ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಪ್ರತಿಪಕ್ಷಗಳ ಮೇಲೆ ಛೂ ಬಿಟ್ಟು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಒಂಬತ್ತು ಮಂದಿ ನಾಯಕರು ಇತ್ತೀಚೆಗೆ ದನಿ ಎತ್ತಿದ್ದಾರೆ. ಬಿಜೆಪಿ ಸೇರಿದ ಭ್ರಷ್ಟ ರಾಜಕಾರಣಿಗಳ ಮೇಲೆ ಯಾವ ಕ್ರಮವೂ ಜರುಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ದೇಶ ಜನತಂತ್ರದಿಂದ ಸರ್ವಾಧಿಕಾರದತ್ತ ಜಾರತೊಡಗಿದೆ ಎಂದು ಖಂಡಿಸಿದ್ದಾರೆ. 2014ರಿಂದ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ದಸ್ತಗಿರಿ, ದಾಳಿ, ವಿಚಾರಣೆಗೆ ಗುರಿಯಾಗಿರುವುದು ಪ್ರತಿಪಕ್ಷಗಳ ರಾಜಕಾರಣಿಗಳೇ. ಬಿಜೆಪಿಯನ್ನು ಸೇರಿದ ಹಿಮಂತ ಬಿಸ್ವಾ ಶರ್ಮಾ, ಸುವೇಂದು ಅಧಿಕಾರಿ, ಮುಕುಲ್ ರಾಯ್, ನಾರಾಯಣ ರಾಣೆ ಇವರೆಲ್ಲರೂ ಬಿಜೆಪಿಯ ಗಂಗೆಯಲ್ಲಿ ಮುಳುಗಿದ ತಕ್ಷಣ ಪಾವನರಾದದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಆಳುವ ಪಕ್ಷದ ರಾಜಕೀಯ ಎದುರಾಳಿಗಳ ಮೇಲೆ ದಾಳಿ ನಡೆಸುವ ಜಾರಿ ನಿರ್ದೇಶನಾಲಯದ ಕಾರ್ಯವೈಖರಿಯ ತನಿಖೆ ಯಾರು ಮಾಡುತ್ತಾರೆ? ಈ ಸಂಸ್ಥೆಯ ಮುಖ್ಯಸ್ಥ ಸಂಜಯಕುಮಾರ ಮಿಶ್ರ ಅವರ ಸೇವೆಯನ್ನು ಕಾನೂನುಬಾಹಿರವಾಗಿ ವಿಸ್ತರಿಸಲಾಗಿದೆ. ಈ ಸಂಗತಿಯನ್ನು ಮೊನ್ನೆ ಸುಪ್ರೀಂ ಕೋರ್ಟಿನ ಗಮನಕ್ಕೆ ತರಲಾಗಿದೆ. ಈ ಸಂಬಂಧದ ವಿಚಾರಣೆ ಇದೇ 21ಕ್ಕೆ ನಿಗದಿಯಾಗಿದೆ. ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯತೆರಿಗೆ ಮುಂತಾದ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳು. ಈ ಮಾತು ಹಿಂದೆಂದಿಗಿಂತಲೂ ಕಳೆದ ಏಳೆಂಟು ವರ್ಷಗಳಿಂದ ನೂರಕ್ಕೆ ನೂರರಷ್ಟು ಸತ್ಯ. ಪ್ರತಿಪಕ್ಷಗಳ ಪ್ರತಿಯೊಬ್ಬ ನಾಯಕರ ಮೇಲೆಯೂ ಒಂದಿಲ್ಲೊಂದು ಹಂತದಲ್ಲಿ ಈ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗುತ್ತಿದೆ.
ಈ ಸಂಸ್ಥೆಗಳು ನಡೆಸುವ ದಾಳಿಗಳು ಮತ್ತು ತನಿಖೆಗಳ ಕುರಿತು ಚರ್ಚೆ ಮಾಡಬೇಕೇ ಅಥವಾ ಈ ಸಂಸ್ಥೆಗಳನ್ನೇ ತನಿಖೆಗೆ ಗುರಿಪಡಿಸಬೇಕೇ? ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ಕೇಳಿರುವ ಈ ಪ್ರಶ್ನೆ ಅತ್ಯಂತ ಪ್ರಸ್ತುತ. ಪ್ರತಿಪಕ್ಷಗಳ ಎಲ್ಲ ನಾಯಕರ ದಸ್ತಗಿರಿಗಳೂ ಒಂದೇ ತೆರನಾಗಿ ಕಾಣುತ್ತಿವೆ. ಇತ್ತೀಚಿನ ಛತ್ತೀಸಗಢದ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ನಡೆದ ದಾಳಿಗಳು, ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹಾಗೂ ದೆಹಲಿಯ ಆಪ್ ಸರ್ಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದಸ್ತಗಿರಿಗಳನ್ನೇ ತೆಗೆದುಕೊಳ್ಳಿ.
ಮೋದಿ– ಶಾ ಜೋಡಿಯು ಪ್ರತಿಪಕ್ಷಗಳ ಭ್ರಷ್ಟಾಚಾರವನ್ನು ಸದೆ ಬಡಿಯುತ್ತಿದೆಯೇ ಅಥವಾ ಪ್ರತಿಪಕ್ಷಗಳನ್ನೇ ಮುಗಿಸಲು ಮುಂದಾಗಿದೆಯೇ? ಭ್ರಷ್ಟಾಚಾರ ನಿಗ್ರಹವೇ ಇವರ ಉದ್ದೇಶವಾಗಿದ್ದರೆ ಕರ್ನಾಟಕದ ಬಿಜೆಪಿ ಸರ್ಕಾರದ ಮಂತ್ರಿಗಳ ಮೇಲೆ ಏಕೆ ದಾಳಿಗಳು ನಡೆದಿಲ್ಲ? ಎಲ್ಲ ಸರ್ಕಾರಿ ಕಾಮಗಾರಿಗಳ ವೆಚ್ಚದ ಕನಿಷ್ಠ ಶೇ.40ರಷ್ಟು ಹಣವನ್ನು ಮಂತ್ರಿಗಳಿಗೆ, ಆಳುವ ಪಕ್ಷದ ಶಾಸಕರಿಗೆ ಲಂಚವಾಗಿ ನೀಡಬೇಕಿದೆ ಎಂದು ಕರ್ನಾಟಕ ಕಂಟ್ರ್ಯಾಕ್ಟರುಗಳ ಸಂಘಟನೆ ಪ್ರಧಾನಮಂತ್ರಿಗೇ ದೂರು ಬರೆದು ಆರೇಳು ತಿಂಗಳುಗಳೇ ಉರುಳಿವೆ. ಆಳುವ ಪಕ್ಷಕ್ಕೆ ಸೇರಿದ ಗುತ್ತಿಗೆದಾರರೊಬ್ಬರು ಈ ಸಂಬಂಧದಲ್ಲಿ ಆತ್ಮಹತ್ಯೆಯನ್ನೇ ಮಾಡಿಕೊಂಡರು. ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡಿದ್ದು ಬಿಟ್ಟರೆ ಈ ಸಂಬಂಧ ಯಾವ ತನಿಖೆಯೂ ನಡೆಯುತ್ತಿಲ್ಲ. ಪ್ರಧಾನಮಂತ್ರಿ ಮೋದಿ ಮತ್ತು ಅಮಿತ್ ಶಾ ಅವರು ಈ ಕುರಿತು ಚಕಾರ ಎತ್ತಿಲ್ಲ. ಇಷ್ಟು ದೀರ್ಘ ಕಾಲದ ನಂತರವೂ ಸಿಬಿಐ ಇತ್ತ ತಲೆ ಹಾಕಿಲ್ಲ. ಕರ್ನಾಟಕ ಸಾಬೂನು ಕಾರ್ಖಾನೆಯ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರು ಗುತ್ತಿಗೆ ನೀಡಲು ಅವರ ಮಗನ ಮೂಲಕ ಕೋಟ್ಯಂತರ ಲಂಚ ಸಂಗ್ರಹಿಸಿದ ಆರೋಪ ಜಗಜ್ಜಾಹೀರಾಗಿದೆ. ಸಿಬಿಐ, ಆದಾಯತೆರಿಗೆ, ಜಾರಿ ನಿರ್ದೇಶನಾಲಯ ಈ ಭ್ರಷ್ಟಾಚಾರದ ಕುರಿತು ತಲೆ ಕೆಡಿಸಿಕೊಂಡಿಲ್ಲ. ಏಕೆಂದರೆ ಮಾಡಾಳ್ ವಿರೂಪಾಕ್ಷಪ್ಪ ಆಳುವ ಪಕ್ಷದ ಶಾಸಕರು.
ಕೋನ್ರಾಡ್ ಸಂಗ್ಮಾ ಅವರ ನ್ಯಾಶನಲ್ ಪೀಪಲ್ಸ್ ಪಾರ್ಟಿ ನೇತೃತ್ವದ ಮೇಘಾಲಯ ಸರ್ಕಾರವನ್ನು ದೇಶದ ಅತ್ಯಂತ ಭ್ರಷ್ಟ ಸರ್ಕಾರ ಎಂದು ಅಮಿತ್ ಶಾ ಮತ್ತು ಮೋದಿಯವರು ಇತ್ತೀಚಿನ ಚುನಾವಣಾ ಪ್ರಚಾರದಲ್ಲಿ ಸಾರಿ ಹೇಳಿದರು. ಬಿಜೆಪಿ ಅಽಕಾರಕ್ಕೆ ಬಂದರೆ ಈ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡುವುದಾಗಿ ಘೋಷಿಸಿದ್ದರು. ಆದರೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಸಂಗ್ಮಾ ಪಾರ್ಟಿಯ ಸರ್ಕಾರವನ್ನು ಬೆಂಬಲಿಸಿ ದರು. ಸಂಗ್ಮಾ ಸರ್ಕಾರ ಪ್ರಮಾಣವಚನ ಸ್ವೀಕಾರಕ್ಕೆ ಮೋದಿ ಮತ್ತು ಅಮಿತ್ ಶಾ ಇಬ್ಬರೂ ಹಾಜರಿದ್ದು ಆಶೀರ್ವದಿಸಿದರು. ಈ ವರ್ತನೆ ಆಷಾಡಭೂತಿತನ ಅಲ್ಲವೇ?
2015ರಲ್ಲಿ ಪ್ರಚಂಡ ಬಹುಮತ ಗಳಿಸಿದ ಕೇಜ್ರಿವಾಲ್ ಮತ್ತು ಸಂಗಾತಿಗಳ ಚುನಾವಣಾ ಯಶಸ್ಸಿನ ಕುರಿತ ಕುತೂಹಲ ದಶದಿಕ್ಕುಗಳಿಗೂ ಹಬ್ಬಿತ್ತು.
ಈ ಪಕ್ಷದ ಜನಪ್ರಿಯತೆ ದೆಹಲಿಯ ಗಡಿಗಳ ದಾಟಿ ದೇಶದ ಉದ್ದಗಲಕ್ಕೆ ಹಬ್ಬಿದರೆ ಗತಿಯೇನು ಎಂದು ಮೋದಿ–ಅಮಿತ್ ಶಾ ಜೋಡಿ ಕೂಡ ಚಿಂತಾಕ್ರಾಂತವಾಗಿದ್ದ ದಿನಗಳೂ ಇದ್ದವು. ಕೇಜ್ರಿವಾಲ್ ಪಾರ್ಟಿಯ ರೆಕ್ಕ ಪುಕ್ಕಗಳನ್ನು ಮೋದಿ ಸರ್ಕಾರ ಕತ್ತರಿಸಿ ಕುತ್ತಿಗೆಯನ್ನೂ ಅದುಮಿ ಇಟ್ಟದ್ದು ಅಂತಹ ಆ ದಿನಗಳಲ್ಲೇ.
ಕೈ ತಪ್ಪಿ ಹೋಗಿರುವ ದೆಹಲಿಯನ್ನು ಮತ್ತೆ ವಶಪಡಿಸಿಕೊಳ್ಳಲು ಮೋದಿ ಮತ್ತು ಅಮಿತ್ ಶಾ ಜೋಡಿ ಹಲವು ವರ್ಷಗಳಿಂದ ಹವಣಿಸುತ್ತಿದೆ. ಇತ್ತೀಚೆಗೆ ಆಪ್ ಸರ್ಕಾರ ಜಾರಿ ಮಾಡಿದ ಹೊಸ ಅಬಕಾರಿ ನೀತಿಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರದ ನಡೆದಿದೆ ಎಂದು ಆಪಾದಿಸಿದೆ. ಈ ಭ್ರಷ್ಟಾಚಾರದ ಸಂಪಾದನೆಯನ್ನು ಆಮ್ ಆದ್ಮಿ ಪಾರ್ಟಿಯು ಪಂಜಾಬಿನ ವಿಧಾನಸಭಾ ಚುನಾವಣೆಗಳಲ್ಲಿ ಚೆಲ್ಲಿ ಗೆದ್ದು ಬಂದಿದೆ ಎಂಬುದು ಬಿಜೆಪಿ ಆಪಾದನೆ. ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ. ಕೇಜ್ರಿವಾಲ್ ಸರ್ಕಾರದ ಮತ್ತೊಬ್ಬ ಮಂತ್ರಿ ಸತ್ಯೇಂದ್ರ ಜೈನ್ ಈಗಾಗಲೇ ಜೈಲಿನಲ್ಲಿದ್ದಾರೆ. ಕಪ್ಪುಹಣವನ್ನು ಬಿಳಿಯದಾಗಿಸುವ ಅವ್ಯವಹಾರದ ಆರೋಪ ಅವರ ಮೇಲಿದೆ. ಮೋದಿ–ಶಾ ಜೋಡಿಯ ಮುಂದಿನ ಗುರಿ ಕೇಜ್ರಿವಾಲ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆಮ್ ಅದ್ಮಿ ಪಾರ್ಟಿಯನ್ನು ತನ್ನ ಅಂಕೆಯಲ್ಲಿ ಇರಿಸಿಕೊಳ್ಳುವುದು ಇಲ್ಲವೇ, ಅಳಿಸಿ ಹಾಕುವುದೇ ಕೇಸರಿ ಪಕ್ಷದ ಅಂತಿಮ ಗುರಿ.
ಪ್ರತಿಪಕ್ಷಗಳು ಮತ್ತು ಅವುಗಳ ನಾಯಕರು ಹಾಗೂ ಬಿಜೆಪಿ ವಿರೋಧಿಗಳನ್ನು ಭ್ರಷ್ಟರು ದೇಶದ್ರೋಹಿಗಳು ಎಂದು ಹಣೆಪಟ್ಟಿ ಹಚ್ಚಿ ಅವರ ಮೇಲೆ ಮೊಕದ್ದಮೆಗಳನ್ನು ಹೂಡಿ ಜೈಲಿನಲ್ಲಿ ಕೂಡಿ ಹಾಕುವುದು ಮೋ–ಶಾ ಆಡಳಿತದ ಹೆಗ್ಗುರುತೇ ಆಗಿ ಹೋಗಿದೆ. ಆಪಾದನೆಗಳನ್ನು ರುಜುವಾತಾಗುತ್ತವೋ ಇಲ್ಲವೋ ಎಂಬ ಕುರಿತು ಮೋ–ಶಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ತನಿಖೆಯ ಕಾಲದಲ್ಲಿ ಸಂದೇಹದ ಕರಿನೆರಳು– ಬಂಧನ? ಕಳಂಕ– ಜೈಲುವಾಸದ ಪ್ರಕ್ರಿಯೆಯನ್ನೇ ಕಿರುಕುಳ ಮತ್ತು ಶಿಕ್ಷೆಯ ಅಸ್ತ್ರದಂತೆ ಬಳಸಲಾಗುತ್ತಿದೆ. ಜನತಂತ್ರದ ಮೌಲ್ಯಗಳನ್ನು ಕಾಲ ಕಸವಾಗಿಸಿರುವ ಖಂಡನೀಯ ವಿದ್ಯಮಾನವಿದು.