ಬೆಂಗಳೂರು : ರಾಜ್ಯದಲ್ಲಿ ಬರಪೀಡಿತ ತಾಲ್ಲೂಕುಗಳಿಗೆ ಸಂಬಂಸಿದಂತೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಇನ್ನೊಂದು ವಾರದಲ್ಲಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಕೃಷಿ, ತೋಟಗಾರಿಕೆ ಮತ್ತು ವಿಪತ್ತು ನಿರ್ವಹಣಾ ಪ್ರಾಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸುಮಾರು ಐದೂವರೆಯಿಂದ ಆರು ಸಾವಿರ ಕೋಟಿ ನೆರವು ನೀಡುವಂತೆ ಮನವಿ ಸಲ್ಲಿಸಲಾಗುವುದು.ಎನ್ಡಿಆರ್ ಎಫ್ ಮಾರ್ಗಸೂಚಿ ಪ್ರಕಾರ ಶೀಘ್ರದಲ್ಲೇ 3-4 ದಿನದಲ್ಲಿ ಮನವಿ ಪತ್ರ ಸಿದ್ಧಪಡಿಸಿ ಸಂಪುಟ ಉಪಸಮಿತಿ ಮುಂದೆ ಚರ್ಚಿಸಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಕಳೆದ ವಾರ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ 195 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿದ್ದು, ಕೃಷಿ ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ , ಪಶುಪಾಲನಾ ಇಲಾಖೆಗಳಿಗೆ ಮಾರ್ಗಸೂಚಿ ಪ್ರಕಾರ ವರದಿ ಸಿದ್ಧಪಡಿಸಿಕೊಳ್ಳಲು ಸೂಚಿಸಲಾಗಿತ್ತು.
ಆ ಇಲಾಖೆಗಳಿಂದ ಸಲ್ಲಿಕೆಯಾಗಿದ್ದ ವರದಿಗಳ ಕರಡನ್ನು ಇಂದು ಪರಿಶೀಲಿಸಿ ಇನ್ನೊಂದು ವಾರದಲ್ಲಿ ಸುಮಾರು 5 ರಿಂದ 6 ಸಾವಿರ ಕೋಟಿ ರೂ ನೆರವು ಕೋರುವ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದ ಮೇಲೆ ಉಳಿದ ತಾಲ್ಲೂಕುಗಳ ಶಾಸಕರಿಂದ ಬರಪೀಡಿತ ಘೋಷಿಸಲು ಒತ್ತಾಯಿಸಿದ್ದಾರೆ. 41 ತಾಲ್ಲೂಕುಗಳಲ್ಲಿ ಮಳೆ ಆಭಾವವಿದ್ದು, 10-15 ತಾಲ್ಲೂಕುಗಳು ಮಾರ್ಗಸೂಚಿ ಪ್ರಕಾರ ಬರಪೀಡಿತವಾಗಲಿದೆ.
ಕೇಂದ್ರದ ಮಾರ್ಗಸೂಚಿ ಪ್ರಕಾರ ಸ್ಥಳ ಪರಿಶೀಲನೆ ನಡೆಸಿ ಈ ತಿಂಗಳ ಅಂತ್ಯಕ್ಕೆ 2ನೇ ಬರಪೀಡಿತ ತಾಲ್ಲೂಕು ಪಟ್ಟಿಯನ್ನು ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ಬಿಹಾರ, ಜಾರ್ಖಂಡ್, ಪ.ಬಂಗಾಳ, ಮಣಿಪುರ, ಮಿಜೋರಾಂ, ಅಸ್ಸಾಂ, ಕೇರಳ ರಾಜ್ಯಕ್ಕೆ ನಮಗಿಂತಲೂ ಹೆಚ್ಚು ಮಳೆ ಕೊರತೆಯಿದ್ದರೂ ಆಯಾಯ ರಾಜ್ಯಗಳು ಬರಪೀಡಿತ ಎಂದು ಘೋಷಿಸಿಲ್ಲ.ಎಲ್ಲಾ ರಾಜ್ಯಗಳಿಗಿಂತ ಮುಂಚೆ ಬರಪೀಡಿತ ತಾಲ್ಲೂಕುಗಳನ್ನು ನಾವು ಘೋಷಿಸಿದ್ದೇವೆ ಎಂದರು. ಕೇಂದ್ರದ ಮಾರ್ಗಸೂಚಿ ಪ್ರಕಾರ ಕೃಷಿ ಇಲಾಖೆ ವ್ಯಾಪ್ತಿಯ 40 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 4 ಸಾವಿರ ಕೋಟಿ ರೂ. ಪರಿಹಾರ ಕೇಳಲು ಅವಕಾಶವಿದೆ. ಹಾಗೆಯೇ 2 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದ್ದು , 200 ಕೋಟಿ ರೂ. ನಷ್ಟ ಪರಿಹಾರ ಕೇಳಬಹುದಾಗಿದೆ.
ಇದಲ್ಲದೆ ಜಾನುವಾರುಗಳಿಗೆ ಮೇವು ಸರಬರಾಜು, ಕುಡಿಯುವ ನೀರು ಪೂರೈಕೆ ಮೊದಲಾದ ತುರ್ತು ಕಾರ್ಯಗಳಿಗೂ ಕೇಂದ್ರದ ಪರಿಹಾರ ಕೋರಬಹುದಾಗಿದೆ.3-4 ದಿನದಲ್ಲಿ ಕೇಂದ್ರಸರ್ಕಾರಕ್ಕೆ ಬರದ ಹಿನ್ನೆಲೆಯಲ್ಲಿ ಸಲ್ಲಿಸಬೇಕಿರುವ ಮನವಿ ಪತ್ರ ಸಿದ್ದಪಡಿಸಿ ಸಂಪುಟ ಸಭೆ ಒಪ್ಪಿಗೆ ಪಡೆದು ಮನವಿ ಸಲ್ಲಿಸುವುದಾಗಿ ಅವರು ಹೇಳಿದರು.