ಬೆಂಗಳೂರು: ಚುನಾವಣಾ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಯ ನಾಯಕರ ನಡುವಿನ ಮುಸುಕಿನ ಗುದ್ದಾಟ ತೀವ್ರಗೊಂಡಿದೆ. ಸಚಿವ ವಿ. ಸೋಮಣ್ಣ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ತಿಕ್ಕಾಟ ಒಂದು ಕಡೆಯಾದರೆ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಡುವಿನ ಫೈಟ್ ಕೂಡ ಬಹಿರಂಗವಾಗಿಯೇ ನಡೆಯುತ್ತಿದೆ.
ಇದರ ಜೊತೆಗೆ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಡುವಿನ ಮುಸುಕಿನ ಗುದ್ದಾಟವೂ ಬಿಜೆಪಿ ಹೈಕಮಾಂಡ್ ತಲೆನೋವಿಗೆ ಕಾರಣವಾಗಿದೆ.
ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಅವರು ವಿಜಯೇಂದ್ರ ವಿರುದ್ದ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ನಡುವೆ ಸೋಮಣ್ಣ ಅವರು ಡಿ.ಕೆ.ಶಿವಕುಮಾರ್ ಜೊತೆಗೆ ಇದ್ದ ಫೋಟೋ ಕೂಡಾ ವೈರಲ್ ಆಗಿತ್ತು.
ಈ ಬೆನ್ನಲ್ಲೇ ಹೈಕಮಾಂಡ್ ಸೋಮಣ್ಣ ಅವರನ್ನು ದೆಹಲಿಗೆ ಕರೆಸಿಕೊಂಡಿತ್ತು. ದೆಹಲಿಯಲ್ಲಿ ಹೈಕಮಾಂಡ್ ಸೂಚನೆಯ ಬಳಿಕ ಸೋಮಣ್ಣ ಮುನಿಸು ತಣ್ಣಗಾಯಿತು. ಬೆಂಗಳೂರಿಗೆ ಆಗಮಿಸಿದ ಅವರು, ಬಿ.ಎಸ್.ಯಡಿಯೂರಪ್ಪ ಈ ಕುರಿತಾಗಿ ಮೆಚ್ಚುಗೆ ಮಾತನ್ನು ಆಡಿದರೂ ವಿಜಯೇಂದ್ರ ಬಗ್ಗೆ ಪರೋಕ್ಷವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಮುನಿಸು ಮುಂದಿನ ದಿನಗಳಲ್ಲೂ ತೀವ್ರವಾಗುವ ಸಾಧ್ಯತೆಗಳು ದಟ್ಟವಾಗಿದೆ. ಲಿಂಗಾಯತ ಸಮುದಾಯದ ನಾಯಕತ್ವಕ್ಕಾಗಿ ಒಂದು ಕಡೆಯಲ್ಲಿ ಸೋಮಣ್ಣ ಪ್ರಯತ್ನಪಟ್ಟರೆ ಮತ್ತೊಂದು ಕಡೆಯಲ್ಲಿ ವಿಜಯೇಂದ್ರ ಪ್ರಯತ್ನ ನಡೆಸುತ್ತಿರುವುದೇ ಈ ಒಳಜಗಳಕ್ಕೆ ಕಾರಣವಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ನಡುವಿನ ಫೈಟ್ ಕೂಡಾ ಜೋರಾಗಿದೆ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಒಂದು ಗುಂಪು ತಿರುಗಿಬಿದ್ದಿದ್ದು, ಗುರುವಾರ ಪ್ರತಿಭಟನೆ ನಡೆಸಿತ್ತು. ಆದರೆ ಈ ಪ್ರತಿಭಟನೆಯ ಹಿಂದೆ ಸಿ.ಟಿ.ರವಿ ಕೈವಾಡ ಇದೆ ಎಂಬುದು ಎಂ.ಪಿ.ಕುಮಾರಸ್ವಾಮಿ ಆಪ್ತರ ಆರೋಪವಾಗಿದೆ.
ಎಂ.ಪಿ.ಕುಮಾರಸ್ವಾಮಿ ಈ ಹಿಂದೆಯೂ ಸಿ.ಟಿ. ರವಿ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದರು. ಕ್ಷೇತ್ರಕ್ಕೆ ಅನುದಾನ ಕಡತದಲ್ಲಿ ಅವರ ಪಾತ್ರ ಇದೆ ಎಂಬ ಆರೋಪವನ್ನು ಆಂತರಿಕವಾಗಿ ಮಾಡಿದ್ದರು. ಇವರಿಬ್ಬರ ನಡುವಿನ ಮುಸುಕಿನ ಗುದ್ದಾಟ ಇದೀಗ ತೀವ್ರಗೊಂಡಿದ್ದು, ಚಿಕ್ಕಮಗಳೂರು ಜಿಲ್ಲಾಯಲ್ಲಿ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆ ಅಲ್ಲಗಳೆಯುವ ಹಾಗಿಲ್ಲ.
ಬೆಳಗಾವಿಯ ಪ್ರಭಾವಿ ನಾಯಕರಾದ ಲಕ್ಷ್ಮಣ ಸವದಿ ವರ್ಸಸ್ ರಮೇಶ್ ಜಾರಕಿಹೊಳಿ ನಡುವಿನ ತಿಕ್ಕಾಟವೂ ತೀವ್ರಗೊಂಡಿದೆ. ಅಥಣಿಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡದಿದ್ದರೆ ತಾವು ಕೂಡ ಗೋಕಾಕದಿಂದ ಚುನಾವಣೆಗೆ ಸ್ರ್ಪಧಿಸಲ್ಲ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು.
ಆದರೆ ರಮೇಶ್ ಜಾರಕಿಹೊಳಿ ಹೇಳಿಕೆಗೆ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಚುನಾವಣೆಯಲ್ಲಿ ಅಥಣಿಯಲ್ಲಿ ನನ್ನ ತಂದೆ ಲಕ್ಷ್ಮಣ ಸವದಿ ಸ್ರ್ಪಧಿಸುವುದು ಖಚಿತ ಎಂದು ಪುತ್ರ ಚಿದಾನಂದ ಸವದಿ ಹೇಳುವ ಮೂಲಕ ಕ್ಷೇತ್ರದಲ್ಲಿ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ.
ಕರ್ನಾಟಕದಲ್ಲಿ ಬಿಜೆಪಿ ನಾಯಕರ ನಡುವಿನ ಗುದ್ದಾಟ ಹೈಕಮಾಂಡ್ ಗೂ ತಲೆನೋವು ಸೃಷ್ಟಿಸಿದೆ. ಚುನಾವಣಾ ದೃಷ್ಟಿಯಿಂದ ಬಹಿರಂಗವಾಗಿ ಯಾವುದೇ ತಿಕ್ಕಾಟ ನಡೆಸದಂತೆ ಸೂಚನೆ ನೀಡಿದೆ. ವಿ. ಸೋಮಣ್ಣ ಅವರು ಯಡಿಯೂರಪ್ಪ ವಿರುದ್ಧವಾಗಿ ಬಹಿರಂಗ ಹೇಳಿಕೆ ನೀಡಿದ ಬೆನ್ನಲ್ಲೇ ಅವರನ್ನು ದೆಹಲಿಗೆ ಕರೆದು ಬಹಿರಂಗವಾಗಿ ಹೇಳಿಕೆ ಕೊಡದಂತೆ ಸೂಚನೆ ನೀಡಿತ್ತು. ಈ ಮೂಲಕ ಭಿನ್ನಾಭಿಪ್ರಾಯ ಶಮನ ಮಾಡಲು ಪ್ರಯತ್ನವನ್ನು ನಡೆಸುತ್ತಿದೆ.