ತುಮಕೂರು: ಕಳ್ಳಂಬೆಳ್ಳ ಭೀಕರ ಅಪಘಾತದಲ್ಲಿ ಮೃತಪಟ್ಟ 9 ಜನರ ಪೈಕಿ, 6 ಜನರ ಕಣ್ಣು ದಾನ ಮಾಡಲಾಗಿದೆ. ಈ ಮೂಲಕ ಕುಟುಂಬ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 6 ಜನರ ನೇತ್ರದಾನಕ್ಕೆ ಕುಟುಂಬಸ್ಥರು ಒಪ್ಪಿದ್ದಾರೆ ಎಂದು ತಹಶೀಲ್ದಾರ್ ಮಮತಾ ಹೇಳಿದ್ದಾರೆ. ಕ್ರೂಸರ್ ಚಾಲಕ ಕೃಷ್ಣ, ಸುಜಾತಾ, ಪ್ರಭುಸ್ವಾಮಿ, ಸಿದ್ದಯ್ಯ ಸ್ವಾಮಿ, ನಿಂಗಣ್ಣ, ಮೀನಾಕ್ಷಿಯ ನೇತ್ರದಾನ ಮಾಡಲಾಗಿದೆ. ಶಿರಾ ತಾಲೂಕು ಆಡಳಿತದಿಂದಲೇ ಮೃತದೇಹಗಳ ಸ್ಥಳಾಂತರ ಕಾರ್ಯ ನಡೆದಿದೆ.
ಇನ್ನು ಅಪಘಾತದಲ್ಲಿ ಮೃತಪಟ್ಟ ಕ್ರೂಸರ್ ಚಾಲಕ ಕೃಷ್ಣಪ್ಪ ಕಣ್ಣು ದಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಆತನ ಸಂಬಂಧಿ ಸತ್ಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ಇಷ್ಟು ದಿನ ಗೊತ್ತಿರ್ಲಿಲ್ಲ. ನಾವೂ ಈಗಷ್ಟೆ ಸಂಬಂಧಿಕರಿಗೆ ಕರೆ ಮಾಡಿದ್ವಿ. ಈಗ, ಕಣ್ಣು ದಾನ ಮಾಡಿರುವ ವಿಚಾರ ಗೊತ್ತಾಯ್ತು. ಈ ವರೆಗೆ ಆತ ಕಣ್ಣು ದಾನ ಮಾಡಲು ಬರೆದು ಕೊಟ್ಟಿದ್ದು ಗೊತ್ತಿಲ್ಲ. ಕೃಷ್ಣ, ಆತನ ಸಹೋದರಿ ಹಾಗೂ ಆತನ ಸೊಸೆ ಮೃತಪಟ್ಟಿದ್ದಾರೆ ಎಂದರು.