ಯುವ ಕವಿಗೋಷ್ಠಿಯಲ್ಲಿ ಎಚ್.ಎಸ್.ವೆಂಕಟೇಶ್ಮೂರ್ತಿ ಅಭಿಪ್ರಾಯ
ಮೈಸೂರು: ‘ಎಲ್ಲಿದ್ದೀಯೇ ಮೀನಾ?
ಇಲ್ಲೇ ಇದ್ದೇನಮ್ಮಾ
ಬಿಸಿ ನೀರಿದೆಯೇ? ಮಗುವಿನ ಹಾಲಿನ ಪುಡಿಗೆ
ಬೇಕಾದಷ್ಟಿದೆಯಮ್ಮಾ; ಕಣ್ಣಲ್ಲೂ ಜೊತೆಗೆ…’
ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆಯ ಈ ಸಾಲುಗಳನ್ನು ಹೇಳುವ ಮೂಲಕ ಕವಿತೆಯ ರಚನೆ ಮತ್ತು ಆಲಿಸುವ ಬಗೆ ಹಾಗೂ ಸೂಕ್ಷ್ಮತೆಯನ್ನು ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಎಚ್.ಎಸ್.ವೆಂಕಟೇಶ್ಮೂರ್ತಿ ಅವರು ತಿಳಿಸಿದರು.
ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನೊಂದಿಗೆ ನಡೆಸುವ ಆಪ್ತ ಸಂವಾದವನ್ನು ಕವಿತೆ ಎನ್ನಬಹುದು. ಮೆಲುದನಿಯ ಮಾತುಗಳು ಕವಿತೆಗಳಲ್ಲಿ ಕಾಣುತ್ತವೆ, ಇದು ಕವಿತೆಯ ವಿಶೇಷ ಲಕ್ಷಣ. ಕವಿತೆ ಎಂಬುದು ಕೇವಲ ಅರ್ಥದ ಅಭಿವ್ಯಕ್ತಿಯಲ್ಲ, ನಾದದ ಅಭಿವ್ಯಕ್ತಿ ಕೂಡ ಆಗಿರುತ್ತದೆ. ಮಾತು ಮತ್ತು ಧಾತು, ಶಬ್ಧ ಮತ್ತು ಸಂಗೀತ ಇವೆರಡೂ ಸೇರಿದಾಗ ಕವಿತೆ ಆಗುತ್ತದೆ ಎಂದರು.
ಇಲ್ಲಿ ಕೇಳಿದ ಹೆಚ್ಚಿನ ಕವಿತೆಗಳಲ್ಲಿ ಮಾತಿನ ಅಂಶ ಹೆಚ್ಚಿತ್ತು, ಲಯಗಾರಿಕೆ ಅಂಶ ಕಡಿಮೆಯಿತ್ತು. ಹಾಗಾಗಿ, ಎರಡೂ ಇರುವಂತೆ ತರುಣರು ಅಭ್ಯಾಸ ಮಾಡಬೇಕು. ಮಾತಿಗೆ ಮಾತ್ರ ಮಹತ್ವ ಕೊಟ್ಟರೆ, ನಾದವನ್ನು ಕಡೆಗಣಿಸಿದರೆ. ಭಾಷೆಯ ಅರ್ಧಾಂಶವನ್ನು ಪಕ್ಕಕ್ಕೆ ಇಟ್ಟು ಮಾತನಾಡಿದಂತೆ ಆಗುತ್ತದೆ. ಭಾಷೆಯ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಆಗ ಮಾತ್ರ ಕವಿತೆ ಸಾರ್ಥಕವಾಗುತ್ತದೆ. ಇದನ್ನು ಬೇಂದ್ರೆ ಮತ್ತು ಕುವೆಂಪು ಸಾಹಿತ್ಯದಲ್ಲಿ ಕಾಣಬಹುದು ಎಂದರು.
ಅರ್ಥವಾಗುವ ಮೊದಲೇ ಕವಿತೆ ಹೃದಯ ತಲುಪಬೇಕು. ಗದ್ಯ ಹಾಗಲ್ಲ ಅರ್ಥವಾದ ನಂತರ ನಿಮ್ಮ ಅನುಭವ ವಿಸ್ತಾರ ಮಾಡುತ್ತದೆ. ಕವಿತೆಯ ನಡೆ, ಲಯ, ಬೆಡಗು, ಭಿನ್ನಾಣ ನಮ್ಮ ಮನಸ್ಸನ್ನು ಪೂರ್ತಿ ಅಪಹರಿಸುತ್ತದೆ. ಒಳ್ಳೆಯ ಕವಿಗಳು ಎಷ್ಟು ಮುಖ್ಯವೋ, ಒಳ್ಳೆಯ ಕೇಳುಗರು ಅಷ್ಟೆ ಮುಖ್ಯ. ಒಬ್ಬ ಮಹಾ ಕವಿ ಹುಟ್ಟಬೇಕು ಎಂದರೆ, ಒಬ್ಬ ಮಹಾ ಓದುಗನೂ ಹುಟ್ಟಬೇಕು ಎಂದರು.
ಯುವ ಕವಿಗಳು ಪ್ರಾಮಾಣಿಕವಾದ, ಸತ್ಯಶೋಧಕವಾದ, ತ್ರಿಕಾಲಕ್ಕೂ ಒಪ್ಪುವ ಸೂಕ್ಷ್ಮಕವಿತೆಗಳನ್ನು ಬರೆದು ಕರ್ನಾಟಕದ ಹೆಮ್ಮೆಯನ್ನು ಹೆಚ್ಚಿಸಬೇಕು. ಕವನ ವಾಚಿಸಿದವರೆಲ್ಲರೂ ಒಳ್ಳೆಯ ಕವಿತೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿಯೊಂದು ಕವಿತೆಯಲ್ಲಿಯೂ ಏನೋ ಹುಡುಕಾಟ, ಶೋಧನೆ ಮತ್ತು ಏನನ್ನೋ ಅರಿಯುವ ತವಕ ಕಾಣುತ್ತಿದೆ. ಇದು ಕಾವ್ಯದ ಮೂಲಭೂತ ಗುಣ. ಇಂತಹ ಕವಿಗೋಷ್ಠಿಯಲ್ಲಿ ಘೋಷಣೆಗಳೇ ಹೆಚ್ಚು ಇರುತ್ತಿದ್ದವು. ಎಲ್ಲ ಕವಿತೆಗಳು ಅಂತರಂಗದ ಮಾತುಗಳಾಗಿವೆ. ಇದು ಕವಿತೆಗೆ ಶುಭಸೂಚನೆ ಎಂದರು.
ಯುವ ಕವಿಗೋಷ್ಠಿಯನ್ನು ಉದ್ಘಾಟಿಸಿದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ವಿಶ್ವ ಮಾನವತೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಯುವಕವಿಗಳು ಮಾಡಬೇಕು. ಹಿರಿಯ ಸಾಹಿತಿಗಳನ್ನು ಆದರ್ಶವಾಗಿಸಿಕೊಳ್ಳಬೇಕು ಎಂದರು.
ವಿಮರ್ಶಕಿ ಡಾ. ಮಂಗಳಾ ಪ್ರಿಯದರ್ಶಿನಿ, ಸಚಿವರಾದ ಎಸ್.ಟಿ. ಸೋಮಶೇಖರ್ ಮತ್ತು ಬಿ.ಸಿ. ಪಾಟೀಲ್, ಮೇಯರ್ ಶಿವಕುಮಾರ್, ದಸರಾ ಉಪ ವಿಶೇಷಾಧಿಕಾರಿ ಡಾ. ದಾಸೇಗೌಡ, ಕಾರ್ಯಾಧ್ಯಕ್ಷ ಎಂ.ಜಿ. ಮಂಜುನಾಥ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಪದಾಧಿಕಾರಿಗಳಾದ ಎಚ್.ಕೆ. ಪಂಡಿತ್, ಬಸವರಾಜಪ್ಪ, ರವಿ, ರಾಜಮಣಿ, ಶಿವಮ್ಮ, ಜಯಪ್ಪ ಹೊನ್ನಾಳಿ, ಎಚ್.ಡಿ. ಗಿರೀಶ್ ಇತರರು ಹಾಜರಿದ್ದರು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಸಿದ್ದ ದಸರಾ ಯುವ ಕವಿಗೋಷ್ಠಿಯನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಸಾಹಿತಿ ಎಚ್.ಎಸ್.ವೆಂಕಟೇಶ್ಮೂರ್ತಿ, ಡಾ. ಮಂಗಳಾ ಪ್ರಿಯದರ್ಶಿನಿ, ಸಚಿವರಾದ ಎಸ್.ಟಿ. ಸೋಮಶೇಖರ್ ಮತ್ತು ಬಿ.ಸಿ. ಪಾಟೀಲ್, ಮೇಯರ್ ಶಿವಕುಮಾರ್ ಹಾಜರಿದ್ದರು.