ಆರ್.ಟಿ.ವಿಠಲಮೂರ್ತಿ

ಬೆಂಗಳೂರು ಡೈರಿ : ಚುನಾವಣಾ ಟಿಕೆಟ್ಟಿಗೂ ಪೇಮೆಂಟು; ವೆಚ್ಚವೋ 15,000 ಕೋಟಿ ಇಡುಗಂಟು!

– ಆರ್.ಟಿ.ವಿಠ್ಠಲಮೂರ್ತಿ

ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಹಿರಿಯ ನಾಯಕ ಬಿ.ಎಲ್.ಶಂಕರ್ ಆಡಿರುವ ಒಂದು ಮಾತು ವ್ಯವಸ್ಥೆಯ ಕುರೂಪವನ್ನು ಮತ್ತೆ ನೆನಪಿಸಿದೆ. ಕಳೆದ ವಾರ ನಡೆದ ಜೆಪಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಿ.ಎಲ್.ಶಂಕರ್ ಅವರು ನೇರವಾಗಿಯೇ ರಾಜಕಾರಣ ತಲುಪಿರುವ ಸ್ಥಿತಿಯ ಬಗ್ಗೆ ಹೇಳಿದರು. ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗೆ ಮೆರಿಟ್ ಸಾಕಾಗಿತ್ತು. ಆದರೆ ಈಗ ಪೇಮೆಂಟ್ ಕೋಟಾದಡಿ ಟಿಕೆಟ್ ಪಡೆಯಬೇಕಿದೆ ಎಂಬುದು ಅವರ ಮಾತು. ಅಂದ ಹಾಗೆ ಬಿ.ಎಲ್.ಶಂಕರ್ ಈ ಹಿಂದೆ ಜನತಾದಳದ ಅಧ್ಯಕ್ಷರಾಗಿದ್ದವರು, ಸಚಿವರಾಗಿ, ಸಂಸದರಾಗಿ ಸೇವೆ ಸಲ್ಲಿಸಿದವರು.

ಈ ದೇಶದ ಪ್ರಧಾನಿಗಳಾಗಿದ್ದ ಯಂಗ್ ಟರ್ಕ್ ಖ್ಯಾತಿಯ ಚಂದ್ರಶೇಖರ್ ಅವರ ಪಾಲಿಗೆ ನೀಲಿ ಕಣ್ಣಿನ ಹುಡುಗನಾಗಿದ್ದವರು. ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಮೇಲೆದ್ದು ನಿಂತ, ಆದರ್ಶದ ಕನಸುಗಳೊಂದಿಗೆ ರಾಜಕಾರಣದ ನದಿಯಲ್ಲಿ ಈಸಿದ ಶಂಕರ್ ಅವರಿಗೆ ವ್ಯವಸ್ಥೆ ತಲುಪಿರುವ ಕಾಲಘಟ್ಟವನ್ನು ಕಂಡು ವಿಷಾದ ಕಾಡಿದರೆ ಅದು ಅಸಹಜವಲ್ಲ. ಆದರೆ ಯಾವ ಸಂಗತಿ ಅವರನ್ನು ಕಾಡುತ್ತಿದೆಯೋ? ಆ ಸಂಗತಿ ವ್ಯವಸ್ಥೆಯ ಬಹುಪಾಲು ಜನರನ್ನು ಕಾಡಬೇಕು. ಅದಾಗದಿದ್ದರೆ ರಾಜಕಾರಣದಲ್ಲಿ, ಆ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುವುದು ಅಸಾಧ್ಯ.
ಈ ಹಿನ್ನೆಲೆಯಲ್ಲಿಯೇ ನಾವು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ನೆನಪಿಸಿಕೊಳ್ಳಬೇಕು. ಇವತ್ತು ಮಾತೆತ್ತಿದರೆ ದೇಶದ ಅನಿಷ್ಟಕ್ಕೆಲ್ಲ ನೆಹರೂ ಕಾರಣ ಎಂದು ದೂರುವುದು ಕೆಲವರಿಗೆ ಫ್ಯಾಷನ್ ಆಗಿದೆ.
ಆದರೆ ಇವತ್ತು ವ್ಯವಸ್ಥೆ ತಲುಪಿರುವ ಆತಂಕಕಾರಿ ಕಾಲಘಟ್ಟ ಏನಿದೆ? ಇಂತಹ ಕಾಲಘಟ್ಟ ಬಹುಮುಂಚೆ ಮೇಲೆದ್ದು ನಿಲ್ಲುವುದನ್ನು ನೆಹರೂ ಬಹುಕಾಲ ತಡೆದಿದ್ದರು. ದೇಶದ ಮೊದಲ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ತಮ್ಮನ್ನು ಬೇಟಿ ಮಾಡಿದ ಇಬ್ಬರು ದೊಡ್ಡ ಉದ್ಯಮಿಗಳಿಗೆ ಅವರೇನು ಹೇಳಿದರು? ಎಂಬ ಬಗ್ಗೆ ಚರ್ಚಿಸುವ ಮನ:ಸ್ಥಿತಿ ಎಲ್ಲ ರಾಜಕೀಯ ಪಕ್ಷಗಳಿಗೆ ಬಂದರೆ, ಈಗ ಹರಿಯುತ್ತಿರುವ ಆತಂಕದ ಪ್ರವಾಹಕ್ಕೆ ಸ್ವಲ್ಪ ಮಟ್ಟಿಗಾದರೂ ಬ್ರೇಕ್ ಹಾಕಬಹುದು.
ಅಂದ ಹಾಗೆ ಆ ಸಂದರ್ಭದಲ್ಲಿ ನೆಹರೂ ಅವರನ್ನು ಭೇಟಿ ಮಾಡಿದ ಉದ್ಯಮಿಗಳು ನೇರವಾಗಿಯೇ ವಿಷಯ ಪ್ರಸ್ತಾಪಿಸುತ್ತಾರೆ. ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಳ್ಳಲು ನಡೆದ ಹೋರಾಟಕ್ಕೆ ನಾವು ದೊಡ್ಡ ಮಟ್ಟದ ಬಂಡವಾಳ ಹೂಡಿದ್ದೇವೆ. ಹೀಗಾಗಿ ದೇಶ ಮುನ್ನಡೆಸಲು ರಚನೆಯಾಗುತ್ತಿರುವ ಸಂಸದೀಯ ವ್ಯವಸ್ಥೆಯಲ್ಲಿ ನಮಗೂ ಪಾಲು ಬೇಕು. ಅರ್ಥಾತ್, ಸಂಸತ್ ಚುನಾವಣೆಯಲ್ಲಿ ಸ್ಪರ್ದಿಸಲು ಉದ್ಯಮಿಗಳಿಗೂ ಗಣನೀಯ ಸಂಖ್ಯೆಯ ಟಿಕೇಟು ಕೊಡಬೇಕು ಎಂದವರು ಹೇಳಿದಾಗ ನೆಹರೂ ಅದನ್ನು ನಿರಾಕರಿಸಿದರು.
ಅದಕ್ಕೆ ಕಾರಣವನ್ನೂ ಕೊಡುವ ಅವರು: ನೀವು ಉದ್ಯಮಿಗಳು. ನೀವೇಕೆ ಸಂಸತ್ತಿಗೆ ಬರಬೇಕು? ಅಲ್ಲಿಗೆ ಪ್ರತಿನಿಧಿಗಳಾಗಿ ಬರುವವರು ಜನರ ನಡುವಿನಿಂದ ಬಂದಿರಬೇಕು, ಅಂದ ಹಾಗೆ ಈ ದೇಶ ಕಟ್ಟುವ ಕೆಲಸದಲ್ಲಿ ನಿಮಗೂ ದೊಡ್ಡ ಪಾತ್ರವಿದೆ. ಇವತ್ತು ದೇಶದ ಬಡತನ, ನಿರುದ್ಯೋಗವನ್ನು ನಿವಾರಿಸಲು, ದೇಶದ ಆರ್ಥಿಕ ಶಕ್ತಿ ಹೆಚ್ಚಿಸಲು ನೀವು ಕೈಗಾರಿಕೆಗಳನ್ನು ಪ್ರಾರಂಭಿಸಿ. ಅದಕ್ಕೆ ನಾವು ಪರ್ಮಿಟ್ ಕೊಡುತ್ತೇವೆ ಎಂದು ವಿವರಿಸುತ್ತಾರೆ.
ಪರಿಣಾಮ? ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಹಲ ದಶಕಗಳ ಕಾಲ ಜನರ ನಡುವಿನಿಂದಲೇ ನಾಯಕರು ಸೃಷ್ಟಿಯಾದರು. ಸಾಮಾಜಿಕ ನ್ಯಾಯವೇ ಅವರ ರಾಜಕಾರಣದ ನೆಲೆಗಟ್ಟಾಗಿತ್ತು.
ಆದರೆ ಯಾವಾಗ ಜಾಗತೀಕರಣ ದೇಶದೊಳಗೆ ಕಾಲಿಟ್ಟಿತೋ? ಅದಾದ ನಂತರ ಬಂಡವಾಳಷಾಹಿ ವ್ಯವಸ್ಥೆ ಕ್ರಮೇಣ ಈ ದೇಶದ ರಾಜಕಾರಣವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳತೊಡಗಿತು. ಇವತ್ತು ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದಕ್ಕೆ ಕರ್ನಾಟಕದ್ದೇ ಒಂದು ಉದಾಹರಣೆಯನ್ನು ಸಾಂಕೇತಿಕವಾಗಿ ಗಮನಿಸಬೇಕು. ಅದೆಂದರೆ 1989 ರ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸೇರಿ ಮಾಡಿದ ಒಟ್ಟು ಚುನಾವಣಾ ವೆಚ್ಚ ಹತ್ತು ಕೋಟಿ ರೂಪಾಯಿ. ಇದಾದ ಸುಮಾರು ಎರಡು ದಶಕಗಳ ನಂತರ, ಅಂದರೆ 2018 ರ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸೇರಿ ಮಾಡಿದ ವೆಚ್ಚ ಹತ್ತೂವರೆ ಸಾವಿರ ಕೋಟಿ ರೂಪಾಯಿ. ಹಾಗಂತ ಹೇಳಿದ್ದು ದೆಹಲಿಯ ಖ್ಯಾತ ಸಂಸ್ಥೆಯೊಂದರ ವರದಿ.
ಇದನ್ನು ಆಧರಿಸಿ 2023 ರ ವಿಧಾನಸಭಾ ಚುನಾವಣೆಯ ಅಂದಾಜು ವೆಚ್ಚವನ್ನು ಊಹಿಸುವುದಾದರೆ ಅದು ಹದಿನೈದು ಸಾವಿರ ಕೋಟಿಯ ದಡ ತಲುಪಲಿದೆ.
ಹಾಗಂತ ಹೇಳಿದರೆ ಕೆಲವರು ಇದನ್ನು ನಂಬದೆ ಇರಬಹುದು. ಆದರೆ ಇದನ್ನು ಒಂದಷ್ಟು ಆಳಕ್ಕೆ ಹೋಗಿ ನೋಡಿದರೆ ಅದರ ಅಂದಾಜು ಸಿಗಬಹುದು.
ಈಗ ಉದಾಹರಣೆಗೆ ರಾಜ್ಯ ಸರ್ಕಾರದ ವಾರ್ಷಿಕ ಆಯವ್ಯಯವನ್ನೇ ನೋಡಿ. 2022- 23ರ ಸಾಲಿನಲ್ಲಿ ರಾಜ್ಯ ಸರ್ಕಾರದ ಆಯವ್ಯಯ ಗಾತ್ರ ಸುಮಾರು ಎರಡು ಲಕ್ಷದ ಎಪ್ಪತ್ತು ಸಾವಿರ ಕೋಟಿ. ಈ ಆಯವ್ಯಯದ ಗಾತ್ರ ಮುಂದಿನ ಸಾಲಿನಲ್ಲಿ ಹತ್ತತ್ತಿರ‌ ಮೂರು ಲಕ್ಷ ಕೋಟಿಯ ಸನಿಹಕ್ಕೆ ತಲುಪಲಿದೆ.
ಅಂದರೆ ಮುಂದಿನ ಚುನಾವಣೆಯ ನಂತರ ರಾಜ್ಯದಲ್ಲಿ ಪ್ರತಿಷ್ಟಾಪನೆಯಾಗುವ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ಕನಿಷ್ಟ ಹದಿನೈದು ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ಜನಾದೇಶ ಪಡೆಯುತ್ತದೆ.
ಈ ಹಣ ವೆಚ್ಚವಾಗುವಾಗ ಹತ್ತು ಪರ್ಸೆಂಟ್ ಸೋರಿಕೆಯಾದರೂ ಅದು ಒಂದೂವರೆ ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ. ಈಗ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪೇಸಿಎಂ ಅಭಿಯಾನಕ್ಕೆ ಗುತ್ತಿಗೆದಾರರ ಸಂಘ ಮಾಡಿದ ಆರೋಪವೇ ಪ್ರೇರಣೆ. ಸರ್ಕಾರದ ಕಾಮಗಾರಿಗಳನ್ನು ಗುತ್ತಿಗೆ ಪಡೆಯಬೇಕೆಂದರೆ ನಲವತ್ತು ಪರ್ಸೆಂಟ್‌ ಕಮೀಷನ್ ಕೊಡಬೇಕು ಎಂಬುದು ಗುತ್ತಿಗೆದಾರರ ಆರೋಪ. ಅದರ ಆರೋಪವನ್ನು ಕುಗ್ಗಿಸಿ ನೋಡಿದರೂ ಆಡಳಿತ ವ್ಯವಸ್ಥೆಯಲ್ಲಿ ಇಪ್ಪತ್ತರಿಂದ ಇಪ್ಪತ್ತೈದು ಪರ್ಸೆಂಟಿನಷ್ಟು ಹಣ ಕೈ ಬದಲಾಗುತ್ತದೆ. ಅಂದರೆ? ಸುಮಾರು ಮೂರೂವರೆ- ನಾಲ್ಕು ಲಕ್ಷ ಕೋಟಿ ರೂಗಳಾಗುತ್ತದೆ.
ಈ ಪ್ರಮಾಣದ ಹಣಕ್ಕೆ ಲಗ್ಗೆ ಹಾಕುವ ಇಚ್ಚೆಯುಳ್ಳ ರಾಜಕೀಯ ಶಕ್ತಿಗಳು ಇದಕ್ಕಾಗಿ ಚುನಾವಣೆಯಲ್ಲಿ ಹದಿನೈದು ಸಾವಿರ ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡುವುದು ಅಸಹಜವೇನಲ್ಲ. ಮತ್ತು ಮುಂದಿನ ಚುನಾವಣೆಯಲ್ಲಿ ತಮಿಳುನಾಡು, ತೆಲಂಗಾಣ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಂದ ಚುನಾವಣಾ ವೆಚ್ಚಕ್ಕಾಗಿ ಇಲ್ಲಿನ ರಾಜಕೀಯ ಪಕ್ಷಗಳಿಗೆ ಹಣ ಹರಿದು ಬರಲಿದೆ ಎಂಬುದು ಗೊತ್ತಿದ್ದರೆ, ಒಟ್ಟಾರೆ ವೆಚ್ಚ ಹದಿನೈದು ಸಾವಿರ ಕೋಟಿ ಮೀರಿದರೆ ಅಚ್ಚರಿ ಪಡಬೇಕಿಲ್ಲ.
ಅಂದ ಹಾಗೆ ಇದು ಸರ್ಕಾರದ ಆದಾಯ, ಅದು ಖರ್ಚಾಗುವ ಬಗೆ, ರಾಜಕೀಯ ಮತ್ತು ಅದಕ್ಕಂಟಿಕೊಂಡಿರುವ ವಿವಿಧ ಜನ ಏನೇನು ಮಾಡುತ್ತಾರೆ ಎಂಬುದರ ಪ್ರಾಥಮಿಕ ಅಂದಾಜು ಅಷ್ಟೇ.
ಇಂತಹ ವ್ಯವಸ್ಥೆಯಲ್ಲಿ ಶಾಸಕರಾಗಲು ಬಯಸುವವರು ಮೆರಿಟ್ ಆಧಾರದ ಮೇಲೆ ಯಾವುದೇ ಪಕ್ಷದ ಟಿಕೆಟ್ ಪಡೆಯುವುದು ಕಷ್ಟ.
ಹೀಗಾಗಿ ಪೇಮೆಂಟ್ ಸೀಟು ಪಡೆಯಬಲ್ಲವರೇ ರಾಜಕಾರಣದ ಮುಂಚೂಣಿಗೆ ಬರುತ್ತಾರೆ. ಹೀಗೆ ಬಂದವರು ತಾವು ಹಾಕಿದ ಬಂಡವಾಳಕ್ಕೆ‌, ತಮಗಾಗಿ ಹಣ ಸುರಿದ ಬಂಡವಾಳಗಾರರಿಗಾಗಿ ಲಾಭ ಪಡೆಯಲು ಮುಗಿ ಬೀಳುತ್ತಾರೆ. ಇಂತಹ ಪೈಪೋಟಿಗೆ ಅರ್ಹರು ಇಳಿಯುವುದು ಹೇಗೆ? ಮತ್ತು ಪೇಮೆಂಟ್ ಆಧಾರದ ಮೇಲೆ ಫ್ರಂಟ್ ಲೈನಿಗೆ ಬರುವವರು ಸಾಮಾಜಿಕ ನ್ಯಾಯದ ನೆಲೆಗಟ್ಟಿನ ಮೇಲೆ ಹೇಗೆ ಕೆಲಸ ಮಾಡುತ್ತಾರೆ?
ಹೀಗಾಗಿ ಕಾಲಕ್ರಮೇಣ ಹೆಚ್ಚು ಕ್ರೂರಿಯಾಗುತ್ತಾ ಸಾಗುವ ಜಂಗಲ್ ರಾಜ್ ಅನ್ನು ನೋಡುವುದು ಅನಿವಾರ್ಯ.
ಇಂತಹ ಪರಿಸ್ಥಿತಿಯಲ್ಲಿ ಬದುಕಿಗಾಗಿ ನಾವು ಹೇಗಾದರೂ ದೋಚಲೇಬೇಕು ಎಂಬ ಮನ;ಸ್ಥಿತಿ ಜನಸಾಮಾನ್ಯರಲ್ಲೂ ನೆಲೆಯಾಗುತ್ತದೆ.
ಹಿರಿಯ ನಾಯಕ ಬಿ.ಎಲ್.ಶಂಕರ್ ಅವರ ಮಾತಿನಲ್ಲಿರುವ ಆತಂಕ ಇದು. ಇದರ ಬಗ್ಗೆ ಚಿಂತನೆ ನಡೆಯದಿದ್ದರೆ ಪರಿಸ್ಥಿತಿ ಮತ್ತಷ್ಟು ಕಠೋರವಾಗುತ್ತದೆ.

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

2 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

2 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

2 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

3 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

3 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

3 hours ago