ಕ್ರೀಡೆ

ಇರಾನ್‌ ಸದ್ದಡಗಿಸಿ ಏಷ್ಯನ್‌ ಕಬಡ್ಡಿ ಚಾಂಪಿಯನ್‌ಷಿಪ್‌ ಗೆದ್ದ ಟೀಮ್ ಇಂಡಿಯಾ

ಬೆಂಗಳೂರು : ಅಕ್ಷರಶಃ ಅಧಿಕಾರಯುತ ಆಟವಾಡಿದ ಭಾರತ ತಂಡ 11ನೇ ಆವೃತ್ತಿಯ ಪುರುಷರ ಏಷ್ಯನ್‌ ಕಬಡ್ಡಿ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಪೂರ್ಣ ಪ್ರಾಬಲ್ಯ ಮೆರೆದು ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿರುವ ಡಾಂಗ್‌ ಯೂ ಸೈನ್ಸ್‌ ಯೂನಿವರ್ಸಿಟಿ ಇಂಡೋರ್‌ ಜಿಮ್ನಾಸಿಯಂನಲ್ಲಿ ಜೂನ್‌ 30ರಂದು ನಡೆದ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿದ ಸ್ಟಾರ್‌ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ ಸಾರಥ್ಯದ ಟೀಮ್ ಇಂಡಿಯಾ 42-32 ಅಂಕಗಳಿಂದ ಅಪಾಯಕಾರಿ ಹಾಗೂ ಬದ್ಧ ಎದುರಾಳಿ ಇರಾನ್‌ ತಂಡವನ್ನು ಬಗ್ಗುಬಡಿದು ಟ್ರೋಫಿ ಮುಡಿಗೇರಿಸಿಕೊಂಡಿದೆ. ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡವಾಗಿರುವ ಭಾರತ ತಂಡ ದಾಖಲೆಯ ಎಂಟನೇ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ.

ಕೂಟದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಭಾರತ ತಂಡ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿರುವುದು, ಕಬಡ್ಡಿ ಕ್ರೀಡೆಯಲ್ಲಿ ಭಾರತದ ತಂತ್ರಗಾರಿಕೆ, ಚಾಕಚಕ್ಯತೆ ಹಾಗೂ ಅನುಭವಕ್ಕೆ ಹಿಡಿದ ಕೈಗನ್ನಡಿ ಆಗಿದೆ. ಲೀಗ್‌ ಹಂತದ ರೌಂಡ್‌ ರಾಬಿನ್‌ ಪಂದ್ಯದಲ್ಲಿ ಭಾರತ ತಂಡ ಇರಾನ್‌ ಎದುರು 33-28 ಅಂಕಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿತ್ತು. ಈ ಬಾರಿ ಪಾಕಿಸ್ತಾನ ಈ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ. 2017ರಲ್ಲಿ ನಡೆದಿದ್ದ 10ನೇ ಆವೃತ್ತಿಯ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿತ್ತು.

ಕಳೆದ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಪಾಲ್ಗೊಂಡ ತಂಡಗಳ ಸಂಖ್ಯೆ ಕಡಿಮೆ. 10ನೇ ಆವೃತ್ತಿಯಲ್ಲಿ ಒಟ್ಟು 10 ತಂಡಗಳು ಸ್ಪರ್ಧೆಯಲ್ಲಿದ್ದವು. ಈ ಬಾರಿ ಭಾರತ, ಇರಾನ್‌, ಆತಿಥೇಯ ದಕ್ಷಿಣ ಕೊರಿಯಾ, ಜಪಾನ್‌, ಚೈನೀಸ್‌ ತೈಪೆ ಮತ್ತು ಹಾಂಕಾಂಗ್‌ ತಂಡಗಳು ಪಾಲ್ಗೊಂಡಿದ್ದವು. ರನ್ನರ್ಸ್‌ ಅಪ್‌ ಸ್ಥಾನ ಪಡೆದ ಇರಾನ್‌ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಅಚ್ಚರಿಯ ಪ್ರದರ್ಶನ ನೀಡಿದ ಚೈನೀಸ್‌ ತೈಪೆ ತಂಡ ಮೊತ್ತ ಮೊದಲ ಬಾರಿ 3ನೇ ಸ್ಥಾನ ಅಲಂಕರಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಭಾರತ ತಂಡದ ಅಧಿಕಾರಯುತ ಪ್ರದರ್ಶನ
ಜೂನ್‌ 27ರಂದು ನಡೆದ ಟೂರ್ನಿಯ ಮೊದಲ ಪಂದ್ಯದಲ್ಲೇ ತನ್ನ ಕರಾಮತ್ತು ಪ್ರದರ್ಶಿಸಿದ್ದ ಟೀಮ್ ಇಂಡಿಯಾ, ಆತಿಥೇಯ ದಕ್ಷಿಣ ಕೊರಿಯಾ ತಂಡವನ್ನು 76-13 ಅಂಕಗಳಿಂದ ಬಗ್ಗುಬಡಿದು ಎದುರಾಳಿಗಳಿಗೆ ದಿಟ್ಟ ಸಂದೇಶ ರವಾನಿಸಿತ್ತು. ಬಳಿಕ ತನ್ನ ಎರಡನೇ ಪಂದ್ಯದಲ್ಲೂ ಚೈನೀಸ್‌ ತೈಪೆ ಎದುರು ಪ್ರಭುತ್ವ ಸಾಧಿಸಿ 53-19 ಅಂಕಗಳ ಜಯ ತನ್ನದಾಗಿಸಿಕೊಂಡಿತು. ಮೂರನೇ ಪಂದ್ಯದಲ್ಲಿಯೂ ಭಾರತದ ಭರ್ಜರಿ ಆಟ ಮುಂದುವರಿದು ಜಪಾನ್‌ ಎದುರು 62-17 ಅಂಕಗಳ ಗೆಲುವು ದೊರೆಯಿತು.

ಹಾಂಗ್‌ಕಾಂಗ್‌ ಎದುರು 64-20 ಅಂಕಗಳಿಂದ ಗೆದ್ದ ಭಾರತ ತಂಡಕ್ಕೆ ಲೀಗ್‌ ಹಂತದಲ್ಲಿ ತುರುಸಿನ ಪೈಪೋಟಿ ನೀಡಿದ ಏಕಮಾತ್ರ ತಂಡ ಎನಿಸಿದ ಇರಾನ್‌, 28-33 ಅಂಕಗಳ ಅಂತರದಲ್ಲಿ ಭಾರತದ ಎದುರು ಮಂಡಿಯೂರಿತ್ತು. ಲೀಗ್‌ನಲ್ಲಿ ಆಡಿದ ಐದಕ್ಕೆ ಐದೂ ಪಂದ್ಯಗಳನ್ನು ಗೆದ್ದ ಭಾರತ ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದರೆ, 4 ಜಯದೊಂದಿಗೆ 2ನೇ ಸ್ಥಾನ ಅಲಂಕರಿಸಿದ ಇರಾನ್‌ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿತ್ತು. ಚೈನೀಸ್‌ ತೈಪೆ ತಂಡ 5 ಪಂದ್ಯಗಳಲ್ಲಿ 3 ಜಯ ದಾಖಲಿಸಿ ಅಂಕಪಟ್ಟಿಯ 3ನೇ ಸ್ಥಾನದೊಂದಿಗೆ ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಇದೇ ವರ್ಷ ಸೆಪ್ಟೆಂಬರ್‌ 23ರಿಂದ ಅಕ್ಟೋಬರ್‌ 8ರವರೆಗೆ ಚೀನಾದ ಹಾಂಗ್‌ಝೌ ಆತಿಥ್ಯದಲ್ಲಿ 19ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟ ನಡೆಯಲಿದ್ದು, ಏಷ್ಯನ್ ಚಾಂಪಿಯನ್‌ಷಿಪ್‌ ಗೆಲುವು ಭಾರತ ಕಬಡ್ಡಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.

lokesh

Recent Posts

ರಾಷ್ಟ್ರಕವಿ ಕುವೆಂಪು ಕಟ್ಟಿದ ಸಂವಿಧಾನ ಸ್ವಾಗತ ಗೀತೆ

ನಮ್ಮ ಸಂವಿಧಾನಕ್ಕೆ ಬರೋಬ್ಬರಿ 75ವರ್ಷಗಳು ತುಂಬಿವೆ. ಭಾರತದ ಪ್ರಜೆಗಳಾದ ನಮಗೆ ಸಂವಿಧಾನವೇ ‘ಸಾಮಾಜಿಕ ನ್ಯಾಯದ ತಾಯಿ’. ಸರ್ವಜನಾಂಗದ ಹಿತರಕ್ಷಣೆಯ ಹೊಣೆಹೊತ್ತ…

6 mins ago

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಂಚಲನ ಮೂಡಿಸಿದ ಬಿಜೆಪಿ-ಜಾ.ದಳ ಮೈತ್ರಿ ವಿಚಾರ

ಭವಿಷ್ಯದ ಗುರಿಸಾಧನೆಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧಾರ  ಕಳೆದ ವಾರ ಬಿಜೆಪಿ-ಜಾ.ದಳ ಪಾಳೆಯಗಳಲ್ಲಿ ದೊಡ್ಡ ಮಟ್ಟದ ಸಂಚಲನ…

20 mins ago

ಆಟಿಕೆ ಮಾರಾಟಗಾರರ ಸುರಕ್ಷತೆಗೆ ಸರ್ಕಾರಗಳು ಮುಂದಾಗಲಿ

2025ರ ವರ್ಷಾಂತ್ಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಘೋರ ದುರಂತಕ್ಕೆ ಸಾಕ್ಷಿಯಾದದ್ದು ಅತ್ಯಂತ ವಿಷಾದಕರ ಮತ್ತು ಆತಂಕಕಾರಿ ಸಂಗತಿ. ಹೊಟ್ಟೆ ಪಾಡಿಗಾಗಿ…

59 mins ago

ಕ್ರೀಡಾಲೋಕದ ಸಿಹಿ-ಕಹಿ ಮೆಲುಕು

ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು 2025ರ ವರ್ಷಪೂರ್ತಿ ಸುಂದರ ಹಾಗೂ ಕಹಿ ಘಟನೆಗಳನ್ನು ಮೆಲುಕು ಹಾಕಿದ್ದು. ಅದೇ ಮಾದರಿಯಲ್ಲಿ ಪ್ರಸಕ್ತ…

2 hours ago

ಕೊಡಗು ಜಿಲ್ಲೆಯಲ್ಲಿ ಹೆಚ್ಚಿದ ಮಂಗಗಳ ಕಾಟ

* ರೈತರ ಕೈಗೆ ಸಿಗದ ಫಸಲು * ಸ್ಥಳಾಂತರಕ್ಕೆ  ಅನುಮತಿ ನೀಡಲು ಅರಣ್ಯ ಇಲಾಖೆಯಿಂದ ಮನವಿ * ವಾನರ ಸೇನೆ…

2 hours ago

ಪಚ್ಚೆದೊಡ್ಡಿ ಗ್ರಾಮಕ್ಕೆ ತ್ರಿಸದಸ್ಯ ಸಮಿತಿ ತಂಡ ಭೇಟಿ

ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ…

4 hours ago