ಕಲಬುರಗಿ : ಗೂಡ್ಸ್ ವಾಹನ ಮತ್ತು ಖಾಸಗಿ ಬಸ್ ಡಿಕ್ಕಿ ಹೊಡೆದು ಸುಮಾರು 5 ರಿಂದ 6 ಜನರು ಸಜೀವ ದಹನವಾಗಿರುವ ಅಪಘಾತ ಕಲಬುರಗಿ ನಗರದ ಹೊರವಲಯದ ಕಮಲಾಪುರ ಬಳಿಯ ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಾಹನಕ್ಕೆ ಡಿಕ್ಕಿಯಾದ ಬಸ್, ಸೇತುವೆ ಮೇಲಿನಿಂದ ಕೆಳಗೆ ಉರುಳಿದಿದೆ. ಕೆಲವರು ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನೊಳಗೆ ಸಿಲುಕಿದ 5 ರಿಂದ 6 ಜನರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಕೆಲವರ ಮೃತದೇಹಗಳು ಸುಟ್ಟು ಕರಕಲಾಗಿದ್ದು, ಸಾವನ್ನಪ್ಪಿದವರ ಗುರುತು ಪತ್ತೆಯಾಗಿಲ್ಲ. ಬಸ್ ನಲ್ಲಿ 30 ಜನರು ಪ್ರಯಾಣಿಸುತ್ತಿರುವ ಮಾಹಿತಿ ಲಭ್ಯವಾಗಿದೆ.
ಒಂದೇ ಕುಟುಂಬದ 30 ಕ್ಕೂ ಅಧಿಕ ಜನ ಹೈದರಾಬಾದ್ನಿಂದ ಗೋವಾ ಪ್ರವಾಸಕ್ಕೆ ತೆರಳಿದ್ದರು. ಗೋವಾದಿಂದ ಹೈದರಾಬಾದ್ಗೆ ವಾಪಸ್ ಆಗುವಾಗ ಎದುರಿಗೆ ಬಂದ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಸೇತುವೆ ಮೇಲಿಂದ ಕೆಳಗೆ ಉರಳುಬಿದ್ದ ಪರಿಣಾಮ ಡೀಸೆಲ್ ಟ್ಯಾಂಕರ್ ಡ್ಯಾಮೇಜ್ ನಿಂದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಗಂಭೀರವಾಗಿ ಗಾಯಗೊಂಡ 12 ಜನ ಕಲಬುರಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸ್ ನಲ್ಲಿ 5 ದಿಂದ 6 ಜನ ಸಜೀವ ದಹನ ಶಂಕೆಗಳು ವ್ಯಕ್ತವಾಗಿವೆ. ಚಾಲಕ ಬಸ್ ಅತ್ಯಂತ ವೇಗವಾಗಿ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ.