ಕೊರೊನಾ ನಂತರದ ‘ಪೊಗರು’

ಮತ್ತೆ ಕೊರೊನಾ ಭೂತ ವಕ್ಕರಿಸದಿದ್ದರೆ ಮುಂದಿನ ಚಿತ್ರಗಳ ದಾರಿ ಸುಗಮ
ಕಳೆದ ಅಕ್ಟೋಬರ್ ತಿಂಗಳಿಂದ ಚಿತ್ರಗಳ ಬಿಡುಗಡೆಗೆ ಅನುಮತಿ ಸಿಕ್ಕಿದೆ. ಆದರೆ ೨೦೨೦ರಲ್ಲಿ ತಾರಾ ವರ್ಚಸ್ಸಿನ ನಟರ ಚಿತ್ರಗಳ ಬಿಡುಗಡೆ ಇರಲಿಲ್ಲ. ಕಥಾವಸ್ತುವೇ ಪ್ರಧಾನವಾದ ಚಿತ್ರಗಳಿದ್ದವು. ‘ಆಕ್ಟ್ ೧೯೭೮’ ಕೊರೊನಾ ನಂತರ ಚಿತ್ರಮಂದಿರಕ್ಕೆ ಬಂದ ಆರಂಭದ ಚಿತ್ರ. ಕೆಲವು ಚಿತ್ರಗಳಿದ್ದವು. ಮಾರ್ಚ್‌ನಲ್ಲಿ ತೆರೆಕಂಡು, ಲಾಕ್‌ಡೌನ್ ಕಾರಣಕ್ಕೆ ಸ್ಥಗಿತವಾದ ಚಿತ್ರವೊಂದು, ಮತ್ತೆ ತೆರೆಕಂಡು ಶತದಿನ ಪೂರೈಸಿದ ಸುದ್ದಿ ಮಾಡಿತು.

ತಾರಾ ವರ್ಚಸ್ಸಿನ ನಟರ ಚಿತ್ರಗಳು ತೆರೆಗೆ ಬರದೆ ಇರುವುದಕ್ಕೆ ಒಂಟಿ ಪರದೆಯ ಚಿತ್ರಮಂದಿರಗಳೂ ಕಾರಣ, ಒಟ್ಟು ಆಸನ ಸಂಖ್ಯೆಯ ಅರ್ಧದಷ್ಟು ಮಾತ್ರ ಪ್ರವೇಶ ನೀಡಿ ಚಿತ್ರಗಳ ಪ್ರದರ್ಶನ ಮಾಡಬೇಕು ಎನ್ನುವ ಸರ್ಕಾರದ ಆದೇಶವನ್ನು ಒಪ್ಪಿಕೊಂಡು ಚಿತ್ರಮಂದಿರ ತೆರೆಯಲು ಅವುಗಳ ಮಾಲೀಕರು ಸಿದ್ಧರಿರಲಿಲ್ಲ. ಈಗ ಪ್ರತಿಶತ ಐವತ್ತರ ಬದಲು, ಪೂರ್ತಿಯಾಗಿ ಪ್ರೇಕ್ಷಕರನ್ನು ಕರೆದುಕೊಳ್ಳಬಹುದು ಎನ್ನುವ ಆದೇಶ, ಫೆಬ್ರವರಿ ತಿಂಗಳ ಮಟ್ಟಿಗೆ ಇದೆ.

ಅದರ ಪ್ರಯೋಜನವನ್ನು ಮೊದಲು ಪಡೆದ ಚಿತ್ರ ‘ಇನ್‌ಸ್ಪೆಕ್ಟರ್ ವಿಕ್ರಂ’. ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ದರ್ಶನ್ ಅವರೂ ಕೊನೆಯಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಗಳಿಕೆಗೆ ನೆರವಾಗಿದೆ ಎನ್ನುವುದಾಗಿ ಹೇಳಲಾಗುತ್ತಿದೆ. ಇದ್ದರೂ ಇರಬಹುದು. ಆದರೆ, ಚಿತ್ರಮಂದಿರಗಳಿಗೆ ಪ್ರೇಕ್ಷಕರು ಯಾವುದೇ ಆತಂಕವಿಲ್ಲದೆ ಹೋಗುತ್ತಿದ್ದಾರೆಯೇ ಎನ್ನುವುದನ್ನು ಈಗಲೇ ಹೇಳುವುದು ಕಷ್ಟ.
ಚಿತ್ರಗಳ ಪ್ರದರ್ಶನ, ಹೊಸ ಚಿತ್ರಗಳ ಬಿಡುಗಡೆ ಆಗುತ್ತಿದ್ದರೂ, ಗಳಿಕೆಯ ವಿಷಯದಲ್ಲಿ ಯಾರೂ ಅಷ್ಟೊಂದು ಖುಷಿಯಲ್ಲಿಲ್ಲ. ಮುಂದಿನ ದಿನಗಳು, ‘ಪೊಗರು’ವಿನಂತಹ ತಾರಾವರ್ಚಸ್ಸಿನ ನಟರ ಚಿತ್ರಗಳು ತೆರೆಕಂಡು ಅವು ಗಲ್ಲಾಪೆಟ್ಟಿಗೆಯನ್ನು ದೋಚತೊಡಗಿದರೆ, ಮತ್ತೆ

ಕೊರೊನಾ ಭೂತ ವಕ್ಕರಿಸದೆ ಇದ್ದರೆ, ಮುಂದಿನ ಚಿತ್ರಗಳಿಗೆ ದಾರಿ ಸುಗಮವಾಗಬಹುದು.
‘ಪೊಗರು’ ಈ ವಾರ ತೆರೆಗೆ ಬಂದರೆ, ಮಾರ್ಚ್ ತಿಂಗಳಲ್ಲಿ ದರ್ಶನ್ ಅಭಿನಯದ ‘ರಾಬರ್ಟ್’, ಏಪ್ರಿಲ್‌ನಲ್ಲಿ ಪುನೀತ್ ಅವರ ‘ಯುವರತ್ನ’.. ಹೀಗೆ ಚಿತ್ರಗಳು ಸರದಿಯಲ್ಲಿವೆ. ‘ಪೊಗರು’ ಚಿತ್ರದ ಗಳಿಕೆಯೊಂದೇ ಅಲ್ಲ, ಅದು ತೆರೆಕಾಣುವ ಚಿತ್ರಮಂದಿರಗಳ ಸಂಖ್ಯೆಯನ್ನೂ ಗಮನಿಸಬೇಕಾಗಿದೆ. ಮಲ್ಟಿಪ್ಲೆಕ್ಸ್‌ಗಳನ್ನು ಹೊರತುಪಡಿಸಿ, ರಾಜ್ಯದಲ್ಲಿರುವ ೬೦೦+ ಒಂಟಿಪರದೆಯ ಚಿತ್ರಮಂದಿರಗಳಲ್ಲಿ ಎಲ್ಲವೂ ಪ್ರದರ್ಶನ ಆರಂಭಿಸಿಲ್ಲ, ಎನ್ನುತ್ತಿವೆ ಮೂಲಗಳು. ಸುಮಾರು ಇನ್ನೂರರ ವರೆಗೆ ಮಲ್ಟಿಪ್ಲೆಕ್ಸ್ ಪರದೆಗಳಿವೆ. ಅವುಗಳಲ್ಲಿ ಕನ್ನಡ ಚಿತ್ರಗಳಿಗೆ ಸಿಗುವ ಪರದೆಗಳು ಕಡಿಮೆ.

ಸಂಕ್ರಾಂತಿಯ ವೇಳೆ ತೆರೆಕಂಡ ತಮಿಳು ಚಿತ್ರವೊಂದು, ಕರ್ನಾಟಕದಲ್ಲಿ ಗಲ್ಲಾಪೆಟ್ಟಿಗೆ ದೋಚಿದ್ದು ಎಲ್ಲರಿಗೂ ವೇದ್ಯ. ‘ಪೊಗರು’ ಚಿತ್ರ ಇತರ ರಾಜ್ಯಗಳೂ ಸೇರಿದಂತೆ ಒಂದು ಸಾವಿರ ಪರದೆಗಳಲ್ಲಿ ಪ್ರದರ್ಶನ ಕಾಣಲಿದೆ ಎಂದು ಹೇಳಲಾಗುತ್ತಿದೆ, ಇದ್ದರೂ ಇರಬಹುದು. ಧ್ರುವ ಸರ್ಜಾ ಅಭಿನಯದ ಚಿತ್ರ ನಾಲ್ಕು ವರ್ಷಗಳ ನಂತರ ತೆರೆಗೆ ಬರುತ್ತಿದೆ. ಮೊದಲ ಮೂರು ಚಿತ್ರಗಳು ಭಾರೀ ಗೆಲುವನ್ನು ಕಂಡ ದಾಖಲೆಯವು. ಹಾಗಾಗಿ ಗೆಲುವಿನ ನಿರೀಕ್ಷೆಯೂ ಸಹಜವೇ.

ಅದಕ್ಕೆ ಪೂರಕ ಎನ್ನುವಂತೆ, ‘ಪೊಗರು’ ಚಿತ್ರದ ಹಾಡೊಂದನ್ನು ದಾಖಲೆ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ. ದಾಖಲೆ ಎಂದರೆ ಅಂತಿಂಥ ದಾಖಲೆಯಲ್ಲ. ಆ ಹಾಡನ್ನು ಇಪ್ಪತ್ತು ಕೋಟಿಗಿಂತ ಅಧಿಕ ಮಂದಿ ಯುಟ್ಯೂಬ್ ವಾಹಿನಿಯಲ್ಲಿ ವೀಕ್ಷಿಸಿದ್ದಾರೆ. ಇದೀಗ ಇತರ ಭಾಷೆಗಳಿಗೆ ಡಬ್ ಆಗಿ ಇನ್ನೂ ಕೆಲವು ಕೋಟಿ ಮಂದಿ ನೋಡಿದ್ದಾರೆ.

ಸಾಮಾಜಿಕ ತಾಣಗಳಲ್ಲಿನ ಈ ವಿದ್ಯಮಾನದ ಕುರಿತಂತೆ ಜಿಜ್ಞಾಸೆ ಇದೆ. ಕನ್ನಡ ಚಿತ್ರದ ಹಾಡನ್ನು ಇಷ್ಟೊಂದು ಮಂದಿ ನೋಡಿರುತ್ತಾರೆಯೇ ಎನ್ನುವುದು ಸಾಮಾನ್ಯವಾಗಿ ಏಳುವ ಪ್ರಶ್ನೆ. ಆ ಹಾಡಿನ ಕುರಿತಂತೆಯೂ ಸಾಕಷ್ಟು ಪರ, ವಿರೋಧ ಮಾತುಗಳೂ ಇವೆ. ನಾಯಕಿಯ ಜೊತೆ, ಚಿತ್ರದ ನಾಯಕ ಮತ್ತು ಆತನ ಜೊತೆಗಾರರು, ಹಾಡೊಂದರ ಮೂಲಕ ವರ್ತಿಸುವ ಆ ರೀತಿ ಇಂದಿನ ಮಂದಿಯ ಮನರಂಜನೆಯೇ ಎಂದು ಕೇಳುವವರೂ ಇದ್ದಾರೆ. ಇಪ್ಪತ್ತು ಕೋಟಿಗೂ ಹೆಚ್ಚು ಮಂದಿಗೆ ಅದು ಮನರಂಜನೆಯಾದರೆ, ಇಲ್ಲವೇ ನೋಡಿದವರೇ ಮತ್ತೆ ಮತ್ತೆ ನೋಡುವಂತಹ ಹಾಡು ಎಂದು ಅದನ್ನು ನೋಡಿದ್ದರೆ, ಈ ಪ್ರಶ್ನೆಗೆ ಎಲ್ಲಿದೆ ಅವಕಾಶ ಅಲ್ಲವೇ?

ಚಿತ್ರವೊಂದರ ಗಳಿಕೆಯ ಸಾಧ್ಯತೆ ಏನೇ ಇರಲಿ, ಅದರ ಪ್ರಚಾರ ಇಂದು, ವಿಶೇಷವಾಗಿ ಡಿಜಿಟಲ್ ದಿನಗಳಲ್ಲಿ ಬಹಳ ಮುಖ್ಯ. ಆ ಕೆಲಸವನ್ನು ‘ಪೊಗರು’ ನಿರ್ಮಾಪಕರು ಚೆನ್ನಾಗಿಯೇ ಮಾಡುತ್ತಿದ್ದಾರೆ ಎನ್ನುತ್ತಿದೆ ಗಾಂಧಿನಗರ. ಮುದ್ರಣ, ಎಲೆಕ್ಟ್ರಾನಿಕ್ ಮತ್ತು ನವಮಾಧ್ಯಮಗಳ ಮೂಲಕ ಎಷ್ಟು ಸಾಧ್ಯವೋ ಅಷ್ಟು ಮಂದಿಗೆ ತಮ್ಮ ಚಿತ್ರವನ್ನು ತಲಪಿಸುವ ಕೆಲಸವದು. ಪ್ರಚಾರದ ಮೂಲಕ ತಮ್ಮ ಚಿತ್ರದ ಕುರಿತಂತೆ ಪ್ರೇಕ್ಷಕನಲ್ಲಿ ಮೂಡಿಸುವ ನಿರೀಕ್ಷೆ ಲೇಶಮಾತ್ರ ಕಡಿಮೆಯಾದರೂ ಕಷ್ಟ. ತಾರಾವರ್ಚಸ್ಸು, ಕೆಲವೊಮ್ಮೆ ಅಂತಹ ಸಂದರ್ಭದಲ್ಲಿ ನೆರವಿಗೆ ಬರುತ್ತದೆ.

ಯಾವುದೇ ಚಿತ್ರ ತೆರೆಗೆ ಬಂದ ಆರಂಭದ ದಿನಗಳಲ್ಲಿ ಅದರ ಕುರಿತಂತೆ ಮೂಡಿಸುವ ಅಭಿಪ್ರಾಯಗಳು, ಮುಂದಿನ ದಿನಗಳ ಗಳಿಕೆಗೆ ಪೂರಕವಾಗಲಿ ಎನ್ನುವ ಆಶಯ ನಿರ್ಮಾಪಕರದು, ವಿತರಕರದು. ಚಿತ್ರ ತೆರೆಕಂಡ ಮೂರನೇ ದಿನ ಇಲ್ಲವೇ ನಾಲ್ಕನೇ ದಿನ ಕರೆಯುವ ‘ಸಕ್ಸೆಸ್ ಮೀಟ್’ಗಳಲ್ಲಿ ನಿಜ ಗೆಲುವಿನವು ಕಡಿಮೆ. ಚಿತ್ರಗಳು ಯಶಸ್ವಿಯಾಗಿದ್ದರೆ, ಆರಂಭದ ದಿನಗಳಲ್ಲಿ ಈ ರೀತಿಯ ಗೋಷ್ಠಿಗಳು ಅಪರೂಪ.
‘ಪೊಗರು’ ಚಿತ್ರದ ಬಿಡುಗಡೆ ಆ ಚಿತ್ರದ ನಿರ್ಮಾಪಕರಿಗಷ್ಟೇ ಅಲ್ಲ, ಚಿತ್ರೋದ್ಯಮಕ್ಕೆ, ವಿಶೇಷವಾಗಿ ತಾರಾ ವರ್ಚಸ್ಸಿನ ನಟರ ಚಿತ್ರಗಳ ನಿರ್ಮಾಪಕರಿಗೆ, ಜೊತೆಗೆ ಆ ನಟರಿಗೆ ಬಹಳ ನಿರೀಕ್ಷೆಯದು. ಕಾರಣವಿಷ್ಟೇ. ಕೊರೊನಾ ದಿನಗಳ ಲಾಕ್‌ಡೌನ್, ಜನರ ಮನಸ್ಥಿತಿಯನ್ನು ಬದಲಾಯಿಸಿರಬಹುದೇ, ಚಿತ್ರಮಂದಿರಗಳಿಗೆ ಚಿತ್ರರಸಿಕರು ಯಾವುದೇ ಆತಂಕವಿಲ್ಲದೆ ಬರಬಹುದೇ, ನಟರ ಅಭಿಮಾನಿಗಳು ಚಿತ್ರಮಂದಿರಗಳಿಗೆ ಮೊದಲಿನಂತೆ ಲಗ್ಗೆ ಇಡಬಹುದೇ ಎನ್ನುವುದನ್ನು ಈ ಚಿತ್ರ ಬಿಡುಗಡೆಯ ನಂತರ ಗಮನಿಸಬಹುದು.

ಹಾಗಾಗಿ ಧ್ರುವಸರ್ಜಾ ಅಭಿನಯದ ಈ ಚಿತ್ರದ ಗೆಲುವು, ಅವರ ತಾರಾ ವರ್ಚಸ್ಸಿನ ಏರಿಕೆಯಾಗಲಿ, ಚಿತ್ರದ ನಿರ್ಮಾಪಕ ಗಂಗಾಧರ್ ಅವರ ಲಾಭವಾಗಲಿ, ನಿರ್ದೇಶಕ ನಂದಕಿಶೋರ್ ಅವರಿಗೆ ಅವಕಾಶಗಳು ಸಿಗುವುದಾಗಲೀ, ಆಗುವುದಕ್ಕಿಂತ ಹೆಚ್ಚಾಗಿ, ಕನ್ನಡ ಚಿತ್ರೋದ್ಯಮದ ಮುಂದಿನ ನಡೆಗೆ ದಿಕ್ಸೂಚಿಯಾಗಲಿದೆ. ಕೊರೊನಾ ನಂತರ ಚಿತ್ರೋದ್ಯಮದ ಮೊದಲ ಭಾರೀ ಗೆಲುವು ಕೂಡ.
ಹ್ಞಾಂ..
ಕನ್ನಡನಾಡಿನ ಸೋದರ ಭಾಷೆಗಳಲ್ಲೊಂದು ತುಳು. ತುಳು ಚಿತ್ರರಂಗ ಇಂದಿಗೆ ೫೦ ವರ್ಷ ಪೂರೈಸಿ, ೫೧ಕ್ಕೆ ಕಾಲಿಟ್ಟಿದೆ. ಮೊದಲ ತುಳು ಚಿತ್ರ ‘ಎನ್ನತಂಗಡಿ (ನನ್ನ ತಂಗಿ)’ ೧೯೭೧ರ ಫೆಬ್ರವರಿ ೧೯ರಂದು ತೆರೆಕಂಡಿತ್ತು. ಎಸ್.ಆರ್.ರಾಜನ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಹೆಸರಾಂತ ತುಳು ನಾಟಕಕಾರ ಕೆ.ಎನ್.ಟೈಲರ್ ನಿರ್ಮಿಸಿ, ನಟಿಸಿದ, ತುಳುವರೇ ಆಗಿದ್ದ ಆರೂರು ಪಟ್ಟಾಭಿ ನಿರ್ದೇಶಿಸಿದ್ದ ‘ದಾರೆದ ಬುಡೆದಿ (ಧರ್ಮಪತ್ನಿ)’ ಚಿತ್ರದ ಚಿತ್ರೀಕರಣ ಮೊದಲು ಆರಂಭವಾದರೂ, ರಾಜನ್ ನಿರ್ಮಿಸಿ, ನಿರ್ದೇಶಿಸಿದ ‘ಎನ್ನತಂಗಡಿ’ ಮೊದಲು ತೆರೆಕಂಡಿತು. ಕನ್ನಡ ವಾಕ್ಚಿತ್ರದ ಆರಂಭವೂ ಹಾಗೆಯೇ. ‘ಭಕ್ತ ಧ್ರುವ’ ಮೊದಲು ಆರಂಭವಾದರೂ, ತೆರೆಗೆ ಮೊದಲ ಬಂದ ಚಿತ್ರ ‘ಸತಿ ಸುಲೋಚನಾ’. ತುಳುಚಿತ್ರರಂಗ ನಡೆದು ಬಂದ ದಾರಿಯನ್ನು ಮುಂದೆ ಅವಲೋಕಿಸೋಣ.

 

× Chat with us