ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್ ಬಾಂಬ್ ಪರೀಕ್ಷೆ ಯಶಸ್ವಿ

ಹೊಸದಿಲ್ಲಿ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿರುವ, ವಿಮಾನದಲ್ಲಿ ಬಳಸಬಹುದಾದ ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್ ಬಾಂಬ್‌ನನ್ನು ರಾಜಸ್ಥಾನದ ಜೈಸಲ್ಮೆನರಲ್ಲಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಭಾರತೀಯ ರಕ್ಷಣಾ ಇಲಾಖೆ ಬತ್ತಳಿಕೆಗೆ ಹೊಸ ಅಸ್ತ್ರವೊಂದು ಸೇರ್ಪಡೆಯಾದಂತಾಗಿದೆ.

ವಿಮಾನದ ಮೂಲಕ ಉಡಾಯಿಸಬಹುದಾದ ಈ ಬಾಂಬ್ ಅನ್ನು ಡಿಆರ್‌ಡಿಒ ಮತ್ತು ಭಾರತೀಯ ವಾಯುಪಡೆಯು ಜಂಟಿಯಾಗಿ ಪರೀಕ್ಷೆಗೆ ಒಳಪಡಿಸಿವೆ.

ಅಕ್ಟೋಬರ್ 28ರಂದು ಮತ್ತು ನವೆಂಬರ್ ೩ರಂದು ಎರಡು ಬಾರಿ ಬಾಂಬ್ ಅನ್ನು ಪರೀಕ್ಷಿಸಲಾಗಿದೆ. ಮೊದಲು ಉಪಗ್ರಹ ಆಧರಿತ ಪಥದರ್ಶಕದ ನೆರವಿನಿಂದ ಪರೀಕ್ಷೆ ನಡೆಸಲಾಗಿತ್ತು. ಎರಡನೇ ಬಾರಿ ಎಲೆಕ್ಟ್ರೋ-ಆಪ್ಟಿಕಲ್ ಸಂವೇಧಕಗಳ ಪ್ರಯೋಗ ಕೈಗೊಳ್ಳಲಾಯಿತು. ಎರಡೂ ಪರೀಕ್ಷೆಗಳಲ್ಲಿ ಬಾಂಬ್ ತನ್ನ ಗುರಿಯನ್ನು ಕರಾರುವಾಕ್ಕಾಗಿ ಧ್ವಂಸ ಮಾಡಿತು ಎಂದು ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ.

ಎಲೆಕ್ಟ್ರೋ-ಆಪ್ಟಿಕಲ್ ಸಂವೇದಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಬಾಂಬ್ 100 ಕಿ.ಮೀ.ವರೆಗಿನ ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

× Chat with us