ಬೆಂಗಳೂರು : 18 ವರ್ಷಗಳ ವನವಾಸ ಅಂತ್ಯಗೊಳಿಸಿದ ಬಳಿಕ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) 2025ರ ಫೈನಲ್‌ನಲ್ಲಿ ಮಂಗಳವಾರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಹಿನ್ನೆಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ (ಮೇ.4) ಬೆಂಗಳೂರಿಗೆ ಬಂದಿಳಿದಿತ್ತು. ಈ ಆಟಗಾರರನ್ನು ಕಣ್ತುಂಬಿಸಿಕೊಳ್ಳಲು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಹಾಗಿದ್ದರೆ ವಿಜಯೋತ್ಸವದಲ್ಲಿ ಏನೆಲ್ಲಾ ಆಯಿತು? ದುರಂತಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.
ಮೊದಲಿಗೆ ರಾಜ್ಯ ಸರ್ಕಾರದ ವತಿಯಿಂದ ವಿಧಾನಸೌಧದಲ್ಲಿ ವಿಜಯೋತ್ಸವ ಸಂಭ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆರ್‌ಸಿಬಿ ತಾರಾಗಣವೇ ಇತ್ತು. ಇದನ್ನು ಕಣ್ತುಂಬಿಕೊಳ್ಳಲು ವಿಧಾನಸೌಧದ ಹತ್ತಿರ ಅಭಿಮಾನಿಗಳು ಸೇರಿದ್ದರು. ಇಲ್ಲಿ ಆರ್‌ಸಿಬಿ ಆಟಗಾರರಿಗೆ ಸನ್ಮಾನವೂ ಆಯಿತು.
ಬಳಿಕ ಸಂಜೆ ಹೊತ್ತಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲೂ ಆರ್‌ಸಿಬಿ ತಾರಾಗಣ ಬರುವುದಿತ್ತು. ಹೀಗಾಗಿ, ಲಕ್ಷಂತರ ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸಿದ್ದರು. ಕ್ರೀಡಾಂಗಣದ ಒಳಗೆ ಆಸನವೆಲ್ಲವೂ ಭರ್ತಿಯಾಗಿತ್ತು. ಹೀಗಾಗಿ ಗೇಟ್‌ಗಳಿಗೆ ಬೀಗ ಹಾಕಲಾಗಿತ್ತು. ಬಳಿಕ ಆರ್‌ಸಿಬಿ ಅಭಿಮಾನಿಗಳು ಗೇಟ್ ಮೇಲೆ ಹತ್ತಿ ಕ್ರೀಡಾಂಗಣದ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಓರ್ವ ಯುವಕ ಬಿದ್ದು ಕಾಲು ಮುರಿದುಕೊಂಡನು.
ಬಳಿಕ ಎಲ್ಲಾ ಗೇಟ್‌ಗಳಲ್ಲಿಯೂ ಅಭಿಮಾನಿಗಳಿಂದ ನೂಕುನುಗ್ಗಲು ಸಂಭವಿಸಿತು. ಕೇವಲ 40 ಸಾವಿರ ಆಸನವುಳ್ಳ ಜಾಗದಲ್ಲಿ ಸುಮಾರು 2 ರಿಂದ 3 ಲಕ್ಷ ಜನ ಅಭಿಮಾನಿಗಳು ಸೇರಿದ್ದು ಅವಘಡಕ್ಕೆ ಕಾರಣವಾಗಿದೆ. ಅಭಿಮಾನಿಗಳ ನಡುವೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ, ಹಲವಾರು ಗಂಭೀರವಾಗಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ನಡೆಯಿತು. ಗಾಯಗೊಂಡವರನ್ನು ಬೆಂಗಳೂರಿನ ಪೊಲೀಸರು ಎತ್ತುಕೊಂಡು ಓಡಿ ಹೋಗುತ್ತಿರುವ ಹೃದಯವಿದ್ರಾವಕ ದೃಶ್ಯಗಳು ಮನಕಲಕುವಂತೆ ಇತ್ತು. ಘಟನೆಯಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಬೌರಿಂಗ್ ಆಸ್ಪತ್ರೆಯಲ್ಲಿ 6 ಹಾಗೂ ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಒಬ್ಬರು ಅಭಿಮಾನಿಗಳು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ಆಸ್ಪತ್ರೆಗಳ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಏಕಾಏಕಿ ತಳ್ಳಾಟ, ನೂಕಾಟ ;
18, 19, ಮತ್ತು 20ನೇ ಗೇಟ್ ಓಪನ್ ಆಗುತ್ತಿದ್ದಂತೆ ಅಭಿಮಾನಿಗಳು ಏಕಾಏಕಿ ಒಳನುಗ್ಗಿದ್ದು, ತಳ್ಳಾಟ, ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಒಬ್ಬರ ಮೇಲೆ ಮತ್ತೋರ್ವರು ಹತ್ತಲು ಪ್ರಯತ್ನಿಸಿದಾಗ ಕಾಲ್ತುಳಿತ ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಭಿಮಾನಿಗಳು ಸಂತೋಷದಿಂದ ಕುಣಿದಾಡುತ್ತಿರುವಾಗಲೇ ಈ ದುರಂತ ಸಂಭವಿಸಿದೆ. ಭಾರೀ ಜನ ಸೇರಲಿದ್ದಾರೆ ಎನ್ನುವ ಕಾರಣಕ್ಕೆ ತೆರೆದ ಬಸ್‌ನಲ್ಲಿ ಮೆರವಣಿಗೆಯನ್ನು ರಾಜ್ಯ ಸರ್ಕಾರವು ರದ್ದುಪಡಿಸಿತ್ತು. ಕಾನೂನು ಹಾಗೂ ಸುವ್ಯವಸ್ಥೆಯ ದೃಷ್ಟಿಯಿಂದ ಮೆರವಣಿಗೆಯನ್ನು ರದ್ದುಪಡಿಸಿರುವುದಾಗಿ ಹೇಳಲಾಗಿತ್ತು.
ಹಲವರ ಸ್ಥಿತಿ ಗಂಭೀರ ;
ಕಬ್ಬಿಣದ ಬೃಹದಾಕಾರದ ಗೇಟ್ ಕುಸಿದ ಕೂಡಲೇ ಅದನ್ನು ಹಿಡಿದು ನಿಂತಿದ್ದ ಗೇಟ್ ಕೆಳಗೆ ಸಿಲುಕಿಕೊಂಡರು. ಆ ಪೈಕಿ 20 ಮಂದಿಗೆ ಗಂಭೀರ ಗಾಯಗಳಾಗಿದ್ದವು. ಅವರೆಲ್ಲರನ್ನು ಪೊಲೀಸರು ಆಂಬ್ಯುಲೆನ್ಸ್ ಸಹಾಯದಿಂದ ಸಮೀದಪ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ, ವಿಠ್ಠಲ್ ಮಲ್ಯ ರಸ್ತೆಯ ವೈದೇಹಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಗುಂಪು, ಗುಂಪಾಗಿ ಓಡಾಡಿದ ಅಭಿಮಾನಿಗಳು ;
ಅಭಿಮಾನಿಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರವೇಶ ಅವಕಾಶವನ್ನು ನೀಡುವಲ್ಲಿ ಮೀನಾಮೇಷ ಎಣಿಸಿ ಗಂಟೆಗೊಂದು ಹೇಳಿಕೆ ನೀಡುತ್ತಾ ಅಭಿಮಾನಿಗಳು ಗುಂಪು ಸೇರಿ ಪರದಾಡುವಂತೆ ಮಾಡಿತ್ತು. ಇದರ ಪರಿಣಾಮವಾಗಿ ಅಲ್ಲಿಂದಿಲ್ಲಿಗೆ ಗುಂಪಾಗಿ ಓಡಾಡಿದ ಅಭಿಮಾನಿಗಳು ಕ್ರೀಡಾಂಗಣದ ಹಿಂಬದಿ ಬಂದು ನಿಂತುಕೊಂಡಾಗ ನಿಯಂತ್ರಣ ಕಳೆದಿದೆ ಎನ್ನಲಾಗಿದೆ.
ಸಿಎಂ ಆಸ್ಪತ್ರೆಗೆ ಭೇಟಿ : ತುರ್ತು ಸಭೆ
ಅವಘಡದ ಬಗ್ಗೆ ಮಾಹಿತಿ ಪಡೆದುಕೊಂಡ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಬೌರಿಂಗ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಮೃತರು, ಗಾಯಳುಗಳ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ತುರ್ತು ಸಭೆ ನಡೆಸಿದ್ದಾರೆ. ಕಾವೇರಿ ನಿವಾಸದಲ್ಲಿ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರ ಜೊತೆ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಸಿಎಂ, ವಿದ್ಯಾರ್ಥಿಗಳು, ಯುವಕರು, ಯುವತಿಯರು ಮನೆಗೆ ಸೇಫಾಗಿ ತೆರಳಲು ವ್ಯವಸ್ಥೆ ಮಾಡಲು ಸೂಚಿಸಿದರು.
ಘಟನೆಗೆ ಗಣ್ಯರಿಂದ ಸಂತಾಪ ;
ಘಟನೆಗೆ ರಾಷ್ಡಪತಿ ದ್ರೌಪ ಮುರ್ಮು, ಉಪ ರಾಷ್ಟ್ರಪತಿ ಜಗದೀಶ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾ ಖರ್ಗೆ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…