ಸೀಸನಲ್‌ ಫ್ಲೂ; ಸಾಮಾನ್ಯ ಕೆಮ್ಮು-ಜ್ವರ- ನೆಗಡಿಗೂ ಆತಂಕ; ಬೆಂಗಳೂರಿನ ಒಪಿಡಿಗಳಲ್ಲಿ ಜನವೋ ಜನ!

ಬೆಂಗಳೂರು: ಪ್ರತಿ ವರ್ಷವೂ ಡಿಸೆಂಬರ್‌ನಿಂದ ಫೆಬ್ರವರಿ ಮಾಹೆಯ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸೀಸನಲ್ ಫ್ಲೂ ನಿಂದಾಗಿ ಕೆಸಿ ಜನರಲ್ ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಂತಹ ಆಸ್ಪತ್ರೆಗಳ ಒಪಿಡಿಗಳಲ್ಲಿ ಜನರು ತಪಾಸಣೆಗಾಗಿ ಮುಗಿಬೀಳುತ್ತಿದ್ದಾರೆ.

ಡಿಸೆಂಬರ್‌ನಿಂದ ಫೆಬ್ರವರಿ ವೇಳೆ ಜನರಲ್ಲಿ ಕೆಮ್ಮು, ಜ್ವರ, ನೆಗಡಿ ಲಕ್ಷಣಗಳು ಕಂಡು ಬರುವುದು ಸಾಮಾನ್ಯವಾಗಿದೆ. ಆದರೆ, ಕೊರೊನಾ ಸೋಂಕಿಗೂ ಇದೇ ಲಕ್ಷಣಗಳು ಕಂಡು ಬರುವ ಹಿನ್ನೆಲೆಯಲ್ಲಿ ಸೀಸನಲ್ ಫ್ಲೂಗೆ ಜನರು ಆತಂಕಗೊಂಡು ವೈದ್ಯರನ್ನು ಸಂಪರ್ಕಿಸಲು, ಚಿಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆಗಳ ಒಪಿಡಿಗಳಿಗೆ ಧಾವಿಸುತ್ತಿದ್ದಾರೆ.

ಇದರಿಂದ ಕೆಲವು ಆಸ್ಪತ್ರೆಗಳಲ್ಲಿ ಜನಸಂದಣಿಯನ್ನು ನಿರ್ವಹಣೆ ಮಾಡುವುದು ಕಷ್ಟಕರವಾಗಿ ಹೋಗಿದೆ.
ಬೆಂಗಳೂರಿನಲ್ಲಿ ಬಹುತೇಕ ಪ್ರತೀ ಮನೆಯಲ್ಲೂ ಒಬ್ಬರು ಅಥವಾ ಹೆಚ್ಚು ಜನರು ನೆಗಡಿ, ಕೆಮ್ಮು, ಜ್ವರ ಮತ್ತು ನೆಗಡಿಯ ಲಕ್ಷಣಗಳನ್ನು ಹೊಂದಿರುತ್ತಾರೆ. ಆಸ್ಪತ್ರೆಗಳಲ್ಲಿ ಜನರು ದೊಡ್ಡ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಮುಖ್ಯವಾಗಿ ಯುವಕರು, ಕೆಮ್ಮು, ನೆಗೆಡಿ ಜೊತೆಗೆ ತೀವ್ರ ಜ್ವರದ ದೂರುಗಳೊಂದಿಗೆ ವೈದ್ಯರ ಕಾಣಲು ಬರುತ್ತಿದ್ದಾರೆ. ಕೆಲವರಲ್ಲಿ ಕೊರೊನಾ ಸೋಂಕು ತಗುಲಿರುವುದು ಕಂಡು ಬಂದಿದ್ದರೆ, ಮತ್ತೆ ಕೆಲವರಲ್ಲಿ ವೈರಲ್ ಜ್ವರಗಳು ಕಂಡು ಬಂದಿದೆ. ವೈರಲ್ ಫೀವರ್’ಗೆ ಜನರು ಭಯಭೀತರಾಗುತ್ತಿದ್ದಾರೆಂದು ಕೆಸಿ ಜನರಲ್‌ನ ವೈದ್ಯರು ಹೇಳಿದ್ದಾರೆ.