ನವದೆಹಲಿ : ಭಾರತ ಹಾಕಿ ತಂಡದ ಆಟಗಾರ ಬೀರೇಂದ್ರ ಲಕ್ರಾ ವಿರುದ್ಧ ಸ್ನೇಹಿತನನ್ನೇ ಕೊಲೆಗೈದ ಆರೋಪ ಕೇಳಿಬಂದಿದೆ. ಲಕ್ರಾ ಅವರ ಬಾಲ್ಯದ ಗೆಳೆಯ ಆನಂದ್ ಟೊಪ್ಪೊ ಫೆಬ್ರವರಿಯಲ್ಲಿ ಭುವನೇಶ್ವರದ ಫ್ಲ್ಯಾಟ್ನಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು. ಪೊಲೀಸರು ಈ ಸಂಬಂಧ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು.
ಆದರೆ ಆನಂದ್ ತಂದೆ ಬಂಧನ್ ಇದೀಗ ಬಹಿರಂಗ ಹೇಳಿಕೆ ನೀಡಿದ್ದು, ನನ್ನ ಮಗನದ್ದು ಆತ್ಮಹತ್ಯೆ ಅಲ್ಲ. ಆತನನ್ನು ಕೊಲೆ ಮಾಡಲಾಗಿದೆ. ಬೀರೇಂದ್ರ ಲಕ್ರಾ ಕೂಡಾ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ಕಾಲದಲ್ಲಿ ಡಿಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೀರೇಂದ್ರ ಲಕ್ರಾ ಅವರ ವಿರುದ್ದ ದೂರು ದಾಖಲಿಸಲು ಕಳೆದ ನಾಲ್ಕು ತಿಂಗಳು ಕಾಲ ಪರಡಾಡಿದ್ದೇನೆ. ಬೀರೇಂದ್ರ ಲಕ್ರಾ ವಿರುದ್ದ ಎಫ್ಐಆರ್ ದಾಖಲಿಸಲು ಪೊಲೀಸರು ನಮ್ಮ ಸಹಾಯಕ್ಕೆ ಬರಲಿಲ್ಲ ಎಂದು ಆನಂದ್ ಟೊಪ್ಪೊ ಅವರ ತಂದೆ ಬಂಧನ್ ಆರೋಪಿಸಿದ್ದಾರೆ.
32 ವರ್ಷದ ಬೀರೇಂದ್ರ ಲಕ್ರಾ, ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವು ಕಂಚು ಗೆದ್ದ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಇದಾದ ಬಳಿಕ ಬೀರೇಂದ್ರ ಲಕ್ರಾ ನಾಯಕತ್ವದಲ್ಲಿ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡವು ಕಂಚಿನ ಪದಕ ಕೂಡಾ ಜಯಿಸಿತ್ತು.
ನಾವು ಮತ್ತು ಬೀರೇಂದ್ರ ಲಕ್ರಾ ನೆರೆಹೊರೆಯವರಾಗಿದ್ದೇವು. ಹೀಗಾಗಿ ಬಾಲ್ಯದಿಂದಲೇ ಅವರಿಬ್ಬರು ಸ್ನೇಹಿತರಾಗಿದ್ದರು. ಫೆಬ್ರವರಿ 28ರಂದು ಬೀರೇಂದ್ರ ಲಕ್ರಾ ನನಗೆ ಕರೆ ಮಾಡಿ ಆನಂದ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಹಾಗೂ ನಾನು ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ. ಆ ಬಳಿಕ ಆನಂದ್ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿಸಿದರು. ನಾವು ಆಗ ಆತನಿಗೆ ಏನಾಯಿತು ಎಂದಾಗ ಮರುದಿನ ಭುವನೇಶ್ವರ್ಕ್ಕೆ ಬನ್ನಿ ಎಂದು ಹೇಳಿದರು. ನಾವು ಮರುದಿನ ಭುವನೇಶ್ವರ್ಗೆ ಹೋದಾಗ ಅಲ್ಲಿನ ಸ್ಥಳೀಯ ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋದರು. ಅಲ್ಲಿನ ಪೊಲೀಸ್ ಅಧಿಕಾರಿಗಳು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು. ಆದರೆ ಅದು ಆತ್ಮಹತ್ಯೆಯಲ್ಲ ಎಂದು ಪಿಟಿಐಗೆ ಬಂಧನ್ ಟೊಪ್ಪೊ ತಿಳಿಸಿದ್ದಾರೆ.
ಕೊನೆಯುಸಿರೆಳೆದಿರುವ ಆನಂದ್ ಅವರು ಮದುವೆಯಾಗಿರುವ ಹುಡುಗಿಯನ್ನೇ ಬೀರೇಂದ್ರ ಲಕ್ರಾ ಕೂಡಾ ಪ್ರೀತಿಸುತ್ತಿದ್ದರು ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ. ಆನಂದ್ ವಿವಾಹವಾಗಿ ಕೇವಲ 12 ದಿನಗಳಾಗುವಷ್ಟರಲ್ಲಿಯೇ ಆತ ಸಾವನ್ನಪ್ಪಿದ್ದಾನೆ. ಆನಂದ್ ಟೊಪ್ಪೊ ಫೆಬ್ರವರಿ 16ರಂದು ವಿವಾಹವಾಗಿದ್ದರು ಹಾಗೂ ಫೆಬ್ರವರಿ 28ರಂದು ಕೊನೆಯುಸಿರೆಳೆದಿದ್ದಾರೆ. ಮದುವೆಯ ಬಳಿಕ ಆನಂದ್ ತನ್ನ ಪತ್ನಿಯ ಜತೆ ಸಂತೋಷವಾಗಿದ್ದರು ಎಂದು ಅವರ ತಂದ ಬಂದನ್ ಟೊಪ್ಪೊ ತಿಳಿಸಿದ್ದಾರೆ.