ʻಶ್ರೀರಂಗಪಟ್ಟಣದ ಮಸೀದಿಯನ್ನು ಕೆಡವಿ ಹಾಕಬೇಕುʼ ಎಂದ ರಿಷಿಕುಮಾರಸ್ವಾಮೀಜಿ ಬಂಧನ!

ಬೆಂಗಳೂರು/ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಮಸೀದಿಯನ್ನು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದ ರೀತಿಯಲ್ಲಿ ಕೆಡವಿ ಹಾಕಬೇಕು ಎಂದು ವಿಡಿಯೋ ಮೂಲಕ ಕರೆ ನೀಡಿದ ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಅವರನ್ನು ಬಂಧಿಸಲಾಗಿದೆ.

ಶ್ರೀರಂಗಪಟ್ಟಣದ ಮಸೀದಿ ಮುಂದೆ ನಿಂತು ವಿಡಿಯೋ ಮಾಡಿರುವ ರಿಷಿಕುಮಾರ ಸ್ವಾಮೀಜಿ, ದೇವಸ್ಥಾನದ ಜಾಗದಲ್ಲಿ ಮಸೀದಿಯನ್ನು ಕಟ್ಟಲಾಗಿದೆ, ಹೀಗಾಗಿ ಮಸೀದಿಯನ್ನು ಕೆಡವಬೇಕು. ಮಸೀದಿಯೊಳಗಿರುವ ಕಂಬಗಳು, ಗೋಡೆಗಳು ಮತ್ತು ಕೆರೆ ಹಿಂದೂ ವಾಸ್ತುಶಿಲ್ಪವನ್ನು ಸೂಚಿಸುತ್ತದೆ. ಹೀಗಾಗಿ ಇದು ದೇವಸ್ಥಾನಕ್ಕೆ ಸೇರಿದ ಜಾಗ, ಇಲ್ಲಿ ಮಸೀದಿ ಇರಬಾರದು, ಹಿಂದೂಗಳು ಎಲ್ಲರೂ ಒಟ್ಟು ಸೇರಿ ಇಲ್ಲಿನ ಮಸೀದಿಯನ್ನು ನಾಶಮಾಡಬೇಕು ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ಸದ್ಯ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸ್ವಾಮೀಜಿ ವಿರುದ್ಧ ಬಹಳ ಟೀಕೆಗಳು ವ್ಯಕ್ತವಾಗಿವೆ. ಇದು ವೈರಲ್ ಆಗುತ್ತಿದ್ದಂತೆ ಶ್ರೀರಂಗಪಟ್ಟಣ ಪೊಲೀಸರು ಚಿಕ್ಕಮಗಳೂರಿನಲ್ಲಿರುವ ರಿಷಿಕುಮಾರ್ ಸ್ವಾಮೀಜಿ ಮಠಕ್ಕೆ ಹೋಗಿ ಅವರನ್ನು ಬಂಧಿಸಿ ಸ್ಥಳೀಯ ಕೋರ್ಟ್ ಮುಂದೆ ಹಾಜರುಪಡಿಸಿದರು.

ಇನ್ನು ರಿಷಿಕುಮಾರ್ ಸ್ವಾಮೀಜಿ ಪರ ವಕೀಲರು ಕೋರ್ಟ್ ಮುಂದೆ, ತಮ್ಮ ಕಕ್ಷಿದಾರ ವಿವಾದಿತ ಹೇಳಿಕೆ ನೀಡಿಲ್ಲ ಎಂದು ವಾದಿಸಿದರು. ಮಸೀದಿಯಲ್ಲಿ ದೇವಾಲಯದ ಗುರುತು ಪತ್ತೆಯಾಗಿ ರಿಷಿಕುಮಾರ ಸ್ವಾಮೀಜಿಗಳು ತಮ್ಮ ನೋವನ್ನು ಹೊರಹಾಕಿದರು ಅಷ್ಟೆ ಎಂದರು.

ಆದರೆ ಸರ್ಕಾರಿ ಪರ ವಕೀಲರು, ರಿಷಿಕುಮಾರ ಸ್ವಾಮೀಜಿ ಅವರನ್ನು ಬಿಡುಗಡೆ ಮಾಡಿದರೆ ಇನ್ನೊಂದು ಹೇಳಿಕೆ ನೀಡಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗಬಹುದು, ಅಲ್ಲದೆ ಸಾಕ್ಷಿಯನ್ನು ನಾಶಮಾಡಬಹುದು, ಹೀಗಾಗಿ ಅವರನ್ನು ಬಿಡುಗಡೆ ಮಾಡಬಾರದು ಎಂದು ವಾದಿಸಿದರು. ನ್ಯಾಯಾಲಯ ತೀರ್ಪನ್ನು ಇಂದು ನೀಡಲಿದೆ.