ಬೆಂಗಳೂರು: 10 ಕೆ.ಜಿ ಅಕ್ಕಿ ನೀಡುವ ಯೋಜನೆ ಘೋಷಣೆ ಮಾಡಿದ್ದು, ಇನ್ನುಳಿದ ಯೋಜನೆಗಳನ್ನು ಘೋಷಿಸಲು ಇನ್ನು ಸಮಯಾವಕಾಶ ಇವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಘೋಷಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಮಂಗಳವಾರ ಮಾತನಾಡಿದ ಅವರು,
ಸ್ತ್ರೀಶಕ್ತಿ ಸಂಘಗಳ ಸಾಲದ ಪ್ರಮಾಣ ಹೆಚ್ಚಳದ ಘೋಷಣೆ ಪಕ್ಷದ ನಾಲ್ಕನೇ ಗ್ಯಾರಂಟಿ ಯೋಜನೆಯೇ ಎಂಬ ಪ್ರಶ್ನೆಗೆ
‘ಅದನ್ನು ನಮ್ಮ ಗ್ಯಾರಂಟಿ ಯೋಜನೆ ಪಟ್ಟಿಯ ಕಾರ್ಯಕ್ರಮ ಎಂದು ಹೇಳಿಲ್ಲ ಎಂದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಸಮಯದ ಅಭಾವವಿದೆ. ಜ.27ರಂದು ನಾವು ರಾಮನಗರದಲ್ಲಿ ನಡೆಯಬೇಕಾಗಿದ್ದ ಪ್ರಜಾಧ್ವನಿ ಯಾತ್ರೆ ಮುಂದೂಡಿದ್ದು, ಅಂದು ನಮ್ಮ ಪಕ್ಷದ ಗ್ಯಾರಂಟಿ ಯೋಜನೆ, ಪ್ರಜಾಧ್ವನಿ ಯಾತ್ರೆ ಸಮಯದಲ್ಲಿ ತೆಗೆದುಕೊಂಡಿರುವ ನಿರ್ಣಯಗಳ ಪ್ರಚಾರದ ರೂಪುರೇಷೆಗಳ ವಿಚಾರವಾಗಿ ಎಲ್ಲ ಬ್ಲಾಕ್ ಕಾಂಗ್ರೆಸ್ ನಾಯಕರು, ಪರಾಜಿತ ಅಭ್ಯರ್ಥಿಗಳು ಹಾಗೂ ನೂತನ ಪ್ರಚಾರ ಸಮಿತಿಯ ಜತೆ ಸಭೆ
ನಡೆಯಲಿದೆ. ಈ ಸಭೆಗೆ ಪಕ್ಷದ 1 ಸಾವಿರ ನಾಯಕರನ್ನು ಆಹ್ವಾನಿಸಿದ್ದೇವೆ. ಈ ಸಭೆಯಲ್ಲಿ ನಮ್ಮ ನಾಯಕರಿಗೆ ಟಾಸ್ಕ್ ನೀಡಲಾಗುವುದು ಎಂದರು.
ರಾಮನಗರ ಬೆಂಗಳೂರಿನ ಪಕ್ಕದಲ್ಲಿದ್ದು, ನನ್ನ ವಿಧಾನಸಭಾ ಕ್ಷೇತ್ರ ಸೇರಿದಂತೆ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ನಾವು ಯಾವಾಗ ಬೇಕಾದರೂ ಅಲ್ಲಿ ಯಾತ್ರೆ ಮಾಡಬಹುದು. ಅಧಿವೇಶನ ಆರಂಭವಾದ ನಂತರ ಬಿಡುವಿರುವ ಒಂದು ದಿನ ಹೋಗಿಯೂ ಯಾತ್ರೆ ಮಾಡಬಹುದು. ಹೀಗಾಗಿ ರಾಮನಗರದ ಯಾತ್ರೆಯನ್ನು ಮುಂದಕ್ಕೆ ಹಾಕಿದ್ದೇವೆ ಎಂದರು.
ಅಮಿತ್ ಶಾ ಅವರ ರಾಜ್ಯ ಪ್ರವಾಸ ಹಾಗೂ ಬೆಂಗಳೂರಿನಲ್ಲಿ ಪ್ರಧಾನಿಗಳ ರೋಡ್ ಶೋ ಮಾಡುವಂತೆ ಬಿಜೆಪಿ ನಾಯಕರ ಮನವಿ ಬಗ್ಗೆ ಕೇಳಿದಾಗ, ‘ಅವರು ದಿನನಿತ್ಯ ರಾಜ್ಯಕ್ಕೆ ಬಂದು ರೋಡ್ ಶೋ ಮಾಡಲಿ. ಅವರು ರೋಡ್ ಶೋ ಮಾಡಿ, 40% ಕಮಿಷನ್ ಆರೋಪ, ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ? ಜನರ ಖಾತೆಗೆ 15 ಲಕ್ಷ ಯಾವಾಗ ಹಾಕುತ್ತಾರೆ? ರೈತರ ಆದಾಯ ಯಾವಾಗ ಡಬಲ್ ಆಗುತ್ತದೆ? ಎಂಬ ವಿಚಾರವಾಗಿ ಮಾತನಾಡಲಿ. ಅವರು ಏನಾದರೂ ಮಾಡಲಿ. ಅವರ ಮಂತ್ರಿಗಳು, ನಾಯಕರ ಮಾತುಗಳಿಗೆ ಅವರು ಉತ್ತರ ನೀಡಲಿ. ಅವರ ನಾಯಕನೊಬ್ಬ ಪ್ರತಿ ಮತದಾರನಿಗೆ ಹಣ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿ ಸೋಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾನೆ. ಆದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ? ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ? ಬಿಜೆಪಿಯವರು ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರತಿ ಮತಕ್ಕೆ 6 ಸಾವಿರ ರೂ ನೀಡಿ ಮತಗಳನ್ನು ಖರೀದಿ ಮಾಡುತ್ತಾರಾ? ಇದೇನಾ ಬಿಜೆಪಿ ಸಂಸ್ಕೃತಿ?’ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಯಡಿಯೂರಪ್ಪನವರು ಏನಾದರೂ ಹೇಳಿಕೊಳ್ಳಲಿ. ಹೈಕಮಾಂಡ್ ಒಪ್ಪಿಗೆ ನೀಡಿದರೆ, ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಒಬ್ಬ ನಾಯಕ ತನ್ನ ಆಸೆ ಹೇಳಿಕೊಳ್ಳಬಾರದಾ? ಯಡಿಯೂರಪ್ಪನವರು ತಮ್ಮ ಹಾಗೂ ತಮ್ಮ ಮಗನ ಭವಿಷ್ಯದ ಬಗ್ಗೆ ನೋಡಿಕೊಳ್ಳಲಿ. ನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ’ ಎಂದು ತಿರುಗೇಟು ನೀಡಿದರು.