ಜೆಡಿಎಸ್‌ನಲ್ಲಿ ಯಾವುದೇ ತತ್ವಸಿದ್ಧಾಂತ ಉಳಿದಿಲ್ಲ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಜೆಡಿಎಸ್‌ನಲ್ಲಿ ಯಾವುದೇ ತತ್ವಸಿದ್ಧಾಂತ ಉಳಿದಿಲ್ಲ. ಕಾಂಗ್ರೆಸ್‌ ಹಾಗೂ ಬಿಜೆಪಿ ಜೊತೆಯಲ್ಲೂ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂವರು ಒಟ್ಟಾಗಿದ್ದಾರೆ. ಯಾವುದೇ ತತ್ವಸಿದ್ಧಾಂತ ಉಳಿದಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಒಂದಾಗಿ ಸರ್ಕಾರ ನಡೆಸಿದೆ. ಜೆಡಿಎಸ್‌-ಬಿಜೆಪಿ ಜೊತೆ ಸರ್ಕಾರ ನಡೆಸಿದೆ. ನಾವೆಲ್ಲ ಒಟ್ಟಾಗಿದ್ದೇವೆ. ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿಯಲ್ಲಿ ಸಚಿವರಾಗಿದ್ದಾರೆ. ಇದು ನಡೆಯುತ್ತಲೇ ಇದೆ. ಹೀಗಾಗಿ, ನಾವು ಮಾತನಾಡುವಾಗ ಯೋಚನೆ ಮಾಡಬೇಕು. ಜೊತೆಯಲ್ಲೇ ಇದ್ದು ಜಾರಿಗೊಳಿಸಿರುವ ಕಾರ್ಯಕ್ರಮಗಳ ಬಗ್ಗೆ ಟೀಕಿಸುವುದು ಎಷ್ಟು ಸರಿ ಎಂದು ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಮಾಜಿ ಮುಖ್ಯಮಂತ್ರಿಗಳ ಜಟಾಪಟಿ ಕುರಿತು ಪ್ರತಿಕ್ರಿಯಿಸಿ, ನೀವು ಹಿರಿಯರಿದ್ದೀರಿ, ರಾಜಕೀಯ ಅನುಭವ ಇದೆ, ಮುಖ್ಯಮಂತ್ರಿಗಳಾಗಿದ್ದೀರಿ. ಏಕವಚನದಲ್ಲಿ ಒಬ್ಬರು ಇನ್ನೊಬ್ಬರನ್ನು ಟೀಕಿಸುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ನಮ್ಮ ಅರ್ಹತೆ, ಘನತೆ-ಗೌರವವನ್ನು ಜನರು ಗಮನಿಸುತ್ತಿರುತ್ತಾರೆ. ಯಾರೇ ಆಗಲಿ ಹಿರಿಯತನ, ಅನುಭವ ಹೆಚ್ಚಾಗುತ್ತಿದ್ದಂತೆ ಗೌರವಕ್ಕೆ ಪಾತ್ರರಾಗಬೇಕು ಎಂದು ಕಿವಿಮಾತು ಹೇಳಿದರು.

× Chat with us