ಪುನಃ ಧ್ರುವೀಕರಣದತ್ತ ವಾಲುತ್ತಿರುವ ರಾಜ್ಯ ರಾಜಕೀಯ; ವಾರದ ಅಂಕಣ

ಹೊರಟ್ಟಿ ವಿಧಾನ ಪರಿಷತ್ತಿನ ಸಭಾಪತಿಯಾಗುವ ಮೂಲಕ ಚಾಲನೆ

ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ರಾಜ್ಯ ವಿಧಾನಪರಿಷತ್ತಿನ ಸಭಾಪತಿಯಾಗಿ ಆಯ್ಕೆಯಾಗುವುದರೊಂದಿಗೆ ಪುನ: ರಾಜ್ಯ ರಾಜಕೀಯ ಧ್ರುವೀಕರಣದತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ. ಈ ಹಿಂದೆ ಕಾಂಗ್ರೆಸ್- ಜಾತ್ಯತೀತ ಜನತಾದಳ ಪರಸ್ಪರ ಕೈಗೂಡಿಸಿ ವಿಧಾನಪರಿಷತ್ತಿನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನೂ ಹಂಚಿಕೊಂಡಿದ್ದವು.
ಆದರೆ ಪ್ರತಿಪಕ್ಷ ಸಿದ್ಧರಾಮಯ್ಯ ಅವರ ನಿರಂತರ ವಾಗ್ದಾಳಿಯಿಂದ ಸಿಟ್ಟಿಗೆದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರ ಉರುಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಪ್ರತ್ಯಾರೋಪ ಮಾಡುವುದರಿಂದ ಹಿಡಿದು ಮುಂದಿನ ದಿನಗಳಲ್ಲಿ ಬಿಜೆಪಿಯ ಜತೆ ಕೈಗೂಡಿಸುವುದಾಗಿ ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.
ಆದರೆ ಕರ್ನಾಟಕದಲ್ಲಿ ನಡೆದ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಗೆ ಬಂದಿದ್ದ ಬಿಜೆಪಿಯ ಉಸ್ತುವಾರಿ ಅರುಣ್ ಸಿಂಗ್, ಯಾವ ಕಾರಣಕ್ಕೂ ಮುಂದಿನ ದಿನಗಳಲ್ಲಿ ಜಾ.ದಳದ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ ಎಂದಿದ್ದರು. ಈ ಮಾತಿನಿಂದ ಕುಮಾರಸ್ವಾಮಿ ಅದೆಷ್ಟು ಕೆರಳಿದರು ಎಂದರೆ, ಅಯ್ಯೋ, ಹೊಂದಾಣಿಕೆ ಮಾಡಿಕೊಳ್ಳಲು ನಾವು ಯಾರ ಮನೆ ಬಾಗಿಲಿಗೂ ಹೋಗಿ ನಿಂತಿಲ್ಲ. ಮುಂದಿನ ಚುನಾವಣೆಯಲ್ಲಿ ಯಾರ ಜತೆಗೂ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷವನ್ನು ನಾವು ಸಂಘಟಿಸುತ್ತೇವೆ .ಮರಳಿ ಅಧಿಕಾರ ಹಿಡಿಯುತ್ತೇವೆ ಎಂದಿದ್ದರು. ಹೀಗಾಗಿ ಕೆಲ ದಿನಗಳ ಮಟ್ಟಿಗೆ ಬಿಜೆಪಿಯ ಜತೆ ಜಾ.ದಳದ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂಬ ಮಾತು ತೆರೆಮರೆಗೆ ಸರಿದು, ಎಲ್ಲರೂ  ಈ ಎಪಿಸೋಡನ್ನು ಮರೆಯುವಂತಾಗಿತ್ತು.
ಆದರೆ, ವಿಷಯ ಕೆಲ ದಿನಗಳ ಮಟ್ಟಿಗೆ ತೆರೆಯ ಹಿಂದಕ್ಕೆ ಸರಿದರೂ ವಸ್ತುಸ್ಥಿತಿ ಮಾತ್ರ ಅದೇ ಆಗಿತ್ತು. ನೇರವಾಗಿ ಹೇಳಬೇಕೆಂದರ ಬಿಜೆಪಿಯ ಜತೆ ಕೈಗೂಡಿಸುವುದರಿಂದ ಜಾ.ದಳ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೆ ತನ್ನೊಂದಿಗೆ ಜಾ.ದಳ ಕೈ ಜೋಡಿಸಿದರೆ ಬಿಜೆಪಿಗೆ ಲಾಭ ಜಾಸ್ತಿ.
ಯಾಕೆಂದರೆ ಜಾ.ದಳದ ಜತೆ ಕೈಜೋಡಿಸುವುದು ಎಂದರೆ ಹಳೆ ಮೈಸೂರು ಭಾಗದಲ್ಲಿ ತನ್ನ ವೋಟ್ ಬ್ಯಾಂಕ್ ಶಕ್ತಿಯನ್ನು ಹಿಗ್ಗಿಸಿಕೊಳ್ಳಲು ಬಿಜೆಪಿಗೆ ಅನುಕೂಲವಾಗಲಿದೆ ಎಂದೇ ಅರ್ಥ. ಏಕೆಂದರೆ ಹಿಂದೆ ಜನತಾದಳದಿಂದ ಉಚ್ಚಾಟನೆಯಾದ ರಾಮಕೃಷ್ಣ ಹೆಗಡೆ ಲೋಕಶಕ್ತಿ ಪಕ್ಷ ಕಟ್ಟಿ, ಆನಂತರ ಸಂಯುಕ್ತ ಜನತಾದಳದ ಮುಂಚೂಣಿಯಲ್ಲಿ ನಿಂತು ಬಿಜೆಪಿ ಜತೆ ಕೈ ಜೋಡಿಸಿದ್ದರು.
ಹೀಗವರು ಕೈ ಜೋಡಿಸಿದ ಪರಿಣಾಮವಾಗಿ ತಕ್ಷಣ ಲಾಭವಾದರೂ ತದನಂತರದ ದಿನಗಳಲ್ಲಿ ಸಂಯುಕ್ತ ಜನತಾದಳ ವಿಲೀನವಾದ ಪ್ರಕ್ರಿಯೆಯಿಂದ ಬಿಜೆಪಿಗೇ ಲಾಭವಾಯಿತು. ಅರ್ಥಾತ್, ರಾಮಕೃಷ್ಣ ಹೆಗಡೆ ಅವರ ಜತೆಗಿದ್ದ ಲಿಂಗಾಯತ ಮತ ಬ್ಯಾಂಕ್ ಬಿಜೆಪಿಯಲ್ಲಿ ಸ್ಥಿರವಾಯಿತು. ಹೀಗೆ ಲಿಂಗಾಯತ ಮತಬ್ಯಾಂಕ್ ಬಿಜೆಪಿಗೆ ದಕ್ಕಿದ್ದೇ ಅದರ ಪ್ಲಸ್ ಪಾಯಿಂಟ್ ಆಯಿತು. ಮತ್ತು ಪದೇ ಪದೇ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಲು ಅವಕಾಶ ಸೃಷ್ಟಿಯಾಗತೊಡಗಿತು. ಈ ಹಿನ್ನೆಲೆ ಗೊತ್ತಿದ್ದವರಿಗೆ ಈಗಿನ ಜಾ.ದಳದ ನಡೆ ಕೂಡ ಅಂತಹ ಅನುಮಾನವನ್ನೇ ಮೂಡಿಸುತ್ತಿದೆ.
ವಾಸ್ತವವಾಗಿ ಬಿಜೆಪಿ ಅದೇನೇ ಮಾಡಿದರೂ ಹಳೆ ಮೈಸೂರು ಭಾಗದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿಲ್ಲ. ನಾಳೆ ಅದರೊಂದಿಗೆ ಜಾ.ದಳ ಕೈ ಜೋಡಿಸಿದರೆ ಅನುಮಾನವೇ ಬೇಡ. ಬಿಜೆಪಿಯ ವೋಟ್ ಬ್ಯಾಂಕ್ ನೆಲೆ ವಿಸ್ತೃತವಾಗುತ್ತದೆ. ಆ ದೃಷ್ಟಿಯಿಂದ ಬಿಜೆಪಿಯ ಜತೆ ಕೈ ಜೋಡಿಸುವುದು ಎಂದರೆ ಒಕ್ಕಲಿಗ ಮತಬ್ಯಾಂಕ್ ಮೇಲೆ ಜಾ.ದಳ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತದೆ ಎಂದೇ ಅರ್ಥ. ಆದರೆ ಈ ವಸ್ತುಸ್ಥಿತಿ ಅರಿವಿದ್ದರೂ ಜಾ.ದಳ ಪಕ್ಷ ಒಂದು ರಿಸ್ಕ್ ತೆಗೆದುಕೊಳ್ಳಲು ಮುಂದಾಗಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಅದರ ಪರಿಸ್ಥಿತಿ ಅತ್ತ ದರಿ, ಇತ್ತ ಪುಲಿ ಎಂಬಂತಿದೆ. ಈ ಮೊದಲು ಅದು ಕಾಂಗ್ರೆಸ್ ಜತೆ ಕೈ ಜೋಡಿಸಿತ್ತಾದರೂ ವಾಸ್ತವದಲ್ಲಿ ಅದು ಪುಲಿ. ಹೀಗಾಗಿ ಯಾವ್ಯಾವಾಗ ಜಾ.ದಳ ತನ್ನ ಜತೆ ಕೈಗೂಡಿಸಿತೋ? ಆಗೆಲ್ಲ ಈ ಪುಲಿ ಘರ್ಜಿಸುತ್ತಾ, ಜಾ.ದಳವನ್ನು ನುಂಗಲು ಹವಣಿಸಿದೆ.
ಅದು ೨೦೦೪ರ ನಂತರದ ದಿನಗಳಲ್ಲೇ ಇರಬಹುದು ಅಥವಾ ೨೦೧೮ರ ನಂತರದ ದಿನಗಳಲ್ಲೇ ಇರಬಹುದು. ಒಟ್ಟಿನಲ್ಲಿ ಎರಡೂ ಸಂದರ್ಭಗಳಲ್ಲಿ ಮೈತ್ರಿ ಪಕ್ಷವಾದ ಕಾಂಗ್ರೆಸ್ ತನ್ನನ್ನು ನುಂಗಲು ಹವಣಿಸುತ್ತಿದ್ದ ರೀತಿ ಜಾ.ದಳಕ್ಕೆ ಅರ್ಥವಾಗಿದೆ. ೨೦೦೪ರಿಂದ ೨೦೦೬ರವರೆಗೆ ನಡೆದ ಕಾಂಗ್ರೆಸ್- ಜಾ.ದಳ ಮೈತ್ರಿಕೂಟ ಸರ್ಕಾರವನ್ನು ಅಲುಗಾಡಿಸಲು ಎಸ್.ಎಂ.ಕೃಷ್ಣ ಮಾಡಿದ ಪ್ರಯತ್ನವೇನು ಅನ್ನುವುದು ಈಗ ರಹಸ್ಯದ ವಿಷಯವಲ್ಲ.
ಇದೇ ರೀತಿ ೨೦೧೮ ರಲ್ಲಿ ಅಸ್ತಿತ್ವಕ್ಕೆ ಬಂದ ಜಾ.ದಳ -ಕಾಂಗ್ರೆಸ್ ಮೈತ್ರಿಕೂಟ ಸರ್ಕಾರವನ್ನೇ ತೆಗೆದುಕೊಳ್ಳಿ. ಈ ಸರ್ಕಾರ ಅಸ್ತಿತ್ವಕ್ಕೆ ಬಂದುದು ಸಿದ್ದರಾಮಯ್ಯ ಅವರಿಗೆ ಸಹ್ಯವಾಗಿರಲಿಲ್ಲ. ಎಷ್ಟೇ ಆದರೂ ತನಗೆ ಒಂದು ಕಾಲದಲ್ಲಿ ಸಿಎಂ ಹುದ್ದೆಯನ್ನು ತಪ್ಪಿಸಿದ್ದ ಪಕ್ಷ ಅದು ಎಂಬುದು ಸಿದ್ದರಾಮಯ್ಯ ಅವರ ಸಿಟ್ಟು. ಹೀಗಿರುವಾಗ ಎಷ್ಟು ಕಾಲ ಅಂತ ಈ ಸರ್ಕಾರವನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯ? ಹಾಗಂತಲೇ ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರದಿಂದ ಬೇಸತ್ತ ತಮ್ಮ ಬೆಂಬಲಿಗರ ಮುಂದಿನ ನಡೆಯನ್ನು ನಿಯಂತ್ರಿಸಲು ಮುಂದಾಗಲಿಲ್ಲ. ಪರಿಣಾಮ ಸರ್ಕಾರ ಬಿತ್ತು. ಇದಾದ ನಂತರ ಕುಮಾರಸ್ವಾಮಿ ಮತ್ತು ದೇವೇಗೌಡ ವಿಪರೀತ ಕೆರಳಿದರು. ಇದಾದ ನಂತರ ಅವರು ಬಿಜೆಪಿ ಹೈಕಮಾಂಡ್ ವರಿಷ್ಠರೊಂದಿಗೆ ಪದೇ ಪದೇ ಚರ್ಚಿಸಿದ್ದಾರೆ.
ವಸ್ತುಸ್ಥಿತಿ ಎಂದರೆ ಮುಂದಿನ ಚುನಾವಣೆಯನ್ನು ಜಾ.ದಳ ಜತೆಗೂಡಿ ಎದುರಿಸಬೇಕು ಎಂಬ ವಿಷಯದಲ್ಲಿ ಬಿಜೆಪಿ ವರಿಷ್ಠರಿಗೆ ಅತ್ಯಾಸಕ್ತಿ ಇದೆ. ಯಾಕೆಂದರೆ ಅದಕ್ಕೆ ಹೊಸ ಮತಬ್ಯಾಂಕ್ ಬೇಕು. ಜಾ.ದಳದ ನೆಲೆಯಿಂದ ತಮಗೆ ಲಾಭವಾಗಲಿದೆ ಎಂಬುದು ಅವರ ಯೋಚನೆ. ಹೀಗಾಗಿಯೇ ಅರುಣ್ ಸಿಂಗ್ ಎಪಿಸೋಡಿನ ನಂತರ ಉಭಯ ಪಕ್ಷಗಳ ನಾಯಕರು ಹಲ ಸುತ್ತಿನ ಮಾತುಕತೆ ನಡೆಸಿದ್ದಾರೆ. ಮತ್ತು ಮುಂದಿನ ವಿಧಾನಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸಲು ಪೂರಕವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.
ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ಮಧ್ಯೆ ಆದ ಒಪ್ಪಂದ ಇದಕ್ಕೆ ಸಾಕ್ಷಿ. ಒಟ್ಟಿನಲ್ಲಿ ಏನೇ ಆದರೂ ಜಾ.ದಳ ತನ್ನ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಜತೆ ಕೈಗೂಡಿಸುವುದೇ ಹೆಚ್ಚು ಲಾಭಕರ ಎಂದು ಭಾವಿಸಿದೆ. ಅದೇ ಸದ್ಯದ ವಿಶೇಷ.
  ಆರ್.ಟಿ.ವಿಠ್ಠಲಮೂರ್ತಿ
× Chat with us