ನಾಳೆ ರೈತರ ಮಹಾಪಂಚಾಯತ್; ಲಖನೌ ಚಲೋಗೆ ಕರೆ ನೀಡಿದ ಟಿಕಾಯತ್

ಲಖನೌ: ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಲಖನೌ ಇಕೋಗಾರ್ಡನ್‌ನಲ್ಲಿ ಎಂಎಸ್​​ಪಿ ಅಧಿಕಾರ್ ಮಹಾಪಂಚಾಯತ್ ಆಯೋಜಿಸಲಿದೆ. ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಮತ್ತು ಎಸ್‌ಕೆಎಂ ಸದಸ್ಯ ರಾಕೇಶ್ ಟಿಕಾಯತ್ ಅವರು ನವೆಂಬರ್ 22 ರಂದು ಲಖನೌ ಚಲೋ ಕರೆ ನೀಡಿದ್ದು ರೈತರು, ಕಾರ್ಮಿಕರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಹಾಪಂಚಾಯತ್‌ಗೆ ಸೇರಲು ಆಹ್ವಾನಿಸಿದ್ದಾರೆ. ಭಾನುವಾರ ಟ್ವೀಟ್ ಮಾಡಿದ ಟಿಕಾಯತ್ ಸರ್ಕಾರದಿಂದ ಬರುತ್ತಿರುವ ಕೃಷಿ ಕ್ಷೇತ್ರದ ಸುಧಾರಣೆಗಳು ಹುಸಿಯಾಗಿದೆ. ಈ ಸುಧಾರಣೆಗಳು ರೈತರಿಗೆ ಸಂಕಷ್ಟ ತಂದೊಡ್ಡಲಿವೆ ಎಂದರು. ಎಂಎಸ್ ಪಿ ನಲ್ಲಿ ಬೆಳೆಗಳನ್ನು ಸಂಗ್ರಹಿಸುವ ಭರವಸೆಯು ಕೃಷಿ ಮತ್ತು ರೈತರಿಗೆ ಅತಿದೊಡ್ಡ ಸುಧಾರಣೆಯಾಗಿದೆ ಎಂದು ಅವರು ಹೇಳಿದರು. ಪಶ್ಚಿಮ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ರೈತರು ಮತ್ತು ಚಳುವಳಿ ಬೆಂಬಲಿಗರು ಸೋಮವಾರ ಮಹಾಪಂಚಾಯತ್‌ನಲ್ಲಿ ಸೇರುವ ನಿರೀಕ್ಷೆಯಿದೆ.

ಬಿಕೆಯು ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಿಂಗ್ ಮಾತನಾಡಿ, 3 ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂತೆಗೆದುಕೊಂಡ ನಂತರ ರೈತರ ವಿಶ್ವಾಸವು ಹೆಚ್ಚುತ್ತಿದೆ. ಆದ್ದರಿಂದ ಅವರು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಹಾಪಂಚಾಯತ್‌ಗೆ ಹಾಜರಾಗುವ ನಿರೀಕ್ಷೆಯಿದೆ ಎಂದಿದ್ದಾರೆ.

ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ಅವರು ಶನಿವಾರ ಮುಜಾಫರ್‌ನಗರದಲ್ಲಿ ನಡೆದ ‘ಪರಿವರ್ತನ್ ಸಂದೇಶ್ ರ್ಯಾಲಿ’ಯಲ್ಲಿ ರೈತರಿಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಲಹೆ ನೀಡಿದ್ದು “ಪಕ್ಷವು ಯಾವಾಗಲೂ ರೈತರು ತೆಗೆದುಕೊಳ್ಳುವ ನಿರ್ಧಾರಗಳೊಂದಿಗೆ ಇರುತ್ತದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಮಹಾಪಂಚಾಯತ್‌ನಲ್ಲಿ ಹೆಚ್ಚಿನ ಜನರು ಸೇರುವುದನ್ನು ಖಚಿತಪಡಿಸಿಕೊಳ್ಳಲು ರೈತ ಮುಖಂಡರು ಹಳ್ಳಿಗಳಲ್ಲಿ ಜನರನ್ನು ತಲುಪುತ್ತಿದ್ದಾರೆ. ಈ ನಾಯಕರು ರೈತರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ಎಂಎಸ್‌ಪಿ ಖಾತರಿಗಾಗಿ ಹೋರಾಟ ಯಾಕೆ ಮಾಡಬೇಕು ಎಂಬುದನ್ನು ವಿವರಿಸುತ್ತಿದ್ದಾರೆ.