ಹಿಂದಿನೆಲ್ಲ ದಾಖಲೆಗಳನ್ನು ಮುರಿಯಲಿದೆಯೇ ಕೆಜಿಎಫ್ ಚಾಪ್ಟರ್ 2?

ವೈಡ್ ಆಂಗಲ್‌- ಬಾ.ನಾ.ಸುಬ್ರಮಣ್ಯ

ಮೊದಲ ದಿನದ ಗಳಿಕೆ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯಲಿದೆ ಎನ್ನುವುದು ಲೆಕ್ಕಾಚಾರ. ಅದನ್ನು ಅಲ್ಲಗಳೆಯುವಂತಿಲ್ಲ. ಕರ್ನಾಟಕದಲ್ಲಂತೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಕಾರಣ ಅದರ ಪ್ರವೇಶದರ. ಬೆಂಗಳೂರಿನ ಒಂದು ಮಲ್ಟಿಪ್ಲೆಕ್ಸ್ ನಲ್ಲಿ ಈ ಚಿತ್ರದ ಇಪ್ಪತ್ತೆರಡು ಪ್ರದರ್ಶನಗಳಿವೆ. ಪ್ರವೇಶದರ ಕನಿಷ್ಟ ೫೦೦ ರೂ.ಗಳಿಂದ ಗರಿಷ್ಠ ೧೪೦೦ ರೂ. ಬಹುತೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ಇದೇ ಪ್ರವೇಶದರ. ಏಕಪರದೆಯ ಚಿತ್ರಮಂದಿರಗಳೂ ಇದಕ್ಕೆ ಹೊರತಾಗಿಲ್ಲ. ಮಾಮೂಲಿಗಿಂತ ಮೂರು, ನಾಲ್ಕುಪಟ್ಟು ಹೆಚ್ಚು ನಿಗದಿ ಪಡಿಸಲಾಗಿದೆ.

ಕೆಜಿಎಫ್ ಚಾಪ್ಟರ್ ೨ ನಿನ್ನೆ ಬಿಡುಗಡೆಯಾಗಿದೆ. ಹಲವು ಮೊದಲುಗಳನ್ನು ಇದು ದಾಖಲಿಸಿದೆ. ಚಿತ್ರತಂಡದ ಪ್ರಕಾರ, ವಿಶ್ವಾದ್ಯಂತ ಎಪ್ಪತ್ತೈದಕ್ಕೂ  ಹೆಚ್ಚು ದೇಶಗಳಲ್ಲಿ ತೆರೆಕಂಡಿರುವ ಈ ಚಿತ್ರ, ಹತ್ತು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಭಾರತೀಯ ಚಿತ್ರವೊಂದು ಇದೇ ಮೊದಲ ಬಾರಿಗೆ ಇಷ್ಟೊಂದು ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದ್ದು, ಅದು ಕನ್ನಡ ಚಿತ್ರ ಎನ್ನುವುದು ಹೆಗ್ಗಳಿಕೆ.

ತೆಲುಗಿನ ‘ಬಾಹುಬಲಿ’ ಮತ್ತು ಇತ್ತೀಚೆಗೆ ತೆರೆಕಂಡ ‘ಆರ್‌ಆರ್‌ಆರ್’, ಕನ್ನಡದ ಮೊದಲ ‘ಕೆಜಿಎಫ್’ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳು ಭಾರತೀಯ ಮುಖ್ಯವಾಹಿನಿ ಚಿತ್ರಗಳ ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಒಂದಕ್ಕಿಂತ ಒಂದು ಎನ್ನುವಂತೆ ದಾಖಲೆ ಬರೆದಿದ್ದವು. ಇತ್ತೀಚೆಗೆ ತೆರೆಕಂಡ ತೆಲುಗಿನ ‘ಪುಷ್ಪ’ ಕೂಡಾ ಈ ಸಾಲಿಗೆ ಸೇರಿದೆ. ಅವೆಲ್ಲಕ್ಕೂ ಕಿರೀಟವಿಟ್ಟಂತೆ ಇದೀಗ ‘ಕೆಜಿಎಫ್ ಚಾಪ್ಟರ್ ೨’ ಯಾನದ ಆರಂಭ.

ನಿರ್ಮಾಪಕರು ಈ ಚಿತ್ರದ ನಿರ್ಮಾಣ ವೆಚ್ಚದ ಬಗ್ಗೆ ಹೇಳಿಲ್ಲ. ಅಂದಾಜು ನೂರು ಕೋಟಿ ಎನ್ನುವುದು, ಸಿನಿಮಾ ಲೆಕ್ಕಾಚಾರ ಪಂಡಿತರ ಲೆಕ್ಕ. ಇನ್ನೂರು, ಮುನ್ನೂರು ಕೋಟಿ ಎಂದು ಈ ಲೆಕ್ಕ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೋಂಡರೂ ಆಶ್ಚರ್ಯವಿಲ್ಲ. ಚಿತ್ರದ ಕುರಿತಂತೆ ನಿರೀಕ್ಷೆ, ಕುತೂಹಲ ಮೂಡುವಂತೆ ವ್ಯವಸ್ಥಿತವಾಗಿ ವಿವಿಧ ಮಾಧ್ಯಮಗಳಲ್ಲಿ ಮಾಡಿದ ಲೆಕ್ಕಾಚಾರದ ಪ್ರಚಾರ, ಬೆಂಗಳೂರು, ಮುಂಬೈ, ದೆಹಲಿ, ಕೊಲ್ಕೊತ್ತಾ, ಚೆನ್ನೈ, ಕೊಚ್ಚಿ ಮುಂತಾದ ನಗರಗಳಲ್ಲಿ ಚಿತ್ರದ ಮಾಧ್ಯಮಗೋಷ್ಠಿಗಳು ಚಿತ್ರದ ಕುರಿತ ನಿರೀಕ್ಷೆಗೆ ಪೂರಕವಾದ ಬೆಳವಣಿಗೆಗಳು.

ಮುಂಬೈ ನಗರವೊಂದರಲ್ಲೇ ದಿನಂಪ್ರತಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳು, ಕನ್ನಡ ಚಿತ್ರೋದ್ಯಮ ಕನಸಿರಲೂ ಸಾಧ್ಯವಿಲ್ಲ. ಅಲ್ಲಿ ಚಿತ್ರದ ಮುಖ್ಯಪಾತ್ರಧಾರಿ ಯಶ್ ಅವರ ನೂರಡಿ ಕಟೌಟ್! ಹ್ಞಾಂ, ಕೆಜಿಎಫ್‌ನ ಎರಡನೇ ಅಧ್ಯಾಯದ ಹಿಂದಿ ಡಬ್ ಅವತರಣಿಕೆ, ಉತ್ತರ ಭಾರತದ ಬೃಹನ್ನಗರಗಳಲ್ಲಿ ದಿನವಹಿ ಐನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡರೆ, ತಮಿಳುನಾಡಲ್ಲಿ ತಮಿಳು, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ತೆಲುಗು, ಕೇರಳದಲ್ಲಿ ಮಲಯಾಳ ಡಬ್ ಅವತರಣಿಕೆಗಳು ಪ್ರದರ್ಶನವಾಗುತ್ತಿವೆ.

ಮೊದಲ ದಿನದ ಗಳಿಕೆ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯಲಿದೆ ಎನ್ನುವುದು ಲೆಕ್ಕಾಚಾರ. ಅದನ್ನು ಅಲ್ಲಗಳೆಯುವಂತಿಲ್ಲ. ಕರ್ನಾಟಕದಲ್ಲಂತೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಕಾರಣ ಅದರ ಪ್ರವೇಶದರ. ಬೆಂಗಳೂರಿನ ಒಂದು ಮಲ್ಟಿಪ್ಲೆಕ್ಸ್‌ನಲ್ಲಿ ಈ ಚಿತ್ರದ ಇಪ್ಪತ್ತೆರಡು ಪ್ರದರ್ಶನಗಳಿವೆ. ಪ್ರವೇಶದರ ಕನಿಷ್ಟ ೫೦೦ ರೂ.ಗಳಿಂದ ಗರಿಷ್ಠ ೧೪೦೦ ರೂ. ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಇದೇ ಪ್ರವೇಶದರ. ಏಕಪರದೆಯ ಚಿತ್ರಮಂದಿರಗಳೂ ಇದಕ್ಕೆ ಹೊರತಾಗಿಲ್ಲ. ಮಾಮೂಲಿಗಿಂತ ಮೂರು, ನಾಲ್ಕುಪಟ್ಟು ಹೆಚ್ಚು ನಿಗದಿ ಪಡಿಸಲಾಗಿದೆ.

ಪ್ರವೇಶದರ ಮತ್ತು ದಿನವಹಿ ಚಿತ್ರಗಳ ಪ್ರದರ್ಶನಕ್ಕೆ ಸಂಬಂಧಿಸಿ, ನೆರೆಯ ರಾಜ್ಯಗಳಂತೆ ಇಲ್ಲಿ ನಿಯಂತ್ರಣದ ವ್ಯವಸ್ಥೆ ಇದ್ದಂತಿಲ್ಲ. ನಡುರಾತ್ರಿಯಿಂದ ಪ್ರದರ್ಶನ ಆರಂಭಿಸಿದ ಉದಾಹರಣೆಯೂ ಇದೆ. ಸಾಮಾನ್ಯವಾಗಿ ಮೊದಲ ದಿನವೇ ಗರಿಷ್ಠ ಗಳಿಕೆಯ ಯೋಚನೆ ನಿರ್ಮಾಪಕರಿಗಿರುತ್ತದೆ. ಅದರಲ್ಲೂ ದುಬಾರಿ ವೆಚ್ಚದಲ್ಲಿ ತಯಾರಾದ ಚಿತ್ರಗಳ ನಿರ್ಮಾಪಕರಿಗೆ. ಆನ್‌ಲೈನ್‌ನಲ್ಲಿ  ಮುಂಗಡ ಟಿಕೆಟ್ ಕೊಂಡುಕೊಳ್ಳುವವರಿಗೆ ಮೊದಲ ದಿನ, ಮುಂದಿನ ದಿನಗಳಲ್ಲಿ ಇರುವ ಬೇಡಿಕೆ ಗಮನಿಸುವುದು ಸುಲಭ. ಬುಕ್‌ಮೈಶೋ  ಜಾಲತಾಣದಲ್ಲಿ ಯಾವುದೇ ನಗರದಲ್ಲಿ ಪ್ರದರ್ಶನ ಕಾಣುವ ಯಾವುದೇ ಚಿತ್ರದ ಬೇಡಿಕೆಯ ಬಗ್ಗೆ ತಿಳಿಯಬಹುದು.

ತಮಿಳುನಾಡಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರವೇಶ ದರ ಇನ್ನೂರು ರೂ.ಗಳಿಗಿಂತ ಹೆಚ್ಚಿಲ್ಲ. ಅದು ಸರ್ಕಾರದ ಆದೇಶ. ಬಹುತೇಕ ಗರಿಷ್ಠ ರೂ.೧೯೮.೭೮, ಕನಿಷ್ಠ ರೂ. ೬೦.೧೨, ಇದೆ. ಅಲ್ಲಿ ಈ ಚಿತ್ರ ಭಾನುವಾರದ ವರೆಗೆ ಮುಂಗಡ ಬುಕ್ಕಿಂಗ್ ಆಗಿದೆ. ತೆಲಂಗಾಣದಲ್ಲಿ ಪ್ರವೇಶದರ ಮಲ್ಟಿಪ್ಲೆಕ್ಸ್‌ಗಳಲ್ಲಿ ೫೦ ರೂ. ಮತ್ತು ಒಂಟಿ ಚಿತ್ರಮಂದಿರಗಳಲ್ಲಿ ೩೦ ರೂ. ಹೆಚ್ಚಿಸಲು ಹಾಗೂ ಐದು ಪ್ರದರ್ಶನಗಳಿಗೆ ಸರ್ಕಾರ ಅನುಮತಿ ನೀಡಿದ್ದಾಗಿ ವರದಿಯಾಗಿದೆ.

ದೇಶದ ರಾಜಧಾನಿ ದೆಹಲಿಯ ಕೆಲವು ಚಿತ್ರಮಂದಿರಗಳಲ್ಲಿ ೭೫ ರೂ.ಕೊಟ್ಟು ಈ ಚಿತ್ರವನ್ನು ನೋಡಬಹುದು. ೪೦-೫೦ ವಿಶೇಷಾಸನಗಳ ಪರದೆಗಳಲ್ಲಿ ೧೫೬೯ ರೂ. ಹೊರತು ಪಡಿಸಿದರೆ, ಅಲ್ಲಿ ಮಲ್ಟಿಪ್ಲೆಕ್ಸ್‌ಗಳ  ಪ್ರವೇಶದರ ೮೦೦ ರೂ. ಮೀರಿಲ್ಲ. ಕೇರಳದಲ್ಲಿ ೨೦೦-೧೦೦ ರೂ. ಪ್ರವೇಶದರವಿದೆ.

ಅತಿ ಹೆಚ್ಚು ಪ್ರವೇಶದರ ಕರ್ನಾಟಕದಲ್ಲೇ, ಸಿನಿಮಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಜನಸಾಮಾನ್ಯರಿಗೆ ಮನರಂಜನೆ ನೀಡುವ ಮಾಧ್ಯಮ ಎನ್ನುವ ಮಾತು, ಇಂತಹ, ಕನ್ನಡಿಗರು ಹೆಮ್ಮೆ ಪಡುವ ಕನ್ನಡ ಚಿತ್ರಕ್ಕೆ ಅನ್ವಯಿಸುವುದಿಲ್ಲ ಎನ್ನುವುದು ದುರದೃಷ್ಟಕರ ಎನ್ನುವುದು ಇದಕ್ಕೆ ಗಾಂಧಿನಗರದ ಹಿರಿಯರ ಪ್ರತಿಕ್ರಿಯೆ. ಗರಿಷ್ಠ ಪ್ರವೇಶದರ ರೂ.೨೦೦ ಮೀರುವಂತಿಲ್ಲ ಎಂದು ನೆರೆಯ ತಮಿಳುನಾಡಿನಂತೆ, ಕರ್ನಾಟಕ ಸರ್ಕಾರವೂ ಆದೇಶ ಮಾಡಿತ್ತು. ಆದರೆ ಪ್ರದರ್ಶಕರು ಅದರ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿ ಅದಕ್ಕೆ ತಡೆಯಾಜ್ಞೆ ತಂದರು! ಜನಸಾಮಾನ್ಯರು ಚಿತ್ರಮಂದಿರಗಳಿಂದ ದೂರವುಳಿಯಲು ದುಬಾರಿ ಪ್ರವೇಶದರ ಕಾರಣ ಎನ್ನುವ ಮಾತಿನಲ್ಲಿ ಸತ್ಯವಿಲ್ಲದಿಲ್ಲ.

ಇದೊಂದೇ ವಿಷಯದಲ್ಲಿ ಅಲ್ಲ, ಭಾಷೆಯ ವಿಷಯದಲ್ಲೂ ಅಷ್ಟೇ. ತಮಿಳುನಾಡಿನಲ್ಲಿ ತಮಿಳು ಮಾಧ್ಯಮ, ಚಿತ್ರದ ಶೀರ್ಷಿಕೆ ತಮಿಳಲ್ಲಿದ್ದರೆ, ಚಿತ್ರದ ಕಥೆ ತಮಿಳು ಸಂಸ್ಕೃತಿಯನ್ನು ಬಿಂಬಿಸುವಂತಿದ್ದರೆ ಮಾತ್ರ ಸರ್ಕಾರದ ಉತ್ತೇಜನ ಮುಂತಾದ ಮಾದರಿಯ ಪ್ರಯತ್ನಗಳನ್ನು ಚಿಗುರಲ್ಲೇ ಚಿವುಟುವ, ಇಲ್ಲವೇ ನ್ಯಾಯಾಲಯದ ಮುಂದೆ ಹೋಗುವ ಪ್ರಸಂಗಗಳೇ ಹೆಚ್ಚು.

‘ಕನ್ನಡದ ಹೆಮ್ಮೆಯ, ಚಿತ್ರೋದ್ಯಮದಲ್ಲಿ ಹೊಸ ಇತಿಹಾಸ ಬರೆದ ‘ಕೆಜಿಎಫ್ ಚಾಪ್ಟರ್ ೨’ ಬೆಂಗಳೂರು ನಗರದಲ್ಲಿ ಕನ್ನಡದಲ್ಲಿ ಮಾತ್ರ ತೆರೆಕಂಡಿಲ್ಲ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳ ಡಬ್ ಆವೃತ್ತಿ ಕೂಡಾ ತೆರೆಕಂಡಿವೆ. ಇತರ ಪ್ರದೇಶಗಳ ಮಾತು ಬಿಡಿ, ಬೆಂಗಳೂರಿನಲ್ಲಿ ‘ಜೇಮ್ಸ್’ ಚಿತ್ರದಂತೆ ಕನ್ನಡದ ಆವೃತ್ತಿ ಮಾತ್ರ ಬಿಡುಗಡೆ ಮಾಡಬೇಕಿತ್ತು. ಪ್ಯಾನ್ ಇಂಡಿಯಾ ಹೆಸರಲ್ಲಿ ನಾವು ವ್ಯವಹಾರ ಮಾತ್ರ ಯೋಚನೆ ಮಾಡಿದರೆ ಸಾಕೇ?’ ಎನ್ನುವ ಹಿರಿಯ ವಿತರಕರೊಬ್ಬರ ಮಾತು ಕೂಡಾ ಗಮನಿಸಬೇಕಾದ್ದೇ ಅಲ್ಲವೇ?‌