11ನೇ ದಿನದ ಪುನೀತ್ ಪುಣ್ಯಸ್ಮರಣೆ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸೋಮವಾರ ರಾಜಕುಮಾರ್ ಕುಟುಂಬಸ್ಥರು ಶಾಸ್ರ್ತೋಕ್ತವಾಗಿ ನೆರವೇರಿಸಿದರು.

ರಾಘವೇಂದ್ರ ರಾಜಕುಮಾರ್ ಮಗ ವಿನಯ್ ರಾಜ್ ಕೇಶಮುಂಡನ ಮಾಡಿಸಿಕೊಂಡು ಚಿಕ್ಕಪ್ಪನ 11ನೇ ದಿನದ ಪುಣ್ಯತಿಥಿ ವಿಧಿವಿಧಾನಗಳನ್ನು ನೆರವೇರಿಸಿದರು.

ರಾಜ್ ಕುಟುಂಬಸ್ಥರು ಸದಾಶಿವನಗರದಿಂದ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳಕ್ಕೆ ಬರಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( ಬಿಎಂಟಿಸಿ) ವತಿಯಿಂದ ವೋಲ್ವೋ ಬಸ್ ವ್ಯವಸ್ಥೆ ಮಾಡಲಾಗಿತ್ತು. ಒಂದೇ ಬಸ್ ನಲ್ಲಿ ಆಗಮಿಸಿದ ಕುಟುಂಬಸ್ಥರು ಬೆಳಗ್ಗೆ 10.30ರ ಸುಮಾರಿಗೆ ಪುಣ್ಯತಿಥಿ ಕಾರ್ಯ ನೆರವೇರಿಸಿದರು.

ಕಾರ್ಯದಲ್ಲಿ ನಟರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧ್ರುತಿ ಮತ್ತು ವಂದಿತಾ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಪಾರ್ವತಮ್ಮ ರಾಜ್‍ಕುಮಾರ್ ಸಹೋದರ ಚಿನ್ನೇಗೌಡ ಕುಟುಂಬ ಪಾಲ್ಗೊಂಡಿದ್ದರು. ಇದರ ಜೊತೆಗೆ ಕುಟುಂಬಸ್ಥರು, ಹತ್ತಿರದ ಸಂಬಂಧಿಗಳು, ಚಿತ್ರರಂಗದ ಪ್ರಮುಖರು, ರಾಜಕೀಯ ಗಣ್ಯರಷ್ಟೇ ಭಾಗವಹಿಸಿದ್ದರು.

ಸಮಾಧಿಗೆ ಪುನೀತ್ ಇಷ್ಟದ ಭಕ್ಷ್ಯ ಭೋಜನ:
ಸಮಾಧಿಗೆ ಪುನೀತ್ ಇಷ್ಟದ ಭಕ್ಷ್ಯ ಭೋಜನಗಳನ್ನು ಎಡೆ ಇಡಲಾಗಿತ್ತು. ಪ್ರಮುಖವಾಗಿ ಪುನೀತ್ ಇಷ್ಟಪಡುವ ಮಾಂಸಹಾರಗಳಾದ ಚಿಕನ್ ಬಿರಿಯಾನಿ, ಕಬಾಬ್, ಕಾಲ್ ಸೂಪು, ಕೋಳಿಮೊಟ್ಟೆ, ಮಟನ್ ಸಾರು, ಚಿಕನ್ ಸಾರು, ಕಾಳು ಗೊಜ್ಜು, ರಾಗಿಮುದ್ದೆ, ಕೇಸರಿ ಬಾತ್ ಹಾಗೂ ಸಿಹಿ ತಿಂಡಿಗಳು ಮತ್ತು ಹಣ್ಣು ಹಂಪಲುಗಳನ್ನು ಇಡಲಾಗಿತ್ತು.

ಬಗೆಬಗೆಯ ಹೂಗಳಿಂದ ಸಮಾಧಿ ಶೃಂಗಾರ
ಪುನೀತ್ ಸಮಾಧಿಯನ್ನು ಬಗೆಬಗೆಯ ಹೂಗಳಿಂದ ಶೃಂಗರಿಸಲಾಗಿತ್ತು. ಬಿಳಿ, ಹಸಿರು ಮತ್ತು ಕೆಂಪು ಗುಲಾಬಿಗಳಿಂದ ತುಂಬಾ ಆಕರ್ಷಕವಾಗಿ ಶೃಂಗಾರ ಮಾಡಲಾಗಿತ್ತು.

ಅಪ್ಪು ಪದ್ಮಶ್ರೀ ಅಲ್ಲ ಅಮರಶ್ರೀ;
ಅಪ್ಪುಗೆ ಪದ್ಮಶ್ರೀ ಅಲ್ಲ ಅಪ್ಪು ಅಮರಶ್ರೀಯಾಗಿದ್ದಾನೆ. ಅವನು ಎಂದೆಂದಿಗೂ ನಮ್ಮೊಂದಿಗಿರುತ್ತಾನೆ. ಅವನ ಪ್ರೀತಿ-ವಾತ್ಸಲ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದು. ಅದರ ಬದಲಾಗಿ ಪುನೀತ್ ಹಾದಿಯಲ್ಲಿಯೇ ಸಾಗಬೇಕು. ಅವನು ಮಾಡಿದ ರೀತಿಯಲ್ಲಿಯೇ ದಾನ ಧರ್ಮ ಮಾಡಿ, ತಮ್ಮ ಕೈಲಾದಷ್ಟು ಸಹಾಯ ಮಾಡುವಂತೆ ನಟ ಶಿವರಾಜಕುಮಾರ್ ಮನವಿ ಮಾಡಿದರು.

ಅಪ್ಪು ಮನೆ, ಸಮಾಧಿ ಬಳಿ ಬಂದೋಬಸ್ತ್;
ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದು ಎಂಬ ಮುಂಜಾಗ್ರತೆಯಿಂದ ಸದಾಶಿವನಗರದ ಪುನೀತ್ ಮನೆ ಮತ್ತು ಸಮಾಧಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ. ಸುಮಾರು 200ಕ್ಜೂ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕಿಲೋಮೀಟರ್ ಗಟ್ಟಲೆ ಅಭಿಮಾನಿಗಳು ಬಹಳ ಶಿಸ್ತಿನಿಂದ ಸರತಿ ಸಾಲಿನಲ್ಲಿ ನಿಂತು ಪುನೀತ್ ಸಮಾಧಿ ದರ್ಶನ ಪಡೆದರು. ರಾಜ್ಯದ ಹಲವೆಡೆಯಿಂದ ಬಂದಿದ್ದ ಜನರು, ಸಮಾಧಿ ನೋಡಿ ಕಣ್ಣೀರು ಹಾಕಿದರು.

× Chat with us