ಅಂತಾ ಹೇಳಿ ಆಕೆಗೆ 10 ರೂ. ನೋಟು ನೀಡಿದ್ದಾನೆ.
ನೀರು ತರಲು ಹೋಗುತ್ತಿದ್ದ ವ್ಯಕ್ತಿಯೊಬ್ಬ ಅಜ್ಜನ ಕೃತ್ಯವನ್ನು ಕಂಡು ಊರಿನ ಜನರಿಗೆ ವಿಷಯ ತಿಳಿಸಿದ್ದಾನೆ. ಬಳಿಕ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಅಜ್ಜನನ್ನು ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.