ರಾಜ್ಯ

20 ಸಾವಿರ ರೂ.ಗಳಲ್ಲಿ 18 ದಿನಗಳ ಉತ್ತರ ಭಾರತ ಪ್ರವಾಸ; ಎಂಎಸ್‌ಐಎಲ್‌ನಿಂದ ಟೂರ್‌ ಪ್ಯಾಕೇಜ್‌ ಘೋಷಣೆ

ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜ್‌ ಗೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ

ಶ್ರೀಲಂಕಾ, ನೇಪಾಳ, ದುಬೈ, ವಿಯಟ್ನಾಂ, ಥಾಯ್ಲೆಂಡ್‌, ಯೂರೋಪ್‌ ಪ್ಯಾಕೇಜ್

ಆದಿಕೈಲಾಸ, ಕಾಶಿ, ಅಯೋಧ್ಯೆ, ಪುರಿ ಪ್ರವಾಸ ಸುಗಮ

ಬೆಂಗಳೂರು: ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಸರಕಾರಿ ನೌಕರರನ್ನು ಗಮನದಲ್ಲಿಟ್ಟುಕೊಂಡು ಸರಕಾರಿ ಸ್ವಾಮ್ಯದ ಎಂಎಸ್‌ ಐಎಲ್‌ ಸಂಸ್ಥೆ ರೂಪಿಸಿರುವ ನಾನಾ ತರಹದ ಆಕರ್ಷಕ ಟೂರ್‌ ಪ್ಯಾಕೇಜುಗಳಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಸಂಸ್ಥೆಯ ಡೈರಿ, ಕ್ಯಾಲೆಂಡರ್‌ ಮತ್ತು ಬಾಂಡ್ ಜೆರಾಕ್ಸ್ ಪೇಪರ್ ಕೂಡ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ʻಎಂಎಸ್‌ ಐಎಲ್‌ ಮೊದಲಿನಿಂದಲೂ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿದೆ. ಈಗ ಟೂರ್‌ ಪ್ಯಾಕೇಜುಗಳ ಮೂಲಕ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಈ ಪ್ಯಾಕೇಜುಗಳ ಅಡಿಯಲ್ಲಿ‌ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆದಿಕೈಲಾಸ ಮತ್ತು ವಾರಣಾಸಿಗೆ ಪ್ರವಾಸ ಆಯೋಜಿಸಲಾಗುವುದು. ಮುಖ್ಯವಾಗಿ ನಾವು ಆಫ್-ಲೈನ್‌ ಪ್ರವಾಸಿಗರಿಗೆ ಆದ್ಯತೆ ಕೊಡುತ್ತಿದ್ದೇವೆ,ʼ ಎಂದಿದ್ದಾರೆ.

ಈ ಪ್ಯಾಕೇಜುಗಳಲ್ಲಿ ಸುರಕ್ಷತೆ, ಶುಚಿರುಚಿಯಾದ ಆಹಾರ, ಮನೆ ಬಾಗಿಲಿನಿಂದಲೇ ಕರೆದುಕೊಂಡು ಹೋಗಿ ವಾಪಸ್‌ ಅಲ್ಲಿಗೇ ಬಿಡುವುದು, ಸಹಾಯಕರ ನೆರವು, ಮಾಸಿಕ ಕಂತುಗಳಲ್ಲಿ ಹಣ ಪಾವತಿ, ಲಕ್ಕಿ ಡ್ರಾ, ಕೈಗೆಟುಕುವ ವೆಚ್ಚದಲ್ಲಿ ಉತ್ತರ ಭಾರತ ಪ್ರವಾಸ ಮುಂತಾದ ಸೌಲಭ್ಯ ಮತ್ತು ಆಕರ್ಷಣೆಗಳಿವೆ. ಗುಂಪು ಪ್ರವಾಸ ಮಾಡಲು ಬಯಸುವವರಿಗೆ ಪ್ರತಿ ಬ್ಯಾಚಿನಲ್ಲಿ ಗರಿಷ್ಠ 100 ಮಂದಿಗೆ ಅವಕಾಶ ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆಂದು ʻಸ್ಟಡಿ-ಕಂ-ಪ್ಲೆಷರ್‌ ಟೂರ್, ಇಕೋ ಟೂರಿಸಂ ಮತ್ತು ಕರಾವಳಿ ಪ್ರದೇಶಗಳ ವೀಕ್ಷಣೆ ಇರುವ ಕೋಸ್ಟಲ್‌ ಟೂರಿಸಂ ಮುಂತಾದ ಪ್ಯಾಕೇಜುಗಳನ್ನು ರೂಪಿಸಲು ಎಂಎಸ್‌ ಐಎಲ್‌ ಚಿಂತಿಸುತ್ತಿದೆ. ಸಂಸ್ಥೆಯು ಸದ್ಯಕ್ಕೆ ರೂಪಿಸಿರುವ ಪ್ಯಾಕೇಜಿನಲ್ಲಿ ಕೇವಲ 20 ಸಾವಿರ ರೂ. ವೆಚ್ಚದಲ್ಲಿ 15ರಿಂದ 18 ದಿನಗಳ ಉತ್ತರ ಭಾರತ ಪ್ರವಾಸ ಮಾಡಿಕೊಂಡು ಬರಬಹುದು ಎಂದು ಅವರು ವಿವರಿಸಿದ್ದಾರೆ.

ಸರಕಾರಿ ಉದ್ಯೋಗಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿರುವ ಪ್ಯಾಕೇಜಿನಲ್ಲಿ ಮೊದಲು ಶೇ.50ರಷ್ಟು ಹಣ ಪಾವತಿಸಿ, ಪ್ರವಾಸ ಕೈಗೊಳ್ಳಬಹುದು. ಪ್ರವಾಸ ಮುಗಿಸಿಕೊಂಡು ಬಂದ ಬಳಿಕ ಉಳಿದ ಶೇ.50ರಷ್ಟು ಹಣವನ್ನು ಮಾಸಿಕ ಕಂತುಗಳಲ್ಲಿ ಕಟ್ಟಬಹುದು. ಹಾಗೆಯೇ ಲಕ್ಕಿ ಡ್ರಾದಲ್ಲಿ ವಿಜೇತರಾಗುವ ಅದೃಷ್ಟಶಾಲಿಗಳು ಡ್ರಾ ನಂತರದ ಹಣವನ್ನು ಪಾವತಿಸಬೇಕಾಗಿಲ್ಲ. ಈ ಎಲ್ಲ ಪ್ಯಾಕೇಜುಗಳಲ್ಲೂ ಎಂಎಸ್‌ ಐಎಲ್‌ ವತಿಯಿಂದ ಟೂರ್‌ ಮ್ಯಾನೇಜರ್‌ ಅಥವಾ ಸಹಾಯಕರೊಬ್ಬರು ಜತೆಗಿರಲಿದ್ದು, ಪ್ರವಾಸಿಗರ ಬೇಕು-ಬೇಡಗಳನ್ನು ಆಲಿಸಿ, ನೆರವು ನೀಡಲಿದ್ದಾರೆ ಎಂದು ಅವರು ನುಡಿದಿದ್ದಾರೆ.

ಪ್ರವಾಸಿಗರಿಗೆ ಆದಷ್ಟು ಕಡಿಮೆ ವೆಚ್ಚದಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಸಾಧ್ಯವಾಗಬೇಕು ಎನ್ನುವ ಆಶಯದೊಂದಿಗೆ ಎಂಎಸ್‌ ಐಎಲ್‌ ಮೂಲಕ ಈ ಹೆಜ್ಜೆ ಇಡಲಾಗುತ್ತಿದೆ. ಖಾಸಗಿ ಸಂಸ್ಥೆಗಳ ದರಕ್ಕೆ ಹೋಲಿಸಿದರೆ ನಾವು ನಿಗದಿ ಪಡಿಸಿರುವ ದರ ತುಂಬಾ ಕಡಿಮೆ ಇದೆ. ಹಾಗೆಯೇ ಪ್ರತಿಯೊಂದು ಸೇವೆಯನ್ನೂ ಗುಣಮಟ್ಟದೊಂದಿಗೆ ಒದಗಿಸಲಾಗುವುದು ಎಂದು ಪಾಟೀಲ ಹೇಳಿದ್ದಾರೆ.

ಎಲ್ಲೆಲ್ಲಿಗೆ ಪ್ರವಾಸ ಪ್ಯಾಕೇಜು?

ಎಂಎಸ್‌ ಐಎಲ್‌ ಸಂಸ್ಥೆಯ ಟೂರ್ಸ್‌ ಅಂಡ್‌ ಟ್ರಾವೆಲ್ಸ್‌ ವಿಭಾಗವು ಈ ಟೂರ್‌ ಪ್ಯಾಕೇಜುಗಳನ್ನು ನಿರ್ವಹಿಸಲಿದೆ. ಇದರಡಿಯಲ್ಲಿ ಕಾಶಿ, ಅಯೋಧ್ಯೆ, ಪುರಿ, ಆದಿ ಕೈಲಾಸ ಮುಂತಾದ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳಿಗೆ ಪ್ರವಾಸಿಗರನ್ನು ಅದು ಕರೆದೊಯ್ಯಲಿದೆ. ಜೊತೆಗೆ ದುಬೈ, ಸಿಂಗಪುರ್‌, ವಿಯಟ್ನಾಂ, ಶ್ರೀಲಂಕಾ, ನೇಪಾಳ, ಥಾಯ್ಲೆಂಡ್‌ ಮತ್ತು ಯೂರೋಪಿನ ಹಲವು ದೇಶಗಳಿಗೂ ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜುಗಳನ್ನು ರೂಪಿಸಿದೆ. ಈ ಪ್ರವಾಸಗಳಿಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬಹುದು.

24/7 ಸಹಾಯವಾಣಿ ಸೌಲಭ್ಯ

ಪ್ರವಾಸಿಗರ ಅನುಕೂಲಕ್ಕೆ ಎಂಎಸ್‌ ಐಎಲ್‌ 24/7 ಸಹಾಯವಾಣಿ ಮತ್ತು ವಾಟ್ಸ್ಯಾಪ್‌ ಸೌಲಭ್ಯವನ್ನೂ (080-45888882, 9353645921) ಹೊಂದಿದೆ. ಇದರ ನಿರ್ವಹಣೆಗಾಗಿ ಪ್ರತ್ಯೇಕ ತಂಡವೇ ಇರಲಿದೆ. ಒಂದು ನಂಬರಿನಲ್ಲಿ ಯಾರಾದರೂ ಮಾತನಾಡುತ್ತಿದ್ದರೆ, ಅದು ತಾನಾಗಿಯೇ ಮತ್ತೊಂದು ಸಂಖ್ಯೆಗೆ ಸಂಪರ್ಕ ಕಲ್ಪಿಸುವ ಕ್ಲೌಡ್‌ ಬೇಸ್ಡ್‌ ಟೆಲಿಕಾಂ ಸಿಸ್ಟಮ್‌ ಅನ್ನು ಅಳವಡಿಸಿಕೊಳ್ಳಲಾಗಿದೆ.

ಎಂಎಸ್ಐಎಲ್ ಚಿಟ್ ಫಂಡ್ ಬಲವರ್ಧನೆ

ಈಗಿನ ಸರಕಾರವು ಎಂಎಸ್ಐಎಲ್, ಮೈಸೂರು ಪೇಂಟ್ಸ್ & ವಾರ್ನಿಶ್, ಎನ್.ಜಿ.ಇ.ಎಫ್ ಮುಂತಾದವುಗಳನ್ನು ಲಾಭದಾಯಕವನ್ನಾಗಿ ಮಾಡುತ್ತಿದೆ. ಎಂಎಸ್ಐಎಲ್ ಸದ್ಯಕ್ಕೆ ವಾರ್ಷಿಕ 250 ಕೋಟಿ ರೂ.ಗಳ ಚಿಟ್ ಫಂಡ್ ನಡೆಸುತ್ತಿದೆ. ಇದನ್ನು ಮುಂದಿನ 5 ವರ್ಷಗಳಲ್ಲಿ ವರ್ಷಕ್ಕೆ 5,000 ಕೋಟಿ ರೂ. ಮಟ್ಟಕ್ಕೆ ಕೊಂಡೊಯ್ಯುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ. ಹಾಗೆಯೇ, ಸಂಸ್ಥೆಯ 200 ಮದ್ಯದ ಅಂಗಡಿಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಯಡಿ 63 ಮಳಿಗೆಗಳ ಕೆಲಸ ಮುಗಿದಿದ್ದು, ಇಲ್ಲೆಲ್ಲ ವಹಿವಾಟು ಮೂರು ಪಟ್ಟು ಹೆಚ್ಚಾಗಿದೆ. ಮೈಸೂರು ಪೇಂಟ್ಸ್ & ವಾರ್ನಿಶ್ ಮೂಲಕ ಗೃಹ ಬಳಕೆಯ ಪೇಂಟ್ ತಯಾರಿಕೆಗೂ ಗಮನ ಹರಿಸಲಾಗಿದೆ. ಹುಬ್ಬಳ್ಳಿ ಎನ್ಜಿಇಎಫ್ ದೆಹಲಿಯ ನೂತನ ಸಂಸತ್ ಭವನ ಮತ್ತು ರೈಲ್ವೆ ಇಲಾಖೆಗೆ ತನ್ನ ಟ್ರಾನ್ಸ್-ಫಾರ್ಮರುಗಳನ್ನು ಪೂರೈಸುತ್ತಿದೆ. ಬಿಇಚ್ಇಎಲ್ ಜತೆ ಒಪ್ಪಂದ ಮಾಡಿಕೊಂಡು ಅದನ್ನು ಪುನರುಜ್ಜೀವನ ಗೊಳಿಸುವ ಉದ್ದೇಶ ಇದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

 

ಕಾರ್ಯಕ್ರಮದಲ್ಲಿ ಎಂಎಸ್ಐಎಲ್‌ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ವಾಣಿಜ್ಯ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಎಂಎಸ್ಐಎಲ್ ನಿರ್ದೇಶಕ ಚಂದ್ರಪ್ಪ, ಪ್ರವಾಸ ವಿಭಾಗದ ಮುಖ್ಯಸ್ಥ ರವಿಕುಮಾರ್ ಮುಂತಾದವರು ಭಾಗವಹಿಸಿದ್ದರು.‌

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ನೇಪಾಳದಲ್ಲಿ ಭೀಕರ ಪ್ರವಾಹ ; ಭಾರತೀಯರ ನೆರವಿಗೆ ಸಹಾಯವಾಣಿ ಆರಂಭ

ಕಠ್ಮಂಡು : ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.…

2 hours ago

ಸಂಪುಟದಲ್ಲಿ ಚರ್ಚಿಸಿ ಬರ ಘೋಷಣೆ ; ಡಿಸಿಎಂ ಪರಮೇಶ್ವರ್‌

ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ…

3 hours ago

ಸ್ವಚ್ಛತಾ ಅಭಿಯಾನ | ವಿವಿಧೆಡೆ 15 ಟನ್‌ ತ್ಯಾಜ್ಯ ವಿಲೇವಾರಿ

ಮೈಸೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ 80 ಜಿವಿಪಿ ನಿರ್ಮೂಲನೆ ಅಭಿಯಾನದಲ್ಲಿ ಮಂಗಳವಾರ ವಲಯ-3ರ ವ್ಯಾಪ್ತಿಗೆ…

4 hours ago

ನೇಪಾಳ ಪ್ರವಾಹ | 105 ಭಾರತೀಯರು ಸೇರಿ 400 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ…

5 hours ago

ನೇಪಾಳದಲ್ಲಿ ಭೀಕರ ಪ್ರವಾಹ | ಹತ್ತಾರು ಹಳ್ಳಿಗಳು ಜಲಾವೃತ ; ನಾಪತ್ತೆಯಾದ ಪ್ರವಾಸಿಗರು

ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ…

5 hours ago

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

9 hours ago