ಕಷ್ಟ-ಸುಖಗಳಿಗೆ ಸ್ಪಂದಿಸುವ ಮನಃಸ್ಥಿತಿ ಕಳೆದುಕೊಂಡ ಜನತೆ
ಕೈಯಲ್ಲಿ ಹಿಡಿದಿದ್ದ ದಿನ ಪತ್ರಿಕೆಯ ಮೇಲೆ ಕಣ್ಣು ನೆಟ್ಟಿದ್ದ ಚಿದಾನಂದ ಇದ್ದಕ್ಕಿದ್ದಂತೆ ‘ಥೋ’ ಎಂದು ಗೊಣಗುಟ್ಟಿದ. ಅವನ ಗೊಣಗುಟ್ಟುವಿಕೆಯಲ್ಲಿ ಬೇಸರದ ಛಾಯೆಯನ್ನು ಕಂಡ ಶಾರದಾ: ‘ಯಾಕೀ ಏನಾಯಿತು? ‘ ಎಂದು ಕೇಳಿದಳು. ಆಕೆಯ ಪ್ರಶ್ನೆ ಕೇಳಿದರೂ ತಿರುಗಿ ನೋಡದ ಚಿದಾನಂದ: ಅಲ್ಲ, ಈ ಜಗತ್ತು ಯಾವ ಕಡೆ ಹೋಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ನೋಡು ಎಂದ.
ಅವನ ಮಾತು ಕೇಳಿ ಶಾರದಾ ‘ಅಂಥದ್ದೇನಾಯಿತು? ‘ ಅಂತ ಪ್ರಶ್ನಿಸಿದಳು. ಅಲ್ಲ, ಈ ಮನುಷ್ಯನಿಗೆ ಎಷ್ಟಿದ್ದರೂ ಸಾಲುವುದಿಲ್ಲ ನೋಡು. ಈ ಟ್ರಂಪು ಇದ್ದಾನಲ್ಲ ಇವನಿಗೀಗ ತನ್ನ ದೇಶ ಸಾಲುತ್ತಿಲ್ಲ. ಜತೆಗೆ ಅಸ್ತಿತ್ವದಲ್ಲಿರುವ ಬೇರೆ ಬೇರೆ ದೇಶಗಳ ಮೇಲೂ ಕಣ್ಣು. ಆ ವೆನಿಜುವೆಲಾಗೆ ನುಗ್ಗಿ ಅಲ್ಲಿನ ಅಧ್ಯಕ್ಷ ಮತ್ತವನ ಪತ್ನಿಯನ್ನೇ ಅಮೆರಿಕದ ಸೈನಿಕರು ಹೊತ್ತುಕೊಂಡು ಹೋದರು. ಈಗ ನೋಡಿದರೆ ಆ ಗ್ರೀನ್ ಲ್ಯಾಂಡು ನನಗೇ ಬೇಕು ಅಂತ ಕೂತಿದ್ದಾನೆ. ಕೇಳಿದರೆ ರಷ್ಯಾದಂತಹ ದೇಶ ತನ್ನ ಮೇಲೆ ಅಟ್ಯಾಕ್ ಮಾಡಲು ಇದು ಅನುಕೂಲವಾದ ಜಾಗ, ಹೀಗಾಗಿ ಅವರು ನಮ್ಮ ಮೇಲೆ ಮುಗಿ ಬೀಳುವುದಕ್ಕಿಂತ ಮುಂಚೆ ನಾವೇ ಗ್ರೀನ್ ಲ್ಯಾಂಡನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾನೆ.
ಚಿದಾನಂದನ ಧ್ವನಿಯಲ್ಲಿದ್ದ ದುಗುಡವನ್ನು ಗಮನಿಸಿದ ಶಾರದಾ: ‘ಅಮೆರಿಕದ ಕತೆ ಗೊತ್ತಿರುವುದೇ ಬಿಡಿ. ತನ್ನ ಲಾಭಕ್ಕಾಗಿ ಜಗತ್ತನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳಲು ಹೊರಟ ದೇಶ ಅದು. ತೈಲ, ಖನಿಜ ಸೇರಿದಂತೆ ಜಗತ್ತಿನ ಯಾವುದೇ ದೇಶದಲ್ಲಿ ಬೆಲೆ ಬಾಳುವುದೇನೇ ಇದ್ದರೂ ಅದು ತನಗೆ ಬೇಕು ಎಂದು ಅದು ಬಯಸುತ್ತದೆ. ತನ್ನ ಬಯಕೆಗೆ ಪೂರಕ ವಾತಾವರಣ ಇಲ್ಲದಿದ್ದರೆ, ಅಲ್ಲಿನ ಆಡಳಿತಗಳನ್ನೇ ಅಲುಗಾಡಿಸುತ್ತದೆ. ಈಗ ಇರಾನ್ ವಿಷಯದಲ್ಲಿ ಅದು ಮಾಡುತ್ತಿರುವುದು ಇದನ್ನೇ ತಾನೇ? ತನ್ನ ಕೈಗೊಂಬೆಯಾಗದ ಇರಾನಿನ ಖಮೇನಿಯನ್ನು ಕಿತ್ತು ಹಾಕಿ ನಿಯಂತ್ರಣದಲ್ಲಿರಲು ತಯಾರಿರುವ ವ್ಯಕ್ತಿಯನ್ನು ತಂದು ಕೂರಿಸುವುದು ತಾನೇ ಅದರ ಉದ್ದೇಶ? ‘ ಎಂದಳು.
ಹೀಗೆ ಶಾರದಾ ಆಡಿದ ಮಾತು ತನ್ನ ಮಾತಿಗೆ ಪೂರಕವಾದ್ದರಿಂದ ಚಿದಾನಂದನಿಗೆ ಸಮಾಧಾನವಾಯಿತು. ಎಷ್ಟೇ ಆದರೂ ಆಕೆಯೂ ವಿದ್ಯಾವಂತೆ. ನಾವಿಬ್ಬರೂ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಒಟ್ಟಿಗೇ ರಾಜ್ಯಶಾಸ್ತ್ರದಲ್ಲಿ ಎಂ. ಎ. ವ್ಯಾಸಂಗ ಮಾಡಿದವರು. ಮಲೆನಾಡಿನ ಸಾಗರದ ಬಳಿಯ ಹಳ್ಳಿಯೊಂದರ ಯುವತಿ ಶಾರದಾ ಆರು ವರ್ಷಗಳ ಹಿಂದೆ ಎಂ.ಎ. ಮಾಡಲು ಬಂದಾಗ ಪರಿಚಯವಾದವಳು. ನಾನು ಇಲ್ಲೇ ಮೈಸೂರಿನ ಯಾದವಗಿರಿಯವನು.
ಲವ್ ಅಟ್ ಫಸ್ಟ್ ಸೈಟ್ ಅನ್ನುತ್ತಾರಲ್ಲ ಹಾಗೆ, ಶಾರದಾಳನ್ನು ನೋಡಿದ ದಿನವೇ ನನ್ನಲ್ಲಿ ಪ್ರೀತಿ ಮೊಳಕೆಯೊಡೆಯಿತು. ಅದು ಚಿಗುರಲು ಕೆಲ ಕಾಲ ಬೇಕಾಯಿತಾದರೂ, ಸಮಾನ ಮನಸ್ಕತೆ ನಮ್ಮಿಬ್ಬರನ್ನೂ ಹತ್ತಿರ ಮಾಡಿತು.
ಮುಂದೆ ನಮ್ಮಿಬ್ಬರ ಮಧ್ಯೆ ಮಾತು, ಮಾತು, ಮಾತು, ಮಾತೆಂದರೆ ಜ್ಯೋತಿರ್ಲಿಂಗ ಎನ್ನುತ್ತಾರಲ್ಲ ಹಾಗೆ ನನ್ನ ಮತ್ತು ಶಾರದಾ ಮಧ್ಯೆ ಒಳ್ಳೆಯ ಸ್ನೇಹ ಬೆಳೆಯಿತು. ಸುಸಂಸ್ಕೃತ ಹೆಣ್ಣು ಮಗಳು ಶಾರದಾ ನನಗಷ್ಟೇ ಅಲ್ಲ, ನನ್ನ ಕುಟುಂಬದವರಿಗೂ ಹತ್ತಿರವಾದಳು. ವ್ಯಾಸಂಗ ಮುಗಿದ ನಂತರ ಆಕೆಗೆ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯ ಹುದ್ದೆ ಸಿಕ್ಕಿದರೆ, ನನಗೆ ಪತ್ರಿಕೋದ್ಯಮದ ಮೇಲೆ ಹುಚ್ಚು ಹೆಚ್ಚಾಗಿ ಪತ್ರಕರ್ತನಾಗಿ ರೂಪಾಂತರಗೊಂಡೆ.
ನಮ್ಮಿಬ್ಬರ ವೃತ್ತಿ ಬೇರೆ ಬೇರೆಯಾದರೂ ಮಾನಸಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ ಹುಟ್ಟಿದ ಪ್ರೀತಿ ಮಾತ್ರ ಕಮರಲಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಅಂತಿಮವಾಗಿ ಮದುವೆಯಲ್ಲಿ ಪರ್ಯವಸಾನಗೊಂಡಿತು. ಇಬ್ಬರ ಮನೆಯಲ್ಲೂ ಒಂದೇ ರಾಗ, ನಮ್ಮ ಶಾರದಾಳನ್ನು ಅರ್ಥ ಮಾಡಿಕೊಂಡಿರುವ ಚಿದಾನಂದನಿಗಿಂತ ಬೇರೆ ಗಂಡು ಬೇಕಾ ಅಂತ ಅವರ ಮನೆಯ ಸದಸ್ಯರು ಉದ್ಧರಿಸಿದರೆ, ನಮ್ಮ ಹುಡುಗನಿಗೆ ಶಾರದಾ ಇಂತಹ ತಾಳ್ಮೆಯ, ಸುಸಂಸ್ಕೃತ ಹುಡುಗಿಯೇ ಬೆಸ್ಟು ಅಂತ ನಮ್ಮ ಮನೆಯಲ್ಲಿ ಕೋರಸ್ಸು. ಪರಿಣಾಮವಾಗಿ ನಮ್ಮಿಬ್ಬರ ಮದುವೆಯೂ ಆಯಿತು.
ಒಂದು ಸಲ ಮದುವೆ ನಡೆದರೆ ಮುಂದಿನದೆಲ್ಲ ಸಂಸಾರದ ತಾಪತ್ರಯ ಎಂಬುದು ನಾಣ್ಣುಡಿಯಾದರೂ ನನ್ನ, ಶಾರದಾಳ ದಾಂಪತ್ಯ ತಾಪತ್ರಯಗಳಲ್ಲಿ ಕಳೆದು ಹೋಗಲಿಲ್ಲ. ಬಹುಶಃ ನಮ್ಮಿಬ್ಬರ ವೃತ್ತಿಯೂ ಅದಕ್ಕೆ ಕಾರಣವಿರಬಹುದು. ಹೀಗಾಗಿ ಪ್ರತಿ ದಿನ ನಮ್ಮಿಬ್ಬರ ಮಧ್ಯೆ ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ, ಅದು ರಾಜಕೀಯವಿರಬಹುದು, ಸಾಹಿತ್ಯವಿರಬಹುದು, ಸಂಗೀತವಿರಬಹುದು. ಒಟ್ಟಿನಲ್ಲಿ ನಮ್ಮಿಬ್ಬರಿಗೂ ಸಾಹಿತ್ಯವಿರಬಹುದು, ಸಂಗೀತವಿರಬಹುದು. ಒಟ್ಟಿನಲ್ಲಿ ನಮ್ಮಿಬ್ಬರಿಗೂ ಚರ್ಚಿಸಲು ನೂರು ವಿಷಯಗಳು. ಇತ್ತೀಚೆಗಂತೂ ಜಗತ್ತಿನ ವಿದ್ಯಮಾನಗಳ ಬಗ್ಗೆ ನಾನು, ಶಾರದಾ ಕುತೂಹಲದಿಂದ ಚರ್ಚಿಸುತ್ತೇವೆ.
ರೀ, ಇದೇ. ನಮ್ಮ ಮದುವೆ ಹೊತ್ತಿನಲ್ಲಿ ಹತ್ತು ಗ್ರಾಂ ಬಂಗಾರಕ್ಕೆ ನಲವತ್ತು ಸಾವಿರ ಇದ್ದುದು, ಈಗ ಒಂದೂವರೆ ಲಕ್ಷಕ್ಕೇರಿದೆ. ಕೆಜಿ ಬೆಳ್ಳಿಯ ಬೆಲೆ ಹತ್ತಿರ ಮೂರೂವರೆ ಲಕ್ಷದ ಗಡಿ ತಲುಪಿದೆ. ಹೀಗೆ ಬಂಗಾರದ ದರ ಏರುತ್ತಿದ್ದರೆ ಬಡ, ಮಧ್ಯಮ ವರ್ಗದವರು ಮದುವೆ ಮಾಡುವುದು ಹೇಗೆ? ಒಂದು ತಾಳಿಗೆ ನಾಲೈದು ಲಕ್ಷ ರೂಪಾಯಿ ಕೊಡುವುದು ಎಂದರೆ ಇದೇನು ಕರ್ಮ? ಅಂತ ಶಾರದಾ ಆತಂಕದಿಂದ ಹೇಳುತ್ತಾಳೆ.
ಹೌದು ಶಾರದಾ, ಜಗತ್ತು ಶಾಂತಿಯಿಂದಿದ್ದರೆ, ಸುಸ್ಥಿರ ಸ್ಥಿತಿಯಲ್ಲಿದ್ದರೆ ಜನರಲ್ಲಿ ಆತಂಕ ಹುಟ್ಟುವುದಿಲ್ಲ. ಆದರೆ ಯಾವಾಗ ಒಂದು ಜಗತ್ತಿನಲ್ಲಿ ಶಾಂತಿ, ಸ್ಥಿರತೆ ಕಾಣಿಸದಿದ್ದರೆ ಷೇರು ಮಾರುಕಟ್ಟೆ ಕುಸಿಯುತ್ತದೆ. ಹೂಡಿಕೆದಾರರು ಉಳಿದೆಲ್ಲಕ್ಕಿಂತ ಬಂಗಾರದ ಮೇಲೆ ಹೆಚ್ಚು ಭರವಸೆ ಇಟ್ಟು, ಅದರ ಮೇಲೆ ಹಣ ವಿನಿಯೋಗಿಸುತ್ತಾರೆ. ಅವರ ಬೇಡಿಕೆ ಹೆಚ್ಚಾದರೆ ಚಿನ್ನದ ಬೆಲೆ ಗಗನಕ್ಕೇರುತ್ತಾ ಹೋಗುತ್ತದೆ ಅಂತ ನಾನು ಪ್ರತಿಕ್ರಿಯಿಸುತ್ತೇನೆ.
ಆಗೆಲ್ಲ ಶಾರದಾ ಮಾನವದನಗಳಾಗುತ್ತಾಳೆ. ಆಗ ಆಕೆಯ ಮಾತು ಇದ್ದಕ್ಕಿದ್ದಂತೆ ಬೇರೆ ದಿಕ್ಕಿಗೆ ತಿರುಗುತ್ತದೆ. ಜೀವನ ಈ ರೀತಿ ದುಬಾರಿಯಾ ಗುತ್ತಾ ನಡೆದರೆ, ದುಡಿಯುವವರಾದರೂ ಎಷ್ಟು ದುಡಿಯಬೇಕು? ಯಾವ ನಂಬಿಕೆಯ ಮೇಲೆ ಬದುಕು ಸಾಗಿಸಬೇಕು ಎಂದು ಕೇಳುತ್ತಾಳೆ. ಆಕೆಯ ಮಾತೂ ಸರಿಯೇ. ಆದರೆ ಜಗತ್ತು ಹೀಗೆ ನಡೆಯುತ್ತಿದ್ದರೆ, ಬದುಕಿಗಾಗಿ ಮನುಷ್ಯ ಪರದಾಡುವ ಸ್ಥಿತಿ ಬಂದರೆ ಏನು ಮಾಡಬೇಕು? ಬದುಕುವುದಂತೂ ಅನಿವಾರ್ಯ. ನೋಡುತ್ತಾ ಹೋದರೆ ಮನುಷ್ಯನ ಬದುಕು ಇಷ್ಟು ದುರ್ಬರವಾಗುತ್ತಾ ಸಾಗಲು ಜಾಗತೀಕರಣದ ಹೊಡೆತ ಕಾರಣ. ದೇಶದಲ್ಲಿ ದುಡ್ಡಿನ ಹರಿವು ಇಲ್ಲ ಅಂತ ನಮ್ಮ ಆಡಳಿತಗಾರರು ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದರು. ಜಗತ್ತಿನ ಎಲ್ಲ ಮೂಲೆಗಳಿಂದ ನಮ್ಮ ದೇಶಕ್ಕೆ ಸಂಪತ್ತು ಹರಿಯತೊಡಗಿತು. ಉದ್ಯೋಗಗಳು ಸೃಷ್ಟಿಯಾಗತೊಡಗಿದವು. ಬಡ, ಮಧ್ಯಮ ವರ್ಗದ ಮಕ್ಕಳು ಒಳ್ಳೆಯ ಸಂಬಳ ಎಣಿಸುವ ಸ್ಥಿತಿಗೆ ಬಂದರು.
ಒಂದು ದೃಷ್ಟಿಯಿಂದ ಇದು ಒಳ್ಳೆಯದು ಅಂತ ನಮಗೆ ಅನ್ನಿಸಿದ್ದೂ ನಿಜವೇ. ಆದರೆ ಕಾಲ ಕಳೆಯುತ್ತಾ ಹೋದಂತೆ ಜಾಗತೀಕರಣದ ಹೊಡೆತ ಮನುಷ್ಯ – ಮನುಷ್ಯನ ನಡುವಣ ಸಂಬಂಧವನ್ನು ಎಷ್ಟು ಹಾಳುಗೆಡವಿದೆ ಎಂದರೆ ಒಬ್ಬರು ಮತ್ತೊಬ್ಬರನ್ನು ಹೃದಯದಿಂದ ಅರ್ಥ ಮಾಡಿಕೊಳ್ಳುವ, ಕಷ್ಟ-ಸುಖಗಳಿಗೆ ಸ್ಪಂದಿಸುವ ಮನಃಸ್ಥಿತಿಯನ್ನೇ ಕಳೆದುಕೊಂಡಿದ್ದಾರೆ. ಯಾರನ್ನು ನೋಡಿದರೂ ದುಡ್ಡು, ದುಡ್ಡು, ದುಡ್ಡು. ಅದಿಲ್ಲವೆಂದರೆ ಬದುಕೇ ಇಲ್ಲ ಎನ್ನುವಷ್ಟು ಗಾಢವಾದ ನಂಬಿಕೆ ಬೇರೂರಿಬಿಟ್ಟರೆ ಮನುಷ್ಯ ಜನಾಂಗದ ಭವಿಷ್ಯ ಏನಾಗಬೇಕು? ಅವರ ಹಾಗಂತ ಶಾರದಾ ಮುಂದೆ ಹೇಳಿದರೆ ಆಕೆ ಕೂಡ ಹೂಂಗುಟ್ಟುತ್ತಾಳೆ. ತಕ್ಷಣ ಆಕೆಗೆ ಚಾರ್ಲ್ಸ್ ಡಾರ್ವಿನ್ ನೆನಪಿಗೆ ಬರುತ್ತಾನೆ. ಬಲಿಷ್ಠ ತಳಿಗಳು ಉಳಿಯುತ್ತವೆ. ದುರ್ಬಲ ತಳಿಗಳು ಅಳಿಯುತ್ತವೆ ಎಂಬ ಅವನ ವಿಖ್ಯಾತ ನುಡಿಗಟ್ಟು ಕಾಡುತ್ತದೆ. ಅಂದ ಹಾಗೆ ಜೀವ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಈ ಮಾತು ಮನುಷ್ಯನಿಗೆ ಅನ್ವಯವಾಗಬಾರದು ಅಂತ ತಾನೇ ನಮ್ಮ ರಾಜಕಾರಣದ ಉದ್ದೇಶ. ಮನುಷ್ಯನ ಕಲ್ಪನೆಯಲ್ಲಿ ಸಾಮಾಜಿಕ ನ್ಯಾಯ ಹೆಮ್ಮರವಾಗಿದ್ದು ಇದೇ ಕಾರಣಕ್ಕಾಗಿ ತಾನೇ? ಆದರೆ, ನಮ್ಮ ಆಡಳಿತಗಾರರನ್ನು ನೋಡಿದರೆ ದಿನ ಕಳೆದಂತೆ ಸಾಮಾಜಿಕ ನ್ಯಾಯದ ಶಕ್ತಿಯೇ ಉಡುಗಿ ಹೋಗಿದೆ. ನಮ್ಮ ಜಾತಿಗೆ ನ್ಯಾಯ, ನಮಗೆ ಬೇಕಾದವರಿಗೆ ನ್ಯಾಯ ಎಂಬಲ್ಲಿಗೆ ತಲುಪಿದ ಈ ಸಾಮಾಜಿಕ ನ್ಯಾಯದ ಕತೆ ಮುಂದಿನ ಕೆಲವೇ ವರ್ಷಗಳಲ್ಲಿ ಕತೆಯಂತೆ ಕಾಣಬಹುದೇನೋ?
ಹೀಗೆ ಒಂದೇ ಸಮನೆ ಶಾರದಾ ಓತಪ್ರೋತವಾಗಿ ಮಾತುಗಳನ್ನು ಉದುರಿಸಿದಾಗ, ಅದನ್ನು ಇಲ್ಲ ಎಂದು ಹೇಳುವ ಧೈರ್ಯ ಚಿದಾನಂದನಿಗಾಗಲಿಲ್ಲ. ಹೀಗಾಗಿ ಅವನು ಮತ್ತೊಂದು ದಿಕ್ಕಿಗೆ ತಿರುಗಿದ. ನೋಡು ಶಾರದಾ, ಇವತ್ತಿನ ಸ್ಥಿತಿ ನೋಡಿದರೆ, ಜಗತ್ತು ಓಡುತ್ತಿರುವ ವೇಗವನ್ನು ನೋಡಿದರೆ, ಮನುಷ್ಯ ತನ್ನ ಬದುಕಿಗಾಗಿ ದೊಡ್ಡ ಮಟ್ಟದಲ್ಲಿ ಪರದಾಡುವ ಕಾಲ ಹತ್ತಿರವಾಗಿದೆ. ಈಗಾಗಲೇ ಅದು ಶುರುವಾಗಿದೆ ಎಂಬುದು ಬೇರೆ ಮಾತು. ಆದರೆ ವ್ಯವಸ್ಥೆಯಲ್ಲಿರುವ ಬಹುತೇಕರು ಅದರ ತಿರುಗಣಿಗೆ ಬೀಳುತ್ತಾರೆ. ಹೀಗಾಗಿ ನನಗನ್ನಿಸುವುದು. ಇಂತಹ ಕಾಲಘಟ್ಟವನ್ನು ಎದುರಿಸಿ ಬದುಕಬೇಕೆಂದರೆ ನಮಗೆ ಪುನಃ ಗಾಂಧಿ, ಬುದ್ಧ, ಬಸವ ಹತ್ತಿರವಾಗಬೇಕು. ನಾವು ಈಗ ಆಡು ಮಾತಿನಲ್ಲಿ ಅವರನ್ನು ಉಳಿಸಿಕೊಂಡಿದ್ದೇವೆ. ಆದರೆ ಬದುಕು ಹೆಜ್ಜೆ ಹೆಜ್ಜೆಗೂ ಸಂಕಷ್ಟಕ್ಕೊಳಗಾದಾಗ ಮತ್ತು ಅದರ ಮಧ್ಯೆಯೇ ಬದುಕುವ ಅನಿವಾರ್ಯತೆ ಸೃಷ್ಟಿಯಾದಾಗ ನಮಗೆ ಗಾಂಧಿ, ಬುದ್ಧ, ಬಸವ ತೋರಿದ ದಾರಿ ಅನಿವಾರ್ಯ. ಬದುಕಿಗೆ ಎಷ್ಟು ಬೇಕು ಅಂತ ಅವರು ಹೇಳು ವುದನ್ನು ಅರ್ಥ ಮಾಡಿಕೊಳ್ಳದಿದ್ದರೆ ಮನುಷ್ಯನ ಬದುಕು ಘನಘೋರ ಸ್ಥಿತಿಗೆ ತಲುಪುತ್ತದೆ.
ಅಂದರೆ ನಾವು ಜಂಗಲ್ ರಾಜ್‌ಗೆ ಹತ್ತಿರವಾಗುತ್ತಿದ್ದೇವೆ ಅಂತಲ್ಲವೇ? ಅಂತ ಶಾರದಾ ಕೇಳಿದಳು. ಅದಕ್ಕೆ ಪ್ರತಿಯಾಗಿ ಚಿದಾನಂದ ಶಾಂತವಾಗಿ; ಬರೀಜಂಗಲ್ ರಾಜ್ ಅಲ್ಲ, ಸುಪ್ರೀಂಜಂಗಲ್ ರಾಜ್‌ನಗಡಿಯಲ್ಲಿದ್ದೇವೆ. ಜಂಗಲ್ ರಾಜ್‌ನಲ್ಲಿ ಕನಿಷ್ಠ ಪಕ್ಷ ದುರ್ಬಲ ಪ್ರಾಣಿಗಳು, ಬಲಿಷ್ಠ ಪ್ರಾಣಿಗಳಿಂದ ದೂರ ಇರುತ್ತವೆ. ಹೀಗಾಗಿ ಅಲ್ಲಿ ದುರ್ಬಲ ಪ್ರಾಣಿಗಳಿಗೆ ಸಾಮೂಹಿಕವಾಗಿ ನಾಶವಾಗುವ ಆತಂಕ ಇರುವುದಿಲ್ಲ. ಆದರೆ ಮನುಷ್ಯನ ರಾಜ್ಯದಲ್ಲಿ ದುರ್ಬಲರು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಲಿಷ್ಠರ ಮುಷ್ಟಿಯಲ್ಲಿರುತ್ತಾರೆ. ತಪ್ಪಿಸಿಕೊಂಡು ಹೋಗಲೂ ಅವರ ಕೈಲಿ ಸಾಧ್ಯವಿಲ್ಲ ಎಂದು ನಿಟ್ಟುಸಿರು ಬಿಟ್ಟ.
ಅವನು ನಿಟ್ಟುಸಿರು ಬಿಟ್ಟಿದ್ದನ್ನು ಕಂಡ ಶಾರದಾ ಜಗತ್ತು ಕಂಡ ಮಹಾನ್ ಭೌತ ವಿಜ್ಞಾನಿಗಳಲ್ಲಿ ಒಬ್ಬರಾದ ಸ್ಟೀಫನ್ ಹಾಕಿಂಗ್ ಅವರು ‘ಮನುಷ್ಯ ಜನಾಂಗ ಬದುಕಬೇಕು ಎಂದರೆ ಈ ಶತಮಾನದ ಅಂತ್ಯದೊಳಗೆ ಭೂಮಿಯನ್ನು ಬಿಟ್ಟು ಬೇರೊಂದು ಗ್ರಹವನ್ನು ಹುಡುಕಿಕೊಳ್ಳಬೇಕು ಅನ್ನುತ್ತಾರೆ. ಅವರ ಮಾತು ನಿಜವಾಗುತ್ತಿದೆ ಅಂತಲ್ಲವೇ? ಅಂತ ಕೇಳಿದಳು.
ಅದಕ್ಕೆ ಪ್ರತಿಯಾಗಿ ಉತ್ತರಿಸಿದಚಿದಾನಂದ: ‘ಮನುಷ್ಯ ಭೂಮಿಯನ್ನು ಹಾಳುಗೆಡವುತ್ತಿರುವ ರೀತಿಯನ್ನು ನೊಡಿದರೆ, ಅಲ್ಲಿಯವರೆಗೆ ಕಾಯಲು ಅವಕಾಶವಿಲ್ಲ ಅನ್ನಿಸುತ್ತದೆ’ ಅಂದ. ಶಾರದಾ ಮೌನವಾಗಿ ಮನೆಯ ಚಾವಣಿಯನ್ನು ನಿಟ್ಟಿಸಿದಳು.
ಕಲ್ಕತ್ತಾ : ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ನ್ಯಾಯ, ಸ್ವಾತಂತ್ರ್ಯ,…
ಉಡುಪಿ : ಐಲ್ಯಾಂಡ್‌ಗಳನ್ನೂ ಸೇರಿಸಿಕೊಂಡು, ಸಂಪೂರ್ಣ ಕರಾವಳಿ ಭಾಗದಲ್ಲಿ ಹೊಸ ದೃಷ್ಟಿಕೋನದಿಂದ ಪ್ರವಾಸೋದ್ಯಮ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಕೇವಲ…
ಸೋಮವಾರಪೇಟೆ : ಸಮೀಪದ ಕಾಜೂರು ಗ್ರಾಮದ ಪುಷ್ಪ ಎಂಬುವವರ ಮನೆಗೆ ನೆನ್ನೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಮನೆ ಸಂಪೂರ್ಣ…
ಹೊಸದಿಲ್ಲಿ : ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಿ ಸಂಪ್ರದಾಯ…
ಬೆಂಗಳೂರು : ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನಗರದ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…
ಮೈಸೂರು : ಭಾರತದ ಸಂವಿಧಾನವು ನಮ್ಮ ದೇಶದ ಆತ್ಮವಾಗಿದ್ದು, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮೂಲಭೂತ ತತ್ವಗಳನ್ನು ನೀಡಿದೆ.…