ಆರ್.ಟಿ.ವಿಠಲಮೂರ್ತಿ

ಬೆಂಗಳೂರು ಡೈರಿ : ಖರ್ಗೆ ಅವರು ಎಐಸಿಸಿ ಗಾದಿಯತ್ತ; ಇತ್ತ ಸಿದ್ದು ಹಾದಿ ಸುಗಮವೇ?

ಈ ಹಿಂದೆ ಖರ್ಗೆ ರಾಷ್ಟ್ರ ರಾಜಕೀಯಕ್ಕೆ ಹೋದ ಮೇಲೆ ಕರ್ನಾಟಕದಲ್ಲಿ ಪಕ್ಷ ಮೈ ಕೊಡವಿ ಮೇಲೆದ್ದು ನಿಂತುಕೊಂಡಿತು! 

ಕರ್ನಾಟಕದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ದಿಲ್ಲಿಯ ಕಾಂಗ್ರೆಸ್ ವರಿಷ್ಠರು ತವಕಿಸುತ್ತಿದ್ದಾರೆ. ಅಂದ ಹಾಗೆ ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿದರೆ ತಮ್ಮ ಈ ಕೆಲಸ ಮತ್ತಷ್ಟು ಸುಗಮವಾಗುತ್ತದೆ ಎಂಬುದು ಕೈ ಪಾಳೆಯದ ವರಿಷ್ಠರ ಲೆಕ್ಕಾಚಾರ. ಗಮನಿಸಬೇಕಾದ ಸಂಗತಿ ಎಂದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬಂದು ಕುಳಿತರೆ ಇಂತಹ ಸಾಧನೆ ಮಾಡಿದ ಎರಡನೇ ನಾಯಕರಾಗಿ ಖರ್ಗೆ ಗುರುತಿಸಲ್ಪಡುತ್ತಾರೆ.
೧೯೬೮ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ನವರಿಗೆ ಇಂತಹ ಅವಕಾಶ ಸಿಕ್ಕಿತ್ತು. ಅದು ಕಾಂಗ್ರೆಸ್ ಪಕ್ಷದ ಸಂಕೀರ್ಣ ಕಾಲ. ಯಾಕೆಂದರೆ ಅಷ್ಟೊತ್ತಿಗಾಗಲೇ ಜವಾಹರಲಾಲ್ ನೆಹರೂ ತೀರಿಕೊಂಡಿದ್ದರು. ನೆಹರೂ ಅವರ ಜಾಗಕ್ಕೆ ಬಂದು ಕುಳಿತ ಲಾಲ್ ಬಹದ್ದೂರ್ ಶಾಸ್ತ್ರಿಯವರೂ ತೀರಿಕೊಂಡಿದ್ದರು. ಪರಿಣಾಮ? ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಗಲಿಬಿಲಿಗೊಂಡಿತ್ತು. ಸಮರ್ಥ ಎದುರಾಳಿ ಪಕ್ಷವಿದ್ದಿದ್ದರೆ ಆಟ ಬೇರೆ ಇರುತ್ತಿತ್ತೇನೋ.ಆದರೆ ಆಗಿನ್ನೂ ಪ್ರತಿಪಕ್ಷಗಳು ದೊಡ್ಡ ಮಟ್ಟದಲ್ಲಿ ಎಮರ್ಜ್ ಆಗಿರಲಿಲ್ಲ.
ಹೀಗಾಗಿ ಕಿರಿಕಿರಿ ಅನುಭವಿಸುತ್ತಿದ್ದರೂ ನೆಹರೂ ಪುತ್ರಿ ಇಂದಿರಾ ಗಾಂಧಿಯವರು ಪ್ರಧಾನಿ ಹುದ್ದೆಯಲ್ಲಿ ಕುಳಿತಿದ್ದರು. ಇಂತಹ ಕಾಲಘಟ್ಟದಲ್ಲಿ ನಿಜಲಿಂಗಪ್ಪ ಅವರು ಎಐಸಿಸಿ ಅಧ್ಯಕ್ಷರಾದರು.
ಆದರೆ ಹೀಗೆ ಅಧ್ಯಕ್ಷರಾದವರು ತಮ್ಮ ಬೆನ್ನಿಗೆ ನಿಲ್ಲಬೇಕು ಎಂದು ಇಂದಿರಾ ಗಾಂಧಿ ಬಯಸಿದರೆ, ನಿಜಲಿಂಗಪ್ಪನವರು ಇಂದಿರಾ ಗಾಂಧಿಯವರ ವಿರೋಧಿಗಳ ಜತೆ ಗುರುತಿಸಿಕೊಳ್ಳುತ್ತಾ ಹೋದರು. ಮುಂದೇನಾಯಿತು ಎಂಬುದು ಇತಿಹಾಸ.
ಮರು ವರ್ಷ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ವಿಭಜನೆಯಾಯಿತು. ಇಂದಿರಾ ಗಾಂಧಿ ಅವರು ತಮ್ಮ ವಿರೋಧಿಗಳನ್ನು ಬಗ್ಗುಬಡಿದು ನೆಲೆ ನಿಂತರೆ, ನಿಜಲಿಂಗಪ್ಪನವರು ರಾಜಕೀಯ ಅಜ್ಞಾತವಾಸಕ್ಕೆ ಸರಿದರು.
ಇದು ನಡೆದು ಸುಮಾರು ಐವತ್ಮೂರು ವರ್ಷಗಳೇ ಕಳೆದಿವೆ. ಗಮನಿಸಬೇಕಾದ ಸಂಗತಿ ಎಂದರೆ ಈ ಬೆಳವಣಿಗೆಯಾದ ನಂತರ ಪಿ.ವಿ.ನರಸಿಂಹರಾವ್, ಸೀತಾರಾಂ ಕೇಸರಿ ಅವರಂತಹ ಕೆಲ ನಾಯಕರನ್ನು ಬಿಟ್ಟರೆ ಎಐಸಿಸಿಗೆ ಬಹುಕಾಲ ಅಧ್ಯಕ್ಷರಾಗಿದ್ದುದು ನೆಹರೂ ಅವರ ಕುಟುಂಬದವರೇ.
ಈಗಿನ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಸುಮಾರು ಎರಡೂವರೆ ದಶಕಗಳ ಹಿಂದೆ ಈ ಜಾಗಕ್ಕೆ ಬಂದು ಕುಳಿತವರು, ಅಲ್ಲಿಂದ ಇಳಿಯಲೇ ಇಲ್ಲ. ಇದು ನೆಹರೂ ಅವರ ಕುಟುಂಬಕ್ಕೆ ಕಾಂಗ್ರೆಸ್ಸಿಗರು ಎಷ್ಟು ಅಂಟಕೊಂಡಿದ್ದರು ಎಂಬುದಕ್ಕೆ ಉದಾಹರಣೆ. ಆದರೆ ಯಾವಾಗ ಸೋನಿಯಾ ಗಾಂಧಿ ಈ ಜಾಗ ಬಿಡಲು ನಿರ್ಧರಿಸಿದರೋ ಆಗ ತಮ್ಮ ಜಾಗಕ್ಕೆ ಅಶೋಕ್ ಗೆಹ್ಲೋಟ್ ಬರಲಿ ಎಂದು ಬಯಸಿದ್ದರು. ಅದರೆ ಆಂತರಿಕ ಸಂಘರ್ಷಗಳಿಂದಾಗಿ ಗೆಹ್ಲೋಟ್ ಅವರು ತಮ್ಮ ರಾಜ್ಯ ಬಿಟ್ಟು ಬರುವುದು ಕಷ್ಟವಾಗುತ್ತಿರುವುದರಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರನ್ನು ತರಲು ಸೋನಿಯಾ ಬಯಸಿದರು.
ಅಕ್ಟೋಬರ್ ಮೂರನೇ ವಾರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಶಿ ತರೂರ್ ಎದುರಾಳಿಯಾದರೂ ಖರ್ಗೆಯವರೇ ಸೋನಿಯಾಗಾಂಧಿಯವರ ನೆಚ್ಚಿನ ಆಯ್ಕೆ.
ಇದಕ್ಕೆ ಕಾರಣ, ಮಲ್ಲಿಕಾರ್ಜುನ ಖರ್ಗೆ ಅವರ ನಿಷ್ಠೆ.
ಕರ್ನಾಟಕದಲ್ಲಿ ಸಿದ್ಧರಾಮಯ್ಯ ಅವರ ಜತೆ ನಾಯಕತ್ವಕ್ಕಾಗಿ ಪೈಪೋಟಿ ನಡೆಸಿದ್ದ ಖರ್ಗೆ ಅವರನ್ನು ರಾಷ್ಟ್ರಮಟ್ಟಕ್ಕೆ ಸೆಳೆದು ಕೊಳ್ಳಲು, ಆ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿದ್ದ ಪೈಪೋಟಿಯನ್ನು ಬಂದ್ ಮಾಡಲು ಸೋನಿಯಾ ನಿರ್ಧರಿಸಿದ್ದು ಸಹಜವೇ. ಆದರೆ ದಶಕಗಳ ಕಾಲ ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆಗಾಗಿ ದುಡಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋನಿಯಾರ ಈ ನಿರ್ಧಾರ ಕಬ್ಬಿಣದ ಕಡಲೆಯಂತೆ ಗೋಚರಿಸಿದ್ದು ನಿಜವೇ. ಆದರೆ ಹಾಗಂತ ಅವರು ತಮ್ಮ ಅಕ್ಷೇಪವನ್ನು ಸೋನಿಯಾಗಾಂಧಿ ಅವರ ಮುಂದೆ ತೋರಿಸಲಿಲ್ಲ. ಬದಲಿಗೆ ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ಕಾರ್ಮಿಕ ಹಾಗೂ ರೈಲ್ವೇ ಖಾತೆ ಸಿಕ್ಕಾಗ ಅದನ್ನವರು ಅದ್ಭುತವಾಗಿ
ನಿಭಾಯಿಸಿ ತೋರಿಸಿದರು. ಗಮನಿಸಬೇಕಾದ ಸಂಗತಿ ಎಂದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರ ರಾಜಕೀಯಕ್ಕೆ ಎಳೆದುಕೊಂಡು ಹೋದ ಮೇಲೆ ಕರ್ನಾಟಕದಲ್ಲಿ ಪಕ್ಷ ಮೈ ಕೊಡವಿ ಮೇಲೆದ್ದು ನಿಂತುಕೊಂಡಿತು.
೨೦೧೩ ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಕರ್ನಾಟಕದ ಅಧಿಕಾರ ಸೂತ್ರ ಹಿಡಿದಾಗ ತಮ್ಮ ನಿರ್ಧಾರವನ್ನು ತಾವೇ ಮೆಚ್ಚಿಕೊಂಡಿದ್ದರು ಸೋನಿಯಾ ಗಾಂಧಿ. ಮುಂದೆ ಕಾಂಗ್ರೆಸ್ ಪಕ್ಷ ದಿಲ್ಲಿ ಗದ್ದುಗೆಯಿಂದ ಕೆಳಗೆ ಉರುಳಿತು. ಇದಾದ ನಂತರ ಲೋಕಸಭೆಯಲ್ಲಿ ಪ್ರತಿಪಕ್ಷದ ಸ್ಥಾನಮಾನ ಪಡೆಯಲೂ ಕಾಂಗ್ರೆಸ್ ಅರ್ಹವಾಗಲಿಲ್ಲ. ಆದರೆ ಅಂತಹ ಸಂದರ್ಭದಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನ ಜವಾಬ್ದಾರಿ ನಿರ್ವಹಿಸಿದ ಖರ್ಗೆ ಅದನ್ನು ಸಮರ್ಪಕವಾಗಿ ಮಾಡಿ ತೋರಿಸಿದರು.
ಇದಾದ ನಂತರ ಖರ್ಗೆ ಅವರು ರಾಜ್ಯ ರಾಜಕಾರಣದ ಕಡೆ ಮುಖ ಹಾಕುವ ಪ್ರಮೇಯವೇ ಸೃಷ್ಟಿಯಾಗಲಿಲ್ಲ. ಯಾಕೆಂದರೆ ಶುರುವಿನಲ್ಲಿ ಲೋಕಸಭೆ, ಮತ್ತೀಗ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ಖರ್ಗೆ ಅದ್ಭುತವಾಗಿ ಕೆಲಸ ಮಾಡಿ ತೋರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಂತಹ ಬಲಿಷ್ಠ ನಾಯಕನ ಎದುರು ನಿಂತು ತುಂಬ ಪರಿಣಾಮಕಾರಿಯಾಗಿ ಹೋರಾಡಿದ ರೀತಿ ಕಣ್ಣ ಮುಂದಿದೆ. ಅವರ ಈ ಹೋರಾಟವನ್ನು ಖುದ್ದು ನರೇಂದ್ರ ಮೋದಿ ಅವರೇ ಮೆಚ್ಚಿಕೊಂಡಿರುವುದು ವಿಶೇಷ.
ವಿಚಿತ್ರವೆಂದರೆ, ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಡ್ಡು ಹೊಡೆಯುವ ರೀತಿಯನ್ನು ಕಂಡವರು ಒಂದು ಗುಲ್ಲು ಎಬ್ಬಿಸಿದರು. ಅದರ ಪ್ರಕಾರ, ಒಮ್ಮೆ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಾ, ಈ ದೇಶದಲ್ಲಿ ಭೂರಹಿತ ದಲಿತರು ಸ್ವಾಭಿಮಾನದಿಂದ ಬದುಕಲು ಒಂದು ತುಂಡು ಭೂಮಿಯನ್ನಾದರೂ ಕೊಡಿಸಿ ಎಂದು ಪ್ರಧಾನಿ ಮೋದಿಯವರಿಗೆ ಹೇಳಿದರಂತೆ. ಇದನ್ನು ಕೇಳಿದ ಪ್ರಧಾನಿ ನರೇಂದ್ರಮೋದಿ ಏನೂ ಮಾತನಾಡಲಿಲ್ಲವಂತೆ. ಬದಲಿಗೆ ಖರ್ಗೆ ಅವರನ್ನು ಲೋಕಸಭೆಯಲ್ಲಿದ್ದ ತಮ್ಮ ಕಚೇರಿಗೆ ಬರುವಂತೆ ಆಹ್ವಾನವಿತ್ತರಂತೆ. ಪ್ರಧಾನಿಯವರ ಕರೆಯ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರು ಅಲ್ಲಿಗೆ ಹೋದಾಗ ನರೇಂದ್ರ ಮೋದಿಯವರು ಮರು ಮಾತನಾಡದೇ ತಮ್ಮ ಮುಂದಿದ್ದ ಟೇಬಲ್ಲಿನ ಡ್ರಾವರ್‌ನಿಂದ ಒಂದು ಕಡತವನ್ನು ತೆಗೆದುಕೊಟ್ಟರಂತೆ. ಅದರಲ್ಲಿ ಖರ್ಗೆಯವರು ದೇಶದ ವಿವಿಧ ಭಾಗಗಳಲ್ಲಿ ಮಾಡಿದ ಅಪಾರ ಪ್ರಮಾಣದ ಆಸ್ತಿ, ಪಾಸ್ತಿಗಳ ಸಂಪೂರ್ಣ ವಿವರ ಇತ್ತಂತೆ.
ಹಾಗಂತ ಕಳೆದ ಕೆಲ ವರ್ಷಗಳಿಂದ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಅಪವಾದ ಹೊರಿಸುತ್ತಲೇ ಬರಲಾಗುತ್ತಿದೆ. ಆದರೆ ಈ ಕತೆಯ ಸೃಷ್ಟಿಕರ್ತ ಯಾರು ಎಂಬುದು ಇದುವರೆಗೆ ಗೊತ್ತಾಗಿಲ್ಲ. ಅದೇ ರೀತಿ ನರೇಂದ್ರ ಮೋದಿ ಅವರು ಸಮಯ ಸಿಕ್ಕಾಗಲೆಲ್ಲ ಖರ್ಗೆಯವರನ್ನು ತಾರೀಪು ಮಾಡುವುದನ್ನು ಬಿಟ್ಟಲ್ಲ.
ಸದನ ಕಲಾಪದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗಿರುವ ಶಿಸ್ತು ಎಲ್ಲರಲ್ಲೂ ಬರಬೇಕು ಎಂಬುದು ನರೇಂದ್ರ ಮೋದಿ ಅವರ ಮಾತು. ಒಂದು ವೇಳೆ ಖರ್ಗೆ ಅಪಾರ ಪ್ರಮಾಣದ ಆಕ್ರಮ ಆಸ್ತಿ ಸಂಪಾದಿಸಿದ್ದರೆ ಮೋದಿ ಸುಮ್ಮನಿರುತ್ತಿದ್ದರೇ?
ಯಾಕೆಂದರೆ ಒಂದು ಸಲ ತಮ್ಮ ಶತ್ರು ಎಂಬುದು ಸಾಬೀತಾ ದರೆ ಅಂತವರನ್ನು ರಾಜಕೀಯವಾಗಿ ಮುಗಿಸುವವರೆಗೆ ನರೇಂದ್ರ ಮೋದಿ ಅವರು ಸುಮ್ಮನಿರುವುದಿಲ್ಲ. ಬೇರೆ ಪಕ್ಷಗಳ ಮಾತು ಹಾಗಿರಲಿ, ಖುದ್ದು ಬಿಜೆಪಿ ಪಕ್ಷದಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರ ಬೆಂಬಲಿಗರ ಪಡೆಯನ್ನು ಅವರು ದುರ್ಬಲಗೊಳಿಸಿದ್ದು ಇದಕ್ಕೆ ಸಾಕ್ಷಿ.
ಹೀಗಿರುವಾಗ ಖರ್ಗೆಯವರನ್ನು ಮೋದಿ ಸುಮ್ಮನೆ ಬಿಡುತ್ತಿದ್ದರು ಎಂಬುದು ಸುಳ್ಳು. ಆದರೆ ಖರ್ಗೆ ಅವರ ವಿರುದ್ಧದ ಅಪಪ್ರಚಾರ ಇವತ್ತಿಗೂ ನಿಂತಿಲ್ಲ.  ಖರ್ಗೆಯವರು ಕೂಡಾ ಅದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.
ಅದೇನೇ ಇರಲಿ, ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಜತೆಗಿನ ಸಂಘರ್ಷವನ್ನು ತಪ್ಪಿಸಲು ಈ ಹಿಂದೆ ಖರ್ಗೆ ಅವರನ್ನು ದಿಲ್ಲಿಗೆ ಕರೆದುಕೊಂಡು ಹೋಗುವ ವರಿಷ್ಠರ ನಿರ್ಧಾರ ತಪ್ಪಾಗಲಿಲ್ಲ.
ಇವತ್ತು ಎಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಖರ್ಗೆ ಅವರನ್ನು ತಂದು ಕೂರಿಸಲು ಸೋನಿಯಾ ಗಾಂಧಿ ಅವರು ಬಯಸಿರುವುದು ಇದೇ ಕಾರಣಕ್ಕಾಗಿ. ಇಲ್ಲಿ ಮತ್ತೊಂದು ಸೂಕ್ಷ್ಮವೂ ಇದೆ.
ಅದೆಂದರೆ, ಖರ್ಗೆಯವರಿಗೆ ಒಂದು ಬಾರಿಯಾದರೂ ಕರ್ನಾಟಕದ ಮುಖ್ಯಮಂತ್ರಿಯಾಗುವ ಆಸೆ ಇತ್ತು. ಅದನ್ನವರು ಸೋನಿಯಾ ಗಾಂಧಿ ಅವರಿಗೂ ಹೇಳಿದ್ದರು.
ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ತಮಗೆ ಮೂವತ್ತು ತಿಂಗಳ ಕಾಲ ಸಿಎಂ ಗಿರಿ ಕೊಡಿಸಿ ಎಂದು ಕೇಳಿಕೊಂಡಿದ್ದರಂತೆ. ಆದರೆ ಈಗ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಲಾಗುತ್ತಿದೆ ಎಂದರೆ ಸಿದ್ದರಾಮಯ್ಯ ಅವರ ದಾರಿಯನ್ನು ಸೋನಿಯಾ ಗಾಂಧಿ ಸಾಫ್ ಮಾಡಿಕೊಡುತ್ತಿದ್ದಾರೆ ಎಂದೇ ಅರ್ಥ. ಅರ್ಥಾತ್, ಕರ್ನಾಟಕದಲ್ಲಿ ಪಕ್ಷ ಗೆದ್ದು ಅಧಿಕಾರ ಹಿಡಿಯಬೇಕೆಂದರೆ ಅದು ಸಿದ್ದರಾಮಯ್ಯ ನೇತೃತ್ವದಲ್ಲಿ ಹೋದರೆ ಮಾತ್ರ ಸಾಧ್ಯ ಎಂಬುದು ಸೋನಿಯಾಗೆ ಮನವರಿಕೆಯಾಗಿದೆ.
ಹೀಗಾಗಿ ಅವರು ಸಿದ್ಧರಾಮಯ್ಯ ಅವರ ಮುಂದಿನ ದಾರಿಯನ್ನು ಸಾಫ್ ಮಾಡಿಕೊಡುತ್ತಿದ್ದಾರೆ. ಕಾರಣ? ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಗೆದ್ದು ಕರ್ನಾಟಕದಲ್ಲಿ ಅಧಿಕಾರ ಹಿಡಿದರೆ, ಮರು ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ದೊಡ್ಡ ಮಟ್ಟದ ನೆರವು ಹರಿಸಲು ಕರ್ನಾಟಕಕ್ಕೆ ಸಾಧ್ಯವಾಗುತ್ತದೆ.
ಒಂದು ವೇಳೆ ಕರ್ನಾಟಕದಲ್ಲಿ ಸೋತರೆ, ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ಸರಳವಲ್ಲ ಎಂಬುದು ಸೋನಿಯಾ ಗಾಂಧಿಯವರ ಲೆಕ್ಕಾಚಾರ. ಖರ್ಗೆ ಅವರನ್ನು ಎಐಸಿಸಿಗೆ ಆಯ್ಕೆ ಮಾಡಲು ಬಯಸಿರುವುದರ ಹಿಂದಿರುವ ಉದ್ದೇಶಗಳಲ್ಲಿ ಇದು ಕೂಡಾ ಮುಖ್ಯವಾದುದು.
ಅದೇನೇ ಇದ್ದರೂ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಬಂದು ಕುಳಿತರೆ ಅದು ಕರ್ನಾಟಕದ ಪಾಲಿಗೆ ಸಂಭ್ರಮದ ವಿಷಯ ಎಂಬುದರಲ್ಲಿ ಅನುಮಾನವಿಲ್ಲ.
andolanait

Recent Posts

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

1 hour ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

2 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

3 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

4 hours ago

ಮಂಡ್ಯ ಭಾಗದ ರೈತರ ಅಭಿವೃದ್ಧಿಗೆ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸ್ಥಾಪನೆ: ಎನ್ ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…

4 hours ago

ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿರುತ್ತದೆ ಎಂದ ಸಚಿವ ಎಂ.ಬಿ.ಪಾಟೀಲ್‌

ಬೆಂಗಳೂರು: ಆರ್‌.ಅಶೋಕ್‌ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್‌…

4 hours ago