ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಬಿಜೆಪಿಯ ವಿರುದ್ಧ ನಿಲ್ಲಬಾರದು ಎಂಬ ಕಾರಣವನ್ನು ಮುಖ್ಯವಾಗಿಟ್ಟುಕೊಂಡು ಪಕ್ಷದ ವರಿಷ್ಠರು ಈ ತೀರ್ಮಾನ ಮಾಡಿದ್ದಾರಾದರೂ, ವಿಜಯೇಂದ್ರ ಅವರ ನೇಮಕಾತಿಯನ್ನು ಬಿಜೆಪಿಯ ಬಹುತೇಕರು ಇನ್ನೂ ಜೀರ್ಣಿಸಿಕೊಂಡಿಲ್ಲ.
ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರ ವಿಷಯದಲ್ಲಿ ನಡೆದುಕೊಳ್ಳುತ್ತಿದ್ದ ರೀತಿ ಇದಕ್ಕೆ ಕಾರಣ ಅಂದ ಹಾಗೆ 2020ರ ಜುಲೈ ತಿಂಗಳಲ್ಲಿ ಮೋದಿ-ಅಮಿತ್ ಶಾ ಜೋಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತಲ್ಲ ಅದರ ಇಂತಹ ನಿರ್ಧಾರಕ್ಕೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಬಗ್ಗೆ ಇದ್ದ ಅಸಹನೆಯೇ ಕಾರಣ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಎಪ್ಪತ್ತೈದು ವರ್ಷ ದಾಟಿದೆ ಎಂಬ ಬಹಿರಂಗ ಕಾರಣ ನೀಡಲಾಗಿತ್ತಾದರೂ ಆಂತರಿಕವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಜೋಡಿ, ಸರ್ಕಾರವನ್ನು ಕಬ್ಜಾ ಮಾಡಿದೆ ಎಂಬ ಮೆಸೇಜನ್ನು ರವಾನಿಸಲಾಗಿತ್ತು. ಸರ್ಕಾರವನ್ನು ಕಟ್ಟಾ ಮಾಡಿಕೊಂಡು ಅದು ನಡೆಸುತ್ತಿರುವ ಆಟಕ್ಕೆ ಉತ್ತರ ಹೇಳುವ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂಬುದು ಈ ಮೆಸೇಜಿನ ಉನ್ನತ ಸಾರಾಂಶವಾಗಿತ್ತು. ಇದಾದ ನಂತರ ಬಂದ ಬಸವರಾಜ ಬೊಮಾಯಿ ಅವರ ಕಾಲದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಎಷ್ಟು ದೂರ ಇಡಲಾಗಿತ್ತೆಂದರೆ, ಒಂದು ವೇಳೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿದು ಬಿಟ್ಟಿದ್ದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ರಾಜಕೀಯವಾಗಿ ಮೂಲೆಗುಂಪಾಗಿ ಹಲವು ಕಾಲವೇ ಕಳೆದಿರುತ್ತಿತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅರವತ್ತೈದು ಸೀಟುಗಳನ್ನು ಪಡೆಯುವಷ್ಟರಲ್ಲಿ ಸುಸ್ತಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರಿಗೆ ಪ್ರಾತಿನಿಧ್ಯ ನೀಡುವ ಬದಲು ಸ್ವತಃ ಮೋದಿ ಮತ್ತು ಅಮಿತ್ ಶಾ ಕರ್ನಾಟಕಕ್ಕೆ ಬಂದರು, ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು.
ಆದರೆ ಈ ರಣತಂತ್ರ ಸಫಲವಾಗಲಿಲ್ಲ. ಹೀಗಾಗಿ ಬಿಜೆಪಿ ಪ್ರತಿಪಕ್ಷದ ಸಾಲಿನಲ್ಲಿ ಕೂರಬೇಕಾದ ಸ್ಥಿತಿ ನಿರ್ಮಾಣವಾಯಿತು. ಪರಿಣಾಮ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಪಕ್ಷದಲ್ಲಿ ಡಮ್ಮಿ ಮಾಡುವ ದೊಡ್ಡ ಗುಂಪೇನಿದೆ. ಆ ಗುಂಪಿನ ಬಗ್ಗೆ ಪ್ರಧಾನಿ ಮೋದಿ ಬೇಸತ್ತರು. ಇಷ್ಟಾದರೂ ಮೊನ್ನೆ ಮೊನ್ನೆಯವರೆಗೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಹೆಸರು ಬಂದರೆ ಬಿಜೆಪಿ ಪಾಳೆಯದಲ್ಲಿ ವ್ಯತಿರಿಕ್ತ ಸಂದೇಶ ಕೇಳಿ ಬರುತ್ತಿತ್ತು. ಅವರೆಂದರೆ ಪ್ರಧಾನಿ ಮೋದಿಯವರಿಗೆ ಇಷ್ಟವೇ ಆಗುತ್ತಿಲ್ಲ ಎಂಬ ಮಾತು ಪುನರಾವರ್ತನೆಯಾಗುತ್ತಿತ್ತು. ಹೀಗಾಗಿ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನದ ವಿಷಯ ಬಂದಾಗ ಯಡಿಯೂರಪ್ಪ ತಮ್ಮ ಪುತ್ರನ ಹೆಸರು ಪ್ರಸ್ತಾಪಿಸಿದರೂ, ಬೇರೆ ಬೇರೆ ಹೆಸರುಗಳು ಹೊಸದಿಲ್ಲಿಯಿಂದ ತೇಲಿ ಬರುತ್ತಿದ್ದವು. ಕಾರಣ ಯಡಿಯೂರಪ್ಪ ಅವರನ್ನು ವಿರೋಧಿಸುವ ಬಣ ವಿಜಯೇಂದ್ರ ಅವರ ಹೆಸರಿಗೆ ಅಡ್ಡಗಾಲು ಹಾಕುತ್ತಲೇ ಬರುತ್ತಿತ್ತು. ರಾಜ್ಯ ಬಿಜೆಪಿಯ ಬಣ ಸಂಘರ್ಷದ ಹಿನ್ನೆಲೆಯಲ್ಲಿ ಎಲ್ಲ ಬಣಗಳಿಗೂ ಒಪ್ಪಿಗೆಯಾಗುವ ಹೆಸರೆಂದರೆ ಕೇಂದ್ರ ಸಚಿವೆ ಶೋಧಾ ಕರಂದ್ಲಾಜೆ ಅವರದ್ದು. ಹೀಗಾಗಿ ಅವರನ್ನೇ ಈ ಜಾಗಕ್ಕೆ ತರಬೇಕು ಅಂತ ಪ್ರಧಾನಿ ಮೋದಿ ನಿರ್ಧರಿಸಿದರಂತೆ.
ಇಂತಹ ನಿರ್ಧಾರ ಅಕ್ಟೊಬರ್ ತಿಂಗಳ ಅಂತ್ಯದಲ್ಲಿ ನಡೆಯುವ ಚಂದ್ರಗ್ರಹಣದ ನಂತರ ಪ್ರಕಟವಾಗಲಿದೆ ಎಂಬ ಮಾತು ಕೇಳಿ ಬಂತು. ಆದರೆ, ಕಳೆದ ವಾರ ಇದಕ್ಕಿದ್ದಂತೆ ಶೋಭಾ ಕರಂದ್ಲಾಜೆ ಅವರ ಹೆಸರಿಗೆ ರಾಜ್ಯ ಬಿಜೆಪಿಯ ಬಹುತೇಕ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತು ತೇಲಿತು. ಈ ನಡುವೆ ಹೊಸದಿಲ್ಲಿಯ ಬಿಜೆಪಿ ಪಾಳೆಯದಿಂದ ಕೇಳಿಬಂದ ವಿಷಯ ಕುತೂಹಲಕಾರಿಯಾಗಿತ್ತು. ಅದೆಂದರೆ, ಇತ್ತೀಚೆಗೆ ಪಕ್ಷದ ಕೇಂದ್ರ ನಾಯಕರು ನಡೆಸಿದ ಎರಡು ಸರ್ವೆಗಳು ಕರ್ನಾಟಕದಲ್ಲಿ ಒಕ್ಕಲಿಗ ನಾಯಕತ್ವ ಬೇಡ ಎಂದಿದೆ ಎಂಬುದು, ಕಾರಣ ಇವತ್ತು ಆಡಳಿತ ನಡೆಸುತ್ತಿ ರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದವರು, ಇದೇ ರೀತಿ ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡಿರುವ ಜಾ.ದಳದ ಮುಂಚೂಣಿಯಲ್ಲಿರುವ ಹೆಚ್.ಡಿ.ಕುಮಾರಸ್ವಾಮಿ ಅವರೂ ಒಕ್ಕಲಿಗರು, ಹೀಗಾಗಿ ಅದೇ ಸಮುದಾಯದವರನ್ನು ತನ್ನ ಮುಂದೆ ನಿಲ್ಲಿಸಿಕೊಳ್ಳುವುದು ಬಿಜೆಪಿಗೆ ಅನುಕೂಲ ಒದಗಿಸಲಾರದು. ಏಕೆಂದರೆ ಇವತ್ತು ಒಕ್ಕಲಿಗ ಮತ ಬ್ಯಾಂಕಿನ ಮೇಲೆ ಪ್ರಭಾವ ಬೀರುವ ವಿಷಯ ಬಂದಾಗ ನಮಗೆ ಜಾ.ದಳ ಬೆಂಬಲವೇ ಸಾಕು ಎಂಬುದು ಸರ್ವೆ ರಿಪೋರ್ಟಿನ ಮಾತಾಗಿತ್ತು. ಅಷ್ಟೇ ಅಲ್ಲ, ಇವತ್ತಿನ ಸ್ಥಿತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗ ಸಮುದಾಯದ ನಾಯಕರಿಗೆ ನೀಡುವ ಬದಲು ಲಿಂಗಾಯತ ಸಮುದಾಯದ ನಾಯಕರೊಬ್ಬರಿಗೆ ನೀಡುವುದು ಉತ್ತಮ ಅಂತ ಅದು ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ವಿ.ಸೋಮಣ್ಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರುಗಳು ತೇಲಿ ಬಂದವು. ಈ ಪೈಕಿ ಸೋಮಣ್ಣ ಅವರನ್ನು ಸಂಪರ್ಕಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹೊಸ ಜವಾಬ್ದಾರಿಗೆ ಅಣಿಯಾಗಿ ಎಂಬ ಸಂದೇಶ ರವಾನಿಸಿದರಂತೆ, ಅರ್ಥಾತ್, ಲಿಂಗಾಯತ ಸಮುದಾಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ
ನೀಡಬೇಕು ಎಂಬ ವಿಷಯ ಬಂದಾಗಲೂ ಹೈಕಮಾಂಡ್ ವರಿಷ್ಠರು, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಹೆಸರನ್ನು ಪರಿಗಣಿಸಲು ತಯಾರಿಲ್ಲ ಎಂಬ ಸಂದೇಶ ಪಕ್ಷದ ಒಳವಲಯಗಳಲ್ಲಿ ರಾರಾಜಿಸಿತು. ಆದರೆ, ನವೆಂಬರ್ ಹತ್ತರ ಶುಕ್ರವಾರ ಆಟ ಬದಲಾಯಿತು. ಅವತ್ತು ಪಂಚರಾಜ್ಯಗಳ ಚುನಾವಣೆಯ ಒತ್ತಡದಿಂದ ಬಿಡುವು ಮಾಡಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಘಪರಿವಾರದ ನಾಯಕರೊಬ್ಬರ ಸಂದೇಶ ತಲುಪಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಹೀನಾಯ ಸೋಲು ಕಂಡವು. ಅವತ್ತು ಯಡಿಯೂರಪ್ಪ ಅವರನ್ನು ದೂರವಿಟ್ಟರೆ ಪಕ್ಷವನ್ನು ಮೇಲೆತ್ತಬಹುದು ಅಂತ ಯಾರು ಮಾತನಾಡಿದ್ದರೋ ಅವರು ನಿಮನ್ನು ಮತ್ತು ಅಮಿತ್ ಶಾ ಅವರನ್ನು ಕರ್ನಾಟಕದ ಮೂಲೆ ಮೂಲೆಗಳಲ್ಲಿ ತಿರುಗಾಡಿಸಿದರು. ಆದರೆ ಫಲ ಮಾತ್ರ ಶೂನ್ಯವಾಗಿತ್ತು. ಹೀಗಾಗಿ ಈ ಸಲ ಪಾರ್ಲಿಮೆಂಟ್ ಚುನಾವಣೆಯ ವಿಷಯದಲ್ಲಿ ನಾವು ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದರೆ ಪುನಃ ಕಷ್ಟ ಎದುರಿಸಬೇಕಾಗುತ್ತದೆ. ಇವತ್ತು ಒಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವುದು ತೀರಾ ದುಬಾರಿಯಾಗದೇ ಇರಬಹುದು. ಆದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷ ಸೋತರೆ ಅದು ತೀರಾ ದುಬಾರಿಯಾಗಲಿದೆ. ಹೀಗಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವರ ಮಗನಿಗೆ ಬಿಜೆಪಿಯ ರಾಜ್ಯಾಧ್ಯಕ್ಷ ಪಟ್ಟ ಕೊಡಬೇಕು. ಸಂಘಪರಿವಾರದ ನಾಯಕರ
ಸಂದೇಶವಾಗಿತ್ತು.ಯಾವಾಗ ಸಂಘಪರಿವಾರದ ನಾಯಕರೇ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದರೋ ಆಗ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿಲುವನ್ನು ಬದಲಿಸಿದರು. ಮತ್ತು ಈ ಹುದ್ದೆಯ ರೇಸಿನಲ್ಲಿದ್ದ ಸೋಮಣ್ಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರುಗಳನ್ನು ಹಿಂದಕ್ಕೆ ಸರಿಸಿ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಲು ಸಮ್ಮತಿ ನೀಡಿದರು.
ಹೀಗೆ ವಿಜಯೇಂದ್ರ ಅವರ ದಿಢೀರ್ ನೇಮಕಾತಿ ರಾಜ್ಯ ಬಿಜೆಪಿಯ ಒಳಗೆ ಮೌನ ಮಡುಗಟ್ಟುವಂತೆ ಮಾಡಿದೆ. ಇದ್ದುದರಲ್ಲಿ ಯಡಿಯೂರಪ್ಪ ಬಣದ ಪ್ರಮುಖರು ವಿಜಯೇಂದ್ರ ಅವರ ನೇಮಕಾತಿಯನ್ನು ಅಬ್ಬರದಿಂದ ಸ್ವಾಗತಿಸುತ್ತಿದ್ದರೂ, ಯಡಿಯೂರಪ್ಪ ವಿರೋಧಿ ಬಣ ಈ ಬೆಳವಣಿಗೆಯನ್ನು ಅಸಹನೆಯಿಂದ ನೋಡುತ್ತಿದೆ.
ಹೀಗೆ ಅಸಹನೆಗೊಂಡಿರುವ ಬಣವನ್ನು ಹೇಗೆ ಸಮಾಧಾನಿಸಲಾಗುತ್ತದೆ ಎಂಬುದರ ಮೇಲೆ ನೂತನ ಅಧ್ಯಕ್ಷ ವಿಜಯೇಂದ್ರ ಅವರ ಯಶಸ್ಸು ನಿಂತಿದೆ.ಮುಂದೇನಾಗುತ್ತದೋ ಕಾದು ನೋಡಬೇಕು.
ಮೈಸೂರು: ಹೊಸ ವರ್ಷಾಚರಣೆ ಹಾಗೂ ಕ್ರಿಸ್‌ಮಸ್‌ಗೆ ಮೈಸೂರು ನಗರಕ್ಕೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಒಳಗೊಂಡ…
ಮಂಡ್ಯ: ಈ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆಯಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ…
ಮಂಡ್ಯ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯುವುದನ್ನು…
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…
ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು…