ಬೇರೆ ಪಕ್ಷಗಳ ಜನನಾಯಕರ ಕೈ ಹಿಡಿಯಲು ಕಮಲ ಪಕ್ಷ ಹಪಾಹಪಿ

-ಆರ್.ಟಿ.ವಿಠ್ಠಲಮೂರ್ತಿ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕಂದಾಯ ಸಚಿವ ಆರ್.ಅಶೋಕ್ ಇತ್ತೀಚೆಗೆ ಭೇಟಿ ಮಾಡಿದರು.

ಹೀಗೆ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಂದರ್ಭದ ಚಿತ್ರವನ್ನು ಗಮನಿಸಿದವರಿಗೆ ಒಂದು ವಿಷಯ ಸ್ಪಷ್ಟವಾಯಿತು. ಅದೆಂದರೆ, ಒಂದು ಕಾಲದಲ್ಲಿ ಸ್ವಾವಲಂಬಿ ಪಕ್ಷವಾಗಲು ಹಪಾಹಪಿಸುತ್ತಿದ್ದ ಬಿಜೆಪಿ ಈಗ ಪರಾವಲಂಬಿಯಾಗಲು ಸಜ್ಜಾಗುತ್ತಿದೆ ಎಂಬುದು.

ಅಂದ ಹಾಗೆ ಒಂದು ರಾಜಕೀಯ ಪಕ್ಷ ಸ್ವಾವಲಂಬಿಯಾಗಲು ಬಯಸುವುದು ಸಹಜ. 2006 ರಲ್ಲಿ ಜಾತ್ಯತೀತ ಜನತಾದಳದ ಜತೆ ಸೇರಿ ಸರ್ಕಾರ ಮಾಡಿದ ಬಿಜೆಪಿಗೆ ಕೊನೆಯಲ್ಲಿ ಕಹಿ ಕಾದಿತ್ತು.

ಏಕೆಂದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲು ಹಿಂಜರಿದಿದ್ದರು. ಕೊನೆಗೆ ಹಲವು ಕಸರತ್ತುಗಳ ನಡುವೆ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸುವ ಕೆಲಸ ನಡೆದರೂ, ಸರ್ಕಾರ ಬಹುಮತ ಸಾಬೀತುಪಡಿಸುವ ಸಂದರ್ಭದ ಬೆಳವಣಿಗೆಗಳು ಯಡಿಯೂರಪ್ಪ ಅವರನ್ನು ಕಂಗೆಡಿಸಿದವು.
ಅಷ್ಟೇ ಅಲ್ಲ, ವಿಶ್ವಾಸ ಮತ ಯಾಚನೆಯ ದಿನವೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಮಧ್ಯಂತರ ಚುನಾವಣೆಗೆ ಹೋಗಲು ಸಜ್ಜಾದರು.

ಅವತ್ತು ರಾಜೀನಾಮೆ ನೀಡಿದ ಯಡಿಯೂರಪ್ಪ ಕ್ರಮ ಒಂದು ರೀತಿಯಲ್ಲಿ ರಾಮಕೃಷ್ಣ ಹೆಗಡೆ ಅವರ ತಂತ್ರಗಾರಿಕೆಯ ತರಹವೇ ಇತ್ತು. 1983ರಲ್ಲಿ ಅಸ್ತಿತ್ವಕ್ಕೆ ಬಂದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಗಡೆ ಅವರಿಗೆ ಕೆಲವೇ ಕಾಲ ಕಳೆಯುವುದರಲ್ಲಿ ಸುಸ್ತಾಗಿ ಹೋಗಿತ್ತು.

ಏಕೆಂದರೆ ಜನತಾ ಪಕ್ಷದ ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಜೆಪಿ ಒಂದರ ಹಿಂದೊಂದರಂತೆ ಕರಾರುಗಳನ್ನು ಹಾಕುತ್ತಾ, ಹೆಗಡೆ ಅವರ ಆತ್ಮವಿಶ್ವಾಸಕ್ಕೆ ಹೊಡೆತ ನೀಡುತ್ತಿತ್ತು. ಯಾವಾಗ ಬೆಂಬಲ ನೀಡಿದ ಬಿಜೆಪಿಯ ಕರಾರುಗಳು ಹೆಚ್ಚಾಗುತ್ತಾ ಹೋದವೋ, ಅದೇ ಸಂದರ್ಭದಲ್ಲಿ ನಡೆದ ಒಂದು ಘಟನೆ ರಾಮಕೃಷ್ಣ ಹೆಗಡೆ ಅವರಿಗೆ ವರವಾಗಿ ಸಿಕ್ಕಿತು.

ಅದೆಂದರೆ, ಲೋಕಸಭಾ ಚುನಾವಣೆ. ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬೆನ್ನಲ್ಲೇ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯಗಳಿಸಿತ್ತು. ಇದನ್ನೇ ನೆಪವಾಗಿಟ್ಟುಕೊಂಡ ರಾಮಕೃಷ್ಣ ಹೆಗಡೆ, ನಾವು ಅಧಿಕಾರದಲ್ಲಿದ್ದರೂ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಸೋಲು ಅನುಭವಿಸಿದ್ದೇವೆ. ಹೀಗಾಗಿ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ನಮಗಿಲ್ಲ ಎಂದರು.

ಅಷ್ಟೇ ಅಲ್ಲ, ವಿಧಾನಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋದರು. ಚುನಾವಣೆಯಲ್ಲಿ ಜನತಾ ಪಕ್ಷ ಗೆದ್ದು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಿತು. ಆ ಮೂಲಕ ಹೆಗಡೆ ಅವರು ತಮ್ಮ ಮುಂದಿನ ಹಲ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದರು.

ಈ ಪೈಕಿ ಬಿಜೆಪಿಯ ಇಕ್ಕಳದಿಂದ ಪಾರಾಗಿದ್ದು ಮೊದಲನೆಯದಾದರೆ, ಸರ್ಕಾರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದ ದೇವೇಗೌಡರನ್ನು ಹಿಂದೆ ಸರಿಸಿದ್ದು ಎರಡನೆಯ ವಿಷಯ.

ಎಲ್ಲಕ್ಕಿಂತ ಮುಖ್ಯವಾಗಿ ತೆರೆಯ ಹಿಂದಿನಿಂದ ಬಂದು ಮುಖ್ಯಮಂತ್ರಿಯಾದವರು ಎಂಬ ವಿರೋಧಿಗಳ ಮಾತಿಗೆ ಹೆಗಡೆ ಈ ಮೂಲಕ ಉತ್ತರ ನೀಡಿದ್ದರು. ಹೋಲಿಸಿ ನೋಡಿದರೆ 2008ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಯಡಿಯೂರಪ್ಪ ಅವರದೂ ಇಂತಹದೇ ಟೆಕ್ನಿಕ್ಕು. ಮೊದಲನೆಯದಾಗಿ ಜಾತ್ಯತೀತ ಜನತಾದಳ ಬೆಂಬಲದಿಂದ ಸರ್ಕಾರ ರಚಿಸಿ ಹಿಂಸೆ ಅನುಭವಿಸುವುದು ಅವರಿಗೆ ಬೇಕಿರಲಿಲ್ಲ.

ಅದೇ ರೀತಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿದರೆ ಯಾವ ಕಿರಿಕಿರಿಯೂ ಇಲ್ಲದೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಬಹುದು ಎಂಬ ಲೆಕ್ಕಾಚಾರ. ಅದರಲ್ಲಿ ಯಡಿಯೂರಪ್ಪ ಯಶಸ್ವಿಯಾದರು. ಅಂದ ಹಾಗೆ 2008ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತಕ್ಕೆ ಸ್ವಲ್ಪ ಕೊರತೆಯಾದರೂ, ಪಕ್ಷೇತರರ ಬೆಂಬಲದಿಂದ ಯಡಿಯೂರಪ್ಪ ಸರ್ಕಾರ ರಚಿಸಿದರು.
2018ರ ಚುನಾವಣೆಯಲ್ಲೂ ಇತಿಹಾಸ ಮರುಕಳಿಸಿತು. ಬಹುಮತಕ್ಕೆ ಹತ್ತು ಮತಗಳ ಅಂತರವಿದ್ದುದರಿಂದ ಯಡಿಯೂರಪ್ಪ ನಿರಾಶರಾಗಬೇಕಾಯಿತು. ಏನೇ ಆದರೂ 2008ರ ಅನುಭವದಿಂದ ಅವರು ಕಲಿತಿದ್ದೆಂದರೆ ಯಾವ ಕಾರಣಕ್ಕೂ ಪರಾವಲಂಬಿಯಾಗಿ ಸರ್ಕಾರ ರಚಿಸಬಾರದು. ಬದಲಿಗೆ ಸ್ವಾವಲಂಬಿ ಸರ್ಕಾರ ರಚಿಸಬೇಕು ಎಂಬುದು.
ಆದರೆ, ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ಬಿಜೆಪಿಯ ಮುಖ ಚಹರೆಯೇ ಬದಲಾಗಿ ಹೋಗಿದೆ. ಅಲ್ಲೀಗ ಸ್ವಾವಲಂಬಿಯಾಗಿ ಮೇಲೆದ್ದು ನಿಲ್ಲಲು ಏನು ಮಾಡಬೇಕು ಎಂಬ ಚಿಂತನೆಗಿಂತ ಅಧಿಕಾರದಲ್ಲಿ ಮುಂದುವರಿಯಲು ಜಾ.ದಳದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಬೆಸ್ಟು ಎಂಬ ಭಾವನೆಯೇ ಕಾಣಿಸುತ್ತಿದೆ.

ಅರ್ಥಾತ್, ಜನನಾಯಕ ಯಡಿಯೂರಪ್ಪ ಹಿಂದೆ ಸರಿಯುತ್ತಿದ್ದಂತೆಯೇ ಬಿಜೆಪಿ ಈಗ ಬೇರೆ ಪಕ್ಷಗಳ ಜನನಾಯಕರ ಕೈ ಹಿಡಿಯಲು ತಯಾರಾಗುತ್ತಿದೆ. ಅಂದ ಹಾಗೆ ಕರ್ನಾಟಕದ ರಾಜಕಾರಣದಲ್ಲಿ ಜನನಾಯಕರು ಎಂದರೆ ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ, ಅಂದರೆ ಇವರು ತಮ್ಮ ಸಮುದಾಯದ ಮತಗಳನ್ನು ಬಯಸಿದವರಿಗೆ ಹಾಕಿಸಬಲ್ಲರು.

ಬಿಜೆಪಿಯಲ್ಲಿ ಈ ಶಕ್ತಿ ಇದ್ದ ಏಕೈಕ ನಾಯಕ ಯಡಿಯೂರಪ್ಪ. ಅವರು ಕೆಳಗಿಳಿದ ನಂತರ ಆ ಸ್ಥಾನವನ್ನು ತುಂಬುವ ಶಕ್ತಿ ಯಾರಲ್ಲೂ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಹಿಡಿದು ಬಿಜೆಪಿಯ ಯಾವೊಬ್ಬ ನಾಯಕರೂ ತಮ್ಮ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಮೇಲೆ ನಿರ್ಣಾಯಕ ಪ್ರಭಾವ ಬೀರುವಷ್ಟು ಶಕ್ತರಲ್ಲ.

ಯಾವಾಗ ಯಡಿಯೂರಪ್ಪ ತೆರೆಯ ಹಿಂದೆ ಸರಿಯತೊಡಗಿದರೋ? ಇದಾದ ನಂತರ ಎದುರಾಗಿರುವ ಕೊರತೆಯನ್ನು ಬಿಜೆಪಿ ಜನನಾಯಕರ ಮೂಲಕವೇ ಸರಿಪಡಿಸಿಕೊಳ್ಳಬೇಕು. ಹೀಗಾಗಿ ಅದು ದೇವೇಗೌಡ ಮತ್ತು ಕುಮಾರಸ್ವಾಮಿ ನೇತೃತ್ವದ ಜಾ.ದಳ ಕಡೆ ಗಮನ ಹರಿಸಿದೆ. ಕುಮಾರಸ್ವಾಮಿ ಅವರನ್ನು ಅಶೋಕ್ ಅವರು ಭೇಟಿ ಮಾಡಿದ ಬೆಳವಣಿಗೆ ಇದನ್ನು ಪುಷ್ಟೀಕರಿಸಿದೆ.
ಅಂದ ಹಾಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿರುವಾಗಲೇ ಒಂದು ಬೆಳವಣಿಗೆ ನಡೆದಿತ್ತು. ಆ ಸಂದರ್ಭದಲ್ಲಿ ಜಾ.ದಳದ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಾಗ ನನಗೆ ಹಿಂಸೆ ಆಗಿರಲಿಲ್ಲ. ಆದರೆ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಹಿಂಸೆ ಅನುಭವಿಸಿದೆ ಎಂದಿದ್ದರು.

ಇದು ಬಿಜೆಪಿ ಜತೆ ಕೈ ಜೋಡಿಸಲು ಜಾ.ದಳ ಕೂಡ ಉತ್ಸುಕವಾಗಿದೆ ಎಂಬುದರ ಸಂಕೇತವಾಗಿತ್ತು. ಆದರೆ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತಿರುವ ಅರುಣ್ ಸಿಂಗ್ ಅವರು, ಜಾ.ದಳ ಪಕ್ಷ ಮುಳುಗುವ ಹಡಗು. ಅದರ ಜತೆ ಹೊಂದಾಣಿಕೆಯ ಅಗತ್ಯವೇ ಇಲ್ಲ ಎಂದುಬಿಟ್ಟರು.

ಅಲ್ಲಿಗೆ ಬಿಜೆಪಿ- ಜಾ.ದಳ ನಡುವಣ ಮೈತ್ರಿಯ ಸಾಧ್ಯತೆಗಳು ಕ್ಷೀಣಿಸಿದ್ದವು. ಆದರೆ ಯಡಿಯೂರಪ್ಪ ಅವರು ಕೆಳಗಿಳಿದಿದ್ದೇ ತಡ, ಈಗ ಬಿಜೆಪಿಯೇ ಜಾ.ದಳದ ಜತೆ ಕೈ ಜೋಡಿಸಲು ಹಪಾಹಪಿಸುತ್ತಿದೆ.

ಮಹಾನಗರ ಪಾಲಿಕೆಗಳ ಚುನಾವಣೆ ನಂತರ ಅದರಲ್ಲಿ ಕಂಡಿರುವ ಈ ಹಪಾಹಪಿ ಭವಿಷ್ಯದ ಬಗ್ಗೆ ಅದಕ್ಕಿರುವ ಆತಂಕದ ಮುನ್ಸೂಚನೆ ಅಷ್ಟೇ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಹೊಂದಾಣಿಕೆಯ ಮಾತುಕತೆ ನಡೆಸಿದ ಆರ್.ಅಶೋಕ್ ಅವರ ಮುಖವೇ ಇದನ್ನು ಸ್ಪಷ್ಟಪಡಿಸುತ್ತದೆ.

× Chat with us