ಮೈಸೂರು: ಒಬ್ಬ ವ್ಯಕ್ತಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾನೆ ಎನ್ನುವುದು ಯಾವಾಗ ಖಾತ್ರಿಯಾಗುತ್ತದೆ ಎಂದರೆ ಆತನ ಎಷ್ಟು ಜನರನ್ನು ಇನ್ನೂ ಎತ್ತರಕ್ಕೆ ಬೆಳೆಸಿದ್ದಾನೆ ಎಂಬುದು ತಿಳಿದಾಗ. ಡಾ. ಪುನೀತ್‌ರಾಜ್‌ಕುಮಾರ್ ಅಂತಹ ಸಾಲಿಗೆ ಸೇರುತ್ತಾರೆ ಎಂದು ನಟ ಪ್ರಕಾಶ್ ರಾಜ್ ಅಭಿಪ್ರಾಯಪಟ್ಟರು.
ಶನಿವಾರ ಮಂಡಿ ಮೊಹಲ್ಲಾದ ಮಿಷನ್ ಆಸ್ಪತ್ರೆಗೆ ‘ಅಪ್ಪು ಎಕ್ಸ್‌ಪ್ರೆಸ್’ ಆಂಬ್ಯುಲೆನ್ಸ್ ಅನ್ನು ಸಿಸ್ಟರ್ ಸುಜಾತ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಈಗ ಆಂಬ್ಯುಲೆನ್ಸ್ ನೀಡುತ್ತಿರುವುದು ಮನುಷ್ಯತ್ವವುಳ್ಳ ನಾಯಕನ ನೆನಪಿನಲ್ಲಿ. ಅಪ್ಪು ಅವರು ಎಂದೆಂದಿಗೂ ನಮಗೆ ಕಥಾನಾಯಕ. ಅವರು ಅಕಾಲಿಕ ಮರಣಕ್ಕೆ ತುತ್ತಾದಾಗ ನಮಗೆಲ್ಲರಿಗೂ ಅನಾಥಪ್ರಜ್ಞೆ ಕಾಡಿತು. ಕರ್ನಾಟಕ ಜನ, ಪ್ರತಿ ಕುಟುಂಬಗಳೂ ಕಣ್ಣೀರು ಹಾಕಿದವು. ಮಾತು ಹೊರಡದ ಮೌನ ನಮ್ಮನ್ನೆಲ್ಲ ಆವರಿಸಿತ್ತು. ಬಾಲ್ಯದಿಂದಲೂ ಅಪ್ಪುವನ್ನು ನೋಡಿಕೊಂಡು ಬೆಳೆದಿದ್ದೇವೆ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ ಅಪ್ಪು ಆ ರೀತಿ ಇರಲಿಲ್ಲ. ಜನಪರವಾಗಿ ಬದುಕಿದರು. ಸಣ್ಣ ಸಣ್ಣ ಚಿತ್ರಗಳನ್ನು ಗೆಲ್ಲಿಸಲು ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದರು. ಆ ಚಿತ್ರಗಳಲ್ಲಿ ಅಭಿನಯಿಸುವಂತೆ ಕೋರಿಕೊಂಡಾಗ ನಾನೂ ಒಪ್ಪಿಕೊಂಡೆ. ತಕ್ಷಣ ನನಗೆ ೧೦ ಲಕ್ಷ ರೂ. ಸಂಭಾವನೆ ನೀಡಲು ಬಂದರು ಎಂದು ಸ್ಮರಿಸಿದರು.
ಕೋವಿಡ್ ಸಂದರ್ಭದಲ್ಲಿ ಚೀನಾದಿಂದ ಆಕ್ಸಿಜನ್ ತರಿಸಲು ನಾವು ಮುಂದಾದಗ ನೆರವಾದರು. ಅವರ ವ್ಯಕ್ತಿತ್ವನ್ನು ಹೊಗಳುವ ಬದಲು ಅವರ ಹೆಸರಿನಲ್ಲಿ ನಾಲ್ಕಾರು ಕೆಲಸ ಮಾಡಿ ಅಸಹಾಯಕ ಜನರಿಗೆ ನೆರವಾಗಬೇಕು ಎಂಬ ದೃಷ್ಟಿಯಿಂದ ಆಂಬ್ಯುಲೆನ್ಸ್ ಅನ್ನು ರಾಜ್ಯದ ೩೨ ಜಿಲ್ಲೆಗಳಿಗೂ ನೀಡಬೇಕೆಂಬ ಆಲೋಚನೆ ಬಂತು. ಮೈಸೂರಿನಲ್ಲಿ ಬಡವರಿಗೆ ಸಹಾಯ ಮಾಡುತ್ತಿರುವ ಮಿಷನ್ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡೆವು. ಇನ್ನೊಂದು ತಿಂಗಳಲ್ಲಿ ಇಲ್ಲಿಯೂ ರಕ್ತನಿಧಿ ಕೇಂದ್ರ ಆರಂಭಿಸಲು ಚಿಂತಿಸಿದ್ದೇವೆ. ಅದಕ್ಕಾಗಿ ಪೂಜಾರಿ ಫಿಷ್‌ಲ್ಯಾಂಡ್‌ನ ಮಾಲೀಕ ಪೂಜಾರಿ ೫ ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಮ್ಮ ಅಪ್ಪು ನಾಡಿನ ಜನರಿಗೆ ಪ್ರೀತಿಯಿಂದ ಸಹಾಯ ಮಾಡುತ್ತಿದ್ದರು ಎಂದು ನೆನದರು.