ಬೆಂಗಳೂರು: ಮುಂಬರುವ ವಿಧಾನಸೌಧ ಚುನಾವಣೆಯ 126 ಸ್ಪರ್ಧಾಕಾಂಕ್ಷಿಗಳು ಮತ್ತು ಶಾಸಕರಿಗೆ ಮೈಸೂರಿನಲ್ಲಿ ಅ.19-20ರಂದು ಮಹತ್ವದ ಕಾರ್ಯಾಗಾರ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜೆಪಿ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಬಿಡದಿ ಬಳಿಯ ಕೇತಗಾನಹಳ್ಳಿಯ ತಮ್ಮ ತೋಟದಲ್ಲಿ ಕಾರ್ಯಾಗಾರ ನಡೆಸಿ ಅಕಾಂಕ್ಷಿಗಳಿಗೆ ಸೂಚನೆ ಕೊಡಲಾಗಿತ್ತು. ಆ ಸೂಚನೆಯನ್ನು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಿ ಪಕ್ಷ ಸಂಘಟನೆ ಮಾಡಲಾಗಿದೆ ಎಂಬುದನ್ನು ಓರೆಗೆ ಹಚ್ಚಲಾಗುವುದು ಎಂದರು.
ಎರಡು ಮಹತ್ವದ ಕಾರ್ಯಾಗಾರ ನಡೆಯಲಿದ್ದು ಮುಂದಿನ ಚುನಾವಣೆಗೆ ಯಾವ ರೀತಿಯ ಸಿದ್ದತೆ ಮಾಡಿಕೊಳ್ಳಬೇಕೆಂಬ ಬಗ್ಗೆ ಮಾರ್ಗದರ್ಶನ ಮಾಡಲಾಗುವುದು. 126 ಆಕಾಂಕ್ಷಿಗಳ ಪೈಕಿ ಅಗತ್ಯಬಿದ್ದರೆ ಬದಲಾವಣೆ ಮಾಡಲು ಕೂಡ ಮುಕ್ತ ಮನಸ್ಸು ಹೊಂದಿರುವುದಾಗಿ ಅವರು ಹೇಳಿದರು.
ಚುನಾವಣಾ ಪೂರ್ವ ಸಮೀಕ್ಷೆ ಏನೇ ಇರಲಿ ನಮ್ಮ ಗುರಿ 123 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿದೆ. ನಮ್ಮ ಪಕ್ಷದಿಂದಲೂ ಚುನಾವಣೆ ಸಮೀಕ್ಷೆ ಮಾಡಿಸಲಾಗಿದೆ. 30-40 ಕ್ಷೇತ್ರಗಳ ವರದಿ ಬಂದಿದೆ. ಕೆಲವು ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಅವರ ಸಭೆ ನಡೆಸಿ ಒಮ್ಮತದ ಆಯ್ಕೆ ಮಾಡುವ ಮೊದಲು ಗೊಂದಲ ಸರಿಪಡಿಸಲಾಗುವುದು ಎಂದರು.
ಚುನಾವಣೆಗೆ ಇನ್ನೂ 6 ತಿಂಗಳು ಸಮಯವಿದೆ. ಪಕ್ಷಕ್ಕೆ ನಕಾರಾತ್ಮಕವಾಗಿರುವ ಕ್ಷೇತ್ರಗಳಲ್ಲಿ ಸಕಾರಾತ್ಮಕ ರೀತಿಯಲ್ಲಿ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಆರಂಭವಾಗಲಿದೆ. ಮುಂದಿನ ತಿಂಗಳು ವಿಧಾನಸಭೆ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಬೇರೆ ಬೇರೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ 2-3 ಹಂತಗಳಲ್ಲಿ ರಥಯಾತ್ರೆ ಕೈಗೊಳ್ಳಲಾಗುವುದು ಎಂದು ವಿವರಿಸಿದರು.