ಹಿಂದೂ ದೇಗುಲಗಳ ಉಳಿಸಲು ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡನೆ: ಶಾಸಕ ರಾಮದಾಸ್‌

ಮೈಸೂರು: ಜಿಲ್ಲೆಯಲ್ಲಿ 2009ಕ್ಕಿಂತ ಹಿಂದೆಯೇ ನಿರ್ಮಾಣವಾಗಿರುವ 2,818 ದೇವಾಲಯಗಳನ್ನು ಉಳಿಸಲು ‘ನಿರ್ಮಾಣಗೊಂಡ ಹಿಂದೂ ದೇವಾಲಯಗಳ ಕ್ರಮಬದ್ಧಗೊಳಿಸುವಿಕೆಯ ಕಾಯ್ದೆ-2021’ ಎಂಬ ಖಾಸಗಿ ಮಸೂದೆಯನ್ನು ಸಿದ್ಧಪಡಿಸಲಾಗಿದ್ದು, ಅಧಿವೇಶನದಲ್ಲಿ ಮಂಡನೆಗೆ ಅವಕಾಶ ನೀಡಲಾಗಿದೆ ಎಂದು ಶಾಸಕ ಎಸ್‌.ಎ.ರಾಮದಾಸ್‌ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲು ಸೆ.23ರಂದು ಅವಕಾಶ ನೀಡಲಾಗಿದೆ. ಒಂದು‌ ವೇಳೆ ಈ ಮಸೂದೆ ಪಾಸಾದರೆ, ರಸ್ತೆ ಅಕ್ಕಪಕ್ಕ ನಿರ್ಮಾಣವಾಗಿ ಜನರಿಗೆ ತೊಂದರೆಯಾಗಿ ಪರಿಣಮಿಸಿರುವ ದೇವಾಲಯ ಹೊರತುಪಡಿಸಿ, ಉಳಿದೆಲ್ಲವೂ ಉಳಿಯಲಿವೆ. ಅನಧಿಕೃತವಾಗಿ ಇರುವ ದೇವಾಲಯಗಳೂ ಸಕ್ರಮ ಆಗಲಿವೆ. ಜೊತೆಗೆ 2009ರ ನಂತರ ಅನಧಿಕೃತವಾಗಿ ನಿರ್ಮಾಣಗೊಂಡಿರುವ ದೇವಾಲಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.

ಈ ಕುರಿತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಮನವಿ ಪತ್ರ ಕೊಡಲಿದ್ದೇನೆ. ಜೊತೆಗೆ, ಸುಪ್ರೀಂ ಕೋರ್ಟ್‌ಗೂ ಮನವಿ ಪತ್ರ ಸಲ್ಲಿಸಲಿದ್ದೇನೆ ಎಂದರು.

× Chat with us