ಕ್ರೀಡೆ

ಬ್ಯಾಝ್‌ಬಾಲ್ ಕ್ರಿಕೆಟ್‌ ಮರೆತು ಸಾಂಪ್ರದಾಯಿಕ ಟೆಸ್ಟ್‌ ಆಡಿ: ಇಂಗ್ಲೆಂಡ್‌ಗೆ ದಿಗ್ಗಜ ಗವಾಸ್ಕರ್‌ ಸಲಹೆ!

ಬೆಂಗಳೂರು: ಪ್ರಸಕ್ತ ಸಾಲಿನ ದಿ ಆಷಸ್‌ ಟೆಸ್ಟ್ ಕ್ರಿಕೆಟ್‌ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಬ್ಯಾಝ್‌ಬಾಲ್‌ ಕ್ರಿಕೆಟ್‌ ರಣನೀತಿ ಭಾರಿ ಚರ್ಚೆಯಾಗುತ್ತಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಏಕದಿನ ಕ್ರಿಕೆಟ್‌ ಮಾದರಿ ಆಕ್ರಮಣಕಾರಿ ಆಟವಾಡಿ ಪಂದ್ಯಗಳನ್ನು ಗೆಲ್ಲುವುದು ಕೋಚ್‌ ಬ್ರೆಂಡನ್‌ ಮೆಕಲಮ್‌ ಮತ್ತು ನಾಯಕ ಬೆನ್‌ ಸ್ಟೋಕ್ಸ್‌ ಅಳವಡಿಸಿಕೊಂಡಿರುವ ನೂತನ ರಣತಂತ್ರವಾಗಿದೆ.

ಆದರೆ, ಆಸ್ಟ್ರೇಲಿಯಾ ವಿರುದ್ಧದ 5 ಟೆಸ್ಟ್‌ಗಳ ಸರಣಿಯ ಮೊದಲ 2 ಪಂದ್ಯಗಳಲ್ಲಿ ಇಂಗ್ಲೆಂಡ್‌ ತಂಡದ ಈ ನೀತಿ ಕೈಕೊಟ್ಟು, ಬ್ಯಾಕ್‌ ಟು ಬ್ಯಾಕ್‌ ಸೋಲೆದುರಾಯಿತು. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಸುನೀಲ್‌ ಗವಾಸ್ಕರ್‌, ಬ್ಯಾಝ್‌ಬಾಲ್‌ ರಣತಂತ್ರವನ್ನು ಮರೆತುಬಿಡಿ ಎಂದು ಟೀಕೆ ಮಾಡಿದ್ದಾರೆ.

ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್‌ ಮೆಕಲಮ್‌ ಮುಖ್ಯ ಕೋಚ್‌ ಆಗಿ ಮತ್ತು ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್ ಕ್ಯಾಪ್ಟನ್ಸಿ ವಹಿಸಿಕೊಂಡ ಬಳಿಕ ಇಂಗ್ಲೆಂಡ್‌ ಆಡಿದ ಮೊದಲ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲೆಂಡ್‌ ಎದುರು 3-0 ಅಂತರದ ಭರ್ಜರಿ ಜಯ ದಾಖಲಿಸಿತ್ತು. ಭಾರತ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲೂ ಗೆದ್ದು ಬೀಗಿತ್ತು. ನಂತರ ದಕ್ಷಿಣ ಆಫ್ರಿಕಾ ನೆಲದಲ್ಲೂ ಜಯಭೇರಿ ಬಾರಿಸಿತು. ತಾಯ್ನಾಡಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ವೈಟ್‌ವಾಶ್‌ ಸಾಧನೆ ಮೆರೆದು, ಬ್ಯಾಝ್‌ಬಾಲ್‌ ಕ್ರಿಕೆಟ್‌ಗೆ ಭಾರಿ ಜನಪ್ರಿಯತೆ ತಂದರು.

ಆದರೆ, ಆಸ್ಟ್ರೇಲಿಯಾ ವಿರುದ್ಧದ ದಿ ಆಷಸ್‌ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಈ ರಣನೀತಿ ಕೈಕೊಟ್ಟಿತು. ಕ್ರಮವಾಗಿ 2 ವಿಕೆಟ್‌ ಮತ್ತು 43 ರನ್‌ಗಳ ಅಂತರದಲ್ಲಿ ಇಂಗ್ಲೆಂಡ್‌ ಸೋತು ಸುಣ್ಣವಾಯಿತು. ಈ ಕುರಿತಾಗಿ ಮಾತನಾಡಿದ ಗವಾಸ್ಕರ್, ಇಂಗ್ಲೆಂಡ್‌ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟಿ20 ಮಾದರಿಯ ಹೊಡೆತಗಳನ್ನು ಆಡುವುದನ್ನು ಬಿಡಬೇಕು ಎಂದಿದ್ದಾರೆ. ಈ ರಣತಂತ್ರ ಕಳಪೆ ಗುಣಮಟ್ಟದ ಬೌಲಿಂಗ್‌ ದಾಳಿ ಎದುರು ಮಾತ್ರವೇ ಕೆಲಸ ಮಾಡುತ್ತದೆ ಎಂದು ಟೀಕಿಸಿದ್ದಾರೆ.

“ಬ್ಯಾಝ್‌ಬಾಲ್‌ ಕ್ರಿಕೆಟ್‌ ಇದನ್ನು ಮರೆತುಬಿಡಿ. ಇದು ಯಶಸ್ಸು ಕಂಡಿರುವುದು ಕಳಪೆ ಗುಣಮಟ್ಟದ ಬೌಲಿಂಗ್‌ ಹೊಂದಿರುವ ತಂಡಗಳ ಎದುರು ಮಾತ್ರ. ಆದರೆ, ಆಸ್ಟ್ರೇಲಿಯಾದಂತಹ ಬಲಿಷ್ಠ ಬೌಲಿಂಗ್‌ ವಿಭಾಗ ಹೊಂದಿರುವ ತಂಡದ ಎದುರು ಈ ರಣತಂತ್ರ ಕೆಲಸ ಮಾಡುವುದಿಲ್ಲ. ಸಾಂಪ್ರದಾಯಿಕ ಟೆಸ್ಟ್‌ ಕ್ರಿಕೆಟ್‌ನ ಅಗತ್ಯವಿದೆ ಹೊರತು, ಇಲ್ಲಿ ಟಿ20 ಮಾದರಿ ಹೊಡೆತಗಳ ಅಗತ್ಯವಿಲ್ಲ. ಟೆಸ್ಟ್‌ ಕ್ರಿಕೆಟ್‌ ಮೊದಲಿಗೆ ಟೆಸ್ಟ್‌ ಎಂಬುದನ್ನು ಮರೆಯಬಾರದು,” ಎಂದು ಗವಾಸ್ಕರ್‌ ಜಾಡಿಸಿದ್ದಾರೆ.

ಇಂಗ್ಲೆಂಡ್‌ಗೆ ರೋಚಕ ಗೆಲುವು
ಸರಣಿಯ ಮೊದಲ ಎರಡೂ ಪಂದ್ಯಗಳನ್ನು ಸೋತಿದ್ದ ಇಂಗ್ಲೆಂಡ್‌ ತಂಡಕ್ಕೆ ಲೀಡ್ಸ್‌ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಗೆಲುವು ಅನಿವಾರ್ಯವಾಗಿತ್ತು. ಸರಣಿಯಲ್ಲಿ ಜೀವಂತವಾಗಿ ಉಳಿಯಲು 251 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ ತಂಡ 5 ವಿಕೆಟ್‌ ಕಳೆದುಕೊಂಡ ಸಂದರ್ಭದಲ್ಲಿ ಇನ್ನು 90 ರನ್‌ಗಳು ಗಳಿಸುವ ಅಗತ್ಯವಿತ್ತು. ಯುವ ಬ್ಯಾಟರ್‌ ಹ್ಯಾರಿ ಬ್ರೂಕ್‌ 93 ಎಸೆತಗಳಲ್ಲಿ 75 ರನ್‌ ಬಾರಿಸಿ ತಂಡವನ್ನು ಜಯದ ಹೊಸ್ತಿಲಿಗೆ ಕೊಂಡೊಯ್ದರು. ಕ್ರಿಸ್‌ ವೋಕ್ಸ್‌ ಅವರ ಅಜೇಯ 32 ರನ್‌ಗಳ ಬಲದಿಂದ ಇಂಗ್ಲೆಂಡ್‌ ಮೂರನೇ ಟೆಸ್ಟ್‌ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆದ್ದು ಹಿನ್ನಡೆಯನ್ನು 1-2 ಅಂತರಕ್ಕೆ ತಗ್ಗಿಸಿತು.

ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ನೆಲದಲ್ಲಿ ಕೊನೇ ಬಾರಿ ಆಷಸ್‌ ಟೆಸ್ಟ್ ಸರಣಿ ಗೆದ್ದಿರುವುದು 2001ರಲ್ಲಿ. ಹೀಗಾಗಿ ಈ ಬಾರಿ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಬಾಕಿ ಉಳಿದ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಜಯ ದಾಖಲಿಸಬೇಕಿದೆ. ಅಥವಾ ಎರಡೂ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಬೇಕಿದೆ. 2019ರಲ್ಲಿ ಇಂಗ್ಲೆಂಡ್‌ ನೆಲದಲ್ಲಿ ಆಷಸ್‌ ಸರಣಿ ನಡೆದಾಗ 2-2ರ ಸಮಬಲದ ಫಲಿತಾಂಶ ಹೊರಬಂದಿತ್ತು. ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಸರಣಿಯಲ್ಲಿ ಕಂಗರೂ ಪಡೆ 4-0 ಅಂತರದಲ್ಲಿ ಇಂಗ್ಲೆಂಡ್‌ ತಂಡವನ್ನು ಬಗ್ಗುಬಡಿದಿತ್ತು.

andolanait

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

4 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

4 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

4 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

4 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

4 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

5 hours ago