ಸಂವೇದನಾಹೀನರಂತೆ ವರ್ತಿಸುತ್ತಿರುವ ಶ್ರೀನಿವಾಸ್‌ ಪ್ರಸಾದ್‌: ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಬೇಸರ

ಮೈಸೂರು: ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಕ್ರಮೇಣ ಸಂವೇದನಾಹೀನರಾಗುತ್ತಿದ್ದು, ಅನಗತ್ಯವಾಗಿ ನನ್ನ ವಿರುದ್ಧ ಮಾತನಾಡುತ್ತಿರುವುದು ಬೇಸರದ ವಿಷಯ ಎಂದು ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹಲವು ಬಾರಿ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ನಾನು ಶ್ರೀನಿವಾಸ್ ಪ್ರಸಾದ್ ಅವರಿಗೇ ತಿಳಿಸಿದ್ದರು ಕೂಡಾ ಮತ್ತೆ ಮತ್ತೆ ಅರ್ಥವಿಲ್ಲದ ಆರೋಪ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ವಿಪರೀತ ಏರಿಕೆ ಆಗಿದ್ದರೂ ಬೆಲೆ ಇಳಿಕೆ ಬಗ್ಗೆ ಕ್ರಮ ಕೈಗೊಳ್ಳದೇ ಸುಮ್ಮನೇ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ತಿ.ನರಸೀಪುರ ಕ್ಷೇತ್ರದಲ್ಲಿ ಕೊರೊನಾ ಸಂದರ್ಭದಲ್ಲಿ ಸರ್ಕಾರವೂ ಮಾಡದಷ್ಟು ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದ್ದು, ಅಗತ್ಯವಿರುವ ಜನರಿಗೆ ಆಹಾರ ಮತ್ತು ಆರೋಗ್ಯ ಸಾಮಾಗ್ರಿಗಳನ್ನು ನೀಡುವ ಕೆಲಸವನ್ನು ಮಾಡಿದ್ದೇವೆ. ಈ ಸಂಗತಿಯು ಪ್ರಸಾದ್ ಅವರಿಗೆ ತಿಳಿದಿಲ್ಲ ಅಂದರೆ ಅದಕ್ಕೆ ಯಾರು ಹೊಣೆ? ನಾವೇನಾದರೂ ಪ್ರಸಾದ್ ಅವರ ಒಪ್ಪಿಗೆ ಪಡೆದು ಜನರಿಗೆ ಸಹಾಯ ಮಾಡಬೇಕಿತ್ತೇನು ಎಂದು ಪ್ರಶ್ನಿಸಿದ್ದಾರೆ.

ಬರೀ ಪುಗಸಟ್ಟೆ ಮಾತನಾಡುವ ಪ್ರಸಾದ್ ಅವರೇ, ನೀವು ಚಾಮರಾಜನಗರಕ್ಕೆ ರಸ್ತೆಯ ಮೇಲೆ ಹೋಗುವಾಗ ಅಲ್ಲಿ‌ನ ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಮತ್ತು ಅಶೋಕಪುರಂನ ಮೂಲಸೌಕರ್ಯದ ಸಮಸ್ಯೆಯು ಪರಿಹಾರವಾಗಿದ್ದರ ಬಗ್ಗೆ ಯಾರಾದರೂ ಚರ್ಚೆ ಮಾಡಿದರೆ ಅವೆಲ್ಲಾ ನಮ್ಮ ಸರ್ಕಾರದ ವೇಳೆ ಆದ ಸಾಧನೆಗಳು ಎಂಬುದನ್ನು ನೆನೆಸಿಕೊಳ್ಳಿ. ಬಹುಶಃ ನಿಮಗೆ ಪರರ ಸಾಧನೆಯನ್ನು ಒಪ್ಪಿಕೊಳ್ಳುವ ಔದಾರ್ಯ ಇಲ್ಲದೇ ಇರುವುದರಿಂದ ಕನಿಷ್ಠ ಪಕ್ಷ ತಾವಾದರೂ ಅನಗತ್ಯವಾಗಿ ಟೀಕೆ ಮಾಡುವುದನ್ನು ಬಿಟ್ಟು ಜನರ ಬದುಕಿಗೆ ಸಹಾಯ ಆಗುವಂತಹ ಯೋಜನೆಯನ್ನು ರೂಪಿಸಿ ಎಂದು ತಿಳಿಸಿದ್ದಾರೆ.

ತೈಲ ಬೆಲೆ ಮತ್ತು ದಿನ ಬಳಕೆ ವಸ್ತುಗಳ ತೆರಿಗೆ ಭಾರವನ್ನು ಕಡಿಮೆ ಮಾಡಿ. ಖಾಸಗೀಕರಣದ ಮೂಲಕ ಮೀಸಲಾತಿಯನ್ನು ತೆಗೆದು ಹಾಕುತ್ತಿರುವ ಬಗ್ಗೆ ಮಾತನಾಡಿ. ಆಗ ನಾನೇ ಖುದ್ದಾಗಿ ಬಂದು ನಿಮ್ಮನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

× Chat with us