ಕಾಂಗ್ರೆಸ್ ಗೆದ್ದರೆ ಸರ್ಕಾರದ ಆತ್ಮವಿಶ್ವಾಸ ಕುಗ್ಗಿಸಲು ಹೊರಟಿರುವ ಬಿಜೆಪಿ ಮಿತ್ರಕೂಟದ ಪಾಲಿಗೆ
ಹಿನ್ನಡೆ; ಬಿಜೆಪಿ ಮಿತ್ರಕೂಟ ಗೆದ್ದರೆ ಕಾಂಗ್ರೆಸ್ ಶಕ್ತಿ ಕಡಿಮೆಯಾದಂತೆ ಎಂಬ ಆತಂಕ
ಬೆಂಗಳೂರು ಡೈರಿ
ಆರ್.ಟಿ.ವಿಠಲಮೂರ್ತಿ
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ ಹದಿಮೂರರಂದು ಉಪಚುನಾವಣೆ ನಡೆಯಲಿದೆ. ಹಳೇ ಮೈಸೂರು ಭಾಗದ ಚನ್ನಪಟ್ಟಣ, ಕಿತ್ತೂರು ಕರ್ನಾಟಕ ಭಾಗದ ಶಿಗ್ಗಾಂವಿ ಮತ್ತು ಸಂಡೂರುವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಈ ಉಪಚುನಾವಣೆ ಕರ್ನಾಟಕದ ರಾಜಕೀಯ ಚಿತ್ರವನೇನೂ ಬದಲಿಸುವುದಿಲ್ಲ.
ಏಕೆಂದರೆ ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಗಳಿಸಿದರೂ, ಬಿಜೆಪಿ-ಜಾ.ದಳ ಮಿತ್ರಕೂಟವೇ ಗೆಲುವು ಗಳಿಸಿದರೂ ಅದು ರಾಜಕೀಯ ಸ್ಥಿತ್ಯಂತರಗಳಿಗೆ ಕಾರಣವಾಗುವುದಿಲ್ಲ. ಏಕೆಂದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಈಗಾಗಲೇ ನೂರಾ ಮೂವತ್ತೈದರಷ್ಟು ಶಾಸಕ ಬಲವನ್ನು ಹೊಂದಿದೆ. ಇದೇ ರೀತಿ ಬಿಜೆಪಿ ಮಿತ್ರಕೂಟದಲ್ಲಿ ಎಂಬತ್ತಕ್ಕೂ ಹೆಚ್ಚು ಶಾಸಕರಿದ್ದರೂ ಅದು ಸರ್ಕಾರವನ್ನು ಉರುಳಿಸುವ ಶಕ್ತಿಯುನ್ನೇನೂ ಪಡೆಯುವುದಿಲ್ಲ.
ಇಷ್ಟಾದರೂ ಈ ಉಪ ಚುನಾವಣೆಗಳಿಗೆ ವಿಶೇಷ ಮಹತ್ವವಿದೆ. ಏಕೆಂದರೆ ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಅದ್ದೂರಿ ಗೆಲುವು ಗಳಿಸಿದರೆ, ಅದು ಸರ್ಕಾರದ ಆತ್ಮವಿಶ್ವಾಸವನ್ನು ಕುಗ್ಗಿಸಲು ಹೊರಟಿರುವ ಬಿಜೆಪಿ ಮಿತ್ರಕೂಟದ ಪಾಲಿಗೆ ಹಿನ್ನಡೆಯಾಗುತ್ತದೆ. ಒಂದು ವೇಳೆ ಬಿಜೆಪಿ ಮಿತ್ರಕೂಟವೇ ದೊಡ್ಡ ಮಟ್ಟದ ಗೆಲುವು ಗಳಿಸಿದರೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷದೊಳಗೆ ತನ್ನ ಶಕ್ತಿ ಕಡಿಮೆಯಾಯಿತು ಎಂಬ ಆತಂಕ ಕಾಂಗ್ರೆಸ್ ಪಾಳೆಯದಲ್ಲಿ ಆರಂಭವಾಗುತ್ತದೆ. ಆ ದೃಷ್ಟಿಯಿಂದ ಈಗ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕುತೂಹಲಕಾರಿ ಎಂಬುದು ಸ್ಪಷ್ಟ. ಅಂದ ಹಾಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಗೆಲುವು ಗಳಿಸಿದವರು ಜಾ.ದಳ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಿತ್ರ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಗೆಲುವು ಗಳಿಸಿದರಲ್ಲ ಇದಾದ ನಂತರ ಖಾಲಿ ಉಳಿದ ಕ್ಷೇತ್ರಕ್ಕೆ ಉಪ ಚುನಾವಣೆ ಅನಿವಾರ್ಯವಾಯಿತು. ಇದೇ ರೀತಿ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಗೆಲುವು ಗಳಿಸಿದ್ದ ಕಾಂಗ್ರೆಸ್ ಪಕ್ಷದ ತುಕಾರಾಂ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಗಳಿಸಿದ ಪರಿಣಾಮವಾಗಿ ಆ ಕ್ಷೇತ್ರವೂ ಖಾಲಿ ಉಳಿದಿದೆ. ಇದೇ ರೀತಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಕಳೆದ ಬಾರಿ ಗೆಲುವು ಗಳಿಸಿದವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಆದರೆ ಅವರು ಕೂಡ ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಮಿತ್ರಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಗಳಿಸಿದರು. ಆ ಮೂಲಕ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಖಾಲಿಯಾಯಿತು.
ಅರ್ಥಾತ್, ಖಾಲಿಯಾದ ಮೂರೂ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರ ಕಾಂಗ್ರೆಸ್‌ನದ್ದಾದರೆ, ಉಳಿದಂತೆ ಒಂದು ಕ್ಷೇತ್ರ ಬಿಜೆಪಿಯದು ಮತ್ತು ಮಗದೊಂದು ಕ್ಷೇತ್ರ ಜಾ.ದಳಗೆ ಸೇರಿದ್ದು, ಹೀಗಾಗಿ ಈ ಕ್ಷೇತ್ರಗಳಲ್ಲಿ ತಮ್ಮ ತಮ್ಮ ಶಕ್ತಿಯನ್ನು ತೋರಿಸುವ ಅನಿವಾರ್ಯತೆ ಮೂರೂ ರಾಜಕೀಯ ಪಕ್ಷಗಳಿಗಿದೆ. ಈ ಪೈಕಿ ಬಿಜೆಪಿ ಮಿತ್ರಕೂಟಕ್ಕೆ ಕಳೆದ ಬಾರಿಗಿಂತ ಹೆಚ್ಚು ಶಕ್ತಿ ಇರುವಂತೆ ಕಾಣುತ್ತಿರುವುದು ನಿಜ.
ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜಾ.ದಳ ಪಕ್ಷಗಳು ಸ್ವಂತ ಬಲದ ಮೇಲೆ ಸ್ಪರ್ಧೆ ಮಾಡಿದ್ದವು. ಆದರೆ ಈ ಬಾರಿಯ ಉಪ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಪರಸ್ಪರ ಕೈ ಹಿಡಿದಿವೆ. ಹೀಗಾಗಿ ಈ ಮಿತ್ರಕೂಟದ ಬಲ ಏಕೀಕೃತಗೊಂಡು ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ಸವಾಲಾಗುವುದು ನಿಶ್ಚಿತ. ಆದರೆ ಅದೇ ಕಾಲಕ್ಕೆ ಕಾಂಗ್ರೆಸ್ ಪಕ್ಷಕ್ಕಿರುವ ಅನುಕೂಲವೆಂದರೆ, ಸದ್ಯ ಅದು ಅಧಿಕಾರದಲ್ಲಿದೆ. ಒಂದು ಪಕ್ಷ ಅಧಿಕಾರಕ್ಕೆ ಬಂದ ಪೂರ್ವಾರ್ಧವೇನಿದೆ ಅದು ಸಹಜವಾಗಿಯೇ ಅದರ ಶಕ್ತಿ ಹೆಚ್ಚಿರುವ ಕಾಲವಾಗಿರುತ್ತದೆ. ಹೀಗಾಗಿ ಮೂರೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅದು ತನ್ನೆಲ್ಲ ಬಲವನು ಬಳಸಿಕೊಂಡು ಹೋರಾಡುವುದು ಖಚಿತ.
ಆ ದೃಷ್ಟಿಯಿಂದ ಉಪಚುನಾವಣೆಯ ಕಣದಲ್ಲಿ ಎದುರಾಗಲಿರುವ ಎರಡು ಪ್ರಬಲ ಶಕ್ತಿಗಳು ಗೆಲುವಿಗಾಗಿ ಖಾಡಾಖಾಡಿ ಹೋರಾಟ ನಡೆಸುವುದರಿಂದ ಉಪ ಚುನಾವಣೆಗಳು ಕುತೂಹಲಕಾರಿಯಾಗಿ ರುತ್ತವೆ. ಅಂದ ಹಾಗೆ ಉಪ ಚುನಾವಣೆಯ ಕಾವು ಕರ್ನಾಟಕದಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸತೊಡಗಿದ್ದು, ಜನತಾದಳ ಅಧಿಕಾರದಲ್ಲಿದ್ದಾಗ ಜೆ.ಹೆಚ್.ಪಟೇಲರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಮನಗರ, ಮೊಳಕಾಲ್ಲೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದಾಗ ನಿಜಕ್ಕೂ ಅದು ಯುದ್ಧದ ಕಾವು ಪಡೆಯಿತು.
ಇದಕ್ಕಿದ್ದ ಮುಖ್ಯ ಕಾರಣವೆಂದರೆ ಅವತ್ತಿಗಾಗಲೇ ಜನತಾದಳದ ಮುಂಚೂಣಿಯಲ್ಲಿ ದೇವೇಗೌಡರಂತಹ ದೊಡ್ಡ ನಾಯಕರ ಉಪಸ್ಥಿತಿಯಿತ್ತು. ಅದರಲ್ಲೂ ಆ ಹೊತ್ತಿಗಾಗಲೇ ದೇವೇಗೌಡರು ಪ್ರಧಾನಿಯಾಗಿ ಹಿಂತಿರುಗಿದ್ದರಲ್ಲ. ಹೀಗಾಗಿ ಜನತಾದಳದ ಅಭ್ಯರ್ಥಿಗಳನ್ನು ಸೋಲಿಸುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕಿತ್ತು. ಹೀಗಾಗಿ ರಾಮನಗರದಲ್ಲಿ ಸಿ.ಎಂ.ಲಿಂಗಪ್ಪ ಕಾಂಗ್ರೆಸ್ ಅಭ್ಯರ್ಥಿಯಾದರೆ, ಮೊಳಕಾಲ್ಲೂರಿನಲ್ಲಿ ಎನ್.ವೈ.ಗೋಪಾಲಕೃಷ್ಣ ಅವರು ಕಾಂಗ್ರೆಸ್ ಅಭ್ಯರ್ಥಿಯಾದರು. ಈ ಅಭ್ಯರ್ಥಿಗಳನ್ನು ಮುಂದಿಟ್ಟುಕೊಂಡು ಅವತ್ತು ಕಾಂಗ್ರೆಸ್ ಯಾವ ರೀತಿ ಹೋರಾಡಿತೆಂದರೆ ರಾಮನಗರ ಮತ್ತು ಮೊಳಕಾಲ್ಲೂರು ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಕುತೂಹಲದ ಸಂಗತಿ ಎಂದರೆ ಅವತ್ತು ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಧರಂಸಿಂಗ್ ಮತ್ತು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೇನಾನಿಯ ಪಟ್ಟವನ್ನು ಹೊತ್ತುಕೊಂಡಿದ್ದವರು ಇವತ್ತು ಉಪ ಮುಖ್ಯಮಂತ್ರಿಯಾಗಿರುವ ಇದೇ ಡಿ.ಕೆ.ಶಿವಕುಮಾರ್. ವಸ್ತುಸ್ಥಿತಿ ಎಂದರೆ ಉಪಚುನಾವಣೆ ಎಂಬುದು ಒಂದು ಸರ್ಕಾರದ ಅಂತಃಶ್ಯಕ್ತಿಯನ್ನು ಕುಗ್ಗಿಸಿದ್ದು ಈ ಉಪಚುನಾವಣೆಯಲ್ಲಿ. ಪರಿಣಾಮ ಅವತ್ತು ಉಪಚುನಾವಣೆಯಲ್ಲಿ ಗೆಲುವು ಗಳಿಸಿದ ಕಾಂಗ್ರೆಸ್ ಪಕ್ಷ 2004 ವಿಧಾನಸಭಾ ಚುನಾವಣೆಯವರೆಗೂ ಅದೇ ಆತ್ಮಬಲದೊಂದಿಗೆ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಿತು.
ಮುಂದೆ ಉಪ ಚುನಾವಣೆಯ ಕಾವು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿದ್ದು, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವತ್ತು ಕಾಂಗ್ರೆಸ್-ಜಾ.ದಳ ಮಿತ್ರಕೂಟ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಆ ಕೂಟದಿಂದ ಹೊರಬಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಹೀಗೆ ತಮ್ಮ ಪಕ್ಷದಿಂದ ಹೊರಬಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಲು ಅವತ್ತು ಬಿಜೆಪಿ-ಜಾ.ದಳ ಮಿತ್ರಕೂಟ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ರಣರಂಗಕ್ಕಿಳಿದರು. ಪರಿಣಾಮ ಕಾಂಗ್ರೆಸ್ ಮತ್ತು ಬಿಜೆಪಿ-ಜಾ.ದಳ ಮಿತ್ರಕೂಟದ ನಡುವೆ ಭಾರೀ ಹಣಾಹಣಿಯೇ ನಡೆದು ಹೋಯಿತು. ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರು ಗೆಲುವು ಗಳಿಸಿದರೂ, ಉಪಚುನಾವಣೆಯಲ್ಲಿ ಗೆಲುವು ಗಳಿಸಲು ಹೋರಾಟ ನಡೆಸಬೇಕಾಗಿ ಬಂದ ರೀತಿಯಿಂದ ಅವರು ಬೇಸತ್ತಿದ್ದರು. ಅಷ್ಟೇ ಅಲ್ಲ, ತಮಗೆ ಇದೇ ಕೊನೆಯ ಚುನಾವಣೆ ಎಂದೂ ಸಿದ್ದರಾಮಯ್ಯ ಬೇಸತ್ತು ಹೇಳಿದ್ದರು. ಆದರೆ ಮುಂದೆ ಪರಿಸ್ಥಿತಿ ಬೇರೆಯಾಯಿತು. ಆ ಮಾತು ಬೇರೆ. ಆದರೆ ಉಪಚುನಾವಣೆಯ ಕಾವು ಹೇಗಿತ್ತು ಎಂಬುದಕ್ಕೆ ಅವತ್ತು ಸಿದ್ದರಾಮಯ್ಯ ಅವರು ನೊಂದ ರೀತಿಯೇ ಸಾಕ್ಷಿ.
ಇದಾದ ನಂತರದ ದಿನಗಳಲ್ಲಿ ಉಪಚುನಾವಣೆ ಎಂಬುದು ಕರ್ನಾಟಕದ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಸಮರ ವಾಗಿಯೇ ನಡೆದುಕೊಂಡು ಬಂದಿದೆ. ಈಗಲೂ ಅಷ್ಟೇ. ಚನ್ನಪಟ್ಟಣದ ಕಣದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜಾ.ದಳ ಹೋರಾಟ ನಡೆಸಬೇಕಿದ್ದರೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರ ಸೋಲಿನಿಂದ ಕ್ರುದ್ಧರಾಗಿರುವ ಡಿ.ಕೆ.ಶಿವಕುಮಾರ್ ಈ ಸೋಲಿಗೆ ಚನ್ನಪಟ್ಟಣದಲ್ಲಿ ಉತ್ತರ ನೀಡಲು ಹಾತೊರೆಯುತ್ತಿದ್ದಾರೆ.
ಇದೇ ರೀತಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ತಯಾರಿ ನಡೆಸಿದ್ದರೆ, ಬಿಜೆಪಿ ಮಿತ್ರಕೂಟದ ಅಭ್ಯರ್ಥಿಯನ್ನು ಗೆಲ್ಲಿಸಲು ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಸಮರ ಸನ್ನದ್ದರಾಗಿ ನಿಂತಿದ್ದಾರೆ. ಶಿಗ್ಗಾಂವಿಯ ಪರಿಸ್ಥಿತಿಯೂ ಇದಕ್ಕಿಂತ ಬೇರೆ ಅಲ್ಲ. ಹೀಗಾಗಿ ಚುನಾವಣೆಯ ಫಲಿತಾಂಶ ಕರ್ನಾಟಕದ ರಾಜಕೀಯ ಚಿತ್ರವನ್ನು ಬದಲಿಸದಿದ್ದರೂ ಅದು ಮೂರು ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದಂತೂ ನಿಜ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜಾ.ದಳ ಪಕ್ಷಗಳು ಸ್ವಂತ ಬಲದ ಮೇಲೆ ಸ್ಪರ್ಧೆ ಮಾಡಿದ್ದವು. ಆದರೆ ಈ ಬಾರಿಯ ಉಪಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಪರಸ್ಪರ ಕೈ ಹಿಡಿದಿವೆ. ಹೀಗಾಗಿ ಈ ಮಿತ್ರಕೂಟದ ಬಲ ಏಕೀಕೃತಗೊಂಡು ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ಸವಾಲಾಗುವುದು ನಿಶ್ಚಿತ. ಆದರೆ ಅದೇ ಕಾಲಕ್ಕೆ ಕಾಂಗ್ರೆಸ್ ಪಕ್ಷಕ್ಕಿರುವ ಅನುಕೂಲವೆಂದರೆ, ಸದ್ಯ ಅದು ಅಧಿಕಾರದಲ್ಲಿದೆ. ಒಂದು ಪಕ್ಷ ಅಧಿಕಾರಕ್ಕೆ ಬಂದ ಪೂರ್ವಾರ್ಧವೇನಿದೆ ಅದು ಸಹಜವಾಗಿಯೇ ಅದರ ಶಕ್ತಿ ಹೆಚ್ಚಿರುವ ಕಾಲವಾಗಿರುತ್ತದೆ. ಹೀಗಾಗಿ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅದು ತನ್ನೆಲ್ಲ ಬಲವನ್ನು ಬಳಸಿಕೊಂಡು ಹೋರಾಡುವುದು ಖಚಿತ.
ಕುವೈತ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್ ಮಿಶಾಲ್…
ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…
ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…
ಕುವೈತ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್ ಮಿಶಾಲ್ ಅಲ್…
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…