ಬೆಂಗಳೂರು: ತವರಿನ ಅಂಗಣದಲ್ಲಿ ನಡೆಯಲಿರುವ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದು ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಆದರೆ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳ್ಳದಿದ್ದರೆ ರೋಹಿತ್ ಶರ್ಮಾ ಪಡೆ ಚಾಂಪಿಯನ್ ಪಟ್ಟ ಅಲಂಕರಿಸುವುದು ಅನುಮಾನ ಎಂದು ಸಿಕ್ಸರ್ ಗಳ ಸರದಾರ ಯುವರಾಜ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ತನ್ನ ಅಭಿಯಾನ ಆರಂಭಿಸಿದರೆ, ಅಕ್ಟೋಬರ್ 15 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಪೈಪೋಟಿ ನಡೆಸಲಿದೆ. 2011ರಲ್ಲಿ ಎಂಎಸ್ ಧೋನಿ ನಾಯಕತ್ವದ ಭಾರತ ತಂಡಕ್ಕೆ ಟ್ರೋಫಿ ಗೆದ್ದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಆಲ್‌ರೌಂಡರ್ ಯುವರಾಜ್ ಸಿಂಗ್, ಯುಟ್ಯೂಬ್ ವಾಹಿನಿಯ ‘ಕ್ರಿಕೆಟ್ ಬಾಸು’ ಚಾನಲ್‌ನಲ್ಲಿ ಮಾತನಾಡಿ ಭಾರತದ ಟ್ರೋಫಿ ಗೆಲುವಿನ ಸಾಧ್ಯತೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಟ್ರೋಫಿ ಗೆಲ್ಲುವ ಬಗ್ಗೆ ಖಾತ್ರಿಯಿಲ್ಲ
ತವರಿನ ಅಂಗಣದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಮುಕುಟ ಅಲಂಕರಿಸುವ ಕುರಿತು ಪ್ರಸ್ತಾಪಿಸಿರುವ ಯುವಿ, “ಒಬ್ಬ ಅಪ್ಪಟ ದೇಶಪ್ರೇಮಿಯಾಗಿ ನಾನು ಕೂಡ ಟೀಮ್ ಇಂಡಿಯಾ ಚಾಂಪಿಯನ್ಸ್ ಪಟ್ಟ ಅಲಂಕರಿಸುವುದನ್ನು ನೋಡಲು ಬಯಸುತ್ತೇನೆ. ಆದರೆ ಭಾರತ ತಂಡ ಟ್ರೋಫಿ ಗೆದ್ದೇ ಗೆಲ್ಲುತ್ತದೆ ಎಂದು ನಾನು ನಿಸ್ಸಂದೇಹವಾಗಿ ಹೇಳಲಾರೆ, ರೋಹಿತ್ ಶರ್ಮಾ ಪಡೆ ಪಂದ್ಯಗಳನ್ನು ಗೆಲ್ಲುತ್ತದೆ ಎಂದು ಹೇಳಬಲ್ಲೆ. ಅಂದಹಾಗೆ ಭಾರತ ತಂಡವು ಗಾಯಾಳುಗಳ ಸಮಸ್ಯೆ ಎದುರಿಸುತ್ತಿದ್ದು ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಸಮಸ್ಯೆಗಳು ಗೋಚರಿಸುತ್ತಿದೆ. ಇದರಿಂದ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲೋದು ಅನುಮಾನ,” ಎಂದು ಯುವಿ ಹೇಳಿದ್ದಾರೆ.
ರೋಹಿತ್ ಶರ್ಮಾರಂತಹ ಪ್ರಬುದ್ಧ ನಾಯಕನನ್ನು ಟೀಮ್ ಇಂಡಿಯಾ ಹೊಂದಿದೆ. ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಅವರಿಗೆ ಉತ್ತಮ ಆರಂಭಿಕ ಜೊತೆಗಾರನ ಅಗತ್ಯವಿದೆ. ಆ ಆಟಗಾರನೊಂದಿಗೆ ರೋಹಿತ್ ಸಾಕಷ್ಟು ಪಂದ್ಯಗಳನ್ನು ಆಡುವ ಅವಶ್ಯಕತೆ ಇದೆ. ವಿಶ್ವಕಪ್‌ಗಾಗಿ 20 ಆಟಗಾರರ ತಂಡ ರೂಪಿಸಿ ಎಂದು ಸಲಹೆ ನೀಡಿದ ಯುವರಾಜ್ ಸಿಂಗ್, ಆ ಬಳಿಕ ಕೆಲ ಪೂರ್ವಸಿದ್ಧತಾ ಪಂದ್ಯಗಳನ್ನು ಆಯೋಜಿಸಿ ಬಲಿಷ್ಠ 15 ಸದಸ್ಯರ ತಂಡವನ್ನು ಘೋಷಿಸಬೇಕೆಂದಿದ್ದಾರೆ.
ಮಧ್ಯಮ ಕ್ರಮಾಂಕ ಬಲಗೊಳ್ಳಬೇಕು
“ಟೀಮ್ ಇಂಡಿಯಾದ ಟಾಪ್ ಆರ್ಡರ್ ಸಾಕಷ್ಟು ಬಲಿಷ್ಠವಾಗಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ನೂನ್ಯತೆಗಳು ಎದ್ದು ಕಾಣುತ್ತಿದೆ. ಟ್ರೋಫಿ ಗೆಲ್ಲಬೇಕಾದರೆ 4 ಮತ್ತು 5 ಕ್ರಮಾಂಕದ ಬ್ಯಾಟರ್‌ಗಳು ನಿರ್ಣಾಯಕ ಪಾತ್ರ ವಹಿಸಬೇಕು. ಉದಾಹರಣೆಗೆ ರಿಷಭ್ ಪಂತ್ ಅವರು ಐಪಿಎಲ್ ಟೂರ್ನಿಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ, ಟೀಮ್ ಇಂಡಿಯಾದಲ್ಲೂ ಅವರನ್ನು ಅದೇ ಕ್ರಮಾಂಕದಲ್ಲಿ ಆಡಿಸಬೇಕು. 4ನೇ ಕ್ರಮಾಂಕದ ಬ್ಯಾಟರ್ ರನ್ ಗಳಿಸುವುದನ್ನು ಮಾತ್ರ ಗುರಿಯಾಗಿಸಿಕೊಳ್ಳಬಾರದು. ಬದಲಿಗೆ ಒತ್ತಡ ನಿಭಾಯಿಸಿ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು,” ಎಂದು ಯುವಿ ಸಲಹೆ ನೀಡಿದ್ದಾರೆ.
ರಿಂಕು ಸಿಂಗ್‌ಗೆ ಅವಕಾಶ ನೀಡಿ
ಮಧ್ಯಮ ಕ್ರಮಾಂಕದಲ್ಲಿ ತಮ್ಮ ಬ್ಯಾಟಿಂಗ್ ವೈಭವದಿಂದಲೇ ಭಾರತಕ್ಕೆ ಟಿ20, ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಡಲು ಸಹಕರಿಸಿರುವ ಯುವರಾಜ್ ಸಿಂಗ್, ವಿಶ್ವಕಪ್ ಟೂರ್ನಿಯ ನಾಕೌಟ್ ಹಂತಗಳಲ್ಲಿ 4ನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾವನ್ನು ಬಲಿಷ್ಠಗೊಳಿಸಲು ಕನ್ನಡಿಗ ಕೆಎಲ್ ರಾಹುಲ್ ಹಾಗೂ ಯುವ ಆಟಗಾರ ರಿಂಕು ಸಿಂಗ್ ರಂತಹ ಸಮರ್ಥರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
“ರಿಂಕು ಸಿಂಗ್ ಅವರು ಅತ್ಯಮೋಘ ಬ್ಯಾಟಿಂಗ್ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿದ್ದಾರೆ. ಉತ್ತಮ ಜೊತೆಯಾಟ ನೀಡುವ ಜೊತೆಗೆ ಒತ್ತಡ ಸಂದರ್ಭ ನಿಭಾಯಿಸಿ ತಂಡಕ್ಕೆ ಗೆಲುವು ತಂದುಕೊಡುವ ಜಾಣ್ಮೆ ಹೊಂದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೀವು ರಿಂಕು ಸಿಂಗ್ ರನ್ನು ಆಡಿಸಲು ಯೋಚಿಸಿದರೆ ಅವನಿಗೆ ಸಾಕಷ್ಟು ಪಂದ್ಯ ಆಡುವ ಅವಕಾಶ ನೀಡಬೇಕು,” ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಚಾಮರಾಜನಗರ : ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇನ್ನೂ ಒಂದು ಚಿರತೆ ಸೆರೆಯಾಗಿದೆ. ಗ್ರಾಮದ ಮಲ್ಲಣ್ಣ…
ಬೆಂಗಳೂರು : 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಅಭಿಯಾನ ಯಶಸ್ವಿಯಾಗಿ ನಡೆಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು…
ಸಿದ್ದಾಪುರ : ಎರಡು ಬೈಕ್‌ಗಳು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ…
ಹೊಸದಿಲ್ಲಿ : ಎಲ್‌ಪಿಜಿ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು…
ಟೆಹ್ರಾನ್ : ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ಸೇನೆ ನಡೆಸಿದ ನಿಖರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಉಪಗ್ರಹ…
ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…