ಬೆಂಗಳೂರು : ಇಂದು ನಡೆದ ರಾಷ್ಟ್ರಪತಿ ಚುನಾವಣೆಯ ಮತದಾನ ಸಂದರ್ಭದಲ್ಲಿ ಮತದಾನ ಮಾಡಲು ವಿಧಾನಸೌಧಕ್ಕೆ ತೆರಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಂಸದರಾದ ವಿ. ಶ್ರೀನಿವಾಸ್ ಪ್ರಸಾದ್ ಅವರು ಮುಖಾಮುಖಿ ಭೇಟಿಯಾಗಿ ಕುಶಲೋಪರಿ ನಡೆಸಿದರು.
ಕೆಲವು ದಿನಗಳ ಹಿಂದೆಯಷ್ಟೇ ಚಾಮರಾಜನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಅವರು ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮದ ಕುರಿತು ನಾವು ಬಿಳಿಗಿರಿ ರಥೋತ್ಸವ, ರಾಮೋತ್ಸವ ಕೇಳಿದ್ದೇವೆ, ಈಗ ಒಂಟಿಕೊಪ್ಪಲ್ ಪಂಚಾಗದಲ್ಲಿ ಸಿದ್ದರಾಮೋತ್ಸವ ಸೇರಿಸೋದು ಒಂದು ಬಾಕಿ, ಪ್ರಚಾರಕ್ಕೆ ಏನೆಲ್ಲಾ ನಾಟಕ ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಮುಂದುವರಿದು ಸಿದ್ದರಾಮಯ್ಯ ಅವರು ಈ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಹೊರಟಿದ್ದಾರೆ, ಆದರೆ, ಪಕ್ಷದಲ್ಲೇ ಭಿನ್ನಾಭಿಪ್ರಾಯ ಬಂದಿದ್ದರಿಂದ ದೊಡ್ಡ ಸಮಿತಿಯೊಂದನ್ನು ಮಾಡಿಕೊಂಡು ಪಕ್ಷದ ವತಿಯಿಂದಲೇ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ತೊಲಗಿದರೇ ದೇಶ ಉದ್ಧಾರ ಆಗುತ್ತೆ ಎಂದು ಸಿದ್ದರಾಮಯ್ಯನವರ ಹೇಳಿಕೆಯ ಕುರಿತು ಈಗಾಗಲೇ ಸಿದ್ದರಾಮಯ್ಯಗೆ ಜನರು ಪಾಠ ಕಲಿಸಿದ್ದಾರೆ, ಸಿದ್ದರಾಮಯ್ಯಗೆ ಜನರು ಬ್ಯಾಲೆಟ್ ಮೂಲಕ ಉತ್ತರ ಕೊಟ್ಟಿದ್ದಾರೆ, ಸಿದ್ದರಾಮಯ್ಯ ಯೋಚನೆ ಮಾಡಿ ಮಾತನಾಡಬೇಕು, ಸುಮ್ಕನೆ ಕಿರುಚಾಡಿ ಪ್ರಯೋಜನವಿಲ್ಲ ಎಂದಿದ್ದರು.
ರಾಜಕೀಯ ಬೆಳವಣಿಗೆಗಳು ಏನೇ ಆದರೂ ಸಹ ವೈಯೂಕ್ತಿಕವಾಗಿ ಭೇಟಿ ಮಾಡಿದ ಇಂತಹ ಸಂದರ್ಭಗಳಲ್ಲಿ ರಾಜಕೀಯವನ್ನು ಬದಿಗೊತ್ತಿ ಪರಸ್ಪರ ಆತ್ಮೀಯವಾಗಿ ಕುಶಲೋಪರಿ ವಿಚಾರಣೆ ಮಾಡಿಕೊಳ್ಳುವುದು ಹಲವಾರು ಕಾರ್ಯಕರ್ತರುಗಳಿಗೆ ಮಾದರಿಯಾಗಬಲ್ಲದು.