ಬೆಂಗಳೂರು: ಆರು ವರ್ಷಗಳ ಬಳಿಕ ರಣಜಿ ಟ್ರೋಫಿ ಗೆಲ್ಲುವ ಕರ್ನಾಟಕದ ಕನಸು ಮತ್ತೆ ಭಗ್ನಗೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್ ಮುಖಾಮುಖಿಯಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ ನಾಲ್ಕು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ. ಈ ಮೂಲಕ ತವರಿನ ಅಂಗಣದಲ್ಲಿ ಮುಖಭಂಗಕ್ಕೊಳಗಾಗಿರುವ ಮಯಾಕ್ ಅಗರವಾಲ್ ಪಡೆ ಟೂರ್ನಿಯಿಂದಲೇ ನಿರ್ಗಮಿಸಿದೆ.
ಮತ್ತೊಂದೆಡೆ ಮೊದಲ ಸೆಮಿಫೈನಲ್ನಲ್ಲಿ ಮಧ್ಯಪ್ರದೇಶದ ವಿರುದ್ಧ ಬಂಗಾಳ 306 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಫೆಬ್ರುವರಿ 16, ಸೋಮವಾರದಿಂದ ಆರಂಭವಾಗಲಿರುವ ಫೈನಲ್ ಪಂದ್ಯದಲ್ಲಿ ಬಂಗಾಳ ಮತ್ತು ಸೌರಾಷ್ಟ್ರ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ನಾಯಕ ಮಯಂಕ್ ದ್ವಿಶತಕದ ಹೋರಾಟ ವ್ಯರ್ಥ…
ನಾಯಕ ಮಯಂಕ್ ಅಗರವಾಲ್ ದ್ವಿಶತಕದ (249) ಬಲದೊಂದಿಗೆ ಮೊದಲ ಇನಿಂಗ್ಸ್ನಲ್ಲಿ ಕರ್ನಾಟಕ 407 ರನ್ ಪೇರಿಸಿತ್ತು. ಶ್ರೀನಿವಾಸ್ ಶರತ್ 66 ರನ್ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.
ಇದಕ್ಕೆ ಉತ್ತರವಾಗಿ ನಾಯಕ ಅರ್ಪಿತ್ ವಾಸವಡ ದ್ವಿಶತಕದ ಬೆಂಬಲದೊಂದಿಗೆ ಸೌರಾಷ್ಟ್ರ ಮೊದಲ ಇನಿಂಗ್ಸ್ನಲ್ಲಿ 527 ರನ್ ಗಳಿಸಿತು. ಈ ಮೂಲಕ 120 ರನ್ಗಳ ಮಹತ್ವದ ಮುನ್ನಡೆ ಗಳಿಸಿತು. ಶೆಲ್ಡನ್ ಜಾಕ್ಸನ್ ಸಹ ಅಮೋಘ ಶತಕ(160) ಗಳಿಸಿದರು. ಕರ್ನಾಟಕದ ಪರ ವಿದ್ವತ್ ಕಾವೇರಪ್ಪ ಐದು ವಿಕೆಟ್ ಗಳಿಸಿದರು.

ಮುಗ್ಗರಿಸಿದ ಕರ್ನಾಟಕ
ದ್ವಿತೀಯ ಇನಿಂಗ್ಸ್ನಲ್ಲಿ ನಿಕಿನ್ ಜೋಸ್ ಶತಕದ (109) ಹೊರತಾಗಿಯೂ ಮುಗ್ಗರಿಸಿದ ಕರ್ನಾಟಕ ಕೇವಲ 234 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ನಾಯಕ ಮಯಂಕ್ 55 ರನ್ ಗಳಿಸಿದರು.
123ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕಕ್ಕೆ ಕೊನೆಯ ದಿನದಲ್ಲಿ ಸೌರಾಷ್ಟ್ರದ ಬೌಲರ್ಗಳಾದ ಚೇತನ್ ಸಕಾರಿಯಾ (45ಕ್ಕೆ 4) ಹಾಗೂ ಧರ್ಮೇಂದ್ರಸಿಂಹ ಜಡೇಜ (79ಕ್ಕೆ 4) ಬಲವಾದ ಪೆಟ್ಟು ಕೊಟ್ಟರು. ದಿನದಾಟ ಆರಂಭಕ್ಕೂ ಮುನ್ನವೇ ಫೈನಲ್ ಆಸೆಯನ್ನು ಕೈಬಿಟ್ಟಿದ್ದ ಕರ್ನಾಟಕ ಕೊನೆಯವರೆಗೂ ಹೋರಾಟ ತೋರುವ ಮೂಲಕ ಗಮನಸೆಳೆಯಿತು. ದಿನದಾಟ ಆರಂಭಿಸಿದ ನಿಕಿನ್ ಜೋಸ್ ಹಾಗೂ ಶ್ರೇಯಸ್ ಗೋಪಾಲ್ ಜೋಡಿ ತಂಡದ ಮೊತ್ತಕ್ಕೆ 10 ರನ್ ಕೂಡಿಸುವ ವೇಳೆಗೆ ಬೇರೆಯಾದರು. ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ (2) ಕೂಡ ಹೆಚ್ಚಿನ ಹೋರಾಟ ತೋರಲಿಲ್ಲ. 6 ವಿಕೆಟ್ಗೆ 136 ರನ್ ಬಾರಿಸಿದ್ದ ಕರ್ನಾಟಕ ತಂಡ ಕನಿಷ್ಠ ಹೋರಾಟ ಮಾಡಲು ಸಾಧ್ಯವಾಗಿದ್ದು, ಕೆ.ಗೌತಮ್ ಹಾಗೂ ವಿ ಕೌಶಿಕ್ ಅವರ ಉಪಯುಕ್ತ ಕಾಣಿಕೆಗಳಿಂದ. ಕ್ರೀಸ್ನ ಒಂದು ಕಡೆ ಗಟ್ಟಿಯಾಗಿ ತಳವೂರಿದ್ದ ನಿಕಿನ್ ಜೋಸ್ಗೆ ಸಾಥ್ ನೀಡಿದ ಕೆ. ಗೌತಮ್ (23) ಏಳನೇ ವಿಕೆಟ್ಗೆ ಅಮೂಲ್ಯ 35 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದ್ದರು.
ಗೌತಮ್ ಔಟಾದ ಬಳಿಕ ಕ್ರೀಸ್ಗೆ ಇಳಿದ ವಿ ಕೌಶಿಕ್ (20) ಅವರೊಂದಿಗೆ 60 ನಿಕಿನ್ ಜೋಸ್ 60 ರನ್ ಜೊತೆಯಾಟವಾಡಿದರು. ಈ ಹಂತದಲ್ಲಿ ಅವರು ತಮ್ಮ ಶತಕವನ್ನು ಪೂರೈಸಿಕೊಂಡರು. ತಂಡದ ಮೊತ್ತ 231 ರನ್ ಆಗಿದ್ದಾಗ ವೈಶಾಕ್ ನಿರ್ಗಮಿಸಿದರೆ, ವಿದ್ವತ್ ಕಾವೇರಪ್ಪ ಹಾಗೂ ನಿಕಿನ್ ಜೋಸ್ ತಂಡದ ಮೊತ್ತ 234 ರನ್ ಆಗಿದ್ದಾಗ ಔಟಾಗಿದ್ದರಿಂದ ಕರ್ನಾಟಕದ ಇನ್ನಿಂಗ್ಸ್ಗೆ ಕೊನೆ ಬಿದ್ದಿತು.
115 ರನ್ ಗಳ ಅಲ್ಪ ಗುರಿ ಪಡೆದ ಸೌರಾಷ್ಟ್ರ ಭೋಜನಾ ವಿರಾಮಕ್ಕೂ ಮುನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿತು. ವಿರಾಮದ ಬಳಿಕ ಆತಿಥೇಯ ತಂಡದ ಸ್ಪಿನ್ನರ್ ಗೌತಮ್ ಮತ್ತು ಕೌಶಿಕ್ ತೀಕ್ಷ್ಣ ಬೌಲಿಂಗ್ ಪ್ರದರ್ಶಿಸಿದ ಪರಿಣಾಮ ರನ್ ಗಳಿಸಲು ಪ್ರವಾಸಿ ತಂಡ ತಿಣುಕಾಡಿತು. 17.2 ಓವರ್ ಗಳಲ್ಲಿ 42 ಕ್ಕೆ ಅಗ್ರ ಕ್ರಮಾಂಕದ ಐದು ವಿಕೆಟ್ ಗಳನ್ನು ಉರುಳಿಸಿದ ಗೌತಮ್ ಮತ್ತು ಕೌಶಿಕ್, ತವರು ತಂಡದ ಬಳಗದಲ್ಲಿ ಸಂತಸವನ್ನುಂಟು ಮಾಡಿದರು. ಆದರೆ 6 ವಿಕೆಟ್ ಗೆ ಜತೆಗೂಡಿದ ಚೇತನ್ ಸಕಾರಿಯಾ ಮತ್ತು ಅರ್ಪಿತ್ ವಸವಡ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ವೈಶಾಕ್ ಮತ್ತು ಶ್ರೇಯಸ್ ಬೌಲಿಂಗ್ ನಲ್ಲಿ ಒಂದರಿಂದೊಂದು ಫೋರ್ ಗಳನ್ನು ಹೊಡೆದು ಒತ್ತಡವನ್ನು ಮೆಟ್ಟಿನಿಂತರು.
2019-20ರ ಫೈನಲ್ ಪುನರಾವರ್ತನೆ
ಫೆಬ್ರವರಿ 16ರಂದು ಕೋಲ್ಕೊತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಮತ್ತು ಬಂಗಾಳ ತಂಡಗಳು ಪೈಪೋಟಿ ನಡೆಸಲಿವೆ. ಇದು 2019-20ನೇ ಸಾಲಿನ ಫೈನಲ್ ನ ಪುನರಾವರ್ತಿ ಪಂದ್ಯವಾಗಿದೆ. ಆ ಪಂದ್ಯದಲ್ಲಿ ಸೌರಾಷ್ಟ್ರ ಜಯ ಗಳಿಸಿ ಮೊದಲ ಬಾರಿ ರಣಜಿ ಟ್ರೋಫಿ ಎತ್ತಿಹಿಡಿದಿತ್ತು.
ಕರ್ನಾಟಕ: 407 ಮತ್ತು ದ್ವಿತೀಯ ಇನಿಂಗ್ಸ್ 58.2 ಓವರ್ಗಳಲ್ಲಿ 234 ರನ್ಗಳಿಗೆ ಆಲ್ಔಟ್ (ನಿಕಿನ್ ಜೋಸ್ 109, ಮಯಾಂಕ್ ಅಗರ್ವಾಲ್ 55, ಗೌತಮ್ 23, ವೈಶಾಕ್ 20; ಚೇತನ್ ಸಕಾರಿಯ 45ಕ್ಕೆ 4, ಡಿ. ಜಡೇಜಾ 79ಕ್ಕೆ 4, ಪಾರ್ಥ್ 57ಕ್ಕೆ 2).
ಸೌರಾಷ್ಟ್ರ: 527 ಮತ್ತು ದ್ವಿತೀಯ ಇನಿಂಗ್ಸ್ 34.2 ಓವರ್ಗಳಲ್ಲಿ 6 ವಿಕೆಟ್ಗೆ 117 (ಅರ್ಪಿತ್ 47, ಸಕಾರಿಯಾ 24, ವಿ. ಜಡೇಜಾ 17; ಗೌತಮ್ 38ಕ್ಕೆ 3, ಕೌಶಿಕ್ 32ಕ್ಕೆ 3).