ಯುದ್ಧದ ಕ್ಷೋಭೆಗೆ ಸಿಕ್ಕ ಉಕ್ರೇನಿಗರಿಗೆ ರಷಿಯನ್ ಮಾನಸಿಕ ತಜ್ಞರ ಸಾಂತ್ವನ!

ಈ ಜೀವ ಈ ಜೀವನ- ಪಂಜುಗಂಗೊಳ್ಳಿ    

ಸತ್ಯ ಗೋಪಾಲನ್ ತಮ್ಮ ಗೆಸ್ಟ್‌ಹೌಸಲ್ಲಿ ಉಕ್ರೇನಿನ ಮತ್ತು ರಷಿಯನ್ ಪ್ರವಾಸಿಗರು ಹೀಗೆ ಜೊತೆಯಲ್ಲಿರುವ ಫೋಟೋಗಳನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು, ಮತ್ತೆ ಯಾರಾದರೂ ವಿದೇಶಿ ಪ್ರವಾಸಿಗರು ಭಾರತದಲ್ಲಿ ಹೀಗೆ ಸಿಕ್ಕಿಹಾಕಿಕೊಂಡಿದ್ದು, ಅವರಿಗೆ ಸಹಾಯಬೇಕಿದ್ದರೆ ತಮ್ಮನ್ನು ಸಂಪರ್ಕಿಸಬಹುದು ಎಂದು ಬರೆದುಕೊಂಡರು. ಅದನ್ನು ನೋಡಿ ರಿಶಿಕೇಶ, ಪಡುಚೆರಿ, ಬೆಂಗಳೂರು ಹಾಗೂ ಇತರ ಹಲವೆಡೆಗಳಿಂದ ಹಲವು ವಿದೇಶಿ ಪ್ರವಾಸಿಗರು ಅವರ ಗೆಸ್ಟ್ ಹೌಸಿಗೆ ಬಂದು ಆಶ್ರಯ ಪಡೆದರು.

ಫೆಬ್ರವರಿ ೨೪ ರಂದು ರಷಿಯಾ ಉಕ್ರೇನಿನ ಮೇಲೆ ದಾಳಿ ಮಾಡುತ್ತಲೇ ವಿಶ್ವದ ಹಲವು ದೇಶಗಳು ರಷಿಯಾಕ್ಕೆ ವಿಮಾನ ಸಂಚಾರವನ್ನು ನಿಲ್ಲಿಸಿದವು. ಅದಕ್ಕೆ ಪ್ರತಿಯಾಗಿ ರಶಿಯಾ ಕೂಡಾ ೩೬ ದೇಶಗಳ ವಿಮಾನಗಳಿಗೆ ನಿಷೇಧ ಹೇರಿತು. ಇದರಿಂದಾಗಿ ೧,೫೦,೦೦೦ ಪ್ರವಾಸಿಗರು ತಮ್ಮ ದೇಶಗಳಿಗೆ ಮರಳಲಾಗದೆ ವಿಶ್ವದ ಹಲವೆಡೆ ಸಿಲುಕಿಕೊಂಡಿದ್ದಾರೆ. ಇಷ್ಟೂ ಸಾಲದೆಂಬಂತೆ, ರಷಿಯಾ ಉಕ್ರೇನಿನ ಮೇಲೆ ದಾಳಿ ಮಾಡಿರುವುದನ್ನು ವಿರೋಧಿಸಿ ರಷಿಯಾದ ಮೇಲೆ ಆನೇಕ ರೀತಿಯ ಆರ್ಥಿಕ ದಿಗ್ಬಂಧನವನ್ನು ಹೇರಿದವು. ಇದರಿಂದಾಗಿ ಬೇರೆ ದೇಶಗಳಲ್ಲಿ ಸಿಲುಕಿಕೊಂಡಿರುವ ರಷಿಯನ್ನರು ತಮ್ಮ ಕ್ರೆಡಿಟ್ ಕಾರ್ಡ್ ಅಥವಾ ಇನ್ನಿತರ ಯಾವುದೇ ರೀತಿಯ ಬ್ಯಾಂಕ್ ಸೇವೆಯನ್ನು ಪಡೆಯಲಾಗದೆ ಅಕ್ಷರಶಃ ನಿರ್ಗತಿಕರಾಗಿ ಪಡಬಾರದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ.

ತಮಿಳುನಾಡಿನ ತಿರುವಣ್ಣಮಲೈಯ ಸತ್ಯ ಗೋಪಾಲನ್ ಅನ್ನುವವರು ಕೆಲವು ವಾರಗಳ ಹಿಂದೆ ಅರುಣಚಲುವೇಶ್ವರ ದೇವಸ್ಥಾನದ ಎದುರು ಹಾದು ಹೋಗುತ್ತಿದ್ದಾಗ ಇಬ್ಬರು ವಿದೇಶಿ ಮಹಿಳೆಯರು ದೇವಸ್ಥಾನದ ಬಳಿ ಅಳುತ್ತ ಕುಳಿತಿರುವುದ ಕಾಣಿ ಸಿತು. ಗೋಪಾಲನ್ ಅವಳ ಬಳಿ ಹೋಗಿ ವಿಚಾರಿಸಿದಾಗ ಅವರು ಉಕ್ರೇನಿನ ಪ್ರಜೆಗಳು, ಯುದ್ಧದ ಕಾರಣ ಸ್ವದೇಶಕ್ಕೆ ಮರಳಲಾಗದೆ, ಕೈಯಲ್ಲಿದ್ದ ಹಣ ಖಾಲಿಯಾಗಿ ಊಟಕ್ಕೂ ವಸತಿಗೂ ವ್ಯವಸ್ಥಯಿಲ್ಲದೆ ಬೀದಿಗೆ ಬಿದ್ದಿದ್ದೇವೆ ಅಂದರು.

ಅವರ ಸ್ಥಿಯನ್ನು ನೋಡಿ ಕನಿಕರಗೊಂಡ ಗೋಪಾಲನ್ ಅವರನ್ನು ತಮ್ಮ ಗೆಸ್ಟ್ ಹೌಸಿಗೆ ಕರೆದುಕೊಂಡು ಬಂದು ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟು, ಹಲವು ಸ್ನೇಹಿತರ ಸಹಾಯ ಪಡೆದು ಊಟಕ್ಕೂ ವ್ಯವಸ್ಥೆ ಮಾಡಿದರು. ಅದಾಗಿ ಕೆಲವು ದಿನಗಳ ನಂತರ ಇನ್ನೊಂದು ಗೆಸ್ಟ್‌ಹೌಸಲ್ಲಿ ಆರು ಜನ ರಷಿಯನ್ ಪ್ರವಾಸಿಗರು ಇದೇ ರೀತಿಯಲ್ಲಿ ಹಣ ಖಾಲಿಯಾಗಿ ಸಿಕ್ಕಿಹಾಕಿಕೊಂಡಿರುವುದು ಗೊತ್ತಾಗಿ, ಅವರನ್ನೂ ತಮ್ಮ ಗೆಸ್ಟ್‌ಹೌಸಿಗೆ ಕರೆದುಕೊಂಡು ಬಂದರು. ಸತ್ಯ ಗೋಪಾಲನ್ ತಮ್ಮ ಗೆಸ್ಟ್‌ಹೌಸಲ್ಲಿ ಉಕ್ರೇನಿ ಮತ್ತು ರಷಿಯನ್ ಪ್ರವಾಸಿಗರು ಹೀಗೆ ಜೊತೆಯಲ್ಲಿರುವ ಫೋಟೋಗಳನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು, ಮತ್ತೆ ಯಾರಾದರೂ ವಿದೇಶಿ ಪ್ರವಾಸಿಗರು ಭಾರತದಲ್ಲಿ ಹೀಗೆ ಸಿಕ್ಕಿಹಾಕಿಕೊಂಡಿದ್ದು, ಅವರಿಗೆ ಸಹಾಯಬೇಕಿದ್ದರೆ ತಮ್ಮನ್ನು ಸಂಪರ್ಕಿಸಬಹುದು ಎಂದು ಬರೆದುಕೊಂಡರು. ಅದನ್ನು ನೋಡಿ ರಿಶಿಕೇಶ, ಪಡುಚೆರಿ, ಬೆಂಗಳೂರು ಹಾಗೂ ಇತರ ಹಲವೆಡೆಗಳಿಂದ ಹಲವು ವಿದೇಶಿ ಪ್ರವಾಸಿಗರು ಅವರ ಗೆಸ್ಟ್‌ಹೌಸಿಗೆ ಬಂದು ಆಶ್ರಯ ಪಡೆದರು.

ಈಗ ಸತ್ಯ ಗೋಪಾಲನ್‌ರ ಗೆಸ್ಟ್‌ಹೌಸಲ್ಲಿ ೧೮ ಜನ ಹೆಂಗಸರು ಸೇರಿ ಒಟ್ಟು ೨೨ ಜನ ವಿದೇಶಿ ಪ್ರವಾಸಿಗರು ಆಶ್ರಯ ಪಡೆದಿದ್ದಾರೆ. ೨೨ ಜನ ಪ್ರವಾಸಿಗರಲ್ಲಿ ೧೬ ಜನ ರಷಿಯನ್ನರು ಮತ್ತು ೬ ಜನ ಉಕ್ರೇನಿಗರು ಎಂಬುವುದು ವಿಶೇಷ ಸಂಗತಿ!

ತಮ್ಮ ತಾಯ್ನಾಡು ರಷಿಯಾ ಮತ್ತು ಉಕ್ರೇನ್ ಪರಸ್ಪರ ಯುದ್ಧದಲ್ಲಿ ಕಾದಾಡುತ್ತ ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದರೂ ಸತ್ಯ ಗೋಪಾಲನ್‌ರ  ಗೆಸ್ಟ್‌ಹೌಸಲ್ಲಿ ಆಶ್ರಯ ಪಡೆದಿರುವ ರಷಿಯನ್ ಮತ್ತು ಉಕ್ರೇನಿಗರು ಪರಸ್ಪರ ಪ್ರೀತಿ, ಸ್ನೇಹದೊಂದಿಗೆ ಒಂದೇ ಸೂರಿನಡಿ ವಾಸಿಸುತ್ತಿರುವ ದೃಶ್ಯ ಸ್ಥಳಿಯರಿಗೆ ಆಶ್ಚರ್ಯ! ರಷಿಯನ್ನರು ಮತ್ತು ಉಕ್ರೇನಿಗರು ತಮ್ಮ ಆಹಾರವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಒಂದಿಬ್ಬರು ಉಕ್ರೇನಿಗರು ತಮ್ಮ ದೇಶದ ಮೇಲಿನ ರಷಿಯಾ ದಾಳಿಯನ್ನು ನೆನೆದು ಮಾನಸಿಕ ಕ್ಷೋಭೆಗೆ ಮಾನಸಿಕ ಒತ್ತಡಕ್ಕೆ ಒಳಗಾದಾಗ ಅವರನ್ನು ಸಂತೈಸಿಸಿದವರು ಇಬ್ಬರು ರಷಿಯನ್ ಮಾನಸಿಕ ತಜ್ಞರು! ಇಂಗ್ಲೀಷ್ ಬಾರದ ಉಕ್ರೇನಿಗರು ಸತ್ಯ ಗೋಪಾಲನ್‌ರಿಗೆ ಅಥವಾ ಸ್ಥಳೀಯರು ಯಾರಿಗಾದರೂ ಏನನ್ನಾದರೂ ಹೇಳಬೇಕೆಂದಾಗ, ಇಂಗ್ಲೀಷ್ ಬಲ್ಲ ರಷಿಯನ್ನರು ಅದನ್ನು ಇಂಗ್ಲಿಷಿಗೆ ಭಾಷಾಂತರಿಸಲು ಅವರ ಸಹಾಯಕ್ಕೆ ಬರುತ್ತಾರೆ.

ಸತ್ಯ ಗೋಪಾಲನ್ ತಮ್ಮ ಗೆಸ್ಟ್‌ಹೌಸಲ್ಲಿ ರುವ ಪ್ರವಾಸಿಗರ ಹೆಸರಲ್ಲಿ ಒಂದು ವಾಟ್ಸಾಪ್ ಅಕೌಂಟನ್ನು ತೆರೆದು, ಅದರ ಮೂಲಕ ದೇಶದ ಇತರೆಡೆಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಇತರ ರಷಿಯನ್ ಮತ್ತು ಉಕ್ರೇನಿ ಪ್ರವಾಸಿಗರಿಗೆ ಅವರು ಎಲ್ಲಿ ಸಿಕ್ಕಿಹಾಕಿಕೊಂಡಿದ್ದಾರೋ ಅಲ್ಲಿಯೇ ಊಟ ವಸತಿಗೆ ವ್ಯವಸ್ಥೆ ಮಾಡಲು ಶ್ರಮಿಸುತ್ತಿದ್ದಾರೆ.

ಗೋಪಾಲನ್ ಮತ್ತು ಅವರ ಸಂಗಡಿಗರು ಈ ಪ್ರವಾಸಿಗರಿಗೆ ಉಚಿತ ಊಟ ಮತ್ತು ವಸತಿಯ ವ್ಯವಸ್ಥಯಲ್ಲದೆ ಅವರಿಗೆ ಉಡುಪುಗಳನ್ನೂ ಕೊಟ್ಟಿದ್ದಾರೆ. ಈ ಪ್ರವಾಸಿಗರು ಒಂದು ಅಥವಾ ಮೂರು ತಿಂಗಳ ವೀಸಾ ಪಡೆದು ಭಾರತಕ್ಕೆ ಬಂದವರು. ಇವರಲ್ಲಿ ಕೆಲವರ ವೀಸಾ ಅವಧಿ ಈಗಾಲೇ ಮುಗಿದಿದ್ದರೆ, ಉಳಿದವರದ್ದು ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿವೆ. ಇತರ ಹಲವು ದೇಶಗಳಂತೆ ಭಾರತವೂ ವೀಸಾ ಅವಧಿ ಮುಗಿದ ಇಂತಹ ಪ್ರವಾಸಿಗರ ಬಗ್ಗೆ ಕಾನುನುಗಳನ್ನು ಸಡಿಲಗೊಳಿಸಿವೆ. ರಷಿಯನ್ ಹಾಗೂ ಉಕ್ರೇನ್ ಎರಡೂ ದೇಶಗಳ ಈ ಪ್ರವಾಸಿಗರ ಹಾರೈಕೆ ಒಂದೇ- ರಾಜಕೀಯ ಕಾರಣಕ್ಕೆ ನಡೆಯುತ್ತಿರುವ ಈ ಯುದ್ಧ ಆದಷ್ಟು ಬೇಗೆ ಮುಗಿದು, ತಾವು ತಮ್ಮ ತಾಯ್ನಾಡುಗಳಿಗೆ ಮರಳುವಂತಾಗಲೀ ಎಂಬುದು. ಹಾಗೆ ಮರಳಿದಾಗ ತಮ್ಮ ತಾಯ್ನಾಡು ಹೇಗಿರುತ್ತದೆ ಎಂಬುದು ಉಕ್ರೇನಿ ಪ್ರವಾಸಿಗರ ಆತಂಕ. ಯಾವುದೇ ದೇಶದ ಸಾಮಾನ್ಯ ಜನರಿಗೆ ಯುದ್ಧ ಬೇಡ. ರಾಜಕೀಯ ನಾಯಕುರುಗಳಿಗಷ್ಟೇ ತಮ್ಮ ಅಹಂ, ಸ್ವಾರ್ಥ ಸಾಧನೆಗೆ ಯುದ್ಧ ಬೇಕು ಎನ್ನುವುದಕ್ಕೆ ಒಂದೇ ಸೂರಿನಡಿ ಬದುಕುತ್ತಿರುವ ರಷಿಯಾ ಮತ್ತು ಉಕ್ರೇನಿನ ಈ ಪ್ರವಾಸಿಗರು ಜೀವಂತ ಉದಾಹರಣೆಗಳು.