ರಾಜ್ಯ ಸಭೆಗೆ ನಿರ್ಮಲಾ ಸೀತಾರಾಮನ್‌ ಹೆಸರು ಫೈನಲ್‌

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆ ಮತ್ತು ರಾಜ್ಯ ಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆದಿದ್ದು, ರಾಜ್ಯ ದಿಂದ ರಾಜ್ಯ ಸಭೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೆಸರನ್ನು ಅಂತಿಮಗೊಳಿಸಲಾಗಿದೆ.
ರಾಜಸ್ಥಾನ ವಿಧಾನಸಭೆಯಿಂದ ರಾಜ್ಯ ಸಭೆಗೆ ಕಳೆದ ಬಾರಿ ಆಯ್ಕೆಯಾಗಿದ್ದ ನಿರ್ಮಾಲಾ ಸೀತಾರಾಮನ್‌ ಅವರು ಈ ಬಾರಿ ಕರ್ನಾಟಕ ವಿಧಾನ ಸಭೆಯಿಂದ ಆಯ್ಕೆಯಾಗುತ್ತಿದ್ದಾರೆ.


ಒಟ್ಟು ಎರಡು ರಾಜ್ಯ ಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಂದು ಸ್ಥಾನಕ್ಕೆ ನಿರ್ಮಲಾ ಸೀತಾರಾಮನ್‌ ಹೆಸರು ಪಕ್ಕಾ ಆಗಿದ್ದರೆ, ಮತ್ತೊಂದು ಸ್ಥಾನಕ್ಕೆ ಕೆ.ಸಿ.ರಾಮಮೂರ್ತಿ, ನಿರ್ಮಲ್‌ ಕುಮಾರ್‌ ಸುರಾನ, ಪ್ರಕಾಶ್‌ ಶೆಟ್ಟಿ, ಲಹರಿ ವೇಲು ರೇಸ್‌ನಲ್ಲಿ ಇದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಹೈಕಮಾಂಡ್‌ ಕೈಗೊಳ್ಳಲಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
ಈ ಹಿಂದೆ ರಾಜ್ಯ ವಿಧಾನ ಸಭೆಯಿಂದ ರಾಜ್ಯ ಸಭೆಗೆ ಆಯ್ಕೆ ಬಯಸಿದ್ದ ವೆಂಕಯ್ಯ ನಾಯ್ಡು ಮತ್ತು ನಿರ್ಮಲಾ ಸೀತಾರಾಮನ್‌ ಅವರಿಗೆ ರಾಜ್ಯದಿಂದ ವಿರೋಧ ವ್ಯಕ್ತವಾಗಿತ್ತು. ನಮ್ಮ ರಾಜ್ಯದಿಂದ ನಮ್ಮ ರಾಜ್ಯದವರನ್ನೇ ರಾಜ್ಯ ಸಭೆಗೆ ಕಳಿಸಬೇಕು. ಬೇರೆ ರಾಜ್ಯದವರನ್ನು ಇಲ್ಲಿಂದ ಆಯ್ಕೆ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ಮೂಡಿದ್ದವು. ಜೊತೆಗೆ ಹೆಚ್ಚಿನ ಒತ್ತಡ ನಿರ್ಮಾಣವಾದ ಕಾರಣಕ್ಕೆ ಕಳೆದ ಬಾರಿ ನಿರ್ಮಾಲಾ ಸೀತಾರಾಮನ್‌ ಅವರು ರಾಜಸ್ಥಾನ ವಿಧಾನ ಸಭೆ ಮೂಲಕ ರಾಜ್ಯ ಸಭೆ ಪ್ರವೇಶ ಪಡೆದಿದ್ದರು. ವೆಂಕಯ್ಯ ನಾಯ್ಡು ಅವರೂ ಸ್ಪರ್ಧೆಯಿಂದ ಹಿಂದೆ ಸರಿಯುವಂತಾಗಿತ್ತು.