ಆರ್.ಟಿ.ವಿಠ್ಠಲಮೂರ್ತಿ
ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಸಂಗ್ರಹಿಸಿದ ಜಿಎಸ್ಟಿಯಲ್ಲಿ ಪಾಲು ಕೇಳುವ ಹಕ್ಕು ಸಾಧಿಸದ ಪುಕ್ಕಲುತನದಿಂದ ಉದ್ಭವಿಸಿದ ಸಮಸ್ಯೆ!
ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಹಣಕಾಸು ಇಲಾಖೆ ಬರೆದ ಒಂದು ಪತ್ರ ಕುತೂಹಲಕಾರಿಯಾಗಿದೆ.
ನಿಮ್ಮ ಇಲಾಖೆಗೆ ಬಜೆಟ್ ನಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಆದಾಯ ಸಂಗ್ರಹಿಸಲು ದಾರಿಗಳಿವೆಯೇ? ಅಂತ ಈ ಪತ್ರದಲ್ಲಿ ಅದು ಕೇಳಿದೆ.
ಹಾಗೆ ನೋಡಿದರೆ ಕಳೆದ ಬಾರಿಯ ಬಜೆಟ್ ನಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಂದ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಗುರಿ ಸಾಧನೆಯಾಗಿದೆ.
ಅದು ಅಬಕಾರಿ ಇಲಾಖೆ ಇರಬಹುದು, ಕಂದಾಯ ಇಲಾಖೆ ಇರಬಹುದು. ಒಟ್ಟಿನಲ್ಲಿ ಸರ್ಕಾರ ವಿವಿಧ ಇಲಾಖೆಗಳಿಗೆ ನೀಡಿದ ಗುರಿ ಏನಿತ್ತೋ? ಆ ಗುರಿಯನ್ನು ಅವು ದಾಟಿದ್ದವು.
ಈ ವರ್ಷವೂ ಅಷ್ಟೇ. ಅಬಕಾರಿ ಇಲಾಖೆಯಿಂದ ಹಿಡಿದು ಕಂದಾಯ ಇಲಾಖೆಯವರೆಗೆ ವಿವಿಧ ಇಲಾಖೆಗಳಿಂದ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಆದಾಯ ಸಂಗ್ರಹವಾಗುತ್ತಿದೆ.
ಆದರೆ ಇಷ್ಟಾದರೂ ರಾಜ್ಯದ ಹಣಕಾಸು ಇಲಾಖೆಗೆ ಸಮಾಧಾನವಿಲ್ಲ, ಬದಲಿಗೆ ಅದು ಬರೆದ ಪತ್ರದಲ್ಲಿ ಆತಂಕದ ಛಾಯೆಯಿದೆ. ಕಾರಣ? ಸರ್ಕಾರದ ವಿವಿಧ ಇಲಾಖೆಗಳು ತಮಗೆ ನಿಗದಿ ಮಾಡಿದ ಆದಾಯದ ಪ್ರಮಾಣಕ್ಕಿಂತ ಹೆಚ್ಚಿನ ಆದಾಯ ಸಂಗ್ರಹಿಸಿದರೂ ಅದು ಮತ್ತಷ್ಟು ಬೇಕು, ಮಗದಷ್ಟು ಬೇಕು, ಬಗೆದಷ್ಟೂ ಬೇಕು ಎಂಬ ಮನ:ಸ್ಥಿತಿಯಲ್ಲಿದೆ.
ಅದರ ಈ ಮನ:ಸ್ಥಿತಿಗೂ ಕಾರಣವಿದೆ. ಅದೆಂದರೆ ಅದು ಈ ಬಾರಿಯ ಬಜೆಟ್ ಗೆ ಯಾವ ಪ್ರಮಾಣದ ಒಳಹರಿವು ಇರುತ್ತದೆ ಎಂದು ಭಾವಿಸಿತ್ತೋ? ಅದರಲ್ಲಿ ಅರವತ್ತು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಕೊರತೆಯಾಗಲಿದೆ. ಸುಮಾರು ಎರಡೂ ಮುಕ್ಕಾಲು ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಗೆ ಈ ಪ್ರಮಾಣದ ಹಣ ಕಡಿಮೆಯಾದರೆ ಇದರಿಂದ ಯೋಜನೆ ಮತ್ತು ಯೋಜನೇತರ ಬಾಬ್ತಿಗೆ ನಿಗದಿ ಮಾಡಿರುವ ಹಣವನ್ನು ಒದಗಿಸುವುದು ಅಸಾಧ್ಯದ ಕೆಲಸವೇ ಸರಿ. ಇವತ್ತು ಯೋಜನೆಗೆ ನಿಗದಿ ಮಾಡಿದ ಹಣದಲ್ಲಿ ಒಂದಿಷ್ಟು ಕಡಿತವಾದರೂ ಸಹಿಸಿಕೊಳ್ಳಬಹುದು. ಯಾಕೆಂದರೆ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಎಲ್ಲ ಸರ್ಕಾರಗಳೂ ಯೋಜನೆಗೆ ನಿಗದಿ ಮಾಡಿದ ಹಣವನ್ನು ಕಡಿತ ಮಾಡಿವೆ. ಅರ್ಥಾತ್,ಯೋಜನೆಯ ಬಾಬ್ತಿನಲ್ಲಿಟ್ಟ ಹಣವನ್ನು ಕಡಿಮೆ ಮಾಡಿದರೆ ಅದಕ್ಕೆ ವಿರೋಧ ವ್ಯಕ್ತವಾಗುವುದು ಕಡಿಮೆ.
ಆದರೆ ಯೋಜನೇತರ ಬಾಬ್ತಿಗೆ ನಿಗದಿ ಮಾಡಿದ್ದಕ್ಕಿಂತ ಕಡಿಮೆ ಹಣ ಖರ್ಚು ಮಾಡುವುದು ಅನಿವಾರ್ಯ ಅಂತ ಅಸಹಾಯಕತೆ ತೋರಿದರೆ ವ್ಯಾಪಕ ಆಕ್ರೋಶ ಭುಗಿಲೇಳುತ್ತದೆ. ಸರ್ಕಾರಿ ನೌಕರರ ವೇತನ, ಪಿಂಚಣಿಗಳೆಲ್ಲ ಯೋಜನೇತರ ಬಾಬ್ತಿಗೆ ಸಂಬಂಧಿಸಿದವು. ಈ ಹಣದಲ್ಲಿ ಕಡಿತ ಮಾಡುವುದಿರಲಿ, ಅದನ್ನು ಒದಗಿಸಲು ಸ್ವಲ್ಪ ವಿಳಂಬವಾದರೂ ಸರ್ಕಾರ ಪಾಪರ್ ಆಗಿದೆ ಎಂಬ ಕೂಗುಗಳು ಕೇಳಿ ಬರುತ್ತವೆ.
ಹೀಗಾಗಿ ಸರ್ಕಾರ ಬಜೆಟ್ ನಲ್ಲಿ ನಿಗದಿ ಮಾಡುವ ಯೋಜನಾ ವೆಚ್ಚದ ಪ್ರಮಾಣ ಹದಿನೈದಿಪ್ಪರಷ್ಟು ಕಡಿಮೆಯಾಗಬಹುದು. ಆದರೆ ಯೋಜನೇತರ ಬಾಬ್ತಿಗೆ ನಿಗದಿ ಮಾಡುವ ಶೇಕಡಾ ಐವತ್ತರಿಂದ ಐವತ್ತೈದರಷ್ಟು ಪ್ರಮಾಣದ ಹಣ ಕಡಿತವಾಗುವುದಿಲ್ಲ. ಹೀಗಾಗಿ ಈ ವರ್ಷ ಬಜೆಟ್ ಗೆ ಬರುವ ಹಣದಲ್ಲಿ ಅರವತ್ತು ಸಾವಿರ ಕೋಟಿ ರೂಪಾಯಿ ಕೊರತೆಯಾದರೆ ಹೊಡೆತ ತಿನ್ನುವುದು ಯೋಜನಾ ಬಾಬ್ತೇ ಹೊರತು ಯೋಜನೇತರ ಬಾಬ್ತಲ್ಲ.
ಹೀಗೆ ಯೋಜನಾ ಬಾಬ್ತು ಹೊಡೆತ ತಿಂದರೆ ಅದರ ನೇರ ಪರಿಣಾಮ ರಾಜ್ಯದ ಅಭಿವೃದ್ಧಿಯ ಮೇಲಾಗುತ್ತದೆ. ಒಂದು ಬಜೆಟ್ ಯೋಜನಾ ಬಾಬ್ತಿನಲ್ಲಿ ಪ್ರಗತಿ ಸಾಧಿಸುವುದು ಎಂದರೆ ದೂರಗಾಮಿ ನೆಲೆಯಲ್ಲಿ ಸರ್ಕಾರದ ಆದಾಯ ಮೂಲಗಳನ್ನು ಹೆಚ್ಚಿಸಿತೆಂದೇ ಅರ್ಥ. ಇದು ಸಾಧ್ಯವಾಗದೆ ಹೋದರೆ ರಾಜ್ಯದ ಆರ್ಥಿಕತೆ ದುರ್ಬಲವಾಗುತ್ತಾ ಹೋಗಲಿದೆ ಎಂದೇ ಅರ್ಥ.
ವಸ್ತುಸ್ಥಿತಿ ಎಂದರೆ ಈಗ ರಾಜ್ಯ ಸರ್ಕಾರ ಇಂತಹದೇ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ವಾರ್ಷಿಕ ಬಜೆಟ್ ನ ಎರಡು ಪಟ್ಟು ಸಾಲ ಅದರ ಹೆಗಲ ಮೇಲಿದೆ. ಅರ್ಥಾತ್,ಅದರ ಮೇಲಿರುವ ಸಾಲದ ಹೊರೆಯ ಪ್ರಮಾಣ ಸುಮಾರು ಐದು ಲಕ್ಷ ಕೋಟಿ. ಹೀಗಿರುವಾಗ ಅರವತ್ತು ಸಾವಿರ ಕೋಟಿ ರೂಗಳಷ್ಟು ಮೊತ್ತ ಕಡಿಮೆಯಾದರೆ ಅದು ಹೊಂಚುವುದೆಲ್ಲಿಂದ? ಅಂದ ಹಾಗೆ ಈ ಅರವತ್ತು ಸಾವಿರ ಕೋಟಿ ಕೊರತೆಯ ಮೂಲವೆಂದರೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ. ಅದು ಜಿ.ಎಸ್.ಟಿ ರೂಪದಲ್ಲಿ ರಾಜ್ಯದಿಂದ ಸಂಗ್ರಹಿಸುವ ಹಣದಲ್ಲಿ ಇದುವರೆಗೆ ಒಂದು ಪಾಲು ಕೊಡುತ್ತಾ ಬಂದಿತ್ತು.
ಆದರೆ ಈ ವರ್ಷದಿಂದ ಜಿ.ಎಸ್.ಟಿ ಬಾಬ್ತಿನಲ್ಲಿ ರಾಜ್ಯಕ್ಕೆ ಬರಬೇಕಾದ ಇಪ್ಪತ್ತು ಸಾವಿರ ಕೋಟಿ ರೂಗಳಷ್ಟು ಹಣ ಕಡಿತವಾಗಲಿದೆ. ಅಂದ ಹಾಗೆ ಇದೇನೂ ಕೇಂದ್ರದಿಂದ ನಮಗೆ ಸಿಗುತ್ತಿರುವ ಧರ್ಮದ ಹಣವಲ್ಲ. ಬದಲಿಗೆ ನಮ್ಮ ಜನರೇ ಪಾವತಿಸುವ ಹಣದ ಒಂದು ಭಾಗ ಅಷ್ಟೇ.
ವಿಪರ್ಯಾಸವೆಂದರೆ ಹೀಗೆ ಸಂಗ್ರಹಿಸುವ ಜಿ.ಎಸ್.ಟಿ ಹಣದ ಪೈಕಿ ಇಂತಿಷ್ಟು ವರ್ಷ ನಿಮಗೆ ಪರಿಹಾರ ನೀಡುತ್ತೇವೆ. ಆನಂತರ ನಿಲ್ಲಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದರೆ ಅದನ್ನು ಪ್ರತಿಭಟಿಸುವ ಶಕ್ತಿಯೇ ನಮ್ಮ ಸರ್ಕಾರಕ್ಕಿಲ್ಲ.
ಅಲ್ರೀ ನಮ್ಮ ರಾಜ್ಯದಿಂದ ದಂಡಿಯಾಗಿ ಜಿ.ಎಸ್.ಟಿ ಸಂಗ್ರಹಿಸುತ್ತೀರಿ. ಆದರೆ ಅದರಲ್ಲಿ ಒಂದು ಪಾಲನ್ನೂ ಕೊಡುವುದಿಲ್ಲ ಎನ್ನುತ್ತೀರಿ. ಯಾರನ್ನು ಉದ್ಧರಿಸಲು ನಮ್ಮ ಹಣ ಒಯ್ಯುತ್ತೀರಿ ಅಂತ ಕೇಳುವುದು ರಾಜ್ಯ ಸರ್ಕಾರದ ಹಕ್ಕು. ಆದರೆ ಹಕ್ಕು ಸಾಧಿಸದೆ ಪುಕ್ಕಲುತನ ತೋರಿಸಿದ ಕಾರಣಕ್ಕಾಗಿ ಅದು ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ.
ಅಂದ ಹಾಗೆ ಈಗಾಗಲೇ ಅದು ವಿವಿಧ ನಿಗಮ ಮಂಡಳಿಗಳಿಗೆ ಪತ್ರ ಬರೆದು ಅವುಗಳ ವ್ಯಾಪ್ತಿಯಲ್ಲಿರುವ ಆಸ್ತಿಪಾಸ್ತಿಯ ವಿವರ ಪಡೆದಿದ್ದಾಯಿತು. ಅಷ್ಟೇ ಏಕೆ? ಮೆಲ್ಲಗೆ ಒಂದೊಂದಾಗಿ ಅದನ್ನು ಮಾರುವ ಕೆಲಸಕ್ಕೆ ಚಾಲನೆ ನೀಡಿದ್ದೂ ಆಯಿತು. ಈಗ ಅರವತ್ತು ಸಾವಿರ ಕೋಟಿ ರೂಗಳ ಕೊರತೆ ಬೇರೆ ಎದುರಾಗಿರುವುದರಿಂದ ಸರ್ಕಾರದ ವಿವಿಧ ಇಲಾಖೆಗಳು ಇನ್ನು ಯಾವ್ಯಾವ ಮಾರ್ಗದ ಮೂಲಕ ಹಣ ಸಂಗ್ರಹಿಸಬಹುದು ಅಂತ ಕೇಳುತ್ತಿದೆ.
ಇದು ಮುಂದಿನ ದಿನಗಳಲ್ಲಿ ಜನರನ್ನು ಮತ್ತಷ್ಟು ದೋಚುವ ತಂತ್ರವೇ ವಿನ: ಮತ್ತೇನಲ್ಲ. ಇದು ನಿಜಕ್ಕೂ ಭಯಾನಕ ಸ್ಥಿತಿ ಎಂಬುದು ನಿಸ್ಸಂಶಯ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…