ಆರ್.ಟಿ.ವಿಠಲಮೂರ್ತಿ

ಯಶಸ್ಸು ಕಾಣದ ಮಿತ್ರಕೂಟದ ಲೆಕ್ಕಾಚಾರ

ಆರ್‌.ಟಿ ವಿಠ್ಠಲಮೂರ್ತಿ

ಆಳುವ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಹೊರಟವರು ತಾವೇ ಅದರ ಬಲೆಗೆ ಸಿಲುಕುವುದು ವಿಪರ್ಯಾಸ. ಇತ್ತೀಚೆಗೆ ನಡೆದ ಬಿಜೆಪಿ-ಜಾ.ದಳ ಮಿತ್ರಕೂಟದ ಮೈಸೂರು ಚಲೋ ಪಾದಯಾತ್ರೆ ಇದಕ್ಕೆ ಉದಾಹರಣೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾದ ಪ್ರಕರಣ ಮತ್ತು ಮುಡಾ ಹಗರಣಗಳನ್ನು ಹಿಡಿದುಕೊಂಡು ಕರ್ನಾಟಕದ ಪ್ರತಿಪಕ್ಷಗಳು ಹೋರಾಟ ಆರಂಭಿಸಿದ ವಲ್ಲ ಇಂತಹ ಹೋರಾಟಕ್ಕೆ ತಾರ್ಕಿಕ ಅಂತ್ಯ ಕೊಡುವ ದೃಷ್ಟಿಯಿಂದ ಅವು ಮೈಸೂರು ಚಲೋ ಪಾದಯಾತ್ರೆಗೆ ಮುಂದಾದವು.

ಅಂದ ಹಾಗೆ ಸಿದ್ದರಾಮಯ್ಯ ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದಾಗ ಗಣಿಧಣಿಗಳ ವಿರುದ್ಧ ಬಳ್ಳಾರಿ ಪಾದಯಾತ್ರೆ ಮಾಡಿದ್ದರು. ಈ ಪಾದಯಾತ್ರೆ ಅಭೂತ ಪೂರ್ವ ಯಶಸ್ಸು ಕಂಡಿತ್ತು.

ಅವತ್ತು ಬಿಜೆಪಿ ಸರ್ಕಾರದ ವಿರುದ್ಧ ಪಾದಯಾತ್ರೆ ಹಮ್ಮಿಕೊಂಡು ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಲಾಭ ದಕ್ಕಿಸಿಕೊಡಲು ಸಾಧ್ಯವಾಗಿದ್ದರೆ, ಈಗ ನಾವು ಕೂಡ ಅಂತಹ ಪಾದಯಾತ್ರೆಯ ಮೂಲಕ ಸಿದ್ದು ಸರ್ಕಾರಕ್ಕೆ ಟಕ್ಕ‌ರ್‌ ಕೊಡಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಆದರೆ ಅವರ ಇಂತಹ ಲೆಕ್ಕಾಚಾರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆಯಲಿಲ್ಲ. ಕಾರಣ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಬಿಜೆಪಿ ಮೈತ್ರಿಕೂಟ ಮುಂದಾದರೆ, ಸಿದ್ದರಾಮಯ್ಯ ಅವರ ಪಡೆ ಪ್ರತಿಪಕ್ಷಗಳ ವಿರುದ್ಧವೇ ಜನಾಭಿಪ್ರಾಯ ರೂಪಿಸಲು ಮುಂದಾಯಿತು. ಬಿಜೆಪಿ ಮಿತ್ರಕೂಟದ ಮೈಸೂರು ಚಲೋ ಪಾದಯಾತ್ರೆ ಶುರುವಾಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದ ರೀತಿ ಇದಕ್ಕೆ ಸಾಕ್ಷಿ.

ಅಂದ ಹಾಗೆ ಪಾದಯಾತ್ರೆ ಶುರುವಾಗುತ್ತಿದ್ದಂತೆಯೇ ಬಿಜೆಪಿ ಮಿತ್ರಕೂಟದ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ ಸೇರಿದಂತೆ ಕೆಲ ಹಗರಣಗಳನ್ನು ಅಸ್ತ್ರವಾಗಿ ಪ್ರಯೋಗಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು, ಅದರಲ್ಲೂ ಮುಖ್ಯವಾಗಿ ಡಿಸಿಎಂ ಡಿಕೆಶಿ ಮಿತ್ರಕೂಟದ ಒಬ್ಬೊಬ್ಬ ನಾಯಕರನ್ನೂ ಗುರಿಯಾಗಿಸಿ ಆರೋಪಗಳ ಸುರಿಮಳೆ ಸುರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಂದ ಹಿಡಿದು ಜಾ.ದಳ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರವರೆಗೆ ಮಿತ್ರಕೂಟದ ಒಬ್ಬೊಬ್ಬ ನಾಯಕರನ್ನು ಡಿಕೆಶಿ ಕೌಂಟರ್ ಮಾಡಿದ ರೀತಿ ಅಚ್ಚರಿಗೆ ಕಾರಣವಾಯಿತು. ಕುಮಾರಸ್ವಾಮಿ ಅವರ ವಿರುದ್ಧ ಆರೋಪ ಮಾಡುವಾಗ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡ ಡಿಕೆಶಿ, ಇವರ ಕುಟುಂಬದ ಆಸ್ತಿ ಎಷ್ಟಿದೆ ಎಂದರೆ ರಾಜ್ಯ ಸರ್ಕಾರ ಮೂರು ವರ್ಷಗಳ ಬಜೆಟ್ ಮಂಡಿಸುವಷ್ಟಿದೆ ಎಂದರು. ಇವತ್ತು ರಾಜ್ಯ ಸರ್ಕಾರದ ವಾರ್ಷಿಕ ಬಜೆಟ್ ಮೂರು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು, ಅರ್ಥಾತ್, ದೇವೇಗೌಡರ ಕುಟುಂಬ ಹತ್ತು ಲಕ್ಷ ಕೋಟಿ ರೂ.ಗಳಷ್ಟು ಆಸ್ತಿ ಮಾಡಿದೆ ಎಂಬುದು ಅವರ ಮಾತಿನ ಸಾರ.

ಹೀಗೆ ಆರೋಪ ಮಾಡುವಾಗ, ಈ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಲು ನಾನು ಸಿದ್ದ ಎಂಬ ಡಿಕೆಶಿ ಮಾತು, ಮಿತ್ರಕೂಟದ ಪಾದಯಾತ್ರೆಯನ್ನು ವಿಚಲಿತಗೊಳಿಸಿದ್ದು ನಿಜ.

ಇದೇ ರೀತಿ ದೊಡ್ಡ ಮೊತ್ತದ ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ವಿಜಯೇಂದ್ರ ಎಲ್ಲಿಗೆ ಕಳುಹಿಸಿದ್ದರು ಎಂಬುದರಿಂದ ಹಿಡಿದು ಯಡಿಯೂರಪ್ಪ ಅವರ ವಿರುದ್ಧವೂ ಡಿಕೆಶಿ ಮತ್ತು ಸಿದ್ದರಾಮಯ್ಯ ಆರೋಪ ಮಾಡಿದರು. ಹೀಗೆ ಬಿಜೆಪಿ ಮಿತ್ರಕೂಟದ ವಿರುದ್ಧ ಸಿದ್ದರಾಮಯ್ಯ ಮತ್ತು ಡಿಕೆಶಿ ಆರೋಪಗಳ ಮಳೆ ಸುರಿಸುತ್ತಿದ್ದರೆ, ಇತ್ತ ಮಿತ್ರಕೂಟದ ನಾಯಕರು ತಮ್ಮದೇ ಗೊಂದಲಗಳಲ್ಲಿ ಮುಳುಗಿದ್ದರು. ಈ ಗೊಂದಲ ಕಾಣಿಸಿದ್ದು, ನಾಯಕತ್ವದ ವಿಷಯದಲ್ಲಿ.

ಪಾದಯಾತ್ರೆಯ ಮೂಲಕ ತಮ್ಮ ನಾಯಕತ್ವಕ್ಕೆ ಶಕ್ತಿ ತುಂಬಿಕೊಳ್ಳಲು ವಿಜಯೇಂದ್ರ ಬಯಸುತ್ತಿದ್ದರೆ, ಹಳೇ ಮೈಸೂರು ಭಾಗದಲ್ಲಿ ಜಾ.ದಳ ಬಲ ಬಿಜೆಪಿಗಿಂತ ಹೆಚ್ಚಿರಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಬಯಸುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಭವಿಷ್ಯದ ನಾಯಕತ್ವ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಿತ್ರಕೂಟ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ಬಯಕೆ ವಿಜಯೇಂದ್ರ ಅವರಲ್ಲೂ ಇದೆ. ಕುಮಾರಸ್ವಾಮಿ ಅವರಲ್ಲೂ ಇದೆ. ಮೂಲಗಳ ಪ್ರಕಾರ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾ.ದಳ 60 ಸೀಟುಗಳನ್ನು ಗೆದ್ದರೆ ನೀವೇ ಸಿಎಂ ಅಂತ ಬಿಜೆಪಿ ನಾಯಕ ಅಮಿತ್ ಶಾ ಅವರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ. ಯಾವಾಗ ಈ ವರ್ತಮಾನ ಕಿವಿಗೆ ಬಿತ್ತೋ ಇದಾದ ನಂತರ ವಿಜಯೇಂದ್ರ ಅವರು ಕರ್ನಾಟಕದ ನೆಲೆಯಲ್ಲಿ ತಮ್ಮ ನಾಯಕತ್ವಕ್ಕೆ ಹೆಚ್ಚು ವರ್ಚಸಿರಬೇಕು ಎಂಬ ಹಪಾಹಪಿಗೆ ಬಿದ್ದಿದ್ದಾರೆ.

ವಸ್ತುಸ್ಥಿತಿ ಎಂದರೆ ಮೈಸೂರು ಚಲೋ ಪಾದಯಾತ್ರೆ ಮಾಡಲು ತೀರ್ಮಾನಿಸಿದಾಗ ಅವರು ಔಪಚಾರಿಕವಾಗಿಯೂ ಕುಮಾರಸ್ವಾಮಿ ಅವರ ಜತೆ ಚರ್ಚಿಸಿರಲಿಲ್ಲ. ತದನಂತರ ಪಾದಯಾತ್ರೆ ಮಾಡುವ ಬಿಜೆಪಿ ನಿರ್ಧಾರದ ಕುರಿತು ಅವರು ವಿವರಿಸಿದಾಗ ಕುಮಾರಸ್ವಾಮಿ ಅದನ್ನು ಒಪ್ಪಲು ತಯಾರಿರಲಿಲ್ಲ. ಆದರೆ ಈ ಬೆಳವಣಿಗೆ ಮಿತ್ರಕೂಟದ ಬಂಧವನ್ನು ಸಡಿಲ ಮಾಡಬಹುದು ಎಂಬ ದೂರು ಯಾವಾಗ ವರಿಷ್ಠರಿಗೆ ತಲುಪಿತೋ ಆಗ ಅದಕ್ಕೆ ತೇಪೆ ಹಾಕುವ ಪ್ರಯತ್ನ ನಡೆಯಿತಲ್ಲದೆ ಕುಮಾರಸ್ವಾಮಿ ಅವರ ಮನವೊಲಿಸುವ ಕೆಲಸವಾಯಿತು.

ಇಷ್ಟಾದರೂ ಮೈಸೂರು ಚಲೋ ಪಾದಯಾತ್ರೆಯಲ್ಲಿ ಕುಮಾರಸ್ವಾಮಿ ಅವರಿಗೆ ಮುಜುಗರ ತರುವ, ಅವರ ನಾಯಕತ್ವಕ್ಕೆ ವಿರೋಧವೂ ಇದೆ ಎಂದು ತೋರಿಸಲು ಪ್ರೀತಂಗೌಡ ಎಪಿಸೋಡನ್ನು ಆಯೋಜಿಸಲಾಯಿತು. ಪರಿಣಾಮ ಮೈಸೂರು ಚಲೋ ಪಾದಯಾತ್ರೆ ಬಿಜೆಪಿ ಮಿತ್ರಕೂಟದ ಬಂಧವನ್ನು ಸ್ವಲ್ಪ ಮಟ್ಟಿಗೆ ದುರ್ಬಲಗೊಳಿಸಿದ್ದು ನಿಜ. ಮುಂದಿನ ದಿನಗಳಲ್ಲಿ ಮಿತ್ರಕೂಟದ ನಾಯಕತ್ವಕ್ಕಾಗಿ ವಿಜಯೇಂದ್ರ- ಕುಮಾರಸ್ವಾಮಿ ನಡುವೆ ಜಂಗೀಕುಸ್ತಿ ನಡೆಯುವುದೂ ನಿಜ.

ಆದರೆ ಮಿತ್ರಕೂಟದ ಈ ಕಿರಿಕಿರಿಗಳ ನಡುವೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಡೆ ಏಕೋಭಾವದಿಂದ ಕೆಲಸ ಮಾಡಿತು.

ಎಲ್ಲಕ್ಕಿಂತ ಮುಖ್ಯವಾಗಿ ಅಧಿಕಾರ ಹಂಚಿಕೆಯ ವಿಷಯದಲ್ಲಿ ತಮ್ಮ ನಡುವೆ ಭಿನ್ನಾಭಿಪ್ರಾಯವಿದ್ದರೂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಜೋಡೆತ್ತುಗಳ ರೀತಿ ಬಿಜೆಪಿ ಮಿತ್ರಕೂಟದ ವಿರುದ್ಧ ತಿರುಗಿ ಬಿದ್ದರು. ಅಷ್ಟೇ ಅಲ್ಲ, ತಮ್ಮ ವಿರುದ್ಧ ಮಿತ್ರಕೂಟ ದಾಳಿ ನಡೆಸುತ್ತಿದ್ದರೆ ಅದಕ್ಕೆ ಕೌಂಟರ್ ಕೊಟ್ಟು ಮಿತ್ರಕೂಟದ ಹಗರಣಗಳನ್ನೇ ಎತ್ತಿ ತೋರಿಸಲು ಮುಂದಾದರು.

ಪರಿಣಾಮ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸುವ ಮಿತ್ರಕೂಟದ ಕನಸು ದುರ್ಬಲವಾಗಿ, ಅದೇ ಕಾಲಕ್ಕೆ ಮಿತ್ರಕೂಟದ ವಿರುದ್ಧವೂ ಜನಾಭಿಪ್ರಾಯ ರೂಪುಗೊಳ್ಳುವಂತಾಗಿದೆ. ಇದೇ ಸದ್ಯದ ವಿಪರ್ಯಾಸ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ

ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…

6 mins ago

ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ, ಶ್ರೀ ನಂಜುಂಡಸ್ವಾಮಿಗಳ 16ನೇ ಸಂಸ್ಮರಣೋತ್ಸವ

ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…

18 mins ago

ರೆಪೋ ದರ ಕಡಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…

24 mins ago

ಮಂಡ್ಯ ಕೃಷಿ ಪ್ರದಾನ ಜಿಲ್ಲೆ: ಸಿಎಂ ಸಿದ್ದರಾಮಯ್ಯ

ಮಂಡ್ಯ: ಲ್ಯಾಬ್‌ ಟು ಲ್ಯಾಂಡ್‌ ಆದರೆ ಮಾತ್ರ ರೈತರಿಗೆ ಸಂಪೂರ್ಣ ಅನುಕೂಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಕುರಿತು…

40 mins ago

ಹೊಸ ದಾಖಲೆ ನಿರ್ಮಿಸಿದ ಬೆಂಗಳೂರು ಪೊಲೀಸರು: ಏನದು ಗೊತ್ತಾ?

ಬೆಂಗಳೂರು: ಮಾದಕದ್ರವ್ಯ ಮಾರಾಟ ಮತ್ತು ಮಾದಕದ್ರವ್ಯ ಸೇವನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರಸಕ್ತ ಸಾಲಿನ…

46 mins ago

ನಮ್ಮ ಸರ್ಕಾರ ರೈತರ ಪರ ಸರ್ಕಾರ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಸಿಎಂ ಸಿದ್ದರಾಮಯ್ಯ ರೈತರ ಬಗ್ಗೆ ಹಾಗೂ ಸಾಮಾನ್ಯರ ಬಗ್ಗೆ ಅತೀ ಹೆಚ್ಚಿನ ಕಾಳಜಿ ಇಟ್ಟುಕೊಂಡಿದ್ದಾರೆ ಎಂದು ಕೃಷಿ ಹಾಗೂ…

59 mins ago