ಸಿಎಂ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ, ದೇಗುಲ ತೆರವು ನಿಲ್ಲಿಸಲು ಕ್ರಮವಹಿಸ್ತಾರೆ: ಪ್ರತಾಪಸಿಂಹ

ಮೈಸೂರು: ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ದೇಗುಲಗಳ ತೆರವು ಕಾರ್ಯಾಚರಣೆ ನಿಲ್ಲಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶ ಏನಿದೆ ಅಂತ ಓದಿ ಸಿಎಂಗೆ ತಿಳಿಸಿದೆ. ಸುಪ್ರೀಂ ಕೋರ್ಟ್ ದೇವಾಲಯ ಹೊಡೆಯಲು ಹೇಳಿಲ್ಲ. ಉಚ್ಚಗನಿ ಮಹದೇವಮ್ಮ ದೇವಾಲಯ ರಸ್ತೆಗೆ ಅಡಚಣೆ ಆಗುತ್ತಿರಲಿಲ್ಲ. ಅದು ಐತಿಹಾಸಿಕ ದೇವಾಲಯ. ಇಂತಹ ದೇವಸ್ಥಾನ ಹೊಡೆದಿದ್ದಾರೆ. ಮೂಲ ವಿಗ್ರಹವನ್ನು ಸ್ಥಳಾಂತರ ಮಾಡದೇ ನೆಲಸಮ ಮಾಡಿದ್ದಾರೆ ಅಂತ ತಿಳಿಸಿದೆ. ಜೊತೆಗೆ ನಂಜನಗೂಡು ದಂಡಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು,‌ ಜಿಲ್ಲಾಡಳಿತಕ್ಕೂ ಸೂಚನೆ ನೀಡಬೇಕು ಎಂದು ಕೇಳಿದ್ದೇನೆ ಎಂದು ತಿಳಿಸಿದರು.

ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶ ಇದೆ ಅಂತ ದಾರಿ ತಪ್ಪಿಸುತ್ತಿದ್ದಾರೆ. ಅಧಿಕಾರಿಗಳ ಮೇಲೆ ಅಟ್ಯಾಕ್ ಮಾಡುವ ಕೆಲಸ‌ ನಾನು ಮಾಡುತ್ತಿಲ್ಲ. ನಮ್ಮ ಧಾರ್ಮಿಕ ಭಾವನೆಗೆ ಘಾಸಿ ಮಾಡುವ ಕೆಲಸ‌ ಮಾಡುತ್ತಿದ್ದಾರೆ. ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶವನ್ನು‌ ಸರಿಯಾಗಿ ಪಾಲಿಸಬೇಕಿದೆ ಎಂದರು.

ಮುಖ್ಯಮಂತ್ರಿಗಳೇ ಈ ವಿಚಾರವಾಗಿ ಸ್ಪಂದಿಸಿದ್ದಾರೆ. ನನಗೆ ಉಳಿದವರ ಸಹಕಾರ ಬೇಡ. ನಮ್ಮ ಭಾವನೆಗಳಿಗೆ ಸ್ಪಂದಿಸುವಂತ ಮುಖ್ಯಮಂತ್ರಿ ಇದ್ದಾರೆ. ನಾನು ರಾಜಕಾರಣ ಮಾಡಲು ಬಿಜೆಪಿಗೆ ಬಂದಿಲ್ಲ. ನಾನು ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವನು. ಸಂಸದನಾದವನಿಗೆ ಇಡೀ ದೇಶವೇ ಕಾರ್ಯಕ್ಷೇತ್ರ. ಒಂದು ಕ್ಷೇತ್ರಕ್ಕೆ ಸೀಮಿತ ಎಂಬುದು ಬೇಡ ಎಂದು ಶಾಸಕ ಹರ್ಷವರ್ಧನ್‌ ಹೇಳಿಕೆ ಅಸಮಾಧಾನ ವ್ಯಕ್ತಪಡಿಸಿದರು.

× Chat with us