ಠಾಣೆಯಲ್ಲೇ ಕುಸಿದು ಬಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್; ನಿನ್ನೆ-ಮೊನ್ನೆ ನಮ್ಮ ಜನ

ಕ್ಷೀಣವಾಗಿ ತುಟಿ ಅಲ್ಲಾಡಿಸಿದ ಅವನ ತೇಲುಗಣ್ಣಲ್ಲಿ ಸಾವು ಕಾಣಿಸಿತು!

– ಭಾಗ – ಐದು

ಆ ಗ್ರಾಮಲೆಕ್ಕಿಗ ರಾಜು(ಹೆಸರು ಬದಲಿಸಲಾಗಿದೆ) ಜೈಲು ಸೇರಿ ವಾರವಾಗಿತ್ತು. ಅವನ ಮೇಲಧಿಕಾರಿ ರೆವಿನ್ಯೂ ಇನ್ಸ್‌ಪೆಕ್ಟರ್(ಆರ್.ಐ) ಬಾಬು(ಹೆಸರು ಬದಲಿಸಲಾಗಿದೆ) ರಜೆ ಹಾಕಿ ನಾಪತ್ತೆಯಾಗಿದ್ದ.
ಗ್ರಾಮಲೆಕ್ಕಿಗ ರಾಜು ಐದು ಸಾವಿರ ರೂಪಾಯಿ ಲಂಚಕ್ಕೆ ಡಿಮ್ಯಾಂಡ್ ಮಾಡಿದಾಗ ಆರ್.ಐಗೂ ಎರಡು ಸಾವಿರ ಕೊಡಬೇಕು ಅಂತ ಹೇಳಿದ್ದ. ಆದರೆ ಆರ್.ಐ ಬಾಬು ಲಂಚವನ್ನು ನೇರವಾಗಿ ಶೇಖರನ ಬಳಿ ಕೇಳಿರಲಿಲ್ಲ. ಲಂಚಕ್ಕೆ ಡಿಮ್ಯಾಂಡ್ ಮಾಡಿದಾಗ ಲೆಕ್ಕಿಗ ಹೇಳಿದ್ದ ಮಾತು ಅದು. ನಂತರ ಸಿಕ್ಕಿಬಿದ್ದ ಮೇಲೆ ಲೆಕ್ಕಿಗ ರಾಜುವೂ  ತನ್ನ ಹೇಳಿಕೆಯಲ್ಲಿ ಆ ಎರಡು ಸಾವಿರದ ಬಗ್ಗೆ ಏನೂ ಹೇಳಿರಲಿಲ್ಲ. ಆದರೆ  ಆರ್.ಐ. ಬಾಬು  ಹೆಸರು ಎಫ್‌ಐಆರ್‌ನಲ್ಲಿದ್ದುದರಿಂದ ಅವನ ಪಾತ್ರದ ಬಗ್ಗೆ ವಿಚಾರಣೆಯನ್ನಂತೂ ಮಾಡಬೇಕಿತ್ತು.

ಟ್ರ್ಯಾಪ್ ನಡೆದು ಹದಿನೈದು ದಿನಗಳ ಮೇಲಾಗಿತ್ತು. ದಿನವೂ ಪೊಲೀಸರು ಆರ್.ಐಗಾಗಿ ತಲಾಷ್ ಮುಂದುವರೆಸಿದ್ದರು. ಅದೇ ವಾರ ಒಟ್ಟಿಗೆ ಮೂರು ದಿನಗಳ ಸಾಲು ರಜೆ ಬಂತು. ಶುಕ್ರವಾರ ಹಬ್ಬದ ರಜೆ, ಎರಡನೇ ಶನಿವಾರದ ರಜೆ ನಂತರ ಭಾನುವಾರ. ಅಪರೂಪದ ಬಂಪರ್ ರಜೆಗಳು. ಹೀಗಿದ್ದಾಗ ರಜೆ ಹೋಗದೆ ಇರಲಾಗುತ್ತದೆಯೇ? ಗುರುವಾರ ಸಂಜೆಯೇ ಊರಿಗೆ ಹೊರಡುವ ತರಾತುರಿಯಲ್ಲಿದ್ದೆ.
ಗುರುವಾರ ಬೆಳಗಿನ ಹೊತ್ತು, ಪೊಲೀಸರು ಆರ್.ಐ ಬಾಬುವನ್ನು ಹಾಜರಪಡಿಸಿದರು. ಕಂಡೊಡನೆ ಸಿಟ್ಟು ನೆತ್ತಿಗೇರಿತು. ಈ ಹಿಂದೆ ಎರಡು ಬಾರಿ ಲೋಕಾಯುಕ್ತ ಪೊಲೀಸರಿಗೆ ಕೈಕೊಟ್ಟು ನುಣುಚಿಕೊಂಡಿದ್ದ. ಕೆರೆದು ಬಾಚಿಕೊಂಡು ತಿನ್ನುವ ಲಂಚಕೋರನೆಂದು ಕುಖ್ಯಾತನಾಗಿದ್ದ ಖದೀಮ.

“ಯ್ಯೇಯ್ ಇಷ್ಟು ದಿನ ಎಲ್ಲಿಗಯ್ಯಾ ಕದ್ದು ಓಡಿಹೋಗಿದ್ದೆ?” ಗದ್ದರಿಸಿ ಕೇಳಿದೆ.
ಹುಷಾರೇ ಇರಲಿಲ್ಲ; ತನಗೂ ಆ ಲಂಚಕ್ಕೂ ಸಂಬಂಧವೇ ಇಲ್ಲ… ಇತ್ಯಾದಿ ಏನೇನೋ ಸಬೂಬು ಊದಿದ. ಅವನ ಮಾತಿನಲ್ಲಿ, ದನಿಯಲ್ಲಿ ಉಕ್ಕುತ್ತಿದ್ದ ಪರಮ ವಿನೀತತೆ.

“ಆ ಗ್ರಾಮಲೆಕ್ಕಿಗ ಅವನ ಹತ್ತಿರ ಏನೇನು ಮಾತಾಡಿದ್ದಾನೋ ನನಗೇನೂ ಗೊತ್ತಿಲ್ಲ. ನಾನು ನಿರ್ಪಾಪಿ ಸಾರ್! ಅವನು ನನ್ನ ಹೆಸರೇಳಿಕೊಂಡು ವಸೂಲಿಗೆ ನಿಂತಿದ್ದ ಅಂತ ಆಮೇಲೆ ಗೊತ್ತಾಯ್ತು!”.
“ಏಯ್ ಏನು ಬೊಗುಳ್ತಾ ಇದ್ದೀಯಾ? ಆ ಅರ್ಜಿ ನಿನ್ನತ್ರ ಬಂದು ಎಂಟು ತಿಂಗಳುಗಳಾಗಿವೆ. ಇಲ್ಲೀ ತನಕ ಆ ಅರ್ಜಿ ಇಟ್ಕೊಂಡು ಏನು ಪೂಜೆ  ಮಾಡ್ತಿದ್ದಾ?  ಹಿಂದೆ ಇದ್ದ ಲೆಕ್ಕಿಗ ಮೂರು ಸಾವಿರ ತಿಂದು ವರ್ಗವಾಗಿದ್ದಾನೆ. ಅದರಲ್ಲಿ ನೀನೇನು ತಿಂದಿಲ್ವಾ? ನಮಗೆ ಎಲ್ಲವೂ ಗೊತ್ತಿದೆ. ಸುಳ್ಳು ಬೊಗಳುತ್ತೀಯಾ? ಝಾಡಿಸಿ ಎದೆಗೊದ್ದಾ ಅಂದ್ರೆ ಮಗನೇ ತಿಂದಿದ್ದೆಲ್ಲಾ ಕಕ್ಕಬೇಕು…” ಅಂತೇನೋ ಮಾಮೂಲಿ ಪೊಲೀಸ್ ರೋಫ್ ಹಾಕ್ತಿದ್ದೆ.

ಆತ ಧೊಪ್ಪೆಂದು ಕೆಳಗೆ ಬಿದ್ದ.
“ನಾಟಕ ಆಡ್ತಿರಬೇಕು. ಒದ್ದು ಎಬ್ಬಿಸ್ರೀ ಸೂ… ಮಗನ್ನ” ಎಂದು ಕೂಗಿದೆ.
ಪೊಲೀಸರು ಎಬ್ಬಿಸಲು ನೋಡಿದರೆ ಮೈಯ್ಯೆಲ್ಲಾ ಬೆವತಿದೆ. ಬಾಯಲ್ಲಿ ಬಿಳಿ ಜೊಲ್ಲು ಒಸರಿದೆ. ಪೊಲೀಸರು ನೀರು ಕುಡಿಸಿದರೆ ಕುಡಿಯುತ್ತಿಲ್ಲ. ಕೈಕಾಲುಗಳು ಒದರುತ್ತಿವೆ.
ನನ್ನ ಜೀವವೇ ಹೋದಂತಾಯಿತು. ಬಾಯಲ್ಲಿ ಬಿಳಿ ನೊರೆ? Shoಛಿಞ ಗೆ ಒಳಗಾಗಿರುವ  ಸೂಚನೆ. ಲಾಕಪ್ ಡೆತ್ ಆಗಿಬಿಟ್ಟರೆ? ಮೆದುಳಿಗೇ ಕರೆಂಟ್ ಹೊಡೆಯಿತು!

ಅವನಿಗೆ ಸಂತೈಸುವ ದನಿಯಲ್ಲಿ ಹೇಳಿದೆ:
“ರ್ರೀ ಯಾಕ್ರೀ ಗಾಬ್ರಿಯಾಗ್ತೀರಿ. ಕೇಳೋದನ್ನು ಪೊಲೀಸ್ ಸ್ಟೈಲಲ್ಲಿ ಕೇಳಿದೆ ಅಷ್ಟೇ. ನೀವೇನು ಡೈರೆಕ್ಟಾಗಿ ಲಂಚ ತಗೊಂಡಿಲ್ಲವಲ್ಲ? ಏನೂ ಹೆದರಿಕೋಬೇಡ್ರೀ! ಏನು ಬೇಕೋ ಸಹಾಯ ಮಾಡೋಣಂತೆ”

ಆತ ಕಣ್ಣನ್ನೇ ಬಿಡಲಿಲ್ಲ. ಅವನಿಗೆ ಧೈರ್ಯ ತುಂಬುವುದಿರಲಿ ನಾನೇ ಹೆದರಿ ಹೈರಾಣಾಗಿದ್ದೆ.
ಅವನನ್ನು ಜೀಪಿನಲ್ಲಿ ತುಮಕೂರಿನ ಜಿಲ್ಲಾಸ್ಪತ್ರೆಗೆ ಸಾಗಿಸಿದೆವು. ಪರೀಕ್ಷಿಸಿದ ವೈದ್ಯರು “ಶುಗರ್ ಫಾಲ್ ಆಗಿದೆ. ಟೆನ್ಷನ್ ಇರೋದ್ರಿಂದ ಬಿಪಿ ರೈಸ್ ಆಗಿದೆ. ಓoಣhiಟಿg ಣo ತಿoಡಿಡಿಥಿ” ಎಂದರು.

ಡಾಕ್ಟರ್‌ಗಳ ಮಾತನ್ನು ನಂಬಿದಂತೆಯೇ? ನಾಡಿ ನಿಂತೋದ್ರೂ ಓo ಠಿಡಿobಟem. ಆoಟಿ’ಣ ತಿoಡಿಡಿಥಿ ಅಂತಾರೆ!
ಸ್ನೇಹಿತರಾದ ಡಾ.ಚೆಲುವರಾಜರ ಬಳಿ ಓಡಿದೆ. ಅವರೇ ತುಮಕೂರು ಜಿಲ್ಲಾ ಸರ್ಜನ್.
“ಹೇಗಾಯ್ತು? ಕೇಳಿದರು.

ನಡೆದದ್ದನ್ನು ನಡೆದಂತೆಯೇ ವದರಲಾದೀತೇ? ಹೇಳಿದರೆ ನನಗೆ ಜೈಲೇ ಗತಿ!
“ಯಾವುದೋ ವಿಚಾರಣೆಗೆ ಅಂತ ಬಂದಿದ್ದ. ಅವನ ಮೇಲೆ ಯಾವ್ದೂ ಕೇಸಿಲ್ಲ ಸಾರ್. ತನ್ನನ್ನು ಯಾರಾದರೂ ಸುಳ್ಳೇ ಸಿಕ್ಕಿಸಿ ಬಿಟ್ಟಾರೆಂದು ಹೆದರಿಕೊಂಡಿದ್ದ.

“ಏನ್ರಪ್ಪಾ? ನೀವೂ ಎರಡು ಸಾವಿರ ರೂಪಾಯಿ ಲಂಚ ಕೇಳಿದ್ದರಂತೆ?” ಅಂತ ಸುಮ್ಮನೆ ಜನರಲ್ಲಾಗಿ ಕೇಳಿದ್ದಷ್ಟೇ. ಅಷ್ಟಕ್ಕೇ ಗಾಬರಿಯಾಗಿ ಕುಸಿದು ಬಿದ್ದು ಬಿಟ್ಟ ಸಾರ್! ತಕ್ಷಣವೇ ಕರೆದುಕೊಂಡು ಬಂದು ಸೇರಿಸಿದೆವು” ಎಂದೆ.
“ಓ ಹೌದಾ?” ಎಂದು ಕೇಳಿದ ಡಾಕ್ಟರು ಅವನ ಕೇಸ್ ಶೀಟನ್ನು ಅನುಮಾನಾತ್ಮಕವಾಗಿ ಪೂರ್ಣ ಓದಿದರು. “ಏಟು ಗೀಟು ಬಿದ್ದು ಏನೂ  ಗಾಯವಾಗಿಲ್ಲ ಅನ್ಸುತ್ತೆ ಬಿಡಿ!” ಅಂದರು.

“ಹೊಡೆಯೋದಿಕ್ಕೆ ಅವನ ಮೇಲೆ ಕೇಸೇ ಇಲ್ವಲ್ಲಾ ಸಾರ್. ಯಾಕೆ ಹೊಡೆಯೋಣ? ಹಾಗೆಲ್ಲ ಹೊಡೆಯೋದಿಕ್ಕೆ ನಮ್ಮದೇನು ರೆಗ್ಯುಲರ್ ಪೊಲೀಸ್ ಸ್ಟೇಷನ್ ಅಲ್ಲವಲ್ಲಾ ಎಂದೆ.
ನನ್ನ ದನಿ ಹುಳ್ಳುಳ್ಳಗಾಗಿತ್ತು. ಗೊತ್ತಿದ್ದ ಡಾಕ್ಟರಾದರೂ ಸಂಶಯಗೊಂಡು ಕೇಸ್ ಷೀಟನ್ನು ಪೂರ್ತಿ ಓದಿದ್ದರು. ಪೊಲೀಸರು ನಿಜಾ ಹೇಳ್ತಾರೆ ಎಂದು ನಂಬಲು ಜನರಿಗೆ ಸಾಧ್ಯವೇ ಇಲ್ಲವಲ್ಲ?

ಸಂಜೆ ಸಮೀಪಿಸುತ್ತಿತ್ತು. ದಫೇದಾರ್ ದಿಲೀಪ್ ಸಿಂಗ್, ಗೋವಿಂದರಾಜು, ಜಗದೀಶ್, ಡ್ರೈವರ್ ಬಾಲು ಇವರುಗಳು
“ನೀವೇನು ಯೋಚನೆ ಮಾಡ್ಬೇಡಿ ಸರ್. ನಾವು ನೋಡಿಕೊಳ್ತೀವಿ. ಏನೂ ಡೇಂಜರ್ ಇಲ್ವಂತೆ. ನೀವು ಊರಿಗೆ ಹೊರಡಿ” ಎಂದರು.
ಆರ್.ಐ ಬಾಬುವಿನ ಬಿಪಿ ಕಂಟ್ರೋಲಿಗೆ ಬಂದಿತ್ತು. ಆದರೆ ಆತ ಪೂರ್ಣ ನಿಸ್ತೇಜಿತನಾಗಿದ್ದ. ಅವನ ಮನೆಯವರಿಗೂ ಹೇಳಿ ಕಳಿಸಿದ್ದು ಅವರೂ ಬಂದಿದ್ದರು. ಅವನ ಮಗ ಕೂಡ, “ಶುಗರ್ ಜಾಸ್ತಿಯಾದ್ರೆ, ಆಗಾಗ್ಗೆ ಹಿಂಗೆ ಬಿದ್ದೋಗ್ತಿರ್ತಾರೆ. ಇನ್ಸುಲಿನ್ ತಗೋತಾರೆ” ಎಂದು ಹೇಳಿದ.
ಆರ್.ಐ ಈಗ ಮಾತಾಡುವ ಸ್ಥಿತಿಗೆ ಬಂದಿದ್ದರೂ ಮಾತನ್ನೇನು ಆಡುತ್ತಿರಲಿಲ್ಲ. ಬಿಟ್ಟು ಬಿಟ್ಟು ಎಳೆದೆಳೆದು ಏದುಸಿರು ಬಿಡುತ್ತಿದ್ದ. ಆದರೆ ವಿಪರೀತ  ಸುಸ್ತಾದವನಂತಿದ್ದ.

“ನೋಡ್ರೀ… ನೀವೇನೂ ಚಿಂತೆ ಮಾಡ್ಬೇಡಿ. ನಿಮ್ಮ ಮೇಲೆ ನೇರವಾದ ಕಂಪ್ಲೇಂಟ್ ಏನೂ ಇಲ್ಲ. ನಿಮಗೆ ಅದೇನು ಸಹಾಯ ಬೇಕೋ ಮಾಡೋಣ. ಆರಾಮವಾಗಿರಿ” ಎಂದು ಸಮಾಧಾನ ಹೇಳಿದೆ. ನೆರೆದಿದ್ದ ಪೊಲೀಸರೂ ಬಂಧುಗಳಿಗಿಂತ ಹೆಚ್ಚಾಗಿ ಸಂತೈಸಿದರು. ಆತ ಕ್ಷೀಣವಾಗಿ ತುಟಿ ಅಲ್ಲಾಡಿಸಿ ಕಣ್ಣುಮುಚ್ಚಿದ. ಅವನ ತೇಲುಗಣ್ಣಲ್ಲಿ ಸಾವು ಕಾಣಿಸಿತು.

ಊರಿಗೆ ಹೋಗಲು ಮನಸ್ಸೇ ಬರಲಿಲ್ಲ. ಅವನು ಹೀಗೇ ಗೊಟಕ್ ಎಂದರೆ ಏನಪ್ಪಾ ಗತಿ ಎಂಬ ಅಧೀರತೆ ಕಾಡತೊಡಗಿತು. ಲಾಕಪ್ ಡೆತ್ ಪ್ರಕರಣಗಳೆಲ್ಲಾ ಕಣ್ಣ ಮುಂದೆ ಹಾದು ಹೋದವು. ಕೈದಿ ಲಾಕಪ್ಪಿನೊಳಗೇ ಸಾಯಬೇಕು ಅಂತೇನಿಲ್ಲ. ಪೊಲೀಸ್ ಠಾಣೆಯ ಕಾಂಪೌಂಡ್ ಆವರಣದಲ್ಲಿ ಸತ್ತರೂ ಅದು ಲಾಕಪ್ ಡೆತ್ತೇ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಅವನು ಪೊಲೀಸರ ಕ್ರೌರ್ಯದಿಂದಲೇ ಸತ್ತಿರಲಿ, ತಾನೇ ಆತ್ಮಹತ್ಯೆ ಮಾಡಿಕೊಂಡಿರಲಿ ಅಥವಾ ಸ್ವಾಭಾವಿಕವಾಗೇ ಸತ್ತಿರಲಿ. ಅದು ಬರಿಯ ಲಾಕಪ್ ಡೆತ್ ಅಲ್ಲ. ಪಕ್ಕಾ ಮರ್ಡರ್ ಎಂದೇ ಪರಿಗಣಿಸಲ್ಪಡುತ್ತದೆ. ಠಾಣಾಧಿಕಾರಿ ಮತ್ತು ಸಿಬ್ಬಂದಿ ಎಲ್ಲರ ಮೇಲೂ ಕೊಲೆ ಪ್ರಕರಣ ದಾಖಲಾಗುತ್ತದೆ.
(ಮುಂದಿನ ವಾರಕ್ಕೆ)
ಜೆ.ಬಿ.ರಂಗಸ್ವಾಮಿ

× Chat with us