ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ಕಡಿವಾಣಕ್ಕೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಆದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ಗೆ ಇಲ್ಲ. ನಮ್ಮ ಸರ್ಕಾರ ಬಂದ ಮೇಲೆ ಹೈಕೋರ್ಟ್ ಜಡ್ಜ್ ನೇತೃತ್ವದ ಟೆಂಡರ್ ಪರಿಶೀಲನೆ ಸಮಿತಿ ರಚನೆ ಮಾಡಲಾಗಿದೆ. ಭ್ರಷ್ಟಾಚಾರ ಕಡಿವಾಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ ಎಂದ ಸಿಎಂ, ನಮ್ಮ ಸರ್ಕಾರ ರಾಜ್ಯದ ಕಲ್ಯಾಣ ಕೆಲಸಕ್ಕೂ ಹಿಂದೆ ಬಿದ್ದಿಲ್ಲ. ರೈತರಿಗೆ ಸಾಲ, ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡಲಾಗಿದೆ. ಅದನ್ನು ಕೃಷಿ ಕಾರ್ಮಿಕರು, ನೇಕಾರರಿಗೂ ವಿಸ್ತರಣೆ ಮಾಡಿದ್ದೇವೆ. ಎಸ್ಟಿ ಎಸ್ಸಿ ಜನಾಂಗಕ್ಕೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ, ಯುವಕರಿಗೆ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ಮಾಡಲಾಗಿದೆ ಎಂದು ವಿವರಿಸಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿರುವುದು ಬಿಜೆಪಿಯಲ್ಲಿ ಮಾತ್ರ. ನಮಗೆ ಕಾರ್ಯಸೂಚಿ ಇದೆ, ಅದರ ಅನುಗುಣವಾಗಿ ಕಾರ್ಯಕ್ರಮ ಇದೆ. ಅದನ್ನು ಅವಲೋಕನ ಮಾಡಲು ಕಾರ್ಯಕಾರಿಣಿ ಸಭೆ ನಡೆಯುತ್ತೆ. ಕಾರ್ಯಕಾರಿಣಿ ಸಭೆ ರಾಜಕೀಯ ಸ್ಥಿತಿಗತಿ ಅವಲೋಕನಕ್ಕೆ ಉತ್ತಮ ವೇದಿಕೆ. ಬೇರೆ ಪಕ್ಷಗಳಲ್ಲಿ ಪ್ರಜಾಪ್ರಭುತ್ವ ಇಲ್ಲ, ಕಾರ್ಯಸೂಚಿಯೂ ಇಲ್ಲ. ನಮ್ಮ ಮೇಲೆ ಜನರು ನಿರೀಕ್ಷೆ ಇಟ್ಟಿದ್ದಾರೆ, ಬೇರೆ ಪಕ್ಷದ ಮೇಲಲ್ಲ ಎಂದರು.